ಬಾಗಲಕೋಟೆ: ಸತತ 9ನೇ ಬಾರಿ ಗೆದ್ದ ಅಭ್ಯರ್ಥಿ, 6ನೇ ಪ್ರಯತ್ನದಲ್ಲಿ ಮೊದಲ ಗೆಲುವು ಕಂಡ ಅಭ್ಯರ್ಥಿ

ಬಾಗಲಕೋಟೆ ಜಿಲ್ಲೆ ಗ್ರಾ.ಪಂ. ಚುನಾವಣೆ ಹಲವು ವಿಶೇಷತಗಳಿಗೆ ಸಾಕ್ಷಿಯಾಗಿದೆ. ಸತತ 9 ಬಾರಿ ಗೆದ್ದವರು, ಸತತ 5 ಸೋಲಿನ ಬಳಿಕ ಗೆಲುವು ಸಾಧಿಸಿದವರು, ಅಂಚೆ ಮತ ನೆರವಿನಿಂದ ಗೆದ್ದವರು, ಒಂದು ಮತ ಅಂತರದಿಂದ ಗೆದ್ದವರು, ಟಾಸ್​ನಲ್ಲಿ ಗೆದ್ದವರು ಹೀಗೆ ನಾನಾ ಥರದ ಬೆಳವಣಿಗೆಗಳಾಗಿವೆ.

ಸತತ ಒಂಬತ್ತನೇ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಆನಂದ್ ರಾವ್ ದೇಸಾಯಿ

ಸತತ ಒಂಬತ್ತನೇ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಆನಂದ್ ರಾವ್ ದೇಸಾಯಿ

  • Share this:
ಬಾಗಲಕೋಟೆ: ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಜಮಖಂಡಿ ಉಪ ವಿಭಾಗ ವ್ಯಾಪ್ತಿಯ 4 ತಾಲೂಕು ಹಾಗೂ ಎರಡನೇ ಹಂತದಲ್ಲಿ ಬಾಗಲಕೋಟೆ ಉಪವಿಭಾಗ ವ್ಯಾಪ್ತಿಯ 5 ತಾಲೂಕುಗಳ ಒಟ್ಟು 191 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಗಳ ಮತ ಎಣಿಕೆಯ ಫಲಿತಾಂಶದಲ್ಲಿ ಹಲವು ವಿಶೇಷತೆಗೆ ಸಾಕ್ಷಿಯಾಗಿದೆ. ಬಾದಾಮಿ ತಾಲೂಕಿನ ನೀಲಗುಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚಿಕ್ಕದೊಡ್ಡಪ್ಪ ಮಕ್ಕಳಾದ ತಮ್ಮ ಬಸಪ್ಪ ಧರ್ಮಣ್ಣವರ ವಿರುದ್ಧ ಅಣ್ಣ ಮಲ್ಲಪ್ಪ ಧರ್ಮಣ್ಣವರ 31ಮತಗಳಿಂದ ಜಯ ಗಳಿಸಿದ್ದಾರೆ‌. ಇಳಕಲ್ ತಾಲೂಕಿನ ಬಿಜೆಪಿ ಬೆಂಬಲಿತ ತಾಯಿ ಮಗ ಗೆಲುವು ಸಾಧಿಸಿದ್ದು, ಗೋನಾಳ ಗ್ರಾಮ ಹನುಮವ್ವ ಕುರಿ, ತೊಂಡಿಹಾಳ ಗ್ರಾಮದ ಮಗ  ದೊಡ್ಡಬಸಪ್ಪ  ಜಯಗಳಿಸಿ, ಗಮನಸೆಳೆದರು. ಇನ್ನೊಂದೆಡೆ ರಬಕವಿ -ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಪಂ ಚುನಾವಣೆಯಲ್ಲಿ ತಾಯಿ ಮಗಳು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ತಾಯಿ ಇಂದ್ರವ್ವ ಅವಿರೋಧ ಆಯ್ಕೆಯಾಗಿದ್ದರೆ ಮಗಳು ತುಳಸವ್ವ ಪಾಟೀಲ್ ಗೆಲುವಿನ ನಗೆ ಬೀರಿದ್ದಾರೆ. ನಾವಲಗಿ ಗ್ರಾಮ ಪಂಚಾಯಿತಿಯ ದಾನಪ್ಪ ಆಸಂಗಿ ಕಳೆದ 30ವರ್ಷಗಳಿಂದ ಸದಸ್ಯನಾಗಬೇಕೆಂದು ಕನಸು ಕಂಡು 6ನೇ ಬಾರಿಯ ಪ್ರಯತ್ನದಲ್ಲಿ ಗೆಲುವು ಕಂಡಿದ್ದಾರೆ.

ಒಂದು ಮತದ ಲಕ್ - ಪ್ರತಿ ಮತವೂ ಅಮೂಲ್ಯ ಎಂಬುದು ಸಾಬೀತು!!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಬೇಕು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಂದೇ ಒಂದು ಮತದಿಂದ ಗ್ರಾಮ ಪಂಚಾಯಿತಿ ಚುನಾವಣೆ ಸದಸ್ಯರಿಂದ ಆಯ್ಕೆಯಾಗುವ ಮೂಲಕ ಪ್ರತಿ ಮತದ ಮಹತ್ವ ಸೋತ ಅಭ್ಯರ್ಥಿಗಳಿಗೆ ಅರಿವಾಗಿದೆ. ಗದ್ದನಕೇರಿ ಗ್ರಾಮ ಪಂಚಾಯಿತಿ ವಾರ್ಡ್ ನಂಬರ್ 3ರಲ್ಲಿ ಗುಬ್ಬಲವ್ವ ಲಮಾಣಿ ವಿರುದ್ಧ ಶಾಂತವ್ವ ಮಾದರ ಒಂದೇ ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅರಕೇರಿ ಗ್ರಾಮ ಪಂಚಾಯಿತಿಯಲ್ಲಿ ಮಲ್ಲಪ್ಪ ಅಂಟಿನ ಹಾಗೂ ಬಸಲಿಂಗಪ್ಪ ಮಮದಾಪೂರ ಇಬ್ಬರಿಗೂ 358 ಸಮ ಮತ ಬಂದಾಗ ಅಂಚೆ ಮತದ ಮೂಲಕ ಮಲ್ಲಪ್ಪ ಅಂಟಿನ ಗೆಲುವು ಸಾಧಿಸಿದ್ದಾರೆ. ಗೋಲಬಾವಿ ಗ್ರಾಮ ಪಂಚಾಯಿತಿ ಕಲಾವತಿ ಮಾಂಗ ಒಂದು ಮತದ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಕೆಲವು ಅಭ್ಯರ್ಥಿಗಳಿಗೆ ಅಂಚೆ ಮತದ ಲಕ್ ಖುಲಾಯಿಸಿದೆ.

ಇದನ್ನೂ ಓದಿ: Grama Panchayath Election Results: ಗೆಲುವು ತಮ್ಮದೇ ಎನ್ನುತ್ತಿರುವ ಬಿಜೆಪಿ, ಕಾಂಗ್ರೆಸ್; ಚುನಾವಣಾ ಆಯೋಗ ಬೇಸರ

ದೇಶ್ಖತ್ತಿ ಮನೆತನದ ಹಿರಿಯ ಜೀವ ಸತತ 9ನೇ ಬಾರಿಗೆ ಸದಸ್ಯರಾಗಿ ಆಯ್ಕೆ..!!

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನೀರಬೂದಿಹಾಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸತತ 9ನೇ ಬಾರಿಗೆ ಆನಂದ್ ರಾವ್ ಕೆ ದೇಸಾಯಿ ಆಯ್ಕೆಯಾಗುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ. ಬಾದಾಮಿ ಮಾಜಿ ಶಾಸಕ ಆರ್ ಟಿ ದೇಸಾಯಿ ಅಣ್ಣನ ಮಗನಾಗಿರುವ ಆನಂದ್ ರಾವ್ ಕೆ ದೇಸಾಯಿ, 2003ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, 74 ಇಳಿ ವಯಸ್ಸಿನಲ್ಲೂ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.

ಇನ್ನು ಆಸಂಗಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪತಿ ಪತ್ನಿಗೆ ಸೋಲಾಗಿದೆ. ಸ್ನಾತಕೋತ್ತರ ಪದವಿ ಪಡೆದಿದ್ದ ಪತಿ ಪತ್ನಿಗೆ ಮತದಾರರು ಮಣೆ ಹಾಕಲ್ಲ. ಪತಿ ಮಹಾದೇವ, ಪತ್ನಿ ಸಾಗರಿಕಾ ಸೋಲನುಭವಿಸಿದ್ದಾರೆ.

ಇದನ್ನೂ ಓದಿ: ಜೈಲಿನಿಂದೇ ಸ್ಪರ್ಧಿಸಿ ಗೆಲುವು ಸಾಧಿಸಿದ ಬೋಪಣ್ಣ; ಅಕ್ಕನ ವಿರುದ್ಧ ಜಯಭೇರಿ ಬಾರಿಸಿದ ತಂಗಿ

ಜಿಲ್ಲೆಯ ಒಟ್ಟು 9 ತಾಲೂಕುಗಳ 191 ಗ್ರಾಮ ಪಂಚಾಯತಿಗಳ 1115 ಕ್ಷೇತ್ರಗಳ ಪೈಕಿ 757 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ. ಜಮಖಂಡಿ ತಾಲೂಕಿನ 169 ಕ್ಷೇತ್ರಗಳ ಪೈಕಿ 109 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿವೆ. ಮುಧೋಳ ತಾಲೂಕಿನಲ್ಲಿ 130 ಕ್ಷೇತ್ರಗಳ ಪೈಕಿ 94 ಕ್ಷೇತ್ರ, ಬೀಳಗಿ ತಾಲೂಕಿನ 128 ಕ್ಷೇತ್ರಗಳ ಪೈಕಿ 91 ಕ್ಷೇತ್ರ, ರಬಕವಿ-ಬನಹಟ್ಟಿ ತಾಲೂಕಿನ 98 ಕ್ಷೇತ್ರಗಳ ಪೈಕಿ 75 ಕ್ಷೇತ್ರ, ಬಾಗಲಕೋಟೆ ತಾಲೂಕಿನ 152 ಕ್ಷೇತ್ರಗಳ ಪೈಕಿ 119 ಕ್ಷೇತ್ರ, ಹುನಗುಂದ ತಾಲೂಕಿನ 89 ಕ್ಷೇತ್ರಗಳ ಪೈಕಿ 53 ಕ್ಷೇತ್ರ, ಬಾದಾಮಿ ತಾಲೂಕಿನ 186 ಕ್ಷೇತ್ರಗಳ ಪೈಕಿ 81 ಕ್ಷೇತ್ರ, ಇಲಕಲ್ಲ ತಾಲೂಕಿನ 109 ಕ್ಷೇತ್ರಗಳ ಪೈಕಿ 104 ಹಾಗೂ ಗುಳೇದಗುಡ್ಡ ತಾಲೂಕಿನ 59 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಇಂದು ಸಂಪೂರ್ಣ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ.

ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಹಲವು ವಿಶೇಷತೆಗೆ ಸಾಕ್ಷಿಯಾಗಿದೆ. ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರದ ಸ್ವಗ್ರಾಮದಲ್ಲಿ ಕೋಟೆಕಲ್ಲ ಗ್ರಾಮ ಪಂಚಾಯಿತಿ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಯಶಸ್ವಿಯಾಗಿದ್ದಾರೆ. 9 ತಾಲೂಕಿನ ಪೈಕಿ ಮುಧೋಳ, ಹುನಗುಂದ,ಬೀಳಗಿ ತಾಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದರೆ. ಬಾದಾಮಿ, ಗುಳೇದಗುಡ್ಡ, ರಬಕವಿ-ಬನಹಟ್ಟಿ, ಇಳಕಲ್ ತಾಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಜಮಖಂಡಿಯಲ್ಲಿ ಕಾಂಗ್ರೆಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಮಬಲ ಸಾಧಿಸಿರುವುದು ಕಂಡು ಬಂದಿದೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: