ಎರಡೂ ಕಿವಿಗೆ ಮೆಷೀನ್ ಹಾಕೊಂಡರೂ ಯಡಿಯೂರಪ್ಪಗೆ ಕಿವಿ ಕೇಳಲ್ಲ; ಸಿಎಂ ಸ್ಥಾನ ಬಿಟ್ಟುಕೊಡಲ್ಲ: ಯತ್ನಾಳ್

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎರಡೂ ಕಿವಿಗೆ ಮೆಷೀನ್ ಹಾಕಿಕೊಂಡರೂ ಕಿವಿ ಕೇಳೋವಲ್ಲದು. ಸಿಎಂ ಸ್ಥಾನದಿಂದ ಕೆಳಗಿಳಿ ಎಂದು ಹೇಳಿದರೂ ಕುರ್ಚಿ ಬಿಟ್ಟು ಇಳಿವಲ್ಲರು ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ

ಬಸನಗೌಡ ಪಾಟೀಲ ಯತ್ನಾಳ

  • Share this:
ಬಾಗಲಕೋಟೆ(ಏ. 18): ಸಿಎಂ ಬಿ ಎಸ್ ಯಡಿಯೂರಪ್ಪ ಎರಡು ಕಿವಿಗೂ ಮಶೀನ್ ಹಾಕಿಕೊಂಡರೂ ಆ ಪುಣ್ಯಾತ್ಮನಿಗೆ ಕಿವಿ ಕೇಳಿಸುವದಿಲ್ಲ. ಸಿಎಂ ಸ್ಥಾನ ಬಿಟ್ಟು ಕೊಡೋಕು ತಯಾರಿಲ್ಲ. ಬಿಟ್ಟರೆ ನಾವ್ಯಾರರ ಸಿಎಂ ಆಗ್ತೀವಿ ಅಂತ ಅದನ್ನೂ ಮಾಡವಲ್ಲ. ನಾನು ಸಿಎಂ ಲಿಸ್ಟ್ ನಲ್ಲಿ ಇಲ್ಲವೆಂದು ತಿಳಿದುಕೊಳ್ಳಬೇಡಿ. ನಾನು ಸಿಎಂ ಲಿಸ್ಟ್ ನಲ್ಲಿದ್ದೇನೆ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಾದಯಾತ್ರೆ ಯಶಸ್ಸುಗೊಂಡ ಹಿನ್ನೆಲೆಯಲ್ಲಿ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಈ ಹೇಳಿಕೆ ನೀಡಿದ್ದಾರೆ.

ನಾನು ಪಂಚಮಸಾಲಿಗೆ 2ಎ ಮೀಸಲಾತಿ ಕೊಡಬೇಕೆಂದು ಅಸೆಂಬ್ಲಿಯಲ್ಲಿ ಹೇಳಲು ಬಿಎಸ್​ವೈ ಬಿಡಲಿಲ್ಲ. ನೀವೇ ಉತ್ತರ ಕೊಡಬೇಕೆಂದು ಪಟ್ಟು ಹಿಡಿದೆ. ಯಡಿಯೂರಪ್ಪ ಅಸೆಂಬ್ಲಿಯಲ್ಲಿ ಮಾತು ಕೊಟ್ಟರೆ ಕಮಿಟ್ಮೆಂಟ್ ಆಗುತ್ತೆ. ಬಿಎಸ್​ವೈ ಕೊಡೋಲ್ಲವೆಂದರು. ಬಿಎಸ್​ವೈಗೆ ಕಿವಿ ಚುಚ್ಚುವರು ನಮ್ಮವರೇ. ಬಿಎಸ್ವೈ ಆ ಕಡೆ ಒಬ್ಬ, ಈ ಕಡೆ ಒಬ್ಬ ಕುಳಿತು ಹೇಳುವವರು. ಯಡಿಯೂರಪ್ಪಗೆ ಕಿವಿನೂ ಪಕ್ಕಾ ಕೇಳೋದಿಲ್ಲ. ಆ ಎನ್ನವ ಬಿಎಸ್​ವೈ ಎಂದು ಮಾಜಿ ಕೇಂದ್ರ ಸಚಿವರು ವ್ಯಂಗ್ಯವಾಡಿದರು.

ಪಂಚಮಸಾಲಿಯವರೇ ನಿಜವಾದ ಲಿಂಗಾಯತರು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಾಗಿದೆ. ಇವರೆಲ್ಲಾ ಬೋಗಸ್ ಲೀಡರ್​ಗಳೆಂಬುದು ಬಹಿರಂಗವಾಗಿದೆ. ಬೆಂಗಳೂರಿನಲ್ಲಿ 10ಲಕ್ಷ ಜನ ಸೇರದಿದ್ದಿದ್ದರೆ ನಮ್ಮ ಶಕ್ತಿ ಹೋಗುತ್ತಿತ್ತು. ನನ್ನ ಮೇಲೂ ರೇಡ್ ಮಾಡಿಸೋಕೆ ನೋಡಿದ್ರು ನಮ್ಮವರು. ಬಿಎಸ್​ವೈ ನನ್ನನ್ನು ಬಿಟ್ಟೇನೇನು ಎಂದು ತಿಳಿಕೊಂಡಿರೇನು. ಬಿಎಸ್​ವೈ ನನ್ನ ಮೇಲೂ ರೇಡ್ ಮಾಡಿಸೋಕೆ ನೋಡಿದ್ರು. ವಿಜಯಪುರದಲ್ಲಿ ಏನಾದರೂ ಅಕ್ರಮ ಆಸ್ತಿ, ಇಸ್ಪೀಟ್ ಮಾಡೋರಿಗೆ ಸಪೋರ್ಟ್ ಮಾಡ್ತಾನೇನು ಅಂತ ನೋಡಿದ್ರು. ಏನು ಇಲ್ಲ ಎಂದ ಬಳಿಕ ಸುಮ್ಮನೆ ಕುಳಿತರು. ರಾಜ್ಯದಲ್ಲಿ ಇವರ ಟಾರ್ಗೆಟ್ ನಂಬರ್ ಒನ್ ಅಂದರೆ ನಾನೇ. ಇವ ಏನು ಮಂಡ ಅದಾನು, ಹೊರಗೆ ಹಾಕಬೇಕು ಅಂತಾರೆ. 10ಲಕ್ಷ ಮಂದಿ ನೋಡಿ ಹೊರಗೆ ಹಾಕಲಿಲ್ಲ. ಮುಂದಿನ ಚುನಾವಣೆಯಲ್ಲಿ ಸಮಸ್ಯೆ ಆಗುತ್ತದೆಂದು ಶೀಘ್ರದಲ್ಲೇ ಉಚ್ಛಾಟನೆ, ಎಚ್ಚರಿಕೆ ಎಂದು ನೆಪ ಹೇಳಿದರು. ಎಷ್ಟು ಸಲ ಎಚ್ಚರಿಕೆ ಕೊಡ್ತೀರೋ ಎಂದು ಬಸನಗೌಡ ಪಾಟೀಲ ಯತ್ನಾಳ್ ವ್ಯಂಗ್ಯವಾಡಿದರು.

ನನಗೆ ಎರಡು ತಿಂಗಳಿಂದ ಎಚ್ಚರಿಕೆ ಕೊಟ್ಟೆ ಕೊಡ್ತಾರೆ. ಓರ್ವರು ದಿಲ್ಲಿಯಿಂದ ಬರ್ತಾರೆ. ಯತ್ನಾಳ್ ಅವರು ಸಿಎಂ ಬಗ್ಗೆ ಮಾತನಾಡಬಾರದು. ಇದು ಕೊನೆಯ ಎಚ್ಚರಿಕೆ ಅಂತಾರೆ. ಯತ್ನಾಳ್ ಉಚ್ಛಾಟನೆ ಮಾಡೋಕೆ ಯಾಕೆ ಆಗ್ತಿಲ್ಲ? ಈ ಸಲ ಅವರು ನನ್ನನ್ನು ಉಚ್ಛಾಟನೆ ಮಾಡುವ ಪ್ರಯೋಗ ಯಾಕೆ ಆಗಲಿಲ್ಲ? ಬೆಂಗಳೂರಿನಲ್ಲಿ 10ಲಕ್ಷ ಜನ ಸೇರಿದ ಶಕ್ತಿ ಪ್ರದರ್ಶನ  ನೋಡಿದರು. ಯತ್ನಾಳ್ ಉಚ್ಛಾಟನೆ ಮಾಡಿದ್ರೆ ಇಡೀ ಸಮಾಜ  ವಿರುದ್ಧ ಬೀಳುತ್ತೆ ಎಂದು ಉಚ್ಛಾಟನೆ ಮಾಡಲಿಲ್ಲ. ಪಂಚಮಸಾಲಿ ಶಕ್ತಿ ಪ್ರದರ್ಶನ ನೋಡಿ. ಬಿಎಸ್ವೈನ ಸಮುದಾಯದವರು ಶೇಕಡಾ 2ರಷ್ಟಿದ್ದಾರೆ ಎಂದು ಗೊತ್ತಾಗಿದೆ. ಅವರು ಇಡೀ ಕರ್ನಾಟಕದಲ್ಲಿ ನಾಲ್ಕೈದು ಲಕ್ಷ ಮಂದಿ ಇದ್ದಾರೆ. ರಾಜ್ಯದಲ್ಲಿ ಪಂಚಮಸಾಲಿ 1.10 ಕೋಟಿ ಜನರಿದ್ದೇವೆ. ಸಮಾಜದ ಜನರಿಂದ ಹೋರಾಟ ಸಕ್ಸಸ್ ಆಗಿದೆಯೇ ಹೊರತು ವೇದಿಕೆ ಮೇಲೆ ಕುಳಿತವರಿಂದಲ್ಲ. ಪಾದಯಾತ್ರೆಯಲ್ಲಿ ನಾನು  ಕೇವಲ ಭಾಷಣ ಮಾಡಿ ಹೋದೆ. ಇಷ್ಟೆಲ್ಲ ಕುತಂತ್ರ ಮಾಡಿದರು. ನಾನಂತೂ ವಿಧಾನಸಭೆಯಲ್ಲಿ ಬಿಎಸ್ವೈ ಬಿಡುವುದಿಲ್ಲ ಎಂದೆ. 2ಎ ಮೀಸಲಾತಿಗೆ ವಿಧಾನಸಭೆಯಲ್ಲಿ ಯಡಿಯೂರಪ್ಪ ನೀವೇ ಆಶ್ವಾಸನೆ ಕೊಡಬೇಕೆಂದೆ. ಕೊನೆಗೆ ಮುಖ್ಯಮಂತ್ರಿ ಭರವಸೆ ನೀಡಿದರು. ಬಸವರಾಜ ಬೊಮ್ಮಾಯಿ, ಸಿಸಿ ಪಾಟೀಲ್, ಈರಣ್ಣ ಕಡಾಡಿ ಬಹಳ ಪ್ರಯತ್ನ ಮಾಡಿದರು. ಇವರೆಲ್ಲ ಸಿಎಂ ಬಳಿ ಹೋದ್ರೆ ಮಾತನಾಡೋಕೆ ತಯಾರಿರಲಿಲ್ಲ. ಚಾವಿ (ಕೀಲಿ) ಬೇರೆಯಿದೆ. ಅದು ಬಾಗಲಕೋಟೆ ಚಾವಿ(ಕೀಲಿ) ಇದೆ. ಡೂಪ್ಲಿಕೇಟ್ ಚಾವಿ(ಕೀಲಿ) ಎಂದು ಸಚಿವ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.

“ವಿಧಾನಸಭೆಯಲ್ಲಿ ನಮ್ಮ ಶಾಸಕರು ಬರಲಿಲ್ಲ. ಆಗ ನನ್ನ ಚುನಾವಣೆ ಏನಾದರೂ ಆಗಲಿ. ನಿಮ್ಮ ಕ್ಷೇತ್ರದಲ್ಲಿ ನಾನೇ ಬಂದು ಸೋಲಿಸುವ ಕಾರ್ಯಕ್ರಮ ಶುರು ಎಂದೆ. ಎಲ್ಲರೂ ಬಂದು ಸಪೋರ್ಟ್ ಮಾಡಿದರು. ಸಿಎಂ ಬಳಿ ಹೋಗಿ ನಮ್ಮದೇನು ಇಲ್ಲ ಅನ್ನೋದು. ನನ್ನ ಬಳಿ ಬಂದು ನಮ್ಮ ಸಮಾಜಕ್ಕೆ ಮೀಸಲಾತಿ ಸಿಗದಿದ್ದರೆ ಅನ್ಯಾಯ ಆಗುತ್ತೆ ಅನ್ನೋದು. ರಾಜಕಾರಣಿಗಳು ದೊಡ್ಡ ನಾಟಕ ಕಂಪನಿ ಇದ್ದಂಗೆ. ರಾಜಕಾರಣಿಗಳು ನಾಟಕ ಮಾಡೋದು.

“ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕು. ನಾನು ಸಿಎಂ ಆಗೋಕೆ, ಕಾಶಪ್ಪನವರ್ ಮಂತ್ರಿ ಆಗೋಕೆ ಹೋರಾಟವಲ್ಲ. ಬಡ ಪಂಚಮಸಾಲಿ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಸಿಗಬೇಕು. ಎಲ್ಲಾ ಸಮಾಜದವರಿಗೆ ಮೀಸಲಾತಿಗಾಗಿ ಹೋರಾಟ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆದರೆ ರಕ್ತ ಕ್ರಾಂತಿ ಆಗುತ್ತದೆ ಎಂದು ಕೆಲ ಸ್ವಾಮೀಜಿಗಳು ಹೇಳಿದ್ರು. ಆ ಸ್ವಾಮೀಜಿಗಳಿಗೆ ಮೊದಲು ಚೆನ್ನಾಗಿ ಗೋವು ಸಾಕಿರಿ ಅಂತ ನಾ ಹೇಳಿದೆ” ಎಂದು ಯತ್ನಾಳ ಹೇಳಿದರು.

“ಕೆಲವರು ಇಡೀ ಪಂಚಮಸಾಲಿ ಸಮುದಾಯವನ್ನು ಖರೀದಿ ಮಾಡೋಕೆ ಹೊರಟಿದ್ದಾರೆ. ಅದೇನು ಸಕ್ಕರೆ ಪ್ಯಾಕ್ಟರಿನಾ ಖರೀದಿ ಮಾಡೋದಕ್ಕೆ. ಸಮಾಜವನ್ನು ಯಾರಿಗೂ ಖರೀದಿ ಮಾಡೋದಕ್ಕೆ ಆಗೋದಿಲ್ಲ. ನಿಮ್ಮ ಹೋರಾಟ ಸ್ವಾರ್ಥವಿಲ್ಲದ್ದಾಗಿರಬೇಕು. ಈಗ ಕಥೆ ಹೇಳೋಕೆ ಬಂದಿದ್ದಾರೆ. ಮೊದಲು ವಾಜಪೇಯಿ ಸರಕಾರ ಇದ್ದಾಗ ಸಮಾಜದ ಬಗ್ಗೆ ಧ್ವನಿಯೆತ್ತಿದ್ದು ನಾನು. ಆಗ ಇವಾ ಗ್ರಾಪಂ ಸದಸ್ಯ ಕೂಡ ಆಗಿರಲಿಲ್ಲ. ನಮ್ದೇನಿದ್ದರು ಏಕ್ ಮಾರ್ ದೊ ತುಕಡಾ. ಒಂದು ವರ್ಷ ಆಯ್ತು, ಸಿಎಂ ಮನೆ ಬಾಗಿಲಿಗೆ ನಾನು ಹೋಗಿಲ್ಲ. ಅವರ ಮನೆ ಮುಂದೆ ಹೋಗಿ ಸರ್ ಸರ್ ಅನ್ನೋದಿಲ್ಲ. ಆದರೆ ಸಾಕಷ್ಟು ಕೆಲಸ ಮಾಡಿಸಿದ್ದೇನೆ. ಕ್ಷೇತ್ರದಲ್ಲಿ ಐದು ನೂರು ಕೋಟಿ ಕೆಲಸ ಮಾಡಿದ್ದೇನೆ. ನಾವು ಬೆಂಗಳೂರಲ್ಲಿ ಹತ್ತು ಲಕ್ಷ ಜನ ಸೇರಿದ್ವಿ. ಇದು ಪ್ರಧಾನಿ ಮೋದಿ ಅವರಿಗೂ ಇವರು ನಿಜವಾದ ಲಿಂಗಾಯತರೂ ಅಂತ ಗೊತ್ತಾಯಿತು. ನಮ್ಮ ಸಮಾಜದ ಇಬ್ಬರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಒಬ್ಬರಿಗೆ ವಡ್ಡರಿಗೆ ಕೊಡುವ ಗಣಿ ಖಾತೆ ಕೊಟ್ಟಿದ್ದಾರೆ. ಮತ್ತೊಬ್ಬರಿಗೆ ಜಂಗ್ ಹತ್ತಿರುವ ಸಣ್ಣ ಕೈಗಾರಿಕೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂದು ಮುರುಗೇಶ್ ನಿರಾಣಿ ಮತ್ತು ಸಿ ಸಿ ಪಾಟೀಲ್ ಅವರನ್ನು ಯತ್ನಾಳ ವ್ಯಂಗ್ಯ ಮಾಡಿದರು.

ಪ್ರವಾಹ ಪರಿಹಾರ ಬಿಡುಗಡೆ ಆಗದಿದ್ದಾಗ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಬಗ್ಗೆ ಮಾತನಾಡಿದ್ದೆ. ಆಗ ಹೈಕಮಾಂಡ್ ನನಗೆ ನೋಟಿಸ್ ನೀಡಿತು. ನೋಟಿಸ್ ನೀಡಿ ಎರಡು ಗಂಟೆಯಲ್ಲಿ ರಾಜ್ಯಕ್ಕೆ 1500ಕೋಟಿ ಪರಿಹಾರ ಬಿಡುಗಡೆ ಮಾಡಿತು. ಆಗ ನಾವು ಆಲಮಟ್ಟಿಯಲ್ಲಿ ಯಡಿಯೂರಪ್ಪ ಎಲ್ಲರೂ ಇದ್ದೀವಿ. ಆಗ ಐಎಎಸ್ ಅಧಿಕಾರಿಯೊಬ್ಬರು ಬಂದು ಯಡಿಯೂರಪ್ಪರಿಗೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ ಎಂದಾಗ, ನೀನು ಮಾತನಾಡಿದಾಗ ಪರಿಹಾರ ಬಂತು ನೋಡಿ ಎಂದಿದ್ದರು. ಆಗ ನಾನು ಯಡಿಯೂರಪ್ಪನಿಗೆ ಬೇಕಾಗಿದ್ದೆ. ಈಗ ಬೇಡವಾಗಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೈ ಎಲೆಕ್ಷನ್ ಮುಗಿಯಿತು- ಸಿಎಂ ಬದಲಾವಣೆ ಪ್ರಕ್ರಿಯೆ ಶುರು:

ರಾಜ್ಯದಲ್ಲಿ ಬೈ ಎಲೆಕ್ಷನ್ ಮುಗಿತು. ಇನ್ನು ಮೇಲೆ ಸಿಎಂ ಬದಲಾವಣೆ ಪ್ರಕ್ರಿಯೆ ಶುರುವಾಗುತ್ತೆ ನೋಡಿ ಎಂದು ತೇರದಾಳ ಪಟ್ಟಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.

ತಮಗೆ ನೋಟಿಸ್ ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಮುಗಿದು ಎರಡು ತಿಂಗಳು ಆಯ್ತು. ಲವ್ ಲೆಟರೂ ಆಯ್ತು. ನೊಟೀಸು ಆಯ್ತು. ಆ ಬಗ್ಗೆ ಪ್ರತಿಕ್ರಿಯೆ ಏನು ಕೊಡೋದಿಲ್ಲ. ರಾಜ್ಯಾಧ್ಯಕ್ಷರಿದ್ದಾರೆ ಅವರಿಗೆ ಹೇಳುವ ಅಧಿಕಾರವಿದೆ. ವಿಜಯೇಂದ್ರ ಹಾಗೂ ಡಿಕೆಶಿ ಫೆಡರಲ್ ಬ್ಯಾಂಕ್ ಅಕ್ರಮ ಹಣದ ಬಗ್ಗೆ ಹಿಂದೆ ಆರೋಪ‌ ಮಾಡಿದ್ರು. ಅದು ಈಗ ಹೊರಬೀಳುತ್ತದೆ. ಆ ಬಗ್ಗೆ ತನಿಖೆ ನಡೆದಿದೆ. ವಿಸಿಐಆರ್ ಅಂತ ಮಾಡಿದಾರೆ. ಯಾರ್ಯಾರು ಎಷ್ಟು ಸಾವಿರ ಕೋಟಿ ಇಟ್ಟಿದಾರೆ, ಅದು ಹೊರಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪಚುನಾವಣೆಯಲ್ಲಿ ಪ್ರಚಾರಕ್ಕೆ ತಮ್ಮನ್ನು ನಿರ್ಲಕ್ಷಿಸಿರುವ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ, ಬಹಳ ಜನ ಸ್ಟಾರ್ ಆಗಿದಾರೆ. ನಮ್ಮಂತಹ ಸ್ಟಾರ್ ಯಾಕೆ ಬೇಕು ಎಂದು ವ್ಯಂಗ್ಯ ಮಾಡಿದರು.

ತಮ್ಮನ್ನು ಪಕ್ಷದಿಂದ ವಜಾ ಮಾಡುತ್ತಾರೆ ಎಂಬ ಮಾತಿದೆ ಎಂಬ ಪ್ರಶ್ನೆಗೆ, ವಜಾ ಆಗುತ್ತೋ ಇನ್ನೊಂದು ಒಳ್ಳೆ ಹುದ್ದೆ ಕೊಡುತ್ತಾರೋ ನೋಡೋಣವೆಂದು ಬಸನಗೌಡ ಪಾಟೀಲ ಯತ್ನಾಳ ಪರೋಕ್ಷವಾಗಿ ಸಿಎಂ ಹುದ್ದೆ ಆಸೆ ಹೊರಹಾಕಿದ್ದಾರೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: