ಹಿಂದಿನ ಸಿಎಂ ನೀಡಿದ ಅನುದಾನವನ್ನು ನಮ್ಮ ಸಿಎಂ ತಡೆ ಹಿಡಿದಿದ್ದಾರೆ ; ಸಚಿವ ಅಶೋಕ್​​ ಎದುರು ಯತ್ನಾಳ ಅತೃಪ್ತಿ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಿಎಂ ಯಡಿಯೂರಪ್ಪನವರ ವಿರುದ್ಧ ತಮ್ಮಲ್ಲಿ ಅಡಗಿರುವ ಸಿಟ್ಟನ್ನು ನಾನಾ ಮಾರ್ಗಗಳ ಮೂಲಕ ಹೊರ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದು, ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

news18-kannada
Updated:August 26, 2020, 5:45 PM IST
ಹಿಂದಿನ ಸಿಎಂ ನೀಡಿದ ಅನುದಾನವನ್ನು ನಮ್ಮ ಸಿಎಂ ತಡೆ ಹಿಡಿದಿದ್ದಾರೆ ; ಸಚಿವ ಅಶೋಕ್​​ ಎದುರು ಯತ್ನಾಳ ಅತೃಪ್ತಿ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ
  • Share this:
ವಿಜಯಪುರ(ಆಗಸ್ಟ್.26): ವಿಜಯಪುರ ನಗರದ ಅಭಿವೃದ್ಧಿಗಾಗಿ ಹಿಂದಿನ ಸಿಎಂ ವಿಜಯಪುರ ಮಹಾನಗರ ಪಾಲಿಕೆಗೆ 125 ಕೋಟಿ ರೂ ಅನುದಾನ ನೀಡಿದ್ದರು. ಆದರೆ, ಈಗ ಕೊರೋನಾ ಹೆಸರಿನಲ್ಲಿ ಈಗಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಆ ಅನುದಾನವನ್ನು ತಡೆ ಹಿಡಿದಿದ್ದಾರೆ. ಹೀಗಾದರೆ ಹೇಗೆ ಅಭಿವೃದ್ಧಿ ಮಾಡುವುದು ಎಂದು  ಕಂದಾಯ ಸಚಿವರ ಎದುರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ​​​​ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕಂದಾಯ ಸಚಿವ ಆರ್. ಅಶೋಕ ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಗೆ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ ಪಾಲ್ಗೊಂಡಿದ್ದರು. ಈ ಸಭೆಯ ಬಳಿಕ ಯತ್ನಾಳ ಅಸಮಾಧಾನ ಕುರಿತು ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್. ಅಶೋಕ, ಯತ್ನಾಳ್​​ ಅವರು ಈಗಾಗಲೇ ವಿಷಯನ್ನು ಗಮನಕ್ಕೆ ತಂದಿದ್ದಾರೆ.  ಈ ಬಗ್ಗೆ ಚರ್ಚಿಸಲಾಗುವುದು ಎಂದಷ್ಟೇ ಹೇಳಿ ನಿರ್ಗಮಿಸಿದರು.

ಈ ಮಧ್ಯೆ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿನ್ನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಆಗಮಿಸಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದರು. ಅಲ್ಲದೇ, ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಗಳ ಕುರಿತು ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಗೆ ಯತ್ನಾಳ ಗೈರಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಇದನ್ನೂ ಓದಿ : Evening Digest : ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ, ಅಕ್ಟೋಬರ್​ ನಿಂದ ಪದವಿ ಕಾಲೇಜು ಆರಂಭ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

ಸಿಎಂ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಕಂದಾಯ ಸಚಿವ ಆರ್. ಅಶೋಕ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವ ಸಿಎಂ ಜೊತೆಗೆ ತಮಗಿರುವ ಆಕ್ರೋಶವನ್ನು ಮತ್ತೊಮ್ಮೆ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ, ಈ ಸಭೆಯಲ್ಲಿ ಸಿಎಂ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಸಿಎಂ ಕಾರ್ಯ ವೈಖರಿಯ ಬಗ್ಗೆ ಚರ್ಚೆಗೆ ಗ್ರಾಸವಾಗುವಂತೆ ಮಾಡಿದ್ದಾರೆ.

ಒಟ್ಟಾರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಿಎಂ ಯಡಿಯೂರಪ್ಪನವರ ವಿರುದ್ಧ ತಮ್ಮಲ್ಲಿ ಅಡಗಿರುವ ಸಿಟ್ಟನ್ನು ನಾನಾ ಮಾರ್ಗಗಳ ಮೂಲಕ ಹೊರ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದು, ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
Published by: G Hareeshkumar
First published: August 26, 2020, 5:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading