ಬಾಗಲಕೋಟೆ(ಜು.13): ಬಾಗಲಕೋಟೆ ಜಿಲ್ಲೆಯಲ್ಲಿ ಅಕ್ಷರಶಃ ಕೊರೋನಾ ಕಿಲ್ಲರ್ ಆಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಕಳೆದ ಒಂದೇ ವಾರದಲ್ಲಿ ಎಂಟು ಮಂದಿ, ಓರ್ವ ಶಂಕಿತ ಕೊರೊನಾಗೆ ಬಲಿಯಾಗಿದ್ದು ಜಿಲ್ಲಾಡಳಿತಕ್ಕೆ ಆತಂಕ ಶುರುವಾಗಿದೆ. ಜಿಲ್ಲಾಡಳಿತ ಆತಂಕಕ್ಕೂ ಒಂದು ಕಾರಣವಿದೆ. ಸಾವಿನ ಕೇಸ್ ದಲ್ಲಿ ಐಎಲ್ ಐ,ಸಾರಿ ಕೇಸ್ ಹೆಚ್ಚು ಅನ್ನೋದು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳ ಆತಂಕ ಹೆಚ್ಚಿಸುವಂತೆ ಮಾಡಿದೆ.
ಇದೀಗ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೆಮ್ಮು ನೆಗಡಿ, ಉಸಿರಾಟ ಸಮಸ್ಯೆ, ಮೈಕೈ ನೋವು ಇದ್ದವರು ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳುವಂತೆ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾಧ್ಯಮ ಪ್ರಕಟಣೆ ಮೂಲಕ ಜಿಲ್ಲೆಯ ಜನತೆಗೆ ಸೂಚನೆ ನೀಡಿದ್ದಾರೆ. ಸಾರಿ, ಐಎಲ್ಐ ಲಕ್ಷಣವಿರುವವರು ತಡವಾಗಿ ಆಸ್ಪತ್ರೆಗೆ ದಾಖಲಾಗುವದರಿಂದ ರೋಗಿಗಳ ಪರಿಸ್ಥಿತಿ ಗಂಭೀರವಾಗುತ್ತಿದೆ. ಈ ರೀತಿ ಲಕ್ಷಣ ಕಂಡು ಬಂದ ಕೂಡಲೇ ಸ್ಥಳೀಯ ಆರ್ ಎಂಪಿ ವೈದ್ಯರ ಬಳಿ ಚಿಕಿತ್ಸೆ ಪಡೆಯದೇ ನೇರವಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿ, ಚಿಕಿತ್ಸೆ ಪಡೆದುಕೊಳ್ಳಲು ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಜುಲೈ 6 ರಿಂದ 12 ವರೆಗೆ ಬರೋಬ್ಬರಿ 8 ಮಂದಿ ಬಲಿ ಹಾಗೂ ಓರ್ವ ಕೊರೋನಾ ಶಂಕಿತ ಕೊರೋನಾಗೆ ಬಲಿಯಾಗಿದ್ದಾರೆ. ಇದರಲ್ಲಿ ಸಾರಿ, ಐಎಲ್ ಐ ಹೆಚ್ಚು ಸಾವಾಗಿವೆ. ಜುಲೈ 6, ಬಾಗಲಕೋಟೆ ತಾಲೂಕಿನ ಮನಹಳ್ಳಿ ಗ್ರಾಮದ 80ವರ್ಷದ ವೃದ್ಧ, ಜುಲೈ 7ರಂದು ಹಾನಾಪೂರ ಎಲ್ ಟಿ 30ವರ್ಷದ ಯುವಕ, ಜುಲೈ 8 ರಂದು ಬನಹಟ್ಟಿಯ 65 ವರ್ಷದ ವೃದ್ಧ, ಜುಲೈ 10 ರಂದು ಬಾಗಲಕೋಟೆಯ 78ವರ್ಷದ ಜೆಎಂಎಫ್ ಸಿ ನ್ಯಾಯಾಧೀಶರ ತಾಯಿ, ಜುಲೈ 11ರಂದು ಒಂದೇ ದಿನ ಎರಡು ಬಲಿಯಾಗಿದ್ದು, 47ವರ್ಷದ ತೋಟಗಾರಿಕೆ ವಿವಿ ದಿನಗೂಲಿ ನೌಕರ, ಖಜ್ಜಿಡೋಣಿ ಗ್ರಾಮದ 45 ವರ್ಷದ ಮಹಿಳೆ.
ಇನ್ನು ಜುಲೈ 12 ರಂದು ಎರಡು ಬಲಿಯಲ್ಲಿ ಕಲಾದಗಿ ಗ್ರಾಮದ 44 ವರ್ಷದ ವ್ಯಕ್ತಿ, 74ವರ್ಷದ ಬಾಗಲಕೋಟೆ ನವನಗರದ ವೃದ್ಧ ಹಾಗೂ ಮುಧೋಳದಲ್ಲಿ ಕೊರೋನಾ ಶಂಕಿತ ಹಿರಿಯ ಪತ್ರಕರ್ತ ಮೃತಪಟ್ಟಿದ್ದು, ಜಿಲ್ಲೆ ಜನತೆ, ಅಧಿಕಾರಿಗಳಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಮೃತರಲ್ಲಿ ಸಾರಿ, ಐಎಲ್ ಐ ಕೇಸ್ ಗಳು ತಡವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗುತ್ತಿರುವದರಿಂದ ಚಿಕಿತ್ಸೆಗೆ ಫಲಿಸದೇ ಮೃತರಾಗುತ್ತಿದ್ದಾರೆ. ಜನತೆ ಕೆಮ್ಮು,ನೆಗಡಿ, ಉಸಿರಾಟ ಸಮಸ್ಯೆ, ಮೈಕೈ ನೋವು ಬಂದ ಕೂಡಲೇ ನಿರ್ಲಕ್ಷ್ಯ ತೋರಿದರೆ ಕಿಲ್ಲರ್ ಕೊರೋನಾ ಸಾವಿನ ಗಂಟೆ ಬಾರಿಸಲಿದೆ ಎಂದು ಎಚ್ಚರಿಕೆ ನೀಡುತ್ತಿದೆ.
ವೈದ್ಯರನ್ನು ಬಿಡುತ್ತಿಲ್ಲ ಕೊರೋನಾ
ಬಾಗಲಕೋಟೆಯಲ್ಲಿ ಕೊರೋನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ವೈದ್ಯರನ್ನು ಕೊರೋನಾ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಜಮಖಂಡಿ ಟಿಎಚ್ ಓ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಖ್ಯ ವೈದ್ಯ, ಬಾಗಲಕೋಟೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರು, ನಿವೃತ್ತ ಆಯುಷ್ಯ ವೈದ್ಯ, ಜಮಖಂಡಿ ಖಾಸಗಿ ಆಸ್ಪತ್ರೆಯ ಮುಖ್ಯ ವೈದ್ಯ, ಗುಳೇದಗುಡ್ಡ, ಇಳಕಲ್ ಸರ್ಕಾರಿ ಆಸ್ಪತ್ರೆಯ ಡಿ ದರ್ಜೆ ನೌಕರ ಹಾಗೂ ಇಳಕಲ್ ಆಸ್ಪತ್ರೆಯ ಮಹಿಳಾ ಪೆಥಾಲಾಜಿಸ್ಟ್ ಗೆ ಸೋಂಕು ತಗುಲಿದೆ. ಇದರಲ್ಲಿ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಗುಳೇದಗುಡ್ಡ ಸಮುದಾಯ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ಕೊರೋನಾಗೆ ಬಲಿಯಾಗಿದ್ದಾರೆ. ಹೀಗಾಗಿ ವೈದ್ಯಕೀಯ ಕೊರೋನಾ ವಾರಿಯರ್ಸ್ ಆತಂಕದ ಮಧ್ಯೆಯೂ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ 399 ಕೊರೋನಾ ಕೇಸ್, ಗುಣಮುಖರ ಸಂಖ್ಯೆ 211, ಸಾವಿನ ಸಂಖ್ಯೆ 13, ಸಕ್ರಿಯ ರೋಗಿಗಳ ಸಂಖ್ಯೆ 175 ಇದ್ದು, ಕಳೆದ ಎರಡು ದಿನಗಳಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವವರ ಸಂಖ್ಯೆ ಹೆಚ್ಚಾಗಿದ್ದು, ಸ್ವಲ್ಪ ಸಮಾಧಾನ ತಂದಿದೆ. ಎರಡು ದಿನದಲ್ಲಿ 61 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇನ್ನೂ 2206 ಕೋವಿಡ್ ಪರೀಕ್ಷಾ ವರದಿ ಬರಬೇಕಿರುವುದರಿಂದ ಆತಂಕ ಹೆಚ್ಚುತ್ತಿದೆ. ಹೀಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 250 ಬೆಡ್ ಸಾಮರ್ಥ್ಯವಿದ್ದು, ಈಗಾಗಲೇ 175 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.ಇದನ್ನೂ ಓದಿ :
Gadag Coronavirus Updates : ಗದಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆ ಹೆಚ್ಚಳ ; ನಾಲ್ಕು ದಿನದಲ್ಲಿ ಐದು ಸಾವು
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದಲೂ ಮೋಡಕವಿದ, ತುಂತುರು, ಸಾಧಾರಣ ಮಳೆ ಆಗುತ್ತಿದೆ. ಇದರಿಂದ ಕೆಮ್ಮು, ನೆಗಡಿ, ವಯೋವೃದ್ಧರಲ್ಲಿ ಉಸಿರಾಟದ ಸಮಸ್ಯೆ ಆಗುತ್ತಿದೆ ಎನ್ನಲಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದ ಮಳೆಯಿಂದ ಬಾಗಲಕೋಟೆ ಜಿಲ್ಲೆಯ ಕೃಷ್ಣಾ ಘಟಪ್ರಭಾ ಮಲಪ್ರಭಾ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹ ಆತಂಕವಿದೆ. ಇದೀಗ ವಯೋವೃದ್ಧರು, ಮಕ್ಕಳಲ್ಲಿ ಕೆಮ್ಮು, ಶೀತ, ಮೈಕೈನೋವು, ಉಸಿರಾಟ ಸಮಸ್ಯೆಯಂತ ಲಕ್ಷಣ ಕಂಡುಬರುತ್ತಿವೆ. ಹೀಗಾಗಿ ಕೊರೋನಾ ಆತಂಕ ದಿನೇ ದಿನೇ ಹೆಚ್ಚುತ್ತಿದೆ.
ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಸಾರಿ, ಐಎಲ್ ಐ ಕೇಸ್ ಬಲಿ ಪಡೆಯುತ್ತಿದ್ದು, ಜಿಲ್ಲೆಯ ಜನತೆ ಎಚ್ಚೆತ್ತುಕೊಂಡು ರೋಗ ಲಕ್ಷಣ ಕಂಡು ಬಂದ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬೇಕಿದೆ.