World Tourism Day – ಮರೀಚಿಕೆಯಾಗಿದೆ ಚಾಲುಕ್ಯರ ಪ್ರವಾಸಿ ತಾಣಗಳ ಅಭಿವೃದ್ಧಿ

Chalukya Kingdom - ಚಾಲುಕ್ಯರ ಆಡಳಿತ ಇದ್ದ ಬಾದಾಮಿಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಬಾದಾಮಿ, ಪಟ್ಟದಕಲ್ಲು, ಐಹೊಳೆ ಪ್ರದೇಶಗಳು ಈಗ ಅಭಿವೃದ್ಧಿ ಕಾಣದೆ ಸೊರಗುತ್ತಿವೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಪಟ್ಟದಕಲ್ಲು ಅಭಿವೃದ್ಧಿಯೂ ಮರೀಚಿಕೆಯಾಗಿದೆ.

news18-kannada
Updated:September 27, 2020, 11:13 AM IST
World Tourism Day – ಮರೀಚಿಕೆಯಾಗಿದೆ ಚಾಲುಕ್ಯರ ಪ್ರವಾಸಿ ತಾಣಗಳ ಅಭಿವೃದ್ಧಿ
ಚಾಲುಕ್ಯರ ಲಾಂಛನವನ್ನು ಈಗ ತಪ್ಪಾಗಿ ಕೆತ್ತಿರುವುದು ಹಾಗೂ ಬಾದಾಮಿಯಲ್ಲಿ ಸರಿಯಾಗಿ ಆಗದ ಅಭಿವೃದ್ಧಿ ಯೋಜನೆಗಳು.
  • Share this:
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಪ್ರವಾಸಿ ತಾಣ ಹೊಂದಿರುವ ಜಿಲ್ಲೆ. ಇಲ್ಲಿಗೆ ದೇಶ ವಿದೇಶದಿಂದ ಪ್ರವಾಸಿಗರು ಬಂದು ಪ್ರವಾಸಿ ತಾಣಗಳಲ್ಲಿನ ಕಲೆ ಕಣ್ತುಂಬಿಕೊಳ್ಳುತ್ತಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಶಿಲ್ಪಕಲೆ ತೊಟ್ಟಿಲು, ಚಾಲುಕ್ಯರ ಕಲ್ಲರಳಿದ ಕಲೆ, ಗುಳೇದಗುಡ್ಡದ ಖಣ, ಇಳಕಲ್ ಸೀರೆ, ಗ್ರಾನೈಟ್, ಅಮೀನಗಡದ ಕರದಂಟು, ಬಸವಣ್ಣನವರ ಐಕ್ಯತಾಣ ಹೀಗೆ ವಿಶಿಷ್ಟತೆ ಹೊಂದಿರುವ ಜಿಲ್ಲೆಯಲ್ಲಿ ಪ್ರವಾಸ ಅಭಿವೃದ್ಧಿ ನಗಣ್ಯ ವಾಗಿದೆ ಎಂದೇ ಹೇಳಬೇಕು. ವಿಶ್ವ ಪ್ರವಾಸೋದ್ಯಮ ದಿನದಂದು ಜನಪ್ರತಿನಿಧಿಗಳು, ಅಧಿಕಾರಿಗಳು ‘ಬಾಗಲಕೋಟೆ ಪ್ರವಾಸಿ ತಾಣಗಳ ಅಭಿವೃದ್ಧಿ’ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟ. ಚಾಲುಕ್ಯರ ಕಾಲದ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಪ್ರವಾಸಿ ತಾಣಗಳಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ.

1982ರಲ್ಲಿ ಯುನೆಸ್ಕೋ ಪಟ್ಟದಕಲ್ಲು ಪ್ರದೇಶವನ್ನು ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಿಸಿತ್ತು. ಕೇಂದ್ರ ಸರ್ಕಾರ ಬಾದಾಮಿ ಪಾರಂಪರಿಕ ತಾಣ ಎಂದು ಘೋಷಿಸಿ, ಕೇಂದ್ರ ಪುರಸ್ಕೃತ ಹೃದಯ ಯೋಜನೆಗೆ ಆಯ್ಕೆಯಾಗಿದೆ. ಚಾಲುಕ್ಯರ ಕಾಲದ ಐತಿಹಾಸಿಕ ತಾಣಗಳಲ್ಲಿ ಸಮಸ್ಯೆಗಳ ಸರಮಾಲೆಗಳಿವೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆಗಳು ಬರುವುದು ಅಪರೂಪ. ಬಂದ ಯೋಜನೆಗಳು ಕಳಪೆಯಾಗಿ ನಡೆದು ವರ್ಷದೊಳಗೆ ಕಿತ್ತುಹೋಗಿರುವ ಆರೋಪ ಕೇಳಿಬಂದಿದೆ.

ಬಾದಾಮಿಯಲ್ಲಿ ಹೃದಯ ಯೋಜನೆಯಡಿ 18ಕೋಟಿ, ಅಮೃತ ಯೋಜನೆಯಡಿ 24ಕೋಟಿ, ಹಾಗೂ ನಗರೋತ್ಥಾನ ಯೋಜನೆಯಡಿ 7ಕೋಟಿ ಕಾಮಗಾರಿಗಳು ನಡೆಯುತ್ತಿವೆ. ಹೃದಯ ಯೋಜನೆಯಡಿ ಸ್ವಾಗತ ಕಮಾನು, ಪ್ರವಾಸಿಗರಿಗೆ ಮಾಹಿತಿ ಫಲಕ ಅಳವಡಿಕೆ, ಪಾದಚಾರಿ ರಸ್ತೆ, ಸಂಚಾರಿ ಶೌಚಾಲಯ, ಶೂನ್ಯ ಕಸ, ತಾಜ್ಯ ವಿಲೇವಾರಿ, ಬೀದಿ ದೀಪ ಅಳವಡಿಕೆ ಸೇರಿದಂತೆ ಕಾಮಗಾರಿ ನಡೆದಿವೆ. ಸ್ವಾಗತ ಕಮಾನು ಅಳವಡಿಕೆಯಲ್ಲಿ ಚಾಲುಕ್ಯರ ಲಾಂಛನವನ್ನು ತಪ್ಪಾಗಿ ಕೆತ್ತಲಾಗಿದೆ. ವರಾಹ ನಿಂತಿರುವ ಚಿತ್ರವನ್ನು ಉಲ್ಟಾ ಕೆತ್ತಿ ಗುತ್ತಿಗೆದಾರ ಎಡವಟ್ಟು ಮಾಡಿದ ಘಟನೆ ನಡೆದಿದೆ.

ಇನ್ನು ಸಂಚಾರಿ ಶೌಚಾಲಯ ಅನುಪಯುಕ್ತವಾಗಿವೆ. ಕಲ್ಲಿನ ರಸ್ತೆ ಕಾಮಗಾರಿಗೆ ನಿವಾಸಿಗಳು ಮನಸು ತೋರದ ಹಿನ್ನೆಲೆ ಕಾಮಗಾರಿ ಬಾಕಿಯಿದೆ. ಅಮೃತ ಯೋಜನೆಯಡಿ ಕುಡಿಯೋ ನೀರಿನ ಕಾಮಗಾರಿ, ಪೈಪ್ ಲೈನ್ ಕಾಮಗಾರಿ, ಪಾರ್ಕ್ ಗಳ ಅಭಿವೃದ್ಧಿ ಕಾಮಗಾರಿ ಮುಗಿದಿದೆ. ಪಾರ್ಕಿಂಗ್ ಪ್ಲಾಜಾಗಾಗಿ ನಿಗದಿಪಡಿಸಿದ ಜಾಗ ಸಂಬಂಧ ಅಲ್ಲಿನ ನಿವಾಸಿ, ವ್ಯಾಪಾರಸ್ಥರು ಕೋರ್ಟ್ ಮೊರೆ ಹೋಗಿದ್ದು, ಅದಕ್ಕೆ ಪುರಸಭೆ ಅಧಿಕಾರಿಗಳು ಪರ್ಯಾಯ ಜಾಗ ಪರಿಶೀಲನೆ ನಡೆಸಿದ್ದಾರೆ. ನಗರೋತ್ಥಾನ ಯೋಜನೆಯಡಿ ಒಳಚರಂಡಿ ಕಾಮಗಾರಿ ಮುಗಿದಿದ್ದು,ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: World Tourism Day: ನೀವು ನೋಡಲೇಬೇಕಾದ ರಾಜ್ಯದ ಐತಿಹಾಸಿಕ ಸ್ಥಳಗಳಿವು

ಬಾದಾಮಿಯಲ್ಲಿ ನಡೆದ ನಗರೋತ್ಥಾನ, ಹೃದಯ, ಅಮೃತ ಯೋಜನೆಯಡಿ ಕಳಪೆ ಕಾಮಗಾರಿ, ಜೊತೆಗೆ ಅಸಮರ್ಪಕವಾಗಿ ನಡೆಯುತ್ತಿವೆ. ಪಿಡಬ್ಲ್ಯೂಡಿ ಇಲಾಖೆಯಿಂದ ಬಾದಾಮಿಯಿಂದ ಬನಶಂಕರಿಯವರೆಗಿನ ರಸ್ತೆಯ ಎರಡು ಬದಿ ಪಾದಚಾರಿ ರಸ್ತೆ 5ಕೋಟಿಯಲ್ಲಿ ನಡೆಯುತ್ತಿದ್ದು, ಇದು ಕೂಡಾ ಕಳಪೆಯಾಗಿದೆ. ಡಿಪಿಆರ್ ಪ್ರಕಾರ ನಡೆಯುತ್ತಿಲ್ಲ ಎಂದು ಆರೋಪಿಸಿ ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿಯವರು ಸೆಪ್ಟೆಂಬರ್ 29ರಂದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಮ್ಯೂಸಿಯಂ ರಸ್ತೆ ಪಾರಂಪರಿಕ ರಸ್ತೆ, ಸಿಡಿಲು ಪಡಿ ರಸ್ತೆ ನಿರ್ಮಿಸಬೇಕು. ಪುರಾತನ ಶೈಲಿ ದೀಪ ಅಳವಡಿಕೆ, ಬಾದಾಮಿ ರೈಲ್ವೆ ನಿಲ್ದಾಣ ಬಳಿ ಬಾಗಲಕೋಟೆ ಬಾದಾಮಿ ಸಂಪರ್ಕಿಸುವ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಪ್ರತಿಭಟನೆಗೆ ಮುಂದಾಗಿದ್ದು, ಪ್ರವಾಸಿ ತಾಣ ಬಾದಾಮಿಯ ಅಭಿವೃದ್ಧಿಗೆ ಸರ್ಕಾರ, ಜನಪ್ರತಿನಿಧಿಗಳು ಇನ್ನಷ್ಟು ಇಚ್ಚಾಶಕ್ತಿ ತೋರಬೇಕೆನ್ನುತ್ತಾರೆ ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿಯ ಇಷ್ಟಲಿಂಗ ನರೇಗಲ್.ಪ್ರವಾಸಿ ತಾಣ ಬಾದಾಮಿಯ ಅಭಿವೃದ್ಧಿಗೆ ಹೃದಯ, ಅಮೃತ ಯೋಜನೆ ಪೂರಕವಾಗಿದ್ದು, ಈ ಎರಡು ಯೋಜನೆಯಡಿ ಶೇಕಡಾ 80ರಷ್ಟು ಕಾಮಗಾರಿ ಮುಗಿದಿವೆ.ಈ ಹಿಂದಿನಕ್ಕಿಂತಲೂ ಬಾದಾಮಿ ಅಭಿವೃದ್ಧಿಯಾಗುತ್ತಿದ್ದು, ಗುಹಾಂತರ ದೇಗುಲ, ಅಗಸ್ತ್ಯ ತೀರ್ಥ ಹೊಂಡಕ್ಕೆ ಹೊಂದಿಕೊಂಡಂತೆ ಇರುವ 96 ಮನೆಗಳ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ್ ಹೇಳುತ್ತಾರೆ.

ಕೊರೋನಾ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳು ಭಣಗುಡುತ್ತಿವೆ. ಪ್ರವಾಸಿ ತಾಣ ಅವಲಂಬಿಸಿದ ಪ್ರವಾಸಿ ಮಾರ್ಗದರ್ಶಿ, ವ್ಯಾಪಾರಸ್ಥರು, ಹೊಟೇಲ್ ಉದ್ದಿಮೆಗಳ ಆರ್ಥಿಕ ಹೊಡೆತ ಅನುಭವಿಸುತ್ತಿವೆ. ಪ್ರವಾಸಿ ತಾಣಗಳು ಆರಂಭವಾದರೂ ಪ್ರವಾಸಿಗರು ಬರುತ್ತಿಲ್ಲ.ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಪ್ರವಾಸಿ ಮಾರ್ಗದರ್ಶಿಗಳ ನೆರವಿಗೆ ಬರಲಿಲ್ಲ.ಪ್ರವಾಸಿ ಮಾರ್ಗದರ್ಶಿಗಳು ಪರ್ಯಾಯ ಉದ್ಯೋಗದತ್ತ ಮುಖ ಮಾಡಿದ್ದು, ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಕೊಡಬೇಕಿದೆ ಎನ್ನುತ್ತಾರೆ ಪ್ರವಾಸಿ ಮಾರ್ಗದರ್ಶಿ ರಾಜೇಶ್ ಕಲ್ಮಠ.

ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲು ಸ್ಮಾರಕಗಳು ಕಳೆದ ವರ್ಷದ ಮಲಪ್ರಭಾ ನದಿ ಪ್ರವಾಹಕ್ಕೆ ನಲುಗಿ ಹೋಗಿದ್ದವು. ಪಟ್ಟದಕಲ್ಲು ಗ್ರಾಮ ಸ್ಥಳಾಂತರಿಸುವಂತೆ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ ಸ್ಥಳಾಂತರ ಭರವಸೆ ನೀಡಿದೆ. ವರ್ಷವಾದರೂ ಪಟ್ಟದಕಲ್ಲು ಗ್ರಾಮ  ಸ್ಥಳಾಂತರಕ್ಕೆ ಜಾಗ ಗುರುತಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಅತ್ತ ಮನೆ ಅಭಿವೃದ್ಧಿ ಮಾಡಲಾಗುತ್ತಿಲ್ಲ, ಇತ್ತ ಸರ್ಕಾರ ಗ್ರಾಮ ಸ್ಥಳಾಂತರಿಸುತ್ತಿಲ್ಲ. ಹೀಗಾಗಿ ಪಟ್ಟದಕಲ್ಲು ಗ್ರಾಮಸ್ಥರ ಬದುಕು ಅತಂತ್ರವಾಗಿದೆ.

ಇದನ್ನೂ ಓದಿ: ಕಲಬುರ್ಗಿಯಲ್ಲಿ ಮುಂದುವರಿದ ವರುಣನ ಅಟ್ಟಹಾಸ; ನದಿಯಲ್ಲಿ ಕೊಚ್ಚಿಹೋದ ಮೀನುಗಾರ

ಶಿಲ್ಪಕಲೆ ತೊಟ್ಟಿಲು ಐಹೊಳೆ ಸ್ಥಿತಿಯೂ ಇದೆಯಾಗಿದ್ದು, ಐಹೊಳೆ ಗ್ರಾಮ ಸ್ಥಳಾಂತರವಾಗುವ ಬೇಡಿಕೆಯಾಗಿಯೇ ಉಳಿದಿದೆ. ಗ್ರಾಮಗಳ ಮಧ್ಯೆ ಹಲವು ದೇಗುಲಗಳಿದ್ದು, ಪುರಾತತ್ವ ಇಲಾಖೆ ಗ್ರಾಮ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಬಾದಾಮಿ ಬನಶಂಕರಿ ದೇವಿ ಚಾಲುಕ್ಯರ ಅಧಿದೇವತೆ. ಬನಶಂಕರಿ ದೇಗುಲಕ್ಕೆ ಬರುವ ಭಕ್ತರು ರೊಟ್ಟಿ ಊಟ ಸವಿಯದೇ ಹೋಗುವುದಿಲ್ಲ. ಹರಿದ್ರಾ ತೀರ್ಥ ಬಳಿ ಸುತ್ತಲಿನ ಗ್ರಾಮದ ಅನ್ನಪೂರ್ಣೇಶ್ವರಿಯರು ಕಡಿಮೆ ದರದಲ್ಲಿ ರೊಟ್ಟಿ ಊಟ ಕೊಡುತ್ತಾರೆ. ಇಲ್ಲಿ ರೊಟ್ಟಿ ಪಾರ್ಕ್ ಆಗಬೇಕು ಎನ್ನುವ ಬೇಡಿಕೆಯಿದೆ. ಪ್ರವಾಸಿ ಪ್ಲಾಜಾ ತೆರೆಯಬೇಕಿದೆ. ಬಾಗಲಕೋಟೆಯಲ್ಲಿರುವ ಪ್ರವಾಸೋದ್ಯಮ ಇಲಾಖೆ ಕಚೇರಿ ಬಾದಾಮಿಗೆ ಸ್ಥಳಾಂತರಿಸಿ, ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡಬೇಕಿದೆ.

ಇನ್ನು ಬಾದಾಮಿ, ಬನಶಂಕರಿ, ಮಹಾಕೂಟ, ಶಿವಯೋಗ ಮಂದಿರ, ಪಟ್ಟದಕಲ್ಲು, ಐಹೊಳೆ ಒಂದೇ ಸೂರಿನಲ್ಲಿ ಬರುತ್ತಿದ್ದು, ರಸ್ತೆ, ಮೂಲಸೌಕರ್ಯ, ಸೇರಿದಂತೆ ಪ್ರವಾಸೋದ್ಯಮ ಸ್ನೇಹಿ ವಾತಾವರಣ ಸೃಷ್ಟಿಯಾಗುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಯತ್ನಿಸಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಶಾಸಕರಾದ ಮೇಲೆ ಪ್ರವಾಸೋದ್ಯಮ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಸಿದ್ದರಾಮಯ್ಯ ಅವರು ಪ್ರವಾಸೋದ್ಯಮ ಅಭಿವೃದ್ಧಿ ಕಡೆಗೂ ಗಮನ ಕೊಡಬೇಕಿದೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by: Vijayasarthy SN
First published: September 27, 2020, 11:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading