HOME » NEWS » District » BASANAGOUDA PATIL YATNAL ATTACKS BSY SON BY VIJAYENDRA MVSV SNVS

ಸಿಎಂ ಮನೆಯಲ್ಲಿಯೇ ಹಾವು, ಚೇಳುಗಳಿವೆ- ವಿಜಯೇಂದ್ರ ತಮಗೆ ಬೇಡವಾದವರ ಸಿಡಿ ತಯಾರಿಸ್ತಾರೆ- ಯತ್ನಾಳ ಗಂಭೀರ ಆರೋಪ

ಯಡಿಯೂರಪ್ಪ ಹಿಂದೆ ವಿಪಕ್ಷ ನಾಯಕರಾಗಿದ್ದಾಗ ಅವರ ಮನೆಯಲ್ಲಿ ಅಡುಗೆ ಮಾಡುವವರು ಮತ್ತೊಬ್ಬರು ಮಾತ್ರ ಇರುತ್ತಿದ್ದರು. ಈಗ ಸಿಎಂ ಆದ ಮೇಲೆ ಇಡೀ ಕುಟುಂಬ ಬಂದು ಅವರ ನಿವಾಸ ಸೇರಿಬಿಟ್ಟಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಗುಡುಗಿದ್ದಾರೆ.

news18-kannada
Updated:February 15, 2021, 12:37 PM IST
ಸಿಎಂ ಮನೆಯಲ್ಲಿಯೇ ಹಾವು, ಚೇಳುಗಳಿವೆ- ವಿಜಯೇಂದ್ರ ತಮಗೆ ಬೇಡವಾದವರ ಸಿಡಿ ತಯಾರಿಸ್ತಾರೆ- ಯತ್ನಾಳ ಗಂಭೀರ ಆರೋಪ
ಬಸನಗೌಡ ಪಾಟೀಲ ಯತ್ನಾಳ
  • Share this:
ವಿಜಯಪುರ(ಫೆ. 15): ಸಿಎಂ ಮನೆಯಲ್ಲಿಯೇ ಹಾವು, ಚೇಳುಗಳಿವೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ, ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಹಾವು, ಚೇಳುಗಳ ಮಧ್ಯೆ ಸಿಎಂ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ನೀಡಿರುವ ಹೇಳಿಕೆಯ ವಿರುದ್ಧ ತಿರುಗೇಟು ನೀಡಿದ್ದಾರೆ.

ಸಿಎಂ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಈಗ ಸಿಎಂ ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದಾಗ ಅವರ ನಿವಾಸದಲ್ಲಿ ಯಾರೂ ಇರುತ್ತಿರಲಿಲ್ಲ. ಅಡುಗೆ ಮಾಡುವವ ಮತ್ತೊಬ್ಬ ಮಾತ್ರ ಆಗ ಇರುತ್ತಿದ್ದರು. ಈಗ ಸಿಎಂ ಆದ ನಂತರ ಅವರ ಇಡೀ ಕುಟುಂಬ ಬಂದು ಅವರ ನಿವಾಸ ಸೇರಿ ಬಿಟ್ಟಿದೆ. ಅವರ ಕುಟುಂಬದಿಂದ ಸಿಎಂ ಹೆಸರು ಕೆಡುತ್ತಿದೆ. ಯಡಿಯೂರಪ್ಪ ಸಂಪೂರ್ಣವಾಗಿ ಬದಲಾಗಿದ್ದಾರೆ. ವಿಶೇಷವಾಗಿ ವಿಜಯೇಂದ್ರ, ಅವರ ಕುಟುಂಬದವರಿಂದ ಹೆಸರು ಕೆಟ್ಟಿದೆ.  ವಿಜಯೇಂದ್ರ ಅವರ ಚೇಲಾಗಳು, ಅವರಿಗೆ ರಾತ್ರಿ ವ್ಯವಸ್ಥೆ ಮಾಡುವವರೆಲ್ಲ ಈಗ ನಿಗಮ, ಮಂಡಳಿ ಅಧ್ಯಕ್ಷ, ನಿರ್ದೇಶಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

‘ವಿಜಯೇಂದ್ರನ ತಂಡವಿದೆ, ವಸೂಲಿ, ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ’

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರದು ದೊಡ್ಡ ತಂಡವಿದೆ. ತಮಗೆ ಬೇಡವಾದವರ ನಕಲಿ ಸಿಡಿ ತಯಾರಿಸುವ ಕೇಂದ್ರವಿದೆ. ಈ ಬಗ್ಗೆ ತಮ್ಮ ಬಳಿ ಮಾಹಿತಿಯಿದೆ. ಹಾವು, ಚೇಳುಗಳು ಪಕ್ಷಕಟ್ಟಿವೆ. ಯಡಿಯೂರಪ್ಪ ಹಿಂದೆ ಪಕ್ಷ ಕಟ್ಟಿದಾಗ ಅವರ ಕಾರಿಗೆ ಪೆಟ್ರೋಲ್ ಹಾಕಿದ್ದೇನೆ. ಆದರೆ, ಸಿಎಂ ಈಗ ಪುತ್ರ ವ್ಯಾಮೋಹದ ಪರಾಕಾಷ್ಠೆ ತಲುಪಿದ್ದಾರೆ ಎಂದು ಯತ್ನಾಳ ಟೀಕೆ ಮಾಡಿದರು.

ಸುತ್ತೂರು ಶ್ರೀಗಳಿಗೆ ವೀರಶೈವ ಲಿಂಗಾಯಿತರ ನೇತೃತ್ವ ತೆಗೆದುಕೊಳ್ಳಲು ಹೇಳಿದ್ದಾರೆ. ಮೊನ್ನೆ ವೀರಶೈವ ಲಿಂಗಾಯಿತರನ್ನು ಒಡೆಯಲು ಪ್ರಯತ್ನಿಸಿದರು. ಅದು ವಿಫಲವಾಯಿತು. ವೀರಶೈವ ಲಿಂಗಾಯಿತರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ನಮ್ಮದು ಕಾಂಗ್ರೆಸ್, ಮುಲಾಯಂ ಸಿಂಗ್, ಲಾಲೂ ಪ್ರಸಾದ್, ದೇವೇಗೌಡರಂತೆ ಕುಟುಂಬ ಪಕ್ಷವಲ್ಲ. ನಮ್ಮದು ಕಾರ್ಯಕರ್ತರ ಪಕ್ಷ. ಪ್ರಧಾನಿಯ ಆಶಯದಂತೆ ಕುಟುಂಬ ರಾಜಕೀಯ ಬಿಡಬೇಕು. ಆದ್ದರಿಂದ ವಿಜಯೇಂದ್ರ ಕುಟುಂಬದಲ್ಲಿ ಎಲ್ಲರೂ ರಾಜಕೀಯ ಮಾಡಬಾರದು. ಒಬ್ಬರು ಮಾತ್ರ ರಾಜಕೀಯ ಮಾಡಿ. ಬೆಂಗಳೂರಿನಲ್ಲಿ ನಿಮಗೆ ಸೇರಿದ ಸಾಕಷ್ಟು ವ್ಯವಹಾರವಿದೆ. ನೂರಾರು ಮನೆಗಳಿವೆ ಎಂದು ಯತ್ನಾಳ ಕಿವಿ ಮಾತು ಹೇಳಿದರು.

ಇದನ್ನೂ ಓದಿ: ಟಿವಿ, ಬೈಕ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಎಂದ ಸಚಿವ ಉಮೇಶ್ ಕತ್ತಿ; ಸಾರ್ವಜನಿಕರ ಆಕ್ರೋಶ

ಸಿಎಂ ಮನೆಯಲ್ಲಿ ಕುಳಿತು ವಸೂಲಿ ಮಾಡುವ ಕೆಲಸ, ವರ್ಗಾವಣೆಯನ್ನು ನೀವೇ ಮಾಡುತ್ತಿದ್ದೀರಿ? ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರಿಗೇನೂ ತಿಳಿಯುತ್ತಿಲ್ಲ. ಅದನ್ನು ನಿಮ್ಮ ಇಡೀ ಕುಟುಂಬ, ಸುಮಾರು 35 ಜನ ಸಿಎಂ ಗೃಹ ಕಚೇರಿಯಲ್ಲಿ ಕುಳಿತುಕೊಂಡು ವ್ಯವಹಾರ ಮಾಡುತ್ತಿದ್ದೀರಿ. ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದೀರಿ. ಮೊನ್ನೆ ಇಡೀ ಕುಟುಂಬ ಮಾರಿಷಸ್​ಗೆ ವಿಶೇಷ ವಿಮಾನ ತೆಗೆದುಕೊಂಡು ಹೋಗಿದ್ದೀರಿ. ಅಲ್ಲಿಗೆ ಯಾಕೆ ಹೋಗಿದ್ದೀರಿ? ಏನು ಕೆಲಸವಿತ್ತು? ಹಣದ ವ್ಯವಹಾರ ಏನು ಇತ್ತು? ನಮ್ಮ ಹೋರಾಟ ತತ್ವಾಧಾರಿತ ಹೋರಾಟವಾಗಿದೆ. ಯಡಿಯೂರಪ್ಪ ಬಹಳ ದುಡಿದಿದ್ದಾರೆ. ಅವರನ್ನು ಮುಕ್ತರಾಗಿ ಕೆಲಸ ಮಾಡಲು ಬಿಡಿ.  ಅವರು ಸಿಎಂ ಆದ ಮೇಲೆ ಯಾಕೆ ಅವರ ನಿವಾಸದಲ್ಲಿ ಉಳಿದಿದ್ದೀರಿ? ಎಂದವರು ಪ್ರಶ್ನೆ ಮಾಡಿದರು.ವಿಜಯೇಂದ್ರನ ಸರ್ವಾಧಿಕಾರ, ದುರಹಂಕಾರ ಬಗ್ಗೆ ಎಲ್ಲ ಶಾಸಕರ ಅಸಮಾಧಾನವಿದೆ. ಕೆಲವು ಸಚಿವರು ವಿಜಯೇಂದ್ರ ಬಳಿ ಹೋದರೆ ಕುಳಿತುಕೊಳ್ಳಲು ಕುರ್ಚಿ ಕೂಡ ಇಲ್ಲ. ಅಧಿಕಾರಕ್ಕಾಗಿ ಎಲ್ಲರೂ ಸುಮ್ಮನಿದ್ದಾರೆ. ನಕಲಿ ಫೇಸ್ ಬುಕ್ ಅಕೌಂಟ್ ಮೂಲಕ ವಿಜಯೇಂದ್ರ ತಮ್ಮ ವಿರುದ್ಧ ಕಮೆಂಟ್ ಹಾಕುತ್ತಾರೆ. ಯಡಿಯೂರಪ್ಪ ಅವರ ಇಡೀ ಕುಟುಂಬ ಲೂಟಿ ಮಾಡುತ್ತಿದೆ.  ಪ್ರಧಾನಿ ಪ್ರಕಾರ ನಾ ಖಾವೂಂಗಾ, ನಾ ಖಾನೆ ದೂಂಗಾ ಅಂತಾರೆ. ಅವರ ಆಶಯದಂತೆ ನಾನು ಹೋರಾಟ ಮಾಡುತ್ತಿದ್ದೇನೆ ಎಂದು ಯತ್ನಾಳ ಹೇಳಿದರು.

ಮೀಸಲಾತಿ ಹೋರಾಟ, ನೊಟೀಸ್ ಬಗ್ಗೆ ಯತ್ನಾಳ ಆಕ್ರೋಶ:

ಇದೇ ವೇಳೆ ಹೈಕಮಾಂಡ್ ನಿಂದ ತಮಗೆ ನೊಟೀಸ್ ಬಂದಿದೆ.  ಮೀಸಲಾತಿ ಹೋರಾಟದಲ್ಲಿ ಪಾಲ್ಗೋಳ್ಳದಂತೆ ಸೂಚಿಸಲಾಗಿದೆ ಎಂಬುದರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಈ ವಿಚಾರದಲ್ಲಿ ವಿಜಯೇಂದ್ರ ಮತ್ತು ಸಚಿವ ಮುರುಗೇಶ ನಿರಾಣಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಅನುದಾನಕ್ಕೆ ಆಗ್ರಹಿಸಿ ಇಂದು ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳು ‌ಬಂದ್...!

ಈವರೆಗೆ ತಮಗೆ ಯಾವುದೇ ನೋಟೀಸ್ ಬಂದಿಲ್ಲ. ಈಗಾಗಲೇ ಉತ್ತರ ಬರೆದಿಟ್ಟಿದ್ದೇನೆ. ಸಿಎಂಗೆ ಮೀಸಲಾತಿ ಹೋರಾಟಗಾರರ ಬಗ್ಗೆ ಕಾಳಜಿ ಇದ್ದರೆ ಫೆ. 21ರೊಳಗೆ ಮೀಸಲಾತಿ ಆದೇಶ ಹೊರಡಿಸಲಿ. ಬರೀ ಕಣ್ಣು ಒರೆಸುವ ಕೆಲಸ ಬೇಡ. ಆದಿ ಬಣಜಿಗ, ಪಂಚಮಸಾಲಿಯನ್ನು 2ಎಗೆ ಸೇರಿಸುವುದಾಗಿ ಗುಲಬರ್ಗಾ ಉಪಚುನಾವಣೆ ಸಂದರ್ಭದಲ್ಲಿ ಹೇಳಿದ್ದೀರಿ. ಈವರೆಗೆ ಯಾಕೆ ನೀಡಿಲ್ಲ? ಹಾಲುಮತ, ಎಸ್. ಟಿ. ಮೀಸಲಾತಿ ಪ್ರಮಾಣ ಹೆಚ್ಚಳ ಯಾಕೆ ಮಾಡಿಲ್ಲ? 2ಎ ಸೇರಿಸುವುದು ಸಿಎಂ ಕೈಯಲ್ಲಿದೆ. ಮನಸ್ಸು ಮಾಡಿದರೆ ಇಂದೇ ನೀಡಬಹುದು. ಇದರ ಹಿಂದೆ ವಿಜಯೇಂದ್ರ, ಮುರುಗೇಶ ನಿರಾಣಿ ದೊಡ್ಡ ಸಂಚು ನಡೆಸಿದ್ದಾರೆ. ಈ ಸಮುದಾಯವನ್ನು ಒಡೆಯಲು ಸಂಚು ನಡೆಸಿದ್ದಾರೆ. ನಿರಾಣಿ ಅವರಿಗೆ ಸಚಿವರಾಗಲು ಮಾತ್ರ ಸಮಾಜ ಬೇಕಿದೆ. ಸಚಿವರಾದ ಬಳಿಕ ಸಿಎಂ ಪರ ಮಾತನಾಡುತ್ತಿದ್ದಾರೆ. ಸಿಎಂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ, ಉಳಿದವರಿಗೂ ನೀಡಬೇಕು. ಮೀಸಲಾತಿ ಬೇಡಿಕೆ ಬೆಂಕಿ ಹಚ್ಚಿದವರೇ ನಿರಾಣಿ. ಈಗ ಮಂತ್ರಿಯಾದ ನಂತರ ಮುಖ್ಯಮಂತ್ರಿಗಳಿಗೆ ಮನಸ್ಸಿಗೆ ನೋವಾಗಬಾರದು ಅಂತಾರೆ. ಕಳೆದ ವರ್ಷ ಹರಿಹರದಲ್ಲಿ ಆ ಸ್ವಾಮಿ ಕಡೆಯಿಂದ ಏನೇನು ಮಾತನಾಡಿಸಿದ್ದೀರಿ? ನಿರಾಣಿಯನ್ನು ಸಚಿವರನ್ನಾಗಿ ಮಾಡದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಗದರಿಸಿದ್ದೀರಿ. ಈಗ ಸಚಿವರಾದ ನಂತರ ಅದೇನು ಗುರಾಣಿ ಆಯ್ತಾ ನಿರಾಣಿ ಎಂದು ತಮ್ಮದೇ ಶೈಲಿಯಲ್ಲಿ ವಾಗ್ದಾಳಿ ನಡೆಸಿದರು.

ಮೀಸಲಾತಿ ಹೋರಾಟದಲ್ಲಿ ಭಾಗಿಯಾಗದಂತೆ ಹೈಕಮಾಂಡ್ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಹೈಕಮಾಂಡನ್ನು ಯಡಿಯೂರಪ್ಪ ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ವೀರಶೈವ ಸಮಾಜವನ್ನು ಓಬಿಸಿಗೆ ಸೇರಿಸಲು ಬೆಳಿಗ್ಗೆ ನಿರ್ಧರಿಸಿ ನಂತರ ಕ್ಯಾಬಿನೇಟ್ ಅಜೆಂಡಾದಿಂದ ಯಾಕೆ ಹಿಂಪಡೆದಿದ್ದೀರಿ? ಆಗ ನೀವು ಯಾರನ್ನು ಕೇಳಿ ಅನುಮತಿ ಪಡೆದಿದ್ದೀರಿ? ನಿಮ್ಮ ಕುರ್ಚಿಗೆ ಅಪಾಯ ಬಂದಿದ್ದ ಕಾರಣ ಸ್ವಾಮೀಜಿಗಳನ್ನು ಎತ್ತಿ ಕಟ್ಟಿದಿರಿ? ಮೊನ್ನೆ 500 ಜನ ಸ್ವಾಮೀಜಿಗಳನ್ನು ಏಕೆ ಸೇರಿಸಿದ್ದೀರಿ? ನೀವು ಕರೆದಿಲ್ಲ ಎಂದಾದರೆ ಲ್ಯಾಂಡ್ ಆರ್ಮಿ ಚೇರ್ಮನ್ ರುದ್ರೇಶ, ಪರಮಶಿವಯ್ಯ ಅಲ್ಲಿ ಯಾಕೆ ಇದ್ದರು? ಸಿಎಂ ಪರವಾಗಿ ಅವರು ಯಾಕೆ ಮನವಿ ಪಡೆದಿದ್ದಾರೆ? ಅವರು ವಿಜಯೇಂದ್ರ ಅವರ ಚೇಲಾಗಳಾಗಿದ್ದಾರೆ. ತಮಗೆ ತಿಳಿದಂತೆ ಮಾಡುತ್ತಾರೆ ಎಂದು ಅವರು ಆರೋಪಿಸಿದರು.

ವಿಜಯಪುರ ಜಿಲ್ಲೆಯ ಕೆಲವು ಜನ ವೀರಶೈವ ಲಿಂಗಾಯಿತ ಸ್ವಾಮೀಜಿಗಳನ್ನು ಯಾಕೆ ಸಿಎಂ ಮನೆಗೆ ಕರೆಯಿಸಿದ್ದೀರಿ? ಎಲ್ಲರೂ ಅಂದು ವಿಜಯೇಂದ್ರ ಅವರನ್ನು ಯಾಕೆ ಸನ್ಮಾನಿಸಿದಿರಿ? ಈ ನಾಟಕ ಕಂಪನಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪಂಚ ಪೀಠಾಧೀಶರು ಮೊನ್ನೆ ಸಭೆ ಕರೆದು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ಸಮಾಜ ಒಗ್ಗೂಡಿಸಿದ್ದಾರೆ. ಎಂದೂ ಲಿಂಗಪೂಜೆ ಮಾಡದ ವಿಜಯೇಂದ್ರ ಚಿತ್ರದುರ್ಗ ಸ್ವಾಮೀಜಿ ಹಿಡಿದುಕೊಂಡು ಲಿಂಗಪೂಜೆ ಮಾಡಿದ ಫೋಟೋ ತೆಗೆಸಿಕೊಂಡಿದ್ದಾರೆ. ಪ್ರತಿದಿನ ಪೂಜೆ ಮಾಡ್ತಾರಾ? ಇವರದು ಬರೀ ನಾಟಕ ಕಂಪನಿ. ರೂ. 10 ಕೋಟಿ ಖರ್ಚು ಮಾಡಿ ಬೆಂಗಳೂರಿನಲ್ಲಿ ಚಿತ್ರದುರ್ಗ ಸ್ವಾಮೀಜಿಗಳನ್ನು ಹಿಡಿದುಕೊಂಡು ಕಾರ್ಯಕ್ರಮ ಮಾಡಿದರು. ಅಂದು ಸುತ್ತೂರ ಸ್ವಾಮೀಜಿ ಇವರಿಗೆ ನೆನಪಿಗೆ ಬರಲಿಲ್ಲ. ಈಗ ಮೈಸೂರಿಗೆ ಹೋಗಿ ಸುತ್ತೂರು ಸ್ವಾಮೀಜಿಗಳಿಗೆ ಜೈ ಅಂತಾರೆ. ಅವರು ಸಿಗದಿದ್ದರೆ ಮುಂದೆ ತುಮಕೂರು ಸ್ವಾಮೀಜಿಗಳನ್ನು ಹಿಡಿದುಕೊಂಡು ಜೈ ಅಂತಾರೆ. ಅಲ್ಲಿಯೂ ಲಾಭವಾಗದಿದ್ದರೆ ಅಮಿತ್ ಶಾ ಜೈ ಅಂತಾರೆ ಎಂದು ಯತ್ನಾಳ ವಿಜಯೇಂದ್ರ ಮತ್ತು ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ, ತಮ್ಮ ಜೀವಕ್ಕೆ ಅಪಾಯವಿರುವುದರಿಂದ ಸರಕಾರ ಎರಡು ದಿನಗಳಿಂದ ತಮಗೆ ಪೊಲೀಸ್ ಭದ್ರತೆ ನೀಡಿದೆ. ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಗೃಹ ಇಲಾಖೆ ಪೊಲೀಸ್ ಎಸ್ಕಾರ್ಟ್ ನೀಡಿದೆ.  ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುವುದಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: February 15, 2021, 12:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories