‘ಇವರಿಗೆ ಒಂದೂ ಇಲ್ಲ..’ – ಸಚಿವ ಹಾಲಪ್ಪ ಆಚಾರ್ ಬಗ್ಗೆ ಜಾರಿದ ಮಾತಿಗೆ ರಾಯರೆಡ್ಡಿ ವಿಷಾದ

ಆರು ಹಡದಾಕಿಗೆ ಮೂರು ಹಡದಾಕಿ ನಖರಾ ಮಾಡಿದ್ಳಂತೆ. ಇವಗೆ ಒಂದೂ ಇಲ್ಲ ಎಂದು ಪರೋಕ್ಷವಾಗಿ ಸಚಿವ ಹಾಲಪ್ಪ ಆಚಾರ್ ಅವರ ವೈಯಕ್ತಿಕ ವಿಚಾರವನ್ನು ಬಸವರಾಜ ರಾಯರೆಡ್ಡಿ ವ್ಯಂಗ್ಯ ಮಾಡಿದ್ದರು. ಅದಕ್ಕೆ ಅವರೀಗ ವಿಷಾದಿಸಿ ಸಚಿವರಿಗೆ ಪತ್ರ ಬರೆದಿದ್ದಾರೆ.

ಬಸವರಾಜ ರಾಯರೆಡ್ಡಿ

ಬಸವರಾಜ ರಾಯರೆಡ್ಡಿ

  • Share this:
ಕೊಪ್ಪಳ: ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುತ್ತಾರೆ. ಆಡುವ ಮಾತಿಗೆ ಮುನ್ನ ವಿಚಾರ ಮಾಡಿ ಮಾತನಾಡಬೇಕು. ಆದರೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಆಡಿದ ಮಾತುಗಳು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಚಿವ ಹಾಲಪ್ಪ ಆಚಾರ್ ಅವರ ವೈಯಕ್ತಿಕ ಬದುಕಿನ ಬಗ್ಗೆ ರಾಯರೆಡ್ಡಿ ವೈಯಕ್ತಿಕವಾಗಿ ಮಾತನಾಡಿರುವ ವಿಡಿಯೋ ಸುದ್ದಿಯಾಗುತ್ತಿದ್ದಂತೆ ತಮ್ಮ ಮಾತಿಗೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. “ನಾನು ವಯಕ್ತಿಕವಾಗಿ ನಿಮ್ಮ ಉದ್ದೇಶಿಸಿ ಆಡಿದ ಮಾತಲ್ಲ, ಸಾಂದರ್ಭಿಕವಾಗಿ ಆಡಿದ ಮಾತು” ಎಂದು ಸ್ಪಷ್ಠನೆ ನೀಡಿ ಸಚಿವ ಹಾಲಪ್ಪ ಆಚಾರರಿಗೆ ಅವರು ಪತ್ರ ಬರೆದಿದ್ದಾರೆ.

ಯಲಬುರ್ಗಾದಿಂದ ಐದು ಬಾರಿ ಶಾಸಕರಾಗಿ, ಒಮ್ಮೆ ಕೊಪ್ಪಳ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ಸಚಿವರಾಗಿರುವ ರಾಯರಡ್ಡಿ ಹಿರಿಯ ರಾಜಕಾರಣಿ, ರಾಯರಡ್ಡಿ ಯವರನ್ನು ರಾಯಲ್ ರಡ್ಡಿ ಎಂದು ಕರೆಯುವುದು ಸಹ ವಾಡಿಕೆ. ಯಲಬುರ್ಗಾ ಹಾಗು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ. ಈ ಬಗ್ಗೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ಒಮ್ಮೊಮ್ಮೆ ಮಾತಿನ ಹಿಡಿತ ತಪ್ಪಿ ಮಾತನಾಡಿ ವಿವಾದಕ್ಕೆ ಗುರಿಯಾಗುತ್ತಾರೆ. ಈ ಹಿಂದೆ ಭದ್ರತೆ ಹಿಂಪಡೆಯುವ ವಿಷಯದಲ್ಲಿ ಮೋದಿ ಸಾಯಲಿ, ದೇಶಕ್ಕಾಗಿ ಸಾಯಲಿ ಎಂದು ಹೇಳಿದ್ದ ಹೇಳಿಕೆ, ಕೂಲಿಗಾಗಿ ಕಾಳು ಯೋಜನೆಯಲ್ಲಿ ಕೂಲಿಗಾಗಿ ನೀಡಿದ ಅಕ್ಕಿ ಮಾರಿಕೊಳ್ಳುತ್ತಾರೆ ಎಂಬ ಹೇಳಿಕೆಗಳು ತೀವ್ರ ವಿವಾದ ಹುಟ್ಟಿಸಿದ್ದವು.

ಈಗ ಸಚಿವ ಹಾಲಪ್ಪ ಆಚಾರ ಬಗ್ಗೆ ಆಡಿರುವ ಮಾತು ಈಗ ದೊಡ್ಡ ಸುದ್ದಿಯಾಗಿದೆ. ಮೂರು ದಿನಗಳ ಹಿಂದೆ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಸವರಾಜ ರಾಯರಡ್ಡಿ ಮಾತನಾಡುತ್ತಾ ಹಾಲಪ್ಪ ಆಚಾರ್ ಟೀಕೆಗೆ ಉತ್ತರಿಸುತ್ತಾ ವಿವಾದಾತ್ಮಕ ಹೇಳಿಕೆ ನೀಡಿದರು. ತಾನು ಹಿರಿಯ, ತಾನು 1985 ರಲ್ಲಿಯೇ ಶಾಸಕನಾದವನು, ಸಂಸದನಾದವನು ಎಂದು ಹೇಳಿದ ಅವರು, ಆರು ಹಡದಾಕಿ ಮುಂದೆ ಮೂರ ಹಡೆದಾಕಿ ನಖರ ಮಾಡಿದಳು ಎಂದರು. ಅದಕ್ಕೆ ಹೌದು ಸರ್ ಎಂದು ಅದೇ ಮಾತನ್ನು ಕಾರ್ಯಕರ್ತರೊಬ್ಬರು ಪುನರುಚ್ಚರಿಸಿದರು. ಅದಕ್ಕೆ ಧ್ವನಿಗೂಡಿಸಿದ ರಾಯರಡ್ಡಿ ಮೂರಲ್ಲ ಒಂದೂ ಇಲ್ಲ ಎಂದು ಹೇಳಿದ್ದು ವಿವಾದವಾಗಿದೆ.

ಇದನ್ನೂ ಓದಿ: Mysuru Gang Rape: ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಿ; ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಒಂದೂ ಇಲ್ಲ ಎನ್ನುವುದು ಪರೋಕ್ಷವಾಗಿ ಹಾಲಪ್ಪ ಆಚಾರರಿಗೆ ಮಕ್ಕಳಿಲ್ಲ ಎಂಬುವದನ್ನು ಹೇಳಿದಂತಾಗಿದೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದೇ ಕಾರ್ಯಕ್ರಮದಲ್ಲಿ ತಾನು ಸಿನೀಯರ್ ಎಂದು ಹೇಳುವಾಗ ಸಿದ್ದರಾಮಯ್ಯ, ,ಯಡಿಯೂರಪ್ಪ, ಆರ್ ವಿ ದೇಶಪಾಂಡೆ 1983 ರಲ್ಲಿ ಶಾಸಕರಾದವರು, ನಾನು 1985 ರಲ್ಲಿ ಶಾಸಕನಾದವನು, ನಾನು ಸಂಸದನಾಗಿ 26 ವರ್ಷವಾಯಿತು/ ಈ ಡಿ ಕೆ ಇವೆಲ್ಲಾ ಜ್ಯೂನಿಯರ್ಸ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರರ ಬಗ್ಗೆ ಏಕವಚನದಲ್ಲಿ ಮಾತನಾಡಿದರು. ನನಗೆ ಆಡಳಿತ ಅನುಭವವಿದೆ ಎಂದು ತಮ್ಮ ಬಗ್ಗೆ ಹೇಳಿಕೊಂಡರು.

ಈ ವಿಡಿಯೋಗಳು ವೈರಲ್ ಆಗಿ ಮಾಧ್ಯಮಗಳಲ್ಲಿ ಪ್ರಸಾರವಾದ ತಕ್ಷಣ ಬಸವರಾಜ ರಾಯರಡ್ಡಿ ಅವರು ತಪ್ಪು ತಿದ್ದಿಕೊಳ್ಳುವ ಪ್ರಯತ್ನ ಮಾಡಿದ್ಧಾರೆ. ಸಚಿವ ಹಾಲಪ್ಪ ಆಚಾರ್ ಅವರಿಗೆ ಪತ್ರ ಬರೆದು, ಇದು ನಿಮ್ಮನ್ನು ಉದ್ದೇಶಿಸಿ ಆಡಿದ ಮಾತಲ್ಲ, ಸಾಂದರ್ಭಿಕವಾಗಿ ಆಡಿದ ಮಾತು. ನನ್ನ ನಿಮ್ಮ ಕುಟುಂಬ ಪ್ರೀತಿ ವಿಶ್ವಾಸದಿಂದಿರೋಣ. ತಪ್ಪು ಕಲ್ಪನೆಯಿಂದ ಆಗಿರುವ ವಿವಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬರೆದಿದ್ದಾರೆ.

ಮಾತು ಮಾಣಿಕ್ಯ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಾತುಗಳನ್ನು ಆಡುವ ಮುನ್ನ ಸಾಕಷ್ಟು ವಿಚಾರ ಮಾಡಬೇಕೆನ್ನುವದಕ್ಕೂ ಇದು ಉದಾಹರಣೆಯಾಗಿದೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: