ಬೆಳಗಾವಿ (ಜು. 11); ಅನೇಕ ವರ್ಷಗಳಿಂದ ಕುಡಚಿ- ಬಾಗಲಕೋಟೆ ರೈಲು ಮಾರ್ಗ ಕಾಮಗಾರಿ ನನೆಗುದಿಗೆ ಬಿದ್ದಿದೆ. ರೈಲು ಮಾರ್ಗ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಜಮೀನು ಹಸ್ತಾಂತರಿಸಬೇಕು. ಬಳಿಕ ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲಾವುದು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಭರವಸೆ ನೀಡಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಯಿತು. ಸಚಿವ ಸುರೇಶ ಅಂಗಡಿ ನೇತೃತ್ವದಲ್ಲಿ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ಬಾಗಲಕೋಟೆ ಶಾಸಕ ವೀರಣ ಚರಂತಿಮಠ ಸೇರಿ ಎರಡು ಜಿಲ್ಲೆಯ ಜಿಲ್ಲಾಧಿಕಾರಿಗಳು, ಉಪವಿಭಾಗದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಸಚಿವ ಸುರೇಶ ಅಂಗಡಿ, ಒಮ್ಮೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡರೆ ಡಿಪಿಆರ್ ಮತ್ತು ಹಣ ಬಿಡುಗಡೆ ಪ್ರಕ್ರಿಯೆ ಸುಗಮವಾಗಲಿದೆ. ಆದ್ದರಿಂದ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ಆರಂಭಿಸುವಂತೆ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಂಪೂರ್ಣ ಜಮೀನು ಒದಗಿಸುವುದು ಹಾಗೂ ಯೋಜನೆ ಕಾಮಗಾರಿಯ ಶೇ.50 ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಿರುವುದರಿಂದ ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಈ ಕೆಲಸ ಪೂರ್ಣಗೊಳಿಸಿದರೆ ಯೋಜನೆ ಅನುಷ್ಠಾನ ಸುಲಭವಾಗಲಿದೆ ಎಂದರು.
ಭೂಮಿ ಗುರುತಿಸಿಕೊಡುವ ಕೆಲಸ ರೈಲ್ವೆ ಇಲಾಖೆಯ ಅಧಿಕಾರಿಗಳು ಹದಿನೈದು ದಿನದೊಳಗೆ ಪೂರ್ಣಗೊಳಿಸಬೇಕು. ಅದಾದ ಬಳಿಕ ಸ್ವಾಧೀನ ಪ್ರಕ್ರಿಯೆಯನ್ನು ಉಭಯ ಜಿಲ್ಲಾಧಿಕಾರಿಗಳು ಆರಂಭಿಸಬೇಕು ಎಂದು ಸೂಚನೆ ನೀಡಿದರು. ಇನ್ನುಳಿದ 114 ಎಕರೆ ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ಆರಂಭಿಸಬೇಕು ಎಂದು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಅರಣ್ಯ ಇಲಾಖೆಗೆ ಸಂಬಂಧಿಸಿದ 41 ಎಕರೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ ಹದಿನೈದು ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನು ಓದಿ: PM Cares: ಪಿಎಂ ಕೇರ್ಸ್ ಪರಾಮರ್ಶೆಗೆ ಜಿಜೆಪಿ ವಿರೋಧ; ಲೆಕ್ಕಪತ್ರ ಸಮಿತಿಯ ತನಿಖೆಗೆ ವಿರೋಧ ಪಕ್ಷಗಳು ಪಟ್ಟು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ