• Home
  • »
  • News
  • »
  • district
  • »
  • ಬಿ.ಆರ್.ಟಿ ಹುಲಿರಕ್ಷಿತಾರಣ್ಯದಲ್ಲಿ ಹೂ ಬಿಟ್ಟ ಬಿದಿರು; ಏನಿದರ ಮುನ್ಸೂಚನೆ?

ಬಿ.ಆರ್.ಟಿ ಹುಲಿರಕ್ಷಿತಾರಣ್ಯದಲ್ಲಿ ಹೂ ಬಿಟ್ಟ ಬಿದಿರು; ಏನಿದರ ಮುನ್ಸೂಚನೆ?

ಹೂ ಬಿಟ್ಟ ಬಿದಿರು

ಹೂ ಬಿಟ್ಟ ಬಿದಿರು

ಚಾಮರಾಜನಗರದ ಬಿಆರ್​ಟಿ ರಕ್ಷಿತಾರಣ್ಯದಲ್ಲಿ ಬಿದಿರುಗಳು ಹೂಬಿಟ್ಟಿರುವುದು ಕೇಡುಗಾಲದ ಸಂಕೇತ ಎಂಬ ಮೂಢನಂಬಿಕೆ ಇದೆಯಾದರೂ ವಾಸ್ತವದಲ್ಲಿ ಕಾಡ್ಗಿಚ್ಚು, ಮಾನವ-ಆನೆ ಸಂಘರ್ಷಕ್ಕೆ ಇದು ಕಾರಣವಾಗಬಹುದು.

  • Share this:

ಚಾಮರಾಜನಗರ ( ಫೆ. 4) ಜಿಲ್ಲೆಯ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿದಿರು ಹೂ ಬಿಟ್ಟಿದೆ. ಇಲ್ಲಿನ ಬೈಲೂರು ವಲಯದಲ್ಲಿ ಮೂನ್ನೂರು  ಎಕರೆಗು ಹೆಚ್ಚು  ಪ್ರದೇಶದಲ್ಲಿ  ಬಿದಿರು ಹೂ ಬಿಟ್ಟು ಅದು ಭತ್ತ ಆಗಿದೆ.  ಕೇವಲ ಅರಣ್ಯ ಪ್ರದೇಶವಷ್ಟೇ ಅಲ್ಲ, ಕಾಡಂಚಿನ ಜಮೀನುಗಳಲ್ಲಿ ಬೆಳೆದಿರುವ  ಬಿದಿರು ಸಹ ಹೂ ಬಿಟ್ಟಿದೆ. ಆನೆಗಳಿಗೆ  ಬಿದಿರಿನ ಹುಲ್ಲು ಬಲು ಪ್ರಿಯವಾದ ಆಹಾರ. ಆದರೆ ಬಿದಿರು ಹೂ ಬಿಟ್ಟ ನಂತರ ಒಣಗಿ ಹೋಗುವುದರಿಂದ ಆನೆಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ಆನೆಗಳು ಮೇವಿಗಾಗಿ ನಾಡಿನತ್ತ ಲಗ್ಗೆ ಇಡಲಿದ್ದು, ಇದರಿಂದ ಆನೆ - ಮಾನವ ಸಂಘರ್ಷಕ್ಕು ಇದು ಕಾರಣವಾಗಲಿದೆ.


ಹೂ ಬಿಟ್ಟ ನಂತರ ಬಿದಿರು ಒಣಗಿ ಹೋಗಲಿದ್ದು, ಹೀಗೆ ಒಣಗಿದ  ಬಿದಿರಿಗೆ ಆಕಸ್ಮಿಕ ವಾಗಿ ಬೆಂಕಿ ಬಿದ್ದರೆ  ಇಡೀ ಕಾಡಿಗೆ ಬಹುಬೇಗ ವ್ಯಾಪಿಸುವ ಅಪಾಯ ಇದೆ.  ಏಕೆಂದರೆ ಬೆಂಕಿ ಹೊತ್ತಿಕೊಂಡ ನಂತರ ಬಿದಿರು ಚಟಪಟನೆ ಸಿಡಿಯುವುದರಿಂದ ಬೆಂಕಿಯ ಕಿಡಿ ಹಲವು ಮೀಟರ್ ಗಳ ದೂರದವರೆಗು ಹಾರುತ್ತದೆ. ಹಾಗಾಗಿ  ಅರಣ್ಯ ಪ್ರದೇಶದಲ್ಲಿ ಬಹುಬೇಗನೆ ಬೆಂಕಿ ಹಬ್ಬುತ್ತದೆ. ಈ ಹಿನ್ನಲೆಯಲ್ಲಿ   ಅರಣ್ಯ ಇಲಾಖೆ ಮುಂಜಾಗ್ರತೆ ವಹಿಸಬೇಕು.  ಆನೆಗಳಿಗೆ ಬಿದಿರಿನ ಹುಲ್ಲು ಸತ್ವಯುತ ಆಹಾರವಾಗಿದ್ದು  ಮತ್ತೆ ಬಿದಿರು ಬೆಳೆಸಲು ಕ್ರಮ ವಹಿಸಬೇಕು ಎಂದು   ಹೊಸದೊಡ್ಡಿ  ಗ್ರಾಮ ಪರಿವರ್ತನಾ ಅರಣ್ಯ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.


550 ಬಿದಿರಿನ ಪ್ರಭೇದಗಳಿದ್ದು. ಭಾರತದಲ್ಲೇ 136 ಜಾತಿಯ ಬಿದಿರುಗಳಿವೆ.  ಬಿದಿರು ಸಾಮಾನ್ಯವಾಗಿ ದಿನಕ್ಕೆ 3 ರಿಂದ 4  ಅಂಗುಲಗಳಷ್ಟು ವೇಗವಾಗಿ ಬೆಳೆಯುತ್ತದೆ.   ಬಿದಿರಿನಲ್ಲಿ ಹೂ ಬಿಟ್ಟು ಕಾಯಿ ಕಟ್ಟಿ ಭತ್ತದ ರೂಪದಲ್ಲಿ ಅದರ ಬೀಜ ಧರೆಗುರುಳುತ್ತದೆ. ಈ ಭತ್ತದಿಂದ ಸಿಪ್ಪೆ ತೆಗೆದು ಅಕ್ಕಿ ಮಾಡಿ  ಆಹಾರ ರೂಪದಲ್ಲಿ ಉಪಯೋಗಿಸುತ್ತಾರೆ.


ತನ್ನ ಜೀವಿತಾವಧಿಯ ಕೊನೆಯಲ್ಲಿ   ಅಂದರೆ 60-70 ವರ್ಷಗಳ ನಂತರ ಬಿದಿರು ಹೂ ಬಿಡುತ್ತದೆ, ಹೂ ಬಿಟ್ಟ ಮೇಲೆ ಹೂ  ಭತ್ತವಾಗಿ  ಬಿದಿರಿನ ಮರ ಸಂಪೂರ್ಣ ಒಣಗಿ ಹೋಗುತ್ತದೆ. ಅಲ್ಲಿಗೆ ಬಿದಿರಿನ ಆಯಸ್ಸು ಮುಗಿದಂತೆಯೇ ಸರಿ.


ಇದನ್ನು ಓದಿ: ಥಿಯೇಟರ್​ ಭರ್ತಿಗೆ ಅವಕಾಶ; ನಾಲ್ಕುವಾರ ಗಡುವು ನೀಡಿದ ರಾಜ್ಯ ಸರ್ಕಾರ


ಬಿದಿರು ಹೂ ಬಿಟ್ಟರೆ ಬರಗಾಲ ಎಂಬ ಮೂಢನಂಬಿಕೆ


ಬಿದಿರು ಹೂ ಬಿಟ್ಟರೆ ಆ ಭಾಗದಲ್ಲಿ ಮಳೆ ಬರುವುದಿಲ್ಲ, ಬರಗಾಲ ಎದುರಾಗುತ್ತದೆ, ಇಷ್ಟೇ ಅಲ್ಲದೆ ಬಿದಿರು ಹೂ ಬಿಡುವುದು ಅನಿಷ್ಟ ದ ಸಂಕೇತ ಎನ್ನುವ ಮೂಢನಂಬಿಕೆ ಇದೆ. ಮುಂದೆ ಯಾವುದಾದರು ಕೆಟ್ಟ ಘಟನೆ ನಡೆಯುವುದನ್ನು ಇದು ಸೂಚಿಸುತ್ತದೆ, ಕೇಡುಗಾಲದ ಮುನ್ಸೂಚನೆ ಎಂಬ ಮೂಢನಂಬಿಕೆ  ಗ್ರಾಮೀಣ ಭಾಗದಲ್ಲಿ ಇಂದಿಗೂ ಬಲವಾಗಿ ಬೇರೂರಿದೆ.


ಅದರೆ ಬಿದಿರು ಹೂ ಬಿಡುವುದರಿಂದ  ಬರಗಾಲ ಉಂಟಾಗುತ್ತದೆ, ಕೇಡುಗಾಲದ ಮುನ್ಸೂಚನೆ  ಎಂಬುದಕ್ಕೆ  ಯಾವುದೇ ವೈಜ್ಞಾನಿಕ ಪುರಾವೆಗಳು  ಇಲ್ಲ.


(ವರದಿ: ಎಸ್.ಎಂ.ನಂದೀಶ್ )

Published by:Seema R
First published: