HOME » NEWS » District » BASAVAKALYANA BY ELECTION VICTORY IS NOT EASY FOR CANDIDATE SSBDR MAK

ಬಸವಕಲ್ಯಾಣ ಉಪಚುನಾವಣೆ: ಮತ ಸಮೀಕರಣ, ಕೆಲ ಆಕಾಂಕ್ಷಿಗಳ ವೈಯಕ್ತಿಕ ವರ್ಚಸ್ಸು, ಸುಲಭದ ತುತ್ತಲ್ಲ ಗೆಲುವು

ದಲಿತ ಸಮುದಾಯದ ಮತಗಳು ಗಮನಾರ್ಹವಾಗಿರುವುದರಿಂದ ಕಾಂಗ್ರೆಸ್- ಬಿಜೆಪಿ ತಮ್ಮದೇ ಸ್ಟ್ರ್ಯಾಟಜಿಯಲ್ಲಿ ಮುಳುಗಿವೆ. ಇನ್ನು 10 ಬಾರಿ ಚುನಾವಣೆ ಕಂಡ ಬಸವಕಲ್ಯಾಣ ಕ್ಷೇತ್ರದಲ್ಲಿ ಜನತಾ ಪರಿವಾರ ಹಾಗೂ ಜೆಡಿಎಸ್ 7 ಬಾರಿ ಗೆಲುವಿನ ಕೇಕೆ ಹಾಕಿದೆ.

news18-kannada
Updated:December 10, 2020, 8:29 PM IST
ಬಸವಕಲ್ಯಾಣ ಉಪಚುನಾವಣೆ: ಮತ ಸಮೀಕರಣ, ಕೆಲ ಆಕಾಂಕ್ಷಿಗಳ ವೈಯಕ್ತಿಕ ವರ್ಚಸ್ಸು, ಸುಲಭದ ತುತ್ತಲ್ಲ ಗೆಲುವು
ಪ್ರಾತಿನಿಧಿಕ ಚಿತ್ರ.
  • Share this:
ಬಿ.ನಾರಾಯಣರಾವ್ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಮೂರು ಪಕ್ಷಗಳು ಆ ನಿಟ್ಟಿನಲ್ಲಿ ಗೆಲುವಿಗೆ ತಂತ್ರ ಹೆಣೆಯುವಲ್ಲಿ ಕಾರ್ಯಪ್ರವೃತ್ತವೂ ಆಗಿವೆ. ಬಿಜೆಪಿಯಿಂದ ಸಿಎಂ ಪುತ್ರ ಬಿ.ವೈ ವಿಜಯೇಂದ್ರ, ಡಿಸಿಎಂ ಲಕ್ಷ್ಮಣ್ ಸವದಿ, ಬೀದರ್ ಸಂಸದ ಭಗವಂತ ಖೂಬಾ ಚುನಾವಣಾ ಉಸ್ತುವಾರಿಗಳಾಗಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿಕ್ಕಾಗಿಯೇ ಸಮಿತಿಯೊಂದನ್ನು ಮಾಡಿದೆ. ಆ ಸಮಿತಿಯ ಅಧ್ಯಕ್ಷ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗಿದ್ದರೆ, ಉಳಿದಂತೆ ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ರಾಜಶೇಖರ್ ಪಾಟೀಲ್, ರಹಿಂಖಾನ್ ಸೇರಿದಂತೆ ಮುಂತಾದವರು ಸಮಿತಿಯಲ್ಲಿದ್ದಾರೆ. ಈಶ್ವರ್ ಖಂಡ್ರೆಯವರ ತವರು ಜಿಲ್ಲೆಯ ವಿಧಾನಸಭಾ ಕ್ಷೇತ್ರವಾಗಿದ್ದರಿಂದ ಖಂಡ್ರೆಯವರಿಗಿದು ಪ್ರತಿಷ್ಟೆಯ ಪ್ರಶ್ನೆ.

ಹೀಗಾಗಿ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಸವಕಲ್ಯಾಣಕ್ಕೆ ಭೇಟಿ ನೀಡಿ ಹೋಗಿದ್ದಾರೆ. ಬಿಜೆಪಿ ಸಹ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಡಿಸಿಎಂ ಲಕ್ಷ್ಮಣ ಸವದಿ, ವಿಜಯೇಂದ್ರ ಜೊತೆಗೆ ಸಚಿವ ವಿ.ಸೋಮಣ್ಣ ಸಹ ಈಗಾಗಲೇ ಬಸವಕಲ್ಯಾಣಕ್ಕೆ ಭೇಟಿ ನೀಡಿ ಹೋಗಿದ್ದಾರೆ. ಎರಡು ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಜೆಡಿಎಸ್ ಅಭ್ಯರ್ಥಿ ನಿಲ್ಲಿಸುವುದಿಲ್ಲ ಎಂದು ಹೇಳಿತ್ತಾದರೂ ಕೊನೇ ಘಳಿಗೆಯಲ್ಲಿ ಅದು ಬದಲಾಗುವ ಸಾಧ್ಯತೆಗಳಿವೆ. ಮತ ಸಮೀಕರಣದ ವಿಚಾರಕ್ಕೆ ಬಂದರೆ ಲಿಂಗಾಯತ, ಮರಾಠಾ, ಮುಸ್ಲಿಂ ಮತಗಳು ಬಸವಕಲ್ಯಾಣ ಕ್ಷೇತ್ರದಲ್ಲಿ ಹೆಚ್ಚಾಗಿವೆ.

ದಲಿತ ಸಮುದಾಯದ ಮತಗಳು ಗಮನಾರ್ಹವಾಗಿರುವುದರಿಂದ ಕಾಂಗ್ರೆಸ್- ಬಿಜೆಪಿ ತಮ್ಮದೇ ಸ್ಟ್ರ್ಯಾಟಜಿಯಲ್ಲಿ ಮುಳುಗಿವೆ. ಇನ್ನು 10 ಬಾರಿ ಚುನಾವಣೆ ಕಂಡ ಬಸವಕಲ್ಯಾಣ ಕ್ಷೇತ್ರದಲ್ಲಿ ಜನತಾ ಪರಿವಾರ ಹಾಗೂ ಜೆಡಿಎಸ್ 7 ಬಾರಿ ಗೆಲುವಿನ ಕೇಕೆ ಹಾಕಿದೆ. ಆದರೆ ಈ ಬಾರಿ ಅಭ್ಯರ್ಥಿ ನಿಲ್ಲಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಟರು ಹೇಳಿದರೂ, ಸ್ಥಳೀಯ ಜೆಡಿಎಸ್ ಮುಖಂಡ ಮಾಜಿ ಶಾಸಕ ಎಂ.ಜಿ. ಮುಳೆ ಹೇಳುವುದೇ ಬೇರೆ. ಪಕ್ಷ ಅಭ್ಯರ್ಥಿ ಹಾಕದಿದ್ದರೂ ವರಿಷ್ಟರನ್ನು ಒಲಿಸಿ ಬಿ.ಫಾರಂ ತರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ; ಕೋಲ್ಕತ್ತಾದಲ್ಲಿ ಜೆಪಿ ನಡ್ಡಾ ಕಾರಿನ ಮೇಲೆ ಕಲ್ಲಿನಿಂದ ದಾಳಿ; ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಆಕ್ರೋಶ

ಎಂ.ಜಿ. ಮುಳೆ ಅವರು ಇಲ್ಲಿಯವರೆಗೆ ಏಳು ಚುನಾವಣೆ ಎದುರಿಸಿದ್ದು 1999ರಲ್ಲಿ ಶಾಸಕರಾಗಿದ್ದರು. ನಂತರ ಸೋತರೂ ಅವರು ಸ್ಪರ್ಧಿಸಿದ್ದರಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕಾರಣ ಪ್ರತೀ ಚುನಾವಣೆಯಲ್ಲೂ ಮುಳೆ ಅವರು ಬಿಜೆಪಿಯೇತರ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಆದರೆ ಪಡೆದಿದ್ದು ಮಾತ್ರ ಬಿಜೆಪಿ ವೋಟ್ ಬ್ಯಾಂಕ್ ಎಂದೇ ಗುರುತಿಸಲಾದ ಲಿಂಗಾಯತ, ಮರಾಠಾ ಮತಗಳನ್ನು. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷದ ಬಿ.ನಾರಾಯಣರಾವ್ ಗೆಲುವಿಗೆ ಜೆಡಿಎಸ್ ‌ನ ಪಿಜಿಆರ್ ಸಿಂಧ್ಯಾ ಸ್ಪರ್ಧಿಸಿದ್ದು ಸಹಕಾರಿಯಾಗಿತ್ತು.

ಸಿಂಧ್ಯಾ ಆಗ 31000 ಮತ‌ ಪಡೆದಿದ್ದರು. ಮುಳೆ ಅವರ ಬೆಂಬಲದ‌ ಕಾರಣಕ್ಕೆ ಸಿಂಧ್ಯಾ ಇಷ್ಟು ಪಡೆಯಲು ಸಾಧ್ಯವಾಗಿತ್ತು. ಆಗ ಇದು ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿತ್ತು. 2021ರ ಫೆಬ್ರುವರಿ ತಿಂಗಳಿಗೆ ಬಿ‌.ನಾರಾಯಣರಾವ್ ತೀರಿಕೊಂಡು ಆರು ತಿಂಗಳಾಗಲಿದೆ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಬಸವಕಲ್ಯಾಣ ಉಪಚುನಾವಣೆ ಈ ಎಲ್ಲ ಲೆಕ್ಕಾಚಾರಗಳಿಗೂ ಉತ್ತರ ನೀಡಲಿದೆ.
Published by: MAshok Kumar
First published: December 10, 2020, 8:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories