ಹಾಸನ; ರಾಮನಾಥಪುರ ಪಟ್ಟಣದಿಂದ ಹಾದು ಹೋಗಿರುವ ಕಾವೇರಿ ನದಿಯಿಂದ ಹಾನಿಯಾಗದಂತೆ ತಡೆಗೋಡೆ ನಿರ್ಮಿಸಲಾಗುವುದು ಎಂದು ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸೂಚನೆಯಂತೆ ರಾಮನಾಥಪುರ ನೆರೆ ಹಾವಳಿ ಪ್ರದೇಶದ ಪರಿಶೀಲನೆಗೆ ಇಂದು ಆಗಮಿಸಿದ ವೇಳೆ ಮಾತನಾಡಿದ ಸಚಿವ ಗೋಪಾಲಯ್ಯ ಅವರು, ಕಾವೇರಿ ನದಿಯಿಂದ ಆಗಿರುವಂತಹ ಹಾನಿಯನ್ನು ಕಂಡಿದ್ದು ಮುಂದಿನ ಕೆಲ ದಿನಗಳಲ್ಲಿ ತಡೆಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಪ್ರತಿವರ್ಷ ಮಳೆಯ ಅವಾಂತರ ಹೆಚ್ಚುತ್ತಿದ್ದು, ಸಕಲೇಶಪುರ ತಾಲ್ಲೂಕು, ಮಡಿಕೇರಿ ಹಾಗೂ ಇತರ ಜಿಲ್ಲೆಗಳಲ್ಲಿ ಹೆಚ್ಚು ಹಾನಿ ಸಂಭವಿಸುತ್ತಿದೆ. ಇದಕ್ಕೆ ಅರಣ್ಯನಾಶವು ಒಂದು ಕಾರಣವಾಗಿದೆ. ಮೂರ್ನಾಲ್ಕು ತಿಂಗಳು ಬರಬೇಕಾದ ಮಳೆ ಎಂಟು ಹತ್ತು ದಿನದಲ್ಲಿ ಸುರಿಯುತ್ತಿರುವುದರಿಂದ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂದು ಹೇಳಿದರು.
ಹಾಸನ ಜಿಲ್ಲೆಯ ಜಲಾಶಯಗಳ ಹಿನ್ನೀರಿನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರಿನ ಹರಿವು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಹಾಗೂ ಇತರ ಜಿಲ್ಲೆಗಳಿಗೆ ನಾಲೆಗಳ ಮೂಲಕ ಕೆರೆಕಟ್ಟೆ ತುಂಬಿಸಲು ನೀರನ್ನು ಹರಿ ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.
ಇದನ್ನು ಓದಿ: Kodagu Rains: ಕೊಡಗು ಪ್ರವಾಹ; ಬ್ರಹ್ಮಗಿರಿ ಬೆಟ್ಟದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಜ್ಜಾದ ಎನ್ಡಿಆರ್ಎಫ್ ತಂಡ
ರಾಮನಾಥಪುರ ಪಟ್ಟಣಕ್ಕೆ ಕಾವೇರಿ ನೀರು ಉಕ್ಕಿ ಹರಿಯದಂತೆ ತಡೆಗೋಡೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸುವುದು ನಿಶ್ಚಿತ ಎಂದರಲ್ಲದೆ, ಸರ್ಕಾರ ಜನರ ಸಂಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
ಕಳೆದ ಎರಡು ವರ್ಷ ಸುರಿದ ಭಾರೀ ಮಳೆಯಿಂದಾಗಿ ರಾಮನಾಥಪುರ ಪಟ್ಟಣಕ್ಕೆ ನೀರು ನುಗ್ಗಿ ನೂರಾರು ಮನೆಗೆ ಹಾನಿ ಸಂಭವಿಸಿತ್ತು. ನೆರೆ ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆಯಲಾಗಿತ್ತು. ಇದೀಗ ಮತ್ತೆ ಕೊಡಗಿನಲ್ಲಿ ಭೀಕರ ಮಳೆಯಾಗುತ್ತಿರುವುದರಿಂದ ರಾಮನಾಥಪುರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ