ಕರ್ನಾಟಕದಲ್ಲೇ ಮೊದಲ ಬಾರಿಗೆ ಕಪ್ಪು ಗೋಧಿ ಬೆಳೆದು ಸೈ ಎನಿಸಿಕೊಂಡ ಬಾಗಲಕೋಟೆ ರೈತ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಾವಯವ ಕೃಷಿಕ ಧರೆಪ್ಪ ಕಿತ್ತೂರ ಮಧ್ಯಪ್ರದೇಶದಲ್ಲಿ ಹೆಚ್ಚಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಕಪ್ಪು ಗೋಧಿಯನ್ನು ಕರ್ನಾಟಕ  ರಾಜ್ಯದಲ್ಲೂ  ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಕಪ್ಪು ಗೋಧಿಯ ಹೊಲದಲ್ಲಿ ರೈತ ಧರೆಪ್ಪ ಕಿತ್ತೂರ

ಕಪ್ಪು ಗೋಧಿಯ ಹೊಲದಲ್ಲಿ ರೈತ ಧರೆಪ್ಪ ಕಿತ್ತೂರ

  • Share this:
ಬಾಗಲಕೋಟೆ ( ಮಾರ್ಚ್ 25): ಬಯಲು ಸೀಮೆ ಬಾಗಲಕೋಟೆ ಜಿಲ್ಲೆಯಲ್ಲಿ ಮಧ್ಯಪ್ರದೇಶ ಮೂಲದ ಕಪ್ಪು ಸುಂದರಿ ಎಂದು ಹೆಸರುವಾಸಿಯಾದ  ಕಪ್ಪು ಗೋಧಿಯನ್ನು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದ ಸಾವಯವ ಕೃಷಿಕ ಧರೆಪ್ಪ ಕಿತ್ತೂರ ಬೆಳೆಯುವ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ಕಪ್ಪು ಗೋಧಿ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿಯ ಸಾವಯವ ಕೃಷಿಕ ಧರೆಪ್ಪ ಕಿತ್ತೂರ ಪ್ರಯೋಗಶೀಲ, ಕೃಷಿಯಲ್ಲಿ ಹೊಸದೇನಾದರೂ ಮಾಡಿ ಸೈ ಎನಿಸಿಕೊಳ್ಳುವ ಉತ್ಸಾಹಿತ ರೈತ. ಮಧ್ಯಪ್ರದೇಶದಲ್ಲಿ ಹೆಚ್ಚಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಕಪ್ಪು ಗೋಧಿಯನ್ನು ತಮ್ಮ ಜಮೀನಿನಲ್ಲಿ ಬೆಳೆದು ಕರ್ನಾಟಕ  ರಾಜ್ಯದಲ್ಲೂ  ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಈಗ ಮತ್ತೊಂದು ವಿನೂತನ ಪ್ರಯತ್ನ ಮಾಡಿದ್ದು ಬಯಲು ಸೀಮೆಯಲ್ಲಿ ಔಷಧಿ ಗುಣವುಳ್ಳ ಕಪ್ಪು ಗೋಧಿಯನ್ನು ಬೆಳೆಯುವುದರ ಮೂಲಕ ಉತ್ತರ ಕರ್ನಾಟಕದ ರೈತರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಅವರು ತಮ್ಮ ಕಾಲತಿಪ್ಪಿ ರಸ್ತೆಯಲ್ಲಿರುವ ಅರ್ಧ ಎಕರೆ ಜಮೀನಿನಲ್ಲಿ ಒಂದೂವರೆ ಅಡಿಗೆ ಸಾಲಿನಂತೆ ಕಪ್ಪು ಗೋಧಿಯನ್ನು ಡಿಸೆಂಬರ್ 06,2020ರಂದು  ನಾಟಿ ಮಾಡಿದ್ದಾರೆ. ಅದಕ್ಕೂ ಮೊದಲು ತಿಪ್ಪೆಗೊಬ್ಬರ, ಎರೆಹುಳು, ಬೇವಿನಹಿಂಡಿ, ಬೀಜೋಪಚಾರ ಮಾಡಿ, ಸಾವಯವ ಕೃಷಿಯಲ್ಲಿ ಬೆಳೆ ಬೆಳೆದಿದ್ದಾರೆ. ಒಟ್ಟು 105ರಿಂದ 110 ದಿನಗಳ ಬೆಳೆಯಾಗಿರುವ ಕಪ್ಪು ಗೋಧಿಯನ್ನು ಬೆಳೆದಿದ್ದಾರೆ. ಒಂದು ತೆನೆ 30ರಿಂದ 40 ಕಾಳುಗಳನ್ನು ಬಿಟ್ಟಿದ್ದು, ಅರ್ಧ ಎಕರೆಯಲ್ಲಿ 5 ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಹೊಂದಿದ್ದಾರೆ.

ಇದನ್ನೂ ಓದಿ: Satish Jarkiholi: ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಸ್ಪರ್ಧೆ; ರಾಜಕೀಯ ಲೆಕ್ಕಾಚಾರಗಳೇನು?

ಮಧ್ಯಪ್ರದೇಶದಿಂದ ರೂ. 80ಕ್ಕೆ ಬೀಜವನ್ನು ಖರೀದಿಸಿದ್ದು, ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿಗೆ ರೂ. 100ರಿಂದ 120ರವರೆಗೆ ಮಾರಾಟವಾಗುತ್ತದೆ. ಇದರಿಂದ ಅರ್ಧ ಎಕರೆಯಲ್ಲಿ 100 ದಿನಕ್ಕೆ ಸುಮಾರು 50 ಸಾವಿರ ರೂ. ಲಾಭ ಗಳಿಸಬಹುದು. ರಾಜ್ಯದಲ್ಲಿ ಮೊದಲ ಬಾರಿಗೆ ಕಪ್ಪು ಗೋಧಿ ಬೆಳೆದಿದ್ದೇನೆ. ಈಗ ಕಟಾವಿಗೆ ಬಂದಿದೆ. ಈ ಭಾಗದ ರೈತರು ಕಪ್ಪು ಗೋಧಿ ಬೆಳೆಯಲು ಮುಂದೆ ಬರುತ್ತಿದ್ದು, ಅವರಿಗೆ ಬೀಜಕ್ಕೆಂದು ಕೊಟ್ಟು, ಮತ್ತೆ ಹೆಚ್ಚಿನ ಕ್ಷೇತ್ರದಲ್ಲಿ ಕಪ್ಪು ಗೋಧಿ ಬೆಳೆಯಲಿದ್ದೇನೆ. ಇದು ರೋಗ ನಿರೋಧಕ ಶಕ್ತಿ, ಜೊತೆಗೆ ಔಷಧಿ ಗುಣವುಳ್ಳದ್ದಾಗಿದೆ ಎನ್ನುತ್ತಾರೆ ರೈತ ಧರೆಪ್ಪ ಕಿತ್ತೂರು.

ಈ ಕಪ್ಪು ಗೋಧಿಯನ್ನು ಸದ್ಯಕ್ಕೆ ಪ್ರಾಯೋಗಿಕವಾಗಿ ಬೆಳೆಯುತ್ತಿದ್ದೇವೆ. ಕಪ್ಪು ಗೋಧಿ ಪುರಾತನವಾದ ಬೆಳೆಯಾಗಿದ್ದು ಸದ್ಯ ಮಧ್ಯ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಿದ್ದು,  ಇದರಲ್ಲಿ ಔಷಧೀಯ ಗುಣ ಮತ್ತು ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆ್ಯಂಟಿ ಆಕ್ಸಿಡೆಂಟ್, ವಿಟಿಮಿನ್ ಬಿ, ಪಾಲಿಕ್ ಆ್ಯಸಿಡ್, ಐರನ್, ಕಾಪರ್ ಪೊಟ್ಯಾಷಿಯಂ, ಪೈಬರ್, ಜಿಂಕ್, ಮ್ಯಾಗ್ನೇಷಿಯಂ ಸೇರಿದಂತೆ ಹಲವು ಲವಣಾಂಶಗಳನ್ನ ಹೊಂದಿದೆ. ಹೀಗಾಗಿ ಬಹುತೇಕ ಪೋಷಕಾಂಶಗಳನ್ನು ಹೊಂದಿದ ಈ ಬೆಳೆಗೆ ಬಲು ಬೇಡಿಕೆ ಇದೆ. ಡಯಾಬಿಟಿಸ್ ರೋಗಿಗಳಿಗೆ, ಕ್ಯಾನ್ಸರ್, ರಕ್ತದ ಒತ್ತಡ ಹತೋಟಿಗೆ, ಬಿಪಿ ಇರುವಂತಹ ರೋಗಿಗಳಿಗೆ ಇದು ರಾಮಬಾಣವಾಗಿದೆ. ಕೋವಿಡ್ ರೋಗ ಜನರನ್ನು ಕಂಗೆಡಿಸಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುತ್ತಿದ್ದು ರೋಗ ನಿರೋಧಕ ಶಕ್ತಿ ಹೊಂದಿರುವ ಕಪ್ಪು ಗೋಧಿಗೆ ಬಾರಿ ಬೇಡಿಕೆ ಬರಬಹುದು. ಅದರ ಬೇಡಿಕೆಯನ್ನು ನೋಡಿಕೊಂಡು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಲು ನಿರ್ಧರಿಸಿದ್ದಾರೆ.

Bagalkot Farmer Growing Black Wheat in Dry Land Agriculture Tips.
ರೈತ ಧರೆಪ್ಪ ಕಿತ್ತೂರ


ಇದು ತುಂಬಾ ಉತ್ತಮವಾದ ಗೋಧಿಯಾಗಿದ್ದು, ಬೆಳೆಯನ್ನು ನಾನು ಬೆಳೆಯುವುದರ ಜೊತೆಗೆ ಇತರೆ ರೈತರಿಗೂ ಇದನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಕಡಿಮೆ ಖರ್ಚಿನಲ್ಲಿ ಸಾವಯವ ಪದ್ದತಿಯಿಂದ ಗೋಧಿಯನ್ನು ಬೆಳೆಯಲಾಗಿದೆ. ಯಾವುದೇ ರೋಗ, ಕೀಟ ಬಾಧೆ ಬಂದಿಲ್ಲ ಎನ್ನುತ್ತಾರೆ ಧರೆಪ್ಪ ಕಿತ್ತೂರು. ಅವರು ಓದಿದ್ದು 8ನೇ ತರಗತಿ. ಆದರೆ ಅವರ ಕೃಷಿಯಲ್ಲಿನ ಪಾಂಡಿತ್ಯ ಹಾಗೂ ಸಾಧಿಸಿದ ಸಾಧನೆ ಅಪಾರ. ತಮ್ಮ ಸ್ವಂತ ಅನುಭವಗಳೊಂದಿಗೆ ಕೃಷಿಯಲ್ಲಿ ಹಲವಾರು ವಿನೂತನ ಪ್ರಯೋಗಗಳನ್ನು ಮಾಡುತ್ತಾ ಸಾವಯವ ಕೃಷಿಯಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಲಾಭವನ್ನು ಗಳಿಸುತ್ತಿದ್ದಾರೆ.

5 ರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಧರೆಪ್ಪ ಕಿತ್ತೂರು ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ವಿನೂತನ ಪ್ರಯೋಗದ ಮೂಲಕ ಇತರರ ರೈತರಿಗೂ ಮಾರ್ಗದರ್ಶಕರಾಗಿದ್ದಾರೆ. ಕಪ್ಪು ಗೋಧಿ ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ..
Published by:Sushma Chakre
First published: