ವಿದ್ಯಾರ್ಥಿಗಳಿಂದ ತುಂಬಿತುಳುಕುತ್ತಿದ್ದರೂ ಬಾಗಲಕೋಟೆ ತೋಟಗಾರಿಕೆ ವಿವಿಗೆ ಸಿಬ್ಬಂದಿ ಕೊರತೆ

ಅತಿ ಕಡಿಮೆ ಅವಧಿಯಲ್ಲಿ ಹೆಮ್ಮರವಾಗಿ ಬೆಳೆದಿರುವ ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ 1843 ಸಿಬ್ಬಂದಿ ಪೈಕಿ 811 ಹುದ್ದೆಗಳು ಭರ್ತಿಯಾಗಬೇಕಿವೆ. ಸಾಕಷ್ಟು ವಿದ್ಯಾರ್ಥಿಗಳಿರುವ ಈ ವಿವಿಯಲ್ಲಿ ಇಷ್ಟು ಸಿಬ್ಬಂದಿ ಕೊರತೆ ಇರುವುದು ಗಮನಾರ್ಹ.

ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯ

ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯ

  • Share this:
ಬಾಗಲಕೋಟೆ; ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆ ಒಂದೆಡೆಯಾದರೆ ಮತ್ತೊಂದೆಡೆ ಕೊರೊನಾದಿಂದಲೂ ವಿದ್ಯಾರ್ಥಿಗಳ ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ. 2008ರಲ್ಲಿ ಅಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಳುಗಡೆ ಜಿಲ್ಲೆ ಬಾಗಲಕೋಟೆಗೆ ತೋಟಗಾರಿಕೆ ವಿವಿಯನ್ನು ಕೊಡುಗೆ ಕೊಟ್ಟಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲೆ ತೋಟಗಾರಿಕೆ ವಿವಿ ಹೆಮ್ಮರವಾಗಿ ಬೆಳೆದು ನಿಂತಿದೆ. ಆದರೆ, ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಬೋಧಕ ಹಾಗೂ ಬೋಧಕೇತರ ಹುದ್ದೆಗಳು ಖಾಲಿಯಾಗಿ ಹಲವು ವರ್ಷಗಳು ಸಮೀಪಿಸುತ್ತಿದ್ರೂ ಹುದ್ದೆ ಭರ್ತಿಗೆ ಅನುಮತಿ ಮಾತ್ರ ಸಿಗುತ್ತಿಲ್ಲ. ಶಿಕ್ಷಕ ಹಾಗೂ ಶಿಕ್ಷಕೇತರ ಸಮಸ್ಯೆ ವಿಶ್ವ ವಿದ್ಯಾಲಯದಲ್ಲಿ ಇದೆ. ಹೀಗಾಗಿ ಶಿಕ್ಷಣದ ಗುಣಮಟ್ಟ ಹೆಚ್ವಿಸಲು ಆಗುತ್ತಿಲ್ಲ.

ಒಟ್ಟು 424 ಬೋಧಕ ಹುದ್ದೆಗಳಲ್ಲಿ 285 ಹುದ್ದೆಗಳನ್ನು ತುಂಬಲಾಗಿದೆ. ಇನ್ನುಳಿದ ಶೇ.35 ರಷ್ಟು, ಅಂದರೆ 131 ಹುದ್ದೆಗಳು ಖಾಲಿ ಉಳಿದಿವೆ. ಬೋಧಕೇತರ ಸಿಬ್ಬಂದಿ ಪೈಕಿ ಸರ್ಕಾರದಿಂದ 1419 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 739 ಹುದ್ದೆಗಳನ್ನು ತುಂಬಲಾಗಿದ್ದು, ಇನ್ನೂ 680 ಹುದ್ದೆಗಳು ಖಾಲಿ ಇದ್ದು ಇದನ್ನು ಖುದ್ದಾಗಿ ವಿವಿ ಕುಲಪತಿ ಕೆ ಎಂ ಇಂದಿರೇಶ್ ಅವರೇ ಬಹಿರಂಗಪಡಿಸಿದ್ದು, ವಿವಿಗೆ ಸಿಬ್ಬಂದಿ ಬರ ಎದುರಾಗಿದೆ.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಗೆ ರಾಜ್ಯದಲ್ಲಿ 23 ಜಿಲ್ಲೆಗಳು ಬರಲಿವೆ. ಇದರಲ್ಲಿ 9 ತೋಟಗಾರಿಕೆ ಮಹಾವಿದ್ಯಾಲಯ, 12 ಸಂಶೋಧನಾ ಕೇಂದ್ರ, 12 ವಿಸ್ತರಣಾ ಘಟಕಗಳು ಮತ್ತು 2863 ವಿದ್ಯಾರ್ಥಿಗಳನ್ನು ಹೊಂದಿರುವ ಅತಿ ದೊಡ್ಡ ವಿಶ್ವವಿದ್ಯಾಲಯ ಇದಾಗಿದೆ. ಆದರೂ ಸರ್ಕಾರ ಮಾತ್ರ ಇಂಥ ಪ್ರತಿಷ್ಠಿತ ವಿಶ್ವ ವಿದ್ಯಾಲಯಕ್ಕೆ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಮಾತ್ರ ತುಂಬಿಲ್ಲ. ಇದು ಯಾಕೆ ಅಂತ ತಿಳಿಯುತ್ತಿಲ್ಲ.

ಇದನ್ನೂ ಓದಿ: ಜಾರಕಿಹೊಳಿ ಕೋಟೆಯಲ್ಲಿ ಸಿಎಂ ಅಬ್ಬರದ ಪ್ರಚಾರ; ರಮೇಶ್ ಬದಲು ಬಾಲಚಂದ್ರ ಸಕ್ರಿಯ

ತೋಟಗಾರಿಕೆ ವಿವಿ ನಿರ್ಮಾಣ ಆಗಿ 10 ವರ್ಷ ಕಳೆದಿದೆ. ಸಿಬ್ಬಂದಿ ಸಮಸ್ಯೆ ವಿವಿಯಲ್ಲಿ ಹೆಚ್ಚಾಗಿ ಕಾಡುತ್ತಿದೆ. ಸಿಬ್ಬಂದಿ ಇಲ್ಲದೇ ವಿದ್ಯಾರ್ಥಿಗಳು ಏನು ಮಾಡಲು ಸಾಧ್ಯವಿಲ್ಲ. ಸಿಬ್ಬಂದಿ ಇದ್ದರೆ ನಾವೇನಾದ್ರು ಕಲಿಯೋಕೆ ಸಾಧ್ಯ. ಹೆಚ್ವಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇರುವುದರಿಂದ ಶಿಕ್ಷಕರ ಕೊರತೆ ಅಧಿಕವಾಗಿ ಕಾಡುತ್ತಿದೆ. ಈ ಬಗ್ಗೆ ಕುಲಪತಿಗಳಲ್ಲೂ ಮನವಿ ಮಾಡಿದ್ದೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾಗಿ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

ಇನ್ನು ರಾಜ್ಯ ಸರ್ಕಾರದಿಂದ ವಾರ್ಷಿಕವಾಗಿ ಬಿಡುಗಡೆಯಾಗುವ ಸಂಶೋಧನೆಗೆಂದು ಅನುದಾನಕ್ಕೆ ಈ ಬಾರಿ ಸರ್ಕಾರ ಕತ್ತರಿ ಹಾಕಿದೆ. ಕಳೆದ ವರ್ಷ 8ಕೋಟಿ ರೂ ಅನುದಾನ ಕೊಟ್ಟಿದ್ದರೆ ಈ ಬಾರಿ 4ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇತರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ತೋಟಗಾರಿಕೆ ವಿವಿಗೆ ಅನುದಾನ ಕಡಿಮೆ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಪತ್ರದ ಮೂಲಕ ಗಮನಕ್ಕೆ ತಂದು ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಈಚೆಗೆ ಬಾಗಲಕೋಟೆ ತೋಟಗಾರಿಕೆ ವಿವಿಗೆ ಆಗಮಿಸಿದ್ದ ತೋಟಗಾರಿಕೆ ಸಚಿವ ಆರ್ ಶಂಕರ್ ಅವರಿಗೂ ಮನವಿ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ, ರಾಜ್ಯದಲ್ಲಿರುವ ಐದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಪೈಕಿ ರಾಜ್ಯದಲ್ಲಿ ಅತಿ ಹೆಚ್ಚು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಹಾಗೂ ಅಧಿಕ ಮಹಾವಿದ್ಯಾಲಯಗಳನ್ನು ಒಳಗೊಂಡಿರುವ ಬಾಗಲಕೋಟೆ ತೋಟಗಾರಿಕೆ ವಿವಿಗೆ ಸಿಬ್ಬಂದಿ ಕೊರತೆ ಅಧಿಕವಾಗಿ ಕಾಡುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ, ಸಿಬ್ಬಂದಿ ಕೊರತೆ ನೀಗಿಸಬೇಕಿದೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: