ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ದೆಹಲಿ ಪ್ರವಾಸದ ಬಗ್ಗೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆ ನಡೆದಿರುವಾಗಲೇ ದೆಹಲಿ ಪ್ರವಾಸಕ್ಕೆ ಕಾರಣವೇನು ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ಸಿಎಂ ಮತ್ತು ಅವರ ಪುತ್ರ ವಿಜಯೇಂದ್ರ ಬಗ್ಗೆ ವಾಗ್ದಾಳಿ ನಡೆಸಿದ್ದಕ್ಕೆ ಈಗಾಗಲೇ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೊಟೀಸ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಬುಲಾವ್ ನೀಡಿದೆ ಎಂದೇ ರಾಜ್ಯಾದ್ಯಂತ ಚರ್ಚೆ ನಡೆದಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಯತ್ನಾಳ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ವು. ಆದರೆ, ಈ ಎಲ್ಲ ಊಹಾಪೋಹಗಳಿಗೆ ಯತ್ನಾಳ ಮತ್ತೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.
ಈ ಬಾರಿ ತಮ್ಮ ಫೇಸ್ಬುಕ್ ಖಾತೆಯಿಂದ ಉತ್ತರ ನೀಡಿರುವ ಯತ್ನಾಳ ತಮ್ಮ ದೆಹಲಿ ಪ್ರವಾಸದ ಬಗ್ಗೆ ಮಾಹಿತನ್ನು ನೀಡಿದ್ದಷ್ಟೇ ಅಲ್ಲ, ಅದಕ್ಕೆ ಸಾಕ್ಷಿಯಾಗಿ ಎರಡು ಪತ್ರಗಳನ್ನೂ ಬಿಡುಗಡೆ ಮಾಡಿದ್ದಾರೆ. ಅಲ್ಲದೇ, ಇಲ್ಲಿಯೂ ಕೂಡ ಸಿಎಂ ಮತ್ತು ವಿಜಯೇಂದ್ರ ವಿರುದ್ಧ ಕಿಡಿ ಕಾರಿದ್ದಾರೆ.
ಅಷ್ಟಕ್ಕೂ ಯತ್ನಾಳ ಫೇಸ್ಬುಕ್ನಲ್ಲಿ ನೀಡಿರುವ ಉತ್ತರದಲ್ಲಿ ಏನದೆ ಎಂದು ನೋಡಿದರೆ, ಇದು ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮ ಎಂದು ಹೇಳಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರಗಳು. ರವಿವಾರ ರಾತ್ರಿ ನಾನು ವಿಜಯಪುರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಶಿಶು ನಿಕೇತನ ಶಾಲೆಯ ಸಿಬಿಎಸ್ಇ(CBSE) ನೊಂದಣಿ ಕಾರ್ಯ ನಿಮಿತ್ತ ತುರ್ತು ಕಾರ್ಯ ನಿಮಿತ್ತ ನವ ದೆಹಲಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತಾ ಕ್ರಮ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಸೂಚನೆ
ನನಗೆ ಪಕ್ಷದ ಹೈಕಮಾಂಡ್ ಯಾವುದೇ ರೀತಿಯ ತುರ್ತು ಬುಲಾವ್ ಆಗಲಿ ಅಥವಾ ಸಮಯ ಕೊಟ್ಟು ನನ್ನ ವಿಚಾರಣೆಗೆ ಕರೆದಿಲ್ಲ. ನಾನು ಯಾವುದೇ ನಾಯಕರ ಭೇಟಿಗೆ ಸಮಯ ಕೇಳಲಿಲ್ಲ. ಮಾಧ್ಯಮಗಳಲ್ಲಿ ತಂದೆ ಮತ್ತು ಮಗ ಸುಳ್ಳು ಸುದ್ದಿ ಮಾಡಿಸಿದ್ದಾರೆ. ಬಲ್ಲ ಮೂಲಗಳಿಂದ ಎಂದು ಹೇಳಿಸಿ ಮತ್ತು ಬರೆಯಿಸಿದ್ದಾರೆ. ರಾಜ್ಯದ ಜನರಲ್ಲಿ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಲ್ಲಿ ಆತಂಕ ಉಂಟು ಮಾಡಿ ಯತ್ನಾಳನಿಗೆ ಮುಖಭಂಗ ಬೀಗ್ ಶಾಕ್ ಎಚ್ಚರಿಕೆ ಮತ್ತು ಬಾಯಿಗೆ ಬೀಗ ಅಂತ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಯತ್ನಾಳ ಕಿಡಿ ಕಾರಿದ್ದಾರೆ.
ಎಲ್ಲರಿಗೂ ನಮಸ್ಕಾರಗಳು 🚩🙏
ರವಿವಾರ ರಾತ್ರಿ ನಾನು ವಿಜಯಪುರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾದ ಭಾರತ ರತ್ನ ಅಟಲ್ ಬಿಹಾರಿ...
Posted by B R Patil Yatnal on Monday, 22 February 2021
ಅಷ್ಟೇ ಅಲ್ಲ, ಮೊನ್ನೆ ಕರ್ನಾಟಕ ರಾಜ್ಯದ ಇಬ್ಬರು ಸಚಿವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಮತ್ತು ನಮ್ಮ ಪೂಜ್ಯರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ಸೂಕ್ತ ಉತ್ತರ ಬಂದ ಮೇಲೆ ಕೊಡುತ್ತೇನೆ. ಹಿಂದೂ ಸಮಾಜದಲ್ಲಿಯ ಸಾಮಾಜಿಕ ನ್ಯಾಯಕ್ಕಾಗಿ ನನ್ನ ಹೋರಾಟ ನಿಲ್ಲುವುದಿಲ್ಲ. ಅಂಜುವುದಿಲ್ಲ, ಬಗ್ಗುವದು ಇಲ್ಲ ಮತ್ತು ಪಲಾಯನ ಇಲ್ಲವೆ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆದ ಹೆಚ್ಡಿಕೆ; ಸಿದ್ದರಾಮಯ್ಯಗೆ ಶಾಕ್
ಅಲ್ಲದೇ, ಕೊನೆಯಲ್ಲಿ ನಃ ಧೈನ್ಯಂ ನಃ ಪಲಾಯನಮ್. ಸತ್ಯ ಮೇವ ಜಯತೆ ಎಂದು ಘೋಷವಾಕ್ಯ ಹಾಕಿದ್ದಾರೆ. ಅದೂ ಕೂಡ ಕೇಸರಿ ಧ್ವಜಗಳೊಂದಿಗೆ ಎಂಬುದು ಗಮನಾರ್ಹವಾಗಿದೆ. ಈ ಮೂಲಕ ಸಿಎಂ ಬಿ. ಎಸ್. ಯಡಿಯೂರಪ್ಪ ಅಷ್ಟೇ ಅಲ್ಲ, ಸಚಿವರಾದ ಸಿ. ಸಿ. ಪಾಟೀಲ ಮತ್ತು ಮುರುಗೇಶ ನಿರಾಣಿ ಅವರ ವಿರುದ್ಧವೂ ಮತ್ತೆ ಸಮರ ಸಾರುವ ಸೂಚನೆ ನೀಡಿದ್ದಾರೆ.
ಒಂದು ಮೂಲದ ಪ್ರಕಾರ ಯತ್ನಾಳ ದೆಹಲಿ ಪ್ರವಾಸ ಪೂರ್ವ ನಿಗದಿಯಾಗಿತ್ತು. ಆದರೆ, ಪಂಚಮಸಾಲಿ ಮೀಸಲಾತಿ ಹೋರಾಟದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಗಿದ ಮೇಲೆ ದೆಹಲಿಗೆ ಪ್ರಯಾಣ ಬೆಳೆಸಲು ನಿರ್ಧರಿಸಿದ್ದರು. ಹೀಗಾಗಿ ಕಾರ್ಯಕ್ರಮ ಮುಗಿದ ಮೇಲೆ ದೆಹಲಿಗೆ ತೆರಳಿದ್ದಾರೆ. ಮತ್ತೋಂದು ಮೂಲದ ಪ್ರಕಾರ ಹೈಕಮಾಂಡ್ ಬುಲಾವ್ ನೀಡಿದೆ ಎನ್ನಲಾಗುತ್ತಿದೆ. ಆದರೆ, ಯತ್ನಾಳ ಮಾತ್ರ ತಾವು ತಮ್ಮ ಸಂಸ್ಥೆಯ ಕೆಲಸಕ್ಕಾಗಿ ತೆರಳಿರುವುದಾಗಿ ಸ್ಪಷ್ಪಪಡಿಸಿದ್ದಾರೆ. ಈಗ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದ್ದರೆ ಅದನ್ನು ಬಿಜೆಪಿಯ ಮುಖಂಡರೇ ಸ್ಪಷ್ಪಪಡಿಸಬೇಕಾಗಿದೆ.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ