ಬೆಂಗಳೂರಿನ ಈ ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆಗೆ ಫಿಟ್ಸ್; ಕಂಡೂ ಕಾಣದಂತಿದ್ದ ಸಿಬ್ಬಂದಿ

ಫಿಟ್ಸ್ ಬಂದಿದ್ದ ಮಹಿಳೆಯ ಮಗ ಇಡೀ ಘಟನೆಯ ಹಾಗೂ ಕ್ವಾರಂಟೈನ್ ಕೇಂದ್ರದ ವಾಸ್ತವ ಸ್ಥಿತಿಯ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ಧಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜೂನ್ 09): ನಗರದ ಕ್ವಾರಂಟೈನ್ ಕೇಂದ್ರದಲ್ಲಿ ಮತ್ತೆ ಅವಾಂತರ ಶುರುವಾಗಿದೆ. ಮುಂಬೈನಿಂದ ಬಂದಿದ್ದ ಮಹಿಳೆಯ ಕುಟುಂಬವೊಂದನ್ನು ಜ್ಞಾನ ಭಾರತಿ ಬಳಿ ಕ್ವಾರೆಂಟೈನ್ ಮಾಡಲಾಗಿತ್ತು. ನಿನ್ನೆ ಊಟ ಆದ ಬಳಿಕ ಮಹಿಳೆಗೆ ಫಿಟ್ಸ್ (ಅಪಸ್ಮಾರ ಅಥವಾ ಮೂರ್ಛೆರೋಗ) ಬಂದಿದೆ. ರೋಗದ ಆಗಮನದ ಸುಳಿವು ಸಿಗುತ್ತಲೇ ಮಹಿಳೆ ತನ್ನ ಮಗನಿಗೆ ವಿಚಾರ ಹೇಳಿದ್ದಾರೆ. ವಿಚಾರ ಗೊತ್ತಾಗುತ್ತಂತೆ ಮಗ ಕ್ವಾರಂಟೈನ್ ಕೇಂದ್ರದ ಸಿಬ್ಬಂದಿಗೆ ವಿಚಾರವನ್ನು ತಿಳಿಸಿದ್ದಾರೆ. ಆದ್ರೆ ಅವರು‌ ಯಾರೂ ಅದನ್ನ ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರಿದರೆನ್ನಲಾಗಿದೆ.

ಇದಾದ ಬಳಿಕ ಎರಡನೇ ಬಾರಿ ಫಿಟ್ಸ್ ಬಂದು ಆ‌ ಮಹಿಳೆ ಅರೆಪ್ರಜ್ಞೆಯಲ್ಲಿ ಬಿದ್ದಿದ್ದಾರೆ. ನಂತರ ಕ್ವಾರೆಂಟೈನ್ ಆಗಿದ್ದವರೆಲ್ಲ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಾರ ಹೇಳಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಕಂಡು ತತ್​ಕ್ಷಣವೇ ಆಂಬುಲೆನ್ಸ್ ಕರೆಸಿ ಮಹಿಳೆಯನ್ನು ಆಸ್ಪತ್ರೆಗೆ ಕಳುಹಿಸಲು ನೆರವಾಗುತ್ತಾರೆ.

ಘಟನೆ ಆದ ಬಳಿಕ ಕ್ವಾರೆಂಟೈನ್ ಆಗಿದ್ದೋರೆಲ್ಲಾ ಹೊರಗಡೆ ಬಂದು ಪ್ರತಿಭಟನೆ ಮಾಡಿದ್ದಾರೆ. ಇಲ್ಲಿ ನಮಗೆ ಯಾವುದೇ ರೀತಿಯ ಸೌಲಭ್ಯ ಇಲ್ಲ. ಕೇಳಿದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ದಯವಿಟ್ಟು ನಮ್ಮ ಮನೆಗಳಿಗೆ ನಮ್ಮನ್ನು ಕಳುಹಿಸಿಕೊಡಿ ಎಂದು ಪ್ರತಿಭಟನೆ ಮಾಡಿದ್ದಾರೆ. ಜೊತೆಗೆ ಕ್ವಾರೆಂಟೈನ್ ಕೇಂದ್ರದಲ್ಲಿನ‌ ಸಿಬ್ಬಂದಿಯ ವಿರುದ್ದವೂ ತಮ್ಮ ಆಕ್ರೋಶ ವ್ಯಕ್ತಮಾಡಿದ್ದಾರೆ. ಮಹಿಳೆ ಫಿಟ್ಸ್ ಬಂದು ನರಳಾಡುತ್ತಿದ್ದರೂ ಆಕೆಯ ಸಹಾಯಕ್ಕೆ ಯಾರೂ ಬಂದಿಲ್ಲ. ಕೊನೆಯ ಪಕ್ಷ ಆಸ್ಪತ್ರೆಗೆ ಕರೆದೊಯ್ಯುವ ಕೆಲಸವನ್ನೂ ಮಾಡಿಲ್ಲ. ಈ ಕ್ವಾರಂಟೈನ್ ಕೇಂದ್ರದಲ್ಲಿ ಯಾವುದೇ ಪ್ರಾಥಮಿಕ ಸೌಲಭ್ಯಗಳೂ ಇಲ್ಲ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Honour Killing - ತೆಲಂಗಾಣದಲ್ಲಿ ದುರಂತ ಲವ್ ಸ್ಟೋರಿ; ಗರ್ಭಿಣಿ ಮಗಳನ್ನ ಕೊಂದ ಅಪ್ಪ

ಫಿಟ್ಸ್ ಬಂದಿದ್ದ ಮಹಿಳೆಯ ಮಗ ಇಡೀ ಘಟನೆಯ ಹಾಗೂ ಕ್ವಾರಂಟೈನ್ ಕೇಂದ್ರದ ವಾಸ್ತವ ಸ್ಥಿತಿಯ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ಧಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ. ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆಯನ್ನು ಈ ವಿಡಿಯೋ ಅನಾವರಣಗೊಳಿಸಿದೆ.

ದಿನೇ ದಿನೇ ಮುಂಬೈನಿಂದ ನಗರಕ್ಕೆ ಬರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇಂದೂ ಸಹ‌ ನಗರಕ್ಕೆ 500ಕ್ಕೂ ಅಧಿಕ ಜನರು ಬಂದಿದ್ದಾರೆ. ಬಂದವರನ್ನೆಲ್ಲಾ ತಪಾಸಣೆ ಮಾಡಿ ಬಿಎಂಟಿಸಿ ಬಸ್​ಗಳ ಮೂಲಕ ಕ್ವಾರೆಂಟೈನ್ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಆದರೆ, ಜ್ಞಾನಭಾರತಿ ಬಳಿ ಇರುವ ಇಂಥ ಕ್ವಾರಂಟೈನ್ ಕೇಂದ್ರಗಳೇ ಕೊರೋನಾ ಹಾಟ್​ಸ್ಪಾಟ್ ಆದರೂ ಅಚ್ಚರಿ ಇಲ್ಲ.

First published: