ಕೋಲಾರ; ಮಹಾಮಾರಿ ಕೊರೋನಾ ಕಟ್ಟಿಹಾಕಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದೆ. ಇತ್ತ ಕೋಲಾರ ಜಿಲ್ಲೆಯಲ್ಲೂ ಕಳೆದ ಮೂರು ದಿನಗಳಿಂದ ದಾಖಲೆ ಪ್ರಮಾಣದ ಸೋಂಕಿತರು ದಾಖಲಾಗುತ್ತಿದ್ದಾರೆ.
ಈ ಮದ್ಯೆ ಬಂಗಾರಪೇಟೆಯಲ್ಲಿ ಶಾಸಕರು ಟಾಸ್ಕ್ ಪೋಸ್ ಕಮಿಟಿ ಸಭೆ ಸೇರಿ, ಒಂದು ವಾರದ ಕಾಲ ಸ್ವಯಂ ಪ್ರೇರಿತ ಲಾಕ್ಡೌನ್ ಆಚರಿಸಲು ನಿರ್ಧಾರ ಪ್ರಕಟಿಸಿದ್ದಾರೆ. ಈ ಹಿಂದಿನ ಲಾಕ್ಡೌನ್ ಸಮಯದಲ್ಲಿ ಎಚ್ಚರಿಕೆ ವಹಿಸಲು ಸ್ವಯಂ ಸಂಘಗಳ ಸೇವಕರ ಸಹಾಯ ಸಿಗುತ್ತಿತ್ತು. ಆದರೆ ಈಗ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸ್ವಯಂ ಸೇವಕರಿಗೂ ಸೋಂಕಿನ ಭೀತಿ ಎದುರಾಗಿದೆ. ಹೀಗಾಗಿ ಸ್ವಯಂ ಸೇವಕರು ಸೇವೆ ಸಲ್ಲಿಸಲು ಮುಂದಾಗುತ್ತಿದೆ. ಆದರೆ ಕೋಲಾರದ ಬಂಗಾರಪೇಟೆಯ ನಿವಾಸಿಯೊಬ್ಬರು, ಲಾಕ್ಡೌನ್ ಘೋಷಣೆ ಆದಾಗಲಿಂದ ಪಟ್ಟಣದಲ್ಲಿ ಕೊರೋನಾ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
ಬಂಗಾರಪೇಟೆ ನಿವಾಸಿ ಎಸ್ಪಿ ವೆಂಕಟೇಶ್ ಎನ್ನುವರು ಕೋವಿಡ್ ಸಂದರ್ಭದಲ್ಲಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮನೆಮಾತಾಗಿದ್ದಾರೆ. ಬೆಳ್ಳಂಬೆಳಗ್ಗೆ ಬೈಕ್ ಹತ್ತಿಕೊಂಡು, ಮೈಕ್ ಹಿಡಿದು ಹೊರಬಂದಲ್ಲಿ ಮತ್ತೆ ಸಂಜೆವರೆಗೂ ಕೋವಿಡ್ ಕ್ರಮಗಳ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಮೂಲತಃ ಮನೆ ಬಳಕೆಯ ವಸ್ತುಗಳ ಮಳಿಗೆ ಹೊಂದಿರುವ ಎಸ್ಪಿ ವೆಂಕಟೇಶ್ ಅವರು ಜನರಿಗೆ ಅರಿವು ಮೂಡಿಸುವ ಸಲುವಾಗಿ ತಮ್ಮ ಇತರೆ ಕೆಲಸಗಳನ್ನ ಬದಿಗೊತ್ತಿ, ಬೆಳಗ್ಗೆಯಿಂದ ಸಂಜೆವರೆಗೂ ಭುಜದ ಮೇಲೆ ಮೈಕ್ ಹಾಕಿಕೊಂಡು ಕೋವಿಡ್ ಕುರಿತು ಸರ್ಕಾರ, ಆರೋಗ್ಯ ಇಲಾಖೆ, ನೀಡುವ ಉಪಯುಕ್ತ ಮಾಹಿತಿಯನ್ನು ಜನರಿಗೆ ತಲುಪಿಸುತ್ತಿದ್ದಾರೆ.
ಈಗಾಗಲೇ ಬಂಗಾರಪೇಟೆ ಪಟ್ಟಣದಲ್ಲಿ ಕಂಟೈನ್ಮೆಂಟ್ ಝೋನ್ನಲ್ಲಿ ಸೋಂಕಿನ ಕುರಿತು ಮಾಹಿತಿ ರವಾನಿಸುವುದು, ಸೋಂಕಿತರ ಸಂಪರ್ಕಿತರು ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂಬ ಅರಿವನ್ನು ಮೂಡಿಸುತ್ತಾ ಸರ್ಕರಿ ಇಲಾಖೆಗಳ ಮೆಚ್ಚುಗೆ ಗಳಿಸಿದ್ದಾರೆ. ಬಂಗಾರಪೇಟೆ ಪಟ್ಟಣದಲ್ಲಿ ಒಂದು ವಾರಗಳ ಕಾಲ ಲಾಕ್ಡೌನ ಘೋಷಿಸಿದ್ದು, ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟು ಹೊರತಾಗಿ, ಉಳಿದೆಲ್ಲ ವಾಣಿಜ್ಯ ವಹಿವಾಟು ಬಂದ್ ಆಗಿದೆ. ಬೆಳಗ್ಗೆ 7 ರಿಂದ 12 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿದೆ. ಇದರಿಂದ ರಸ್ತೆಯಲ್ಲೆ ನಿಂತು ಸಾರ್ವಜನಿಕರಿಗೆ ಸಮಯದ ಮಾಹಿತಿಯನ್ನು ನೀಡುತ್ತಿದ್ದಾರೆ.
ತಮ್ಮ ಸಮಾಜಸೇವೆ ಕುರಿತು ಮಾತನಾಡಿದ ಅವರು, ನಾವು ಈ ಸಮಯದಲ್ಲಿ ಇತರರಿಗೆ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಬೇಕು. ಜನರಿಗೆ ಕೋವಿಡ್ 19 ರ ಕುರಿತು ಅಷ್ಟಾಗಿ ಮಾಹಿತಿ ಇರಲಿಲ್ಲ. ಹೀಗಾಗಿ ಖುದ್ದು ಮೈಕ್ ಮೂಲಕ ಮಾಹಿತಿ ನೀಡಲು ಮುಂದಾದೆ ಎಂದು ತಿಳಿಸಿದ್ದಾರೆ. ಈಗಲೂ ಬೆಳಗ್ಗೆಯಿಂದ ಸಂಜೆವರೆಗೂ ಅಗತ್ಯ ಮಾಹಿತಿಯನ್ನು ಹೇಳುತ್ತಲೇ ಇರುತ್ತೇನೆ. ಪ್ರಜ್ಞಾವಂತ ಜನರು ಕೇಳಿಸಿಕೊಂಡು ಧನ್ಯವಾದ ತಿಳಿಸಿ ಗೌರವಿಸುತ್ತಾರೆ ಎಂದು ತಿಳಿಸುತ್ತಾರೆ.
ಇದನ್ನು ಓದಿ; ಕೋವಿಡ್ ನಿಯಮ ಉಲ್ಲಂಘಿಸುವ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೈಕೋರ್ಟ್ ಆದೇಶ
ಇನ್ನು ವೆಂಕಟೇಶ್ ಅವರ ಸೇವೆಯನ್ನ ಹಲವು ಸಂಘ-ಸಂಸ್ಥೆಗಳು ಗುರ್ತಿಸಿ ಅವರನ್ನು ಗೌರವಿಸಿ ಸನ್ಮಾನಿಸಿದೆ. ಒಟ್ಟಿನಲ್ಲಿ ಕೋವಿಡ್ -19 ರ ಸಂಕಷ್ಟದ ಸನ್ನಿವೇಶದಲ್ಲಿ ಅದೆಷ್ಟೊ ಮಂದಿ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗೆ ಬಂಗಾರಪೇಟೆ ಪಟ್ಟಣದಲ್ಲಿ ವೆಂಕಟೇಶ್ ಅವರು ನಿಸ್ವಾರ್ಥ ಸೇವೆಯನ್ನು ನೀಡುತ್ತಾ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ