ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆ: ಮತ ಎಣಿಕೆಗೆ ಹೈಕೋರ್ಟ್ ಸಮ್ಮತಿ; ಬಿಜೆಪಿಗೆ ಅಡ್ಡಮತದಾನದ ಚಿಂತೆ

ಬಾಗಲಕೋಟೆ ಡಿಸಿಸಿ ಬ್ಯಾಂಕ್​ನ ಅಧಿಕಾರವನ್ನ ಕಾಂಗ್ರೆಸ್ನಿಂದ ಕಿತ್ತುಕೊಳ್ಳುವ ಬಿಜೆಪಿ ಪ್ರಯತ್ನ ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎಂಬುದು ನಾಳೆ ಗೊತ್ತಾಗಲಿದೆ. ಮತ ಎಣಿಕೆಗೆ ಹೈಕೋರ್ಟ್ ಇದೀಗ ಅನುಮತಿ ನೀಡಿದ್ದು ನಾಳೆ ಎಣಿಕೆ ನಡೆಯಲಿದೆ.

ಬಾಗಲಕೋಟೆ ಡಿಸಿಸಿ ಬ್ಯಾಂಕ್

ಬಾಗಲಕೋಟೆ ಡಿಸಿಸಿ ಬ್ಯಾಂಕ್

  • Share this:
ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಮತ ಎಣಿಕೆಗೆ ಧಾರವಾಡ ಹೈಕೋರ್ಟ್ ಆದೇಶಿಸಿದೆ.  ಹಾಗೆಯೇ, ರಾಜ್ಯ ಸರ್ಕಾರ ಮಾಡಿದ ನಾಮನಿರ್ದೇಶನ ಸದಸ್ಯತ್ವದ ಸಿಂಧುತ್ವ ವಿಚಾರದಲ್ಲಿ ತೀರ್ಪು ಕಾಯ್ದಿರಿಸಿದೆ. ನಾಳೆ, ನವೆಂಬರ್ 27 ಶುಕ್ರವಾರ ಬೆಳಗ್ಗೆ 11ಗಂಟೆಗೆ ಬಿಡಿಸಿಸಿ ಬ್ಯಾಂಕ್​ನಲ್ಲಿ ಮತ ಎಣಿಕೆ ನಡೆಯಲಿದೆ. ಬಿಜೆಪಿ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷ ಅಭ್ಯರ್ಥಿಗಳಿಗೆ ಟೆನ್ಷನ್ ಶುರುವಾಗಿದ್ದು. ಅಡ್ಡ ಮತದಾನವಾಗಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿರುವುದು ಬಿಜೆಪಿ ಬೆಂಬಲಿತರ ಆತಂಕಕ್ಕೆ ಕಾರಣವಾಗಿದೆ.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನವೆಂಬರ್ 17ರಂದು ಮತದಾನ ನಡೆದಿತ್ತು. ಆದರೆ ರಾಜ್ಯ ಸರ್ಕಾರದ ಷೇರು ಬಿಡಿಸಿಸಿ ಬ್ಯಾಂಕ್​ನಲ್ಲಿ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ನಾಮನಿರ್ದೇಶನ ಸದಸ್ಯರನ್ನು ನೇಮಿಸಲು ಬರುವುದಿಲ್ಲವೆಂದು ಕಾಂಗ್ರೆಸ್​ನ ಅಜಯ್ ಕುಮಾರ್ ಸರನಾಯಕ ಅವರು ಧಾರವಾಡ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಧಾರವಾಡ ಹೈಕೋರ್ಟ್ ಮತದಾನಕ್ಕೆ ಅವಕಾಶ ಕಲ್ಪಿಸಿ, ನಾಮ ನಿರ್ದೇಶನ ಸದಸ್ಯ ಸಿದ್ದನಗೌಡ ಪಾಟೀಲ್ ಮತ ಪ್ರತ್ಯೇಕ ಬಾಕ್ಸ್ ನಲ್ಲಿರಿಸಲು ಸೂಚಿಸಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಅವಕಾಶ ಕಲ್ಪಿಸಿತ್ತು. ಧಾರವಾಡ ಹೈಕೋರ್ಟ್ ಪೀಠ ನವೆಂಬರ್ 25ರಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡು, ಡಬ್ಲ್ಯುಪಿ ಸಂಖ್ಯೆ-148491/2020 ರಂತೆ ನಾಮನಿರ್ದೇಶನ ಸದಸ್ಯ ಮತ ಹೊರತುಪಡಿಸಿ ಉಳಿದ ನಿರ್ದೇಶಕರ ಮತ ಎಣಿಕೆ ಕೈಗೊಂಡು ಚುನಾವಣಾ ಫಲಿತಾಂಶ ಘೋಷಿಸಲು ಆದೇಶಿಸಿದೆ. ಚುನಾವಣಾಧಿಕಾರಿ ಎಂ ಗಂಗಪ್ಪ ನವೆಂಬರ್ 27ರಂದು 11ಗಂಟೆಗೆ ಮತ ಎಣಿಕೆಗೆ ದಿನಾಂಕ ನಿಗದಿಗೊಳಿಸಿ, ನಿರ್ದೇಶಕರಿಗೆ ಸಭೆ ಸೂಚನಾ ಪತ್ರ ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅರ್ಜಿ ವಿಚಾರಣೆ ವೇಳೆ ನಾಮನಿರ್ದೇಶನ ಸದಸ್ಯ ಸಿದ್ದನಗೌಡ ಪಾಟೀಲ್ ನೇಮಕ ಸಿಂಧು ಅಥವಾ ಅಸಿಂಧು ಎನ್ನುವ ಬಗ್ಗೆ ಹೈಕೋರ್ಟ್ ಆದೇಶಿಸಲಿದೆ.

ಇದನ್ನೂ ಓದಿ: ಮುಂಬರುವ ಗ್ರಹಣಗಳಿಂದ‌ ಲೋಕಕ್ಕೆ ಕಂಟಕ, ಭಾರೀ ಭೂಕಂಪ, ವಿಪರೀತ ಮಳೆ; ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಬಿಜೆಪಿಗೆ ಅಡ್ಡಮತದಾನದ ಟೆನ್ಷನ್ - ಕಾಂಗ್ರೆಸ್ ಲೆಕ್ಕಾಚಾರ ಪಕ್ಕನಾ!?

ಕಾಂಗ್ರೆಸ್ ತೆಕ್ಕೆಯಲ್ಲಿರುವ ಬಿಡಿಸಿಸಿ ಬ್ಯಾಂಕ್ ಅಧಿಕಾರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿ ಶಾಸಕರು ಮುಖಂಡರು ಶತಾಯಗತಾಯವಾಗಿ ಪ್ರಯತ್ನಿಸಿ, ತಂತ್ರ ರೂಪಿಸಿದ್ದರು. ಬಿಜೆಪಿಗರ ತಂತ್ರಕ್ಕೆ ಕಾಂಗ್ರೆಸ್ಸಿಗರು ಪ್ರತಿ ತಂತ್ರ ಹೆಣೆದು, ಬಿಜೆಪಿ ಬುಟ್ಟಿಯಲ್ಲಿನ ಮತ ಛಿದ್ರಗೊಳಿಸಿ, ಅಡ್ಡಮತದಾನದಿಂದ ಬಿಜೆಪಿ ಲೆಕ್ಕಾಚಾರಕ್ಕೆ ಅಡ್ಡಗಾಲು ಆಗುವ ಕಾಂಗ್ರೆಸ್ ಲೆಕ್ಕಾಚಾರ ಪಕ್ಕಾ ಎನ್ನುವುದು ಗೋಚರವಾಗುತ್ತಿದೆ. ಇದಕ್ಕೆಲ್ಲಾ ಉತ್ತರ ಸಿಗುವುದು ಕೊನೆಗೆ ಫಲಿತಾಂಶವೇ ಅಂತಿಮ ತೀರ್ಪು.

ಅಡ್ಡಮತದಾನವಾಗಿದ್ದು ಹೇಗೆ!?

ಬಿಡಿಸಿಸಿ ಬ್ಯಾಂಕ್ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ ಒಟ್ಟು 13 ಸ್ಥಾನ, ಓರ್ವ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ, ಸಹಕಾರಿ ಸಂಘಗಳ ಉಪನಿಬಂಧಕರು, ರಾಜ್ಯ ಸರ್ಕಾರದ ನಾಮನಿರ್ದೇಶನ ಮತ ಸೇರಿ ಒಟ್ಟು 16ಮತಗಳ ಪೈಕಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ 15 ಮತಗಳು ಚಲಾವಣೆ ಆಗಿದ್ದವು. ಕಾಂಗ್ರೆಸ್​ನಿಂದ ಬಂಡಾಯವಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ವಿಜಯಾನಂದ ಕಾಶಪ್ಪನವರ್ ಮತದಾನ ವೇಳೆ ಗೈರಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಜಯ್ ಕುಮಾರ್ ಸರನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಮುರುಗೇಶ್ ಕಡ್ಲಿಮಟ್ಟಿ ಕಣದಲ್ಲಿದ್ದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಕುಮಾರ್ ಗೌಡ ಜನಾಲಿ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ತಪಶೆಟ್ಟಿ ಅಖಾಡದಲ್ಲಿದ್ದರು.

ಇದನ್ನೂ ಓದಿ: ರಾಜಕೀಯ ದ್ವೇಷ ಬಡವರ ಮೇಲೆ ತೀರಿಸಿಕೊಳ್ಳಲಾಗುತ್ತಿದೆ; ರಾಯಚೂರಿನ ಜನ ಸಾಮಾನ್ಯನ ಅಳಲು

ಬಿಜೆಪಿ ಬೆಂಬಲಿತರು, ಓರ್ವ ಪಕ್ಷೇತರ ಸೇರಿ 6, ಕಾಂಗ್ರೆಸ್ ಬೆಂಬಲಿತರು ಓರ್ವ ಪಕ್ಷೇತರ,ಗೈರು ಹೊರತುಪಡಿಸಿ 6 ಮತ ಚಲಾವಣೆಯಾಗಿದ್ದರೆ. ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ, ಹಾಗೂ ಸಹಕಾರಿ ಸಂಘಗಳ ಉಪನಿಬಂಧಕರು ಮತ, ಹಾಗೂ ಅಡ್ಡಮತದಾನದ  ಮೇಲೆ ಫಲಿತಾಂಶ ಯಾರ ಪಾಲಾಗಲಿದೆ ಎನ್ನುವುದರ ಮೇಲೆ ನಿಂತಿದೆ. ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ, ಸಹಕಾರಿ ಸಂಘಗಳ ಉಪನಿಬಂಧಕರು ಆಡಳಿತಾರೂಢ ಸರ್ಕಾರದ ಪರ ಮತ ಚಲಾಯಿಸುವುದು ವಾಡಿಕೆ. ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ನಿರ್ದೇಶಕರು ಅಡ್ಡಮತದಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅಡ್ಡಮತದಾನವಾಗಿದ್ದರೆ ಆಗ ಕಾಂಗ್ರೆಸ್ ಬೆಂಬಲಿತರಿಗೆ 8 ಮತ, ಬಿಜೆಪಿ ಬೆಂಬಲಿತರಿಗೆ 6 ಮತಗಳು ದೊರಕಲಿವೆ. ಇಲ್ಲಿ ಪ್ರಮುಖವಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರ ಮಾತ್ರ ಅಡ್ಡಮತದಾನವಾಗಿವೆ ಎನ್ನಲಾಗುತ್ತಿದ್ದು, ಇದಕ್ಕೆ ಕಾರಣ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷಗಿರಿ ರೆಡ್ಡಿ ಜಾತಿ ಹಿಡಿತದಲ್ಲಿರಬೇಕು ಎನ್ನುವ ಲೆಕ್ಕಾಚಾರ. ಹೀಗಾಗಿ ಅಡ್ಡಮತದಾನವಾಗಿವೆ ಎನ್ನುವ ಗುಲ್ಲೆದ್ದಿದೆ. ಈ ಹಿಂದೆಯೂ ಅತೀ ಹೆಚ್ಚು ರೆಡ್ಡಿ ಪ್ರಾಬಲ್ಯದಲ್ಲಿ ಬಿಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿದಿದೆ.

ಒಟ್ಟಿನಲ್ಲಿ ಏನೇ ಆಗಲಿ, ಶುಕ್ರವಾರ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಫಲಿತಾಂಶ ಹೊರಬರುತ್ತಿದೆ. ಒಂದು ವೇಳೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಸಮಬಲ ಮತಗಳು ಬಂದು ಹೈಕೋರ್ಟ್ ಅಂಗಳದಲ್ಲಿರುವ ರಾಜ್ಯ ಸರ್ಕಾರದ ನಾಮನಿರ್ದೇಶನ ಸದಸ್ಯನ ಮೇಲಿನ ತೀರ್ಪು ಮಹತ್ವ ಪಡೆದುಕೊಳ್ಳುತ್ತಾ ಎಂದು ಕಾದುನೋಡಬೇಕಿದೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: