ಬಾಗಲಕೋಟೆಯಲ್ಲಿ ಹೋಳಿ ಹಬ್ಬದಂದೇ ಭೀಕರ ಅಪಘಾತ; ಬರ್ತ್ ಡೇ ಆಚರಣೆಗೆ ಹೋಗಿದ್ದ ಸ್ನೇಹಿತರು ಮಸಣಕ್ಕೆ

ಹೋಳಿ ಬಣ್ಣದಲ್ಲಿ ಮಿಂದೇಳಬೇಕಿದ್ದ ಹದಿಹರಿಯದ ಸ್ನೇಹಿತರು  ಕಾರು ಅಪಘಾತದಲ್ಲಿ ರಕ್ತದ ಮಡುವಿನಲ್ಲಿ ಇಹಲೋಕ ತ್ಯಜಿಸಿದ್ದು ಇಳಕಲ್ ಮಂದಿ, ಸ್ನೇಹಿತರಿಗೆ ಬರಸಿಡಿಲು ಬಡಿದಂತಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬಾಗಲಕೋಟೆ (ಮಾ. 29): ಹೋಳಿ ಹಬ್ಬದಂದು ಹುಟ್ಟು ಹಬ್ಬದ ಆಚರಣೆಗೆಂದು ಕಾರಿನಲ್ಲಿ ತೆರಳಿದ್ದ ಸ್ನೇಹಿತರ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು  ಮಸಣ ಸೇರಿದ ಹೃದಯ ವಿದ್ರಾವಕ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಸ್ನೇಹಿತರೊಂದಿಗೆ ನವೀನ್ ಸಾಕಾ ಎಂಬಾತ ತನ್ನ ಸಹೋದರಿಯ ಮಗನ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಲೆಂದು ಗುಳೇದಗುಡ್ಡ ಪಟ್ಟಣಕ್ಕೆ ನಿನ್ನೆ ರಾತ್ರಿ 8.30 ಗಂಟೆಗೆ ಹೋಗಿದ್ದಾರೆ. ಸಹೋದರಿಯ ಪುತ್ರನ ಪ್ರಥಮ ವರ್ಷದ ಬರ್ತ್ ಡೇಯಲ್ಲಿ ಸಂಭ್ರಮದಿಂದ ಭಾಗಿಯಾಗಿ, ಶುಭ ಕೋರಿದ್ದಾರೆ. ವಾಪಾಸ್ ಕಾರಿನಲ್ಲಿ ಇಳಕಲ್​ಗೆ ಹೋಗುವ ವೇಳೆ ಹುನಗುಂದ ಬಳಿಯ ಬೇವಿನಮಟ್ಟಿ ಕ್ರಾಸ್ ನಲ್ಲಿ ಜವರಾಯನ ಅಟ್ಟಹಾಸಕ್ಕೆ ನಾಲ್ವರು ಬಲಿಯಾಗಿದ್ದಾರೆ.

ಕಾರು ಚಾಲಕ ಸೇರಿ ಐದು ಜನ ಬರ್ತ್ ಡೇ ಗೆ ಹೋಗಿದ್ದರು. ವಾಪಸ್ ತೆರಳುವ ವೇಳೆ ಕೆಎ 29 ಎ-7666 ಸಂಖ್ಯೆಯ ಲಾರಿ ಚಾಲಕ ವೇಗವಾಗಿ ನಿರ್ಲಕ್ಷ್ಯದಿಂದ ಚಲಾಯಿಸಿ, ಓವರ್ ಟೇಕ್ ಮಾಡಲು ಹೋಗಿ ಮುಂಬರುವ ವಾಹನ ತಪ್ಪಿಸಲು  ಒಮ್ಮಿಂದೊಮ್ಮೆಲೆ ನಿಲ್ಲಿಸಿದ ಪರಿಣಾಮ ಹಿಂದೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಕಾರಿನ ಮುಂಭಾಗ ಜಖಂ ಆಗಿದೆ. ಕಾರಿನಲ್ಲಿದ್ದ  ಇಳಕಲ್ ನಗರದ ನವೀನ್ ಸಾಕಾ (22), ಚಂದ್ರಶೇಖರ್ ಬುಟ್ಟಾ (22), ಚನ್ನಬಸವ ಅಂಜಿ (22) ಬಸವರಾಜ ಭಂಡಾರಿ (33) ಸ್ಥಳದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಇನ್ನು ಕಾರು ಚಾಲಕ ವಿಜಯ್ ಕುಮಾರ್ ಬಂಡಿ ಸ್ಥಿತಿ ಗಂಭೀರವಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಸ್ನೇಹಿತರು


ಇದನ್ನೂ ಓದಿ: Siddaramaiah: ಸಿಡಿ ಯುವತಿಯ ಪ್ರಾಣಕ್ಕೆ ಅಪಾಯವಾದರೆ ಸಿಎಂ ಯಡಿಯೂರಪ್ಪ, ಬಿಜೆಪಿ ಸರ್ಕಾರವೇ ಹೊಣೆ; ಸಿದ್ದರಾಮಯ್ಯ ಎಚ್ಚರಿಕೆ

ಹೋಳಿ ಬಣ್ಣದಲ್ಲಿ ಮಿಂದೇಳಬೇಕಿದ್ದ ಹದಿಹರಿಯದ ಸ್ನೇಹಿತರು  ಕಾರು ಅಪಘಾತದಲ್ಲಿ ರಕ್ತದ ಮಡುವಿನಲ್ಲಿ ಇಹಲೋಕ ತ್ಯಜಿಸಿದ್ದು ಇಳಕಲ್ ಮಂದಿ, ಸ್ನೇಹಿತರಿಗೆ ಬರಸಿಡಿಲು ಬಡಿದಂತಾಗಿದೆ. ಬರ್ತ್ ಡೇ ಆಚರಣೆಗೆಂದು ಹೋಗಿದ್ದವರು ಮಸಣದ ಮನೆ ಸೇರಿದ್ದು ಕುಟುಂಬಸ್ಥರಿಗೆ ದು:ಖ ಇಮ್ಮಡಿಯಾಗಿದೆ. ನಾಲ್ವರು ಆತ್ಮೀಯ ಸ್ನೇಹಿತರಾಗಿದ್ದರು, ಇನ್ನು ಕೆಲ ಸ್ನೇಹಿತರು ತಮ್ಮ ಸ್ನೇಹಿತರ ಅಗಲಿಕೆ ಸುದ್ದಿ ತಿಳಿದು ದು:ಖತಪ್ತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರ ಅಗಲಿಕೆ ನೋವು ಹಂಚಿಕೊಂಡಿದ್ದಾರೆ. ತನ್ನ ಸಹೋದರಿಯ ಪುತ್ರನ ಪ್ರಥಮ ವರ್ಷದ ಹುಟ್ಟು ಹಬ್ಬದ ಇದೆ ಎಂದು ತನ್ನ ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದಾನೆ. ಗುಳೇದಗುಡ್ಡದಲ್ಲಿ ಸಹೋದರಿ, ಬಂಧು ಬಳಗದವರು ನಿಧಾನವಾಗಿ ಹೋಗಿ ಎಂದು ಕಳುಹಿಸಿಕೊಟ್ಟಿದ್ದರು.

ಬಸವರಾಜ ಭಂಡಾರಿ ಎಂಬುವವನಿಗೆ ಈಚೆಗಷ್ಟೇ ಕನ್ಯೆ ನಿಶ್ಚಯ ಮಾಡಿದ್ದರು. ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಇನ್ನು ಹದಿಹರಿಯದ ಮಕ್ಕಳು ಕುಟುಂಬಕ್ಕೆ ಆಸರೆಯಾಗುತ್ತಾರೆ ಎಂದು ಕನಸು ಕಂಡಿದ್ದ ಪೋಷಕರಿಗೆ ರಸ್ತೆ ಅಪಘಾತದಲ್ಲಿ ಸಾವಿನ ಸುದ್ದಿ  ತಿಳಿದು ದಿಕ್ಕು ತೋಚದಂತಾಗಿದೆ. ರಸ್ತೆ ಅಪಘಾತದಿಂದ ಲಾರಿ ಚಾಲಕ ಪರಾರಿಯಾಗಿದ್ದು, ಚಾಲಕ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮೃತ ನವೀನ್ ಸಾಕಾ ತಂದೆ ನಾಗೇಶ್ ದೂರಿನ ಮೇರಿಗೆ ಕಲಂ 279, 337, 318, 304(ಎ), ಐಪಿಸಿ 187ಅಡಿ  ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಘಟನಾ ಸ್ಥಳಕ್ಕೆ ತಡರಾತ್ರಿ ಹುನಗುಂದ ಪಿಎಸ್ಐ ಶರಣಬಸಪ್ಪ ಸಂಗಳದ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತರ ಶವವನ್ನು ಅಂಬ್ಯುಲೆನ್ಸ್ ಮೂಲಕ ಹುನಗುಂದ ತಾಲೂಕಾಸ್ಪತ್ರೆಗೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.
Published by:Sushma Chakre
First published: