ಬಾಗಲಕೋಟೆ (ಜೂ,22): ಪ್ರತಿಷ್ಠಿತ ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಗೆ ಆಗಸ್ಟ್ 29 ಮುಹೂರ್ತ ನಿಗದಿ ಆಗಿದ್ದು, ಜಿಲ್ಲೆಯ ಘಟಾನುಘಟಿ ರಾಜಕಾರಣಿಗಳು ನಿರ್ದೇಶಕ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ.
ಇದುವರೆಗೆ ರಾಜ್ಯಸಭೆ ಚುನಾವಣೆ, ಮೇಲ್ಮನೆ ಚುನಾವಣೆಯಲ್ಲಿ ಬಿಜಿಯಾಗಿದ್ದವರೀಗ ಡಿಸಿಸಿ ಬ್ಯಾಂಕ್ ಚುನಾವಣೆಯತ್ತ ಮುಖ ಮಾಡಲಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಅವಕಾಶ ವಂಚಿತರಾದ ಮಾಜಿ ಶಾಸಕರು ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆ. ಮುಂದಿನ ಒಂದೂವರೆ ತಿಂಗಳು ಜಿಲ್ಲಾ ರಾಜಕಾರಣ ಡಿಸಿಸಿ ಬ್ಯಾಂಕ್ ಚುನಾವಣೆ ಸುತ್ತಲೇ ಗಿರಕಿ ಹೊಡೆಯಲಿದೆ.
ಈಗಾಗಲೇ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಸ್ಪರ್ಧಿಸುವ ಆಕಾಂಕ್ಷಿಗಳು ಸಾಕಷ್ಟು ಸಿದ್ದತೆಯಲ್ಲಿ ತೊಡಗಿದ್ದಾರೆ. ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಲಿದೆ. ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಪಿ.ಸಿ.ಗದ್ದಿಗೌಡರ ಕೂಡ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗುವ ಉದ್ದೇಶದಿಂದಲೇ ಹೆಬ್ಬಳ್ಳಿ ಪಿಕೆಪಿಎಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಇದನ್ನು ಗಮನಿಸಿದರೆ ಈ ಬಾರಿಯ ಸ್ಪರ್ಧೆ ಯಾವ ಹಂತ ತಲುಪಲಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಸಂಸದ ಗದ್ದಿಗೌಡರಂತೆ ಜಿಲ್ಲೆಯ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಸಹಕಾರಿ ಕ್ಷೇತ್ರದಲ್ಲಿನ ಮುಂಚೂಣಿ ಮುಖಂಡರೆಲ್ಲ ಡಿಸಿಸಿ ನಿರ್ದೇಶಕ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ. ಜತೆಗೆ ಹಾಲಿ ನಿರ್ದೇಶಕ ಮಂಡಳಿಯ ಬಹುತೇಕರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಶತಾಯ –ಗತಾಯ ಈ ಬಾರಿ ಡಿಸಿಸಿ ಬ್ಯಾಂಕ್ ಆಡಳಿತವನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲೇಬೇಕೆಂದು ಕೇಸರಿ ಪಡೆ ನಿಶ್ಚಯಿಸಿದಂತೆ ತನ್ನದೇಯಾದ ಬೆಂಬಲಿಗರ ಪೆನಲ್ ಮಾಡಿ ಅಭ್ಯರ್ಥಿಗಳನ್ನು ಕಣಕ್ಕೆ ಹಾಕುವ ಎಲ್ಲ ಪ್ರಯತ್ನಗಳು ಕಮಲ ಪಾಳೆಯದಲ್ಲಿ ಜೋರಾಗಿದೆ.
ಅಭ್ಯರ್ಥಿಗಳ ಆಯ್ಕೆಗಾಗಿ ಕೋರ್ ಕಮಿಟಿ ಸಭೆ ದಿನಾಂಕ ಕೂಡ ನಿಗದಿ ಆಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಎರಡು ಪೆನಲ್ಗಳ ಜತೆಗೆ ಕೆಲವರು ಪಕ್ಷೇತರರಾಗಿ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ವೈಯಕ್ತಿಕ ವರ್ಚಸ್ಸು ಮತ್ತು ಜಾತಿ ರಾಜಕಾರಣದ ಜತೆಗೆ ಪಕ್ಷ ರಾಜಕಾರಣ ಕೂಡ ಜೋರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬ್ಯಾಂಕ್ ನಿರ್ದೇಶಕ ಮಂಡಳಿಗೆ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ.
ಮೂಲಗಳ ಪ್ರಕಾರ ಸಂಸದ ಪಿ.ಸಿ.ಗದ್ದಿಗೌಡರ, ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ, ಮಾಜಿ ಸಚಿವ ಹಾಗೂ ಶಾಸಕ ಮುರುಗೇಶ ನಿರಾಣಿ, ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷರಾಗಿರುವ ಮಾಜಿ ಸಚಿವ ಅಜಯಕುಮಾರ ಸರನಾಯಕ, ಮಾಜಿ ಸಚಿವರಾದ ಎಚ್.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಎಂ.ಕೆ. ಪಟ್ಟಣಶೆಟ್ಟಿ, ಬ್ಯಾಂಕ್ನ ಹಾಲಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ನಿರ್ದೇಶಕರಾಗಿರುವ ಡಾ ಎಂ.ಎಸ್. ದಡ್ಡೇನವರ ಮತ್ತು ಬಸವೇಶ್ವರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ,ಇನಾಂ ಹುಲ್ಲಿಕೇರಿ ಪಿಕೆಪಿಎಸ್ ಬ್ಯಾಂಕ್ ನ ಡಾ,ಎಂ ಜಿ ಕಿತ್ತಲಿ ಚುನಾವಣೆ ಅಖಾಡಕ್ಕೆ ಇಳಿಯವುದು ಬಹುತೇಕ ಖಚಿತವಾಗಿದೆ. ನಿರ್ದೇಶಕ ಮಂಡಳಿಯ ಕೆಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಪ್ರಮುಖರ ನಡುವೆ ಒಳ ಒಪ್ಪಂದ ನಡೆದಲ್ಲಿ ಮಾತ್ರ ಇದು ಸಾಧ್ಯವಿದೆ. ಇಲ್ಲದೆ ಹೋದಲ್ಲಿ ಚುನಾವಣೆ ಅನಿವಾರ್ಯ ಎನ್ನುವ ಸ್ಥಿತಿ ಇದೆ. ಹಿಂದಿನಿಂದಲೂ ಅಜಯಕುಮಾರ ಸರನಾಯಕ, ಎಸ್.ಆರ್. ಪಾಟೀಲ ಅವಿರೋಧವಾಗಿ ಆಯ್ಕೆಗೊಂಡ ಇತಿಹಾಸವಿದೆ. ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಿಗೂ ಸ್ಪರ್ಧಿಸಲು ಮುಂದಾದಲ್ಲಿ ಅವರೂ ಕೂಡ ಚುನಾವಣೆ ಎದುರಿಸಬೇಕಾದ ಸ್ಥಿತಿ ನಿರ್ಮಾಣಗೊಳ್ಳಲಿದೆ.
ಇದನ್ನು ಓದಿ: ಇಲಾಖೆಗಳ ವಿಭಜನಾ ಪ್ರಕ್ರಿಯೆ ಕೂಡಲೇ ಕೈಗೆತ್ತಿಕೊಳ್ಳಿ; ಅಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಸೂಚನೆ
ಸಾಮಾನ್ಯ ಕಾರ್ಯಕರ್ತರ ಕಣ್ಣು ಕೆಂಪಗೆ!
ಹೌದು, ಪ್ರತಿ ಬಾರಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಹಾಲಿ, ಮಾಜಿ ಶಾಸಕರೇ ಸ್ಪರ್ಧಿಸಿ, ನಿರ್ದೇಶಕರಾಗುತ್ತಿದ್ದಾರೆ. ಅತ್ತ, ವಿಧಾನಸಭಾ ಚುನಾವಣೆ, ಜೊತೆಗೆ ಪ್ರಮುಖ ಹುದ್ದೆ ಪಡೆದುಕೊಂಡಿದ್ದರೂ, ಇತ್ತ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಘಟಾನುಘಟಿ ನಾಯಕರ ನಡೆಗೆ ಒಳಗೊಳಗೇ ಬಿಜೆಪಿ, ಕಾಂಗ್ರೆಸ್ ಎರಡನೇ ಹಂತದ ನಾಯಕರು, ಸಾಮಾನ್ಯ ಕಾರ್ಯಕರ್ತರ ಕಣ್ಣು ಕೆಂಪಾಗಿವೆ. ಡಿಸಿಸಿ ಬ್ಯಾಂಕ್ ಗೆ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕೊಡಬೇಕು ಎನ್ನುತ್ತಿದ್ದಾರೆ. ಪಕ್ಷ ಅಧಿಕಾರಿಕ್ಕೆ ಬರಲು, ಪಕ್ಷ ಸಂಘಟನೆ ಕೆಳಹಂತದಲ್ಲಿ ಮಾಡುವವರು ನಾವು. ಡಿಸಿಸಿ ಬ್ಯಾಂಕ್ ನಂತಹ ನಿರ್ದೇಶಕರ ಹುದ್ದೆ ಮೇಲೂ ಕೈಹಾಕುವುದಕ್ಕೆ ಎರಡನೇ ಹಂತದ ನಾಯಕರು, ಸಾಮಾನ್ಯ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿಯಾದರೂ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಅಂತಹವರಿಗೆ ಕೊಕ್ ಕೊಟ್ಟು, ಸಾಮಾನ್ಯ ಕಾರ್ಯಕರ್ತರಿಗೂ ಪ್ರಮುಖ ಹುದ್ದೆಯ ಚುನಾವಣೆಗೆ ಅವಕಾಶ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ