Siddu Savadi - ‘ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ’: ಸಂಪುಟ ವಿಸ್ತರಣೆ ಬಗ್ಗೆ ಸಿದ್ದು ಸವದಿ ಬೇಸರ

ನಿಷ್ಠಾವಂತರು, ಸೈದ್ಧಾಂತಿಕ ಬದ್ಧತೆ ಇರುವವರನ್ನ ಬಿಟ್ಟು ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ ಬೆಳೆದಿದೆ ಎಂದು ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ತಮ್ಮ ಫೇಸ್​ಬುಕ್​ನಲ್ಲಿ ಬರೆದಿದ್ದಾರೆ. ಇದು ಮುರುಗೇಶ್ ನಿರಾಣಿಯನ್ನು ಗುರಿಯಾಗಿಸಿ ನಡೆದ ಪರೋಕ್ಷ ದಾಳಿ ಎನ್ನಲಾಗುತ್ತಿದೆ.

ಸಿದ್ದು ಸವದಿ

ಸಿದ್ದು ಸವದಿ

  • Share this:
ಬಾಗಲಕೋಟೆ(ಜ. 14): ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಸಿಎಂ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿದೆದ್ದ ಬೆನ್ನಲ್ಲೇ ಬಾಗಲಕೋಟೆ ಬಿಜೆಪಿ ಹಿರಿಯ ಶಾಸಕ ಸಿದ್ದು ಸವದಿ ಅವರು ಸಿಎಂ ಆಪ್ತ ಶಾಸಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಪರೋಕ್ಷವಾಗಿ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿರುವುದು ನೋಡಿ ನೋವಾಗಿದೆ ಎಂದು ಹ್ಯಾಸ್ ಟ್ಯಾಗ್ ಹಾಕಿ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಫೇಸ್​ಬುಕ್ ಪೋಸ್ಟ್ ಹಾಕಿದ್ದಾರೆ.

ಸಿದ್ದು ಸವದಿ ಈಗಾಗಲೇ ನೇಕಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ. ಆದರೂ ಸಹಿತ ಬಹಿರಂಗವಾಗಿ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎನ್ನುತ್ತಿದ್ದರೂ ಯಾಕೆ ನೋವು ಹೊರಹಾಕಿದ್ದಾರೆ ಎನ್ನುವ ಚರ್ಚೆ ಬಾಗಲಕೋಟೆ ಜಿಲ್ಲಾ ರಾಜಕಾರಣದಲ್ಲಿ ನಡೆಯುತ್ತಿದೆ.

“ಹಿರಿತನ, ಪಕ್ಷನಿಷ್ಠೆ, ಸಿದ್ಧಾಂತಕ್ಕೆ ಬದ್ಧರಾಗಿರುವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಗಾಡ್ ಫಾದರ್ ಬೆಂಬಲವಿಲ್ಲದೆ ಪಕ್ಷವನ್ನು ಎಲ್ಲಾ ಹಂತದಲ್ಲಿ ಅಧಿಕಾರಕ್ಕೆ ತರುವಂಥವರು, ಪಕ್ಷದ ಆದೇಶ ಮನಸಾ  ಪೂರ್ವಕ ಪಾಲನೆ ಮಾಡುವ, ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಿರುವವರಿಗೆ ಯಾವುದೇ ಸ್ಥಾನಮಾನ ಕೊಡದೆ ಹೌದಪ್ಪಗಳಿಗೆ ಈ ದಿನಗಳಲ್ಲಿ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿರುವುದನ್ನು ನೋಡಿ ನೋವಾಗುತ್ತಿದೆ. ಇದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು. ಹೊತ್ತು ಬಂದಂತೆ ಕೊಡೆ ಹಿಡಿಯುವವರಿಗೆ ಮಣೆ ಹಾಕುವುದನ್ನು ಬಿಟ್ಟು ಸ್ವಲ್ಪ ಪಕ್ಷ ನಿಷ್ಠರನ್ನು ಸಹಿತ ಪರಿಗಣಿಸಿದರೆ ನಿಮಗೂ ಗೌರವ ಮತ್ತು ಪಕ್ಷಕ್ಕೂ ಒಳ್ಳೆಯದಾಗುವುದರಲ್ಲಿ ಎರಡು ಮಾತಿಲ್ಲ” ಎಂದು ಮುಖ್ಯಮಂತ್ರಿ ಸಚಿವ ಸ್ಥಾನ ಹಂಚಿಕೆಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿ ಕೊನೆಗೆ ಜೈ ಬಿಜೆಪಿ ಎಂದಿದ್ದಾರೆ.

ಹಿರಿತನ, ಪಕ್ಷನಿಷ್ಠೆ, ಸಿದ್ಧಾಂತಕ್ಕೆ ಬದ್ಧರಾಗಿ ಪ್ರಾಣಹೋದರು ಪಕ್ಷಕ್ಕೆ ದ್ರೋಹ ಮಾಡದೇ ಪಕ್ಷಕ್ಕಾಗಿ ಮತ್ತು ಪಕ್ಷದ ಬಲವರ್ಧನೆಗಾಗಿ ಹಗಲು...

Posted by Siddu Savadi on Wednesday, 13 January 2021


ಈ ಬಗ್ಗೆ ನ್ಯೂಸ್ 18ಗೆ ಪ್ರತಿಕ್ರಿಯಿಸಿದ ಶಾಸಕ ಸಿದ್ದು ಸವದಿ, ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಪರಿಗಣಿಸಬೇಕಿತ್ತು. ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಬೇಕಿಲ್ಲ, ಅದನ್ನು ಗುರುತಿಸುವ ಕೆಲಸವಾಗಬೇಕು. ನಾನು ಬಿಜೆಪಿಯಲ್ಲೇ ಇರುತ್ತೇನೆ. ಈ ಬಗ್ಗೆ ಸಿಎಂ ಭೇಟಿಯಾಗುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಅಸಮಾಧಾನಿತರು ಬಹಿರಂಗವಾಗಿ ಮಾತಾಡದೆ ಹೈಕಮಾಂಡ್​ಗೆ ದೂರು ನೀಡಿ; ಸಿಎಂ ಯಡಿಯೂರಪ್ಪ

ತಾವು ಹೇಳಿದ ಹೌದಪ್ಪಗಳು ಯಾರು ಎನ್ನುವ ಪ್ರಶ್ನೆಗೆ ಅವರು, ನಾನು ಅದನ್ನು ಹೇಳಬೇಕಿಲ್ಲ. ತಿಳಿದುಕೊಳ್ಳುವರು ತಿಳಿದುಕೊಳ್ಳುತ್ತಾರೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಸಿದ್ದು ಸವದಿ ಮಧ್ಯೆ ಮುಸುಕಿನ ಗುದ್ದಾಟ ಇದೆ ಎನ್ನಲಾಗುತ್ತಿದೆ. ಕಳೆದ ಜಮಖಂಡಿ ವಿಧಾನಸಭಾ ಚುನಾವಣೆಯಲ್ಲಿ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ ನಿರಾಣಿ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಧಿಕೃತ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿಸೋಲಿಗೆ ಕಾರಣರಾದರೆನ್ನಲಾಗಿದೆ. ಈಚೆಗೆ ಸಂಗಮೇಶ ನಿರಾಣಿ ತೇರದಾಳ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಮುಂದಿನ ಚುನಾವಣೆಯಲ್ಲಿ ಟಿಕೆಟ್​ಗೆ ಪೈಪೋಟಿ ನಡೆಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದು ಮುರುಗೇಶ್ ನಿರಾಣಿ ವಿರುದ್ಧ ಸಿದ್ದು ಸವದಿ ಬೇಗುದಿಗೆ ಕಾರಣ ಎನ್ನಲಾಗುತ್ತಿದೆ.. ಹೀಗಾಗಿ ಸಚಿವ ಸ್ಥಾನ ಮುರುಗೇಶ್ ನಿರಾಣಿ ಅವರಿಗೆ ಕೊಟ್ಟಿದ್ದಕ್ಕೆ ಸಿದ್ದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ, ಮುರುಗೇಶ್ ನಿರಾಣಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದಕ್ಕೆ ಬಾಗಲಕೋಟೆಯ ಬಿಜೆಪಿ ವಲಯದೊಳಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ತೇರದಾಳ ಶಾಸಕ ಸಿದ್ದು ಸವದಿ ಫೇಸ್ಬುಕ್ ಮೂಲಕ ಅಸಮಾಧಾನ ಹೊರಹಾಕಿ, ಮುರುಗೇಶ್ ನಿರಾಣಿಗೆ ಪರೋಕ್ಷವಾಗಿ ಸಚಿವ ಸ್ಥಾನ ಕೊಟ್ಟಿದ್ದನ್ನು ವಿರೋಧಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: