ಬಾಶೆಟ್ಟಿಹಳ್ಳಿ ಗ್ರಾ.ಪಂ. ಚುನಾವಣೆ ಕೈ ಬಿಟ್ಟ ಸರ್ಕಾರ: ಸಾರ್ವಜನಿಕರು ಸಂತಸ

ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ನಂತರ ಆತಂಕಕ್ಕೊಳಗಾಗಿದ್ದ ಬಾಶೆಟ್ಟಿಹಳ್ಳಿ ಪಂಚಾಯಿತಿ ವ್ಯಾಪ್ತಿ ಗ್ರಾಮಸ್ಥರು ಈಗ ನಿರಾಳರಾಗಿದ್ದಾರೆ. ಇಲ್ಲಿ ಗ್ರಾ.ಪಂ. ಚುನಾವಣೆ ಇಲ್ಲ ಎಂದು ಸರ್ಕಾರ ಹೇಳಿದೆ. ಇತ್ತೀಚೆಗಷ್ಟೇ ಇದು ಪಟ್ಟಣ ಪಂಚಾಯಿತಿ ದರ್ಜೆಗೆ ಏರಿದೆ.

ಬಾಶೆಟ್ಟಿ ಹಳ್ಳಿಯಲ್ಲಿರುವ ಒಂದು ಶಾಲೆ

ಬಾಶೆಟ್ಟಿ ಹಳ್ಳಿಯಲ್ಲಿರುವ ಒಂದು ಶಾಲೆ

  • Share this:
ದೊಡ್ಡಬಳ್ಳಾಪುರ: 47 ಗ್ರಾಮ ಪಂಚಾಯತ್ ಸದಸ್ಯರನ್ನು ಹೊಂದಿರುವ ಬಾಶೆಟ್ಟಿಹಳ್ಳಿ ಪಂಚಾಯತಿಯನ್ನು ರಾಜ್ಯ ಸರ್ಕಾರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಿದೆ. ಆದರೆ ಕೇವಲ 1,294 ಜನರ ಕೊರತೆ‌ಯಿಂದ ಪುರಸಭೆ ಪಟ್ಟ ಕಳೆದುಕೊಂಡ ಬೇಸರ ಸಹ ಜನರಲ್ಲಿದೆ. ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕಾರ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಪ್ರದೇಶ‌ವನ್ನು ಪುರಸಭೆ‌ಯಾಗಿ ಮೇಲ್ದರ್ಜೆಗೆ ಏರಿಸಬಹುದು. ಸದ್ಯ ಬಾಶೆಟ್ಟಿಹಳ್ಳಿಯ ಜನಸಂಖ್ಯೆ 18,706 ಇದೆ. ಕೇವಲ 1,294 ಜನರ ಕೊರತೆಯಿಂದ ಪುರಸಭೆಯ ಪಟ್ಟವನ್ನು ಕಳೆದುಕೊಂಡಿದೆ. ಇದು ಬಾಶೆಟ್ಟಿಹಳ್ಳಿ ಜನರ ನಿರಾಶೆ‌ಗೆ ಕಾರಣವಾಗಿದೆ. ಇದರ ಜೊತೆಗೆ ಇಲ್ಲಿನ ಜನರ ಖುಷಿಗೆ ಕಾರಣವಾಗಿರುವುದು ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯತ್​​ ಅನ್ನು ಪಟ್ಟಣ ಪಂಚಾಯತಿ‌ಯಾಗಿ ಮೇಲ್ದರ್ಜೆಗೆ ಏರಿಸಿ ಸರ್ಕಾರ ಆದೇಶ ಹೊರಡಿಸಿರುವುದು.

ಬಾಶೆಟ್ಟಿಹಳ್ಳಿಗೆ ಕೈತಪ್ಪಿದ ಪುರಸಭೆ ಪಟ್ಟ:

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಟ್ಟು 15 ಗ್ರಾಮಗಳು ಒಳಪಟ್ಟಿವೆ. ಬಾಶೆಟ್ಟಿಹಳ್ಳಿ, ಬಿಸುವನಹಳ್ಳಿ, ಕಸವನಹಳ್ಳಿ, ಎಳ್ಳು‌ಪುರ, ಅರೇಹಳ್ಳಿ, ಗುಡ್ಡದಹಳ್ಳಿ, ವರದನಹಳ್ಳಿ, ಓಬದೇವನಹಳ್ಳಿ, ರಘುನಾಥಪುರ, ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ, ಮೋಪರಹಳ್ಳಿ, ತಮ್ಮ‌ಶೆಟ್ಟಿಹಳ್ಳಿ, ಕೋಳಿಪುರ ಗ್ರಾಮಗಳ ಒಟ್ಟು 17, 176 ಚ.ಕಿ.ಮೀ. ಪ್ರದೇಶ ವ್ಯಾಪ್ತಿಯನ್ನು ಹೊಂದಿದೆ.

ಗ್ರಾಮ ಪಂಚಾಯಿತಿ‌ಯನ್ನು ಪಟ್ಟಣ ಪಂಚಾಯಿತಿ‌ಯಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದ ಸರ್ಕಾರ ಎರಡೇ ದಿನಕ್ಕೆ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಘೋಷಣೆ ಮಾಡಿದ್ದು ಆತಂಕಕ್ಕೆ ಕಾರಣವಾಗಿತ್ತು, ಆದರೆ ಸರ್ಕಾರ ಗ್ರಾಮ‌ ಪಂಚಾಯತಿ ಚುನಾವಣೆಯಿಂದ‌ ಬಾಶೆಟ್ಟಿಹಳ್ಳಿಯನ್ನ ಕೈಬಿಡಲಾಗಿರುವುದು ಸಾರ್ವಜನಿಕರಿಗೆ ಸಂತಸ ತಂದಿದೆ. ಇದರಿಂದ ಗ್ರಾಮ ಪಂಚಾಯತ್ ಚುನಾವಣೆ ಎದುರಿಸಬೇಕೋ ಇಲ್ಲ ಪಟ್ಟಣ ಪಂಚಾಯಿತಿ ಚುನಾವಣೆ ಎದುರಿಸಬೇಕೆಂಬ ಗೊಂದಲದಲ್ಲಿದ್ದ ಸಾರ್ವಜನಿಕರಿಗೆ ನೆಮ್ಮದಿಯಾಗಿದೆ.

ಇದನ್ನೂ ಓದಿ: Bharat Bandh – ಭಾರತ್ ಬಂದ್​ಗೆ ಬೆಂಬಲವಾಗಿ ದೇಶಾದ್ಯಂತ ಪ್ರತಿಭಟನೆಗಳ ಮಹಾಪೂರ; ರಸ್ತೆ ತಡೆ, ರೈಲು ತಡೆ, ಮುಷ್ಕರ

11 ವರ್ಷಗಳ ಹೋರಾಟದ ಫಲ ಈಗ ಬಾಶೆಟ್ಟಿಹಳ್ಳಿಗೆ ಪಟ್ಟಣ ಪಂಚಾಯಿತಿ ಒಲಿದಿದೆ. ಇದೇ ಸಮಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಸಹ ಆಗಿದೆ. ಒಂದು ವೇಳೆ ನಾವು ಗ್ರಾಮ ಪಂಚಾಯತ್ ಚುನಾವಣೆ ಎದುರಿಸಿದರೆ ಮತ್ತೆ 5 ವರ್ಷಗಳು ಕಾಯಬೇಕಿತ್ತು. ನಮಗೆ ಗ್ರಾಮ ಪಂಚಾಯತ್ ಚುನಾವಣೆ ಬೇಡ. ಇನ್ನಷ್ಟು ದಿನ ಕಾದರೂ ಸಹ ನೇರವಾಗಿ ಪಟ್ಟಣ ಪಂಚಾಯತ್ ಚುನಾವಣೆ ಎದುರಿಸುವುದಾಗಿ ಸ್ಥಳೀಯರು ಆಗ್ರಹ ಮಾಡಿದ್ದರು. ಈ ಗೊಂದಲದ ವಾತಾವರಣದಲ್ಲಿ ಸರ್ಕಾರ‌ಕ್ಕೆ ಪತ್ರ ಬರೆದ ಜಿಲ್ಲಾಧಿಕಾರಿ ರವೀಂದ್ರ ಈ ಬಗ್ಗೆ ಸರ್ಕಾರ ಸೂಕ್ತ ಆದೇಶ ನೀಡುವಂತೆ ಕೇಳಿದ್ದರು. ಒಂದು ವೇಳೆ ಸರ್ಕಾರ ಗ್ರಾಮ ಪಂಚಾಯತ್ ಚುನಾವಣೆ ನಡೆಸಿ ಎಂದು ಆದೇಶ ನೀಡಿದರೆ ಜನರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರಿಂದ ಸರ್ಕಾರ ಜನರ ಮನವಿಗೆ ಸ್ಪಂದಿಸಿ ಗ್ರಾಮ ಪಂಚಾಯತಿ ಚುನಾವಣೆಯಿಂದ‌ ಬಾಶೆಟ್ಟಿಹಳ್ಳಿ ಕೈಬಿಡಲಾಗಿದೆ.

ವರದಿ: ನವೀನ್ ಕುಮಾರ್
Published by:Vijayasarthy SN
First published: