ಬಾದಾಮಿ ಬನಶಂಕರಿ ದೇವಿ ಜಾತ್ರೆ ರದ್ದು; ದೇವಿಗೆ ಕೊರೋನಾ ವಕ್ರದೃಷ್ಟಿ, ದೇಗುಲಕ್ಕೆ ದಿಗ್ಬಂಧನ!

ಭಕ್ತರು ಆನ್ಲೈನ್ ಮೂಲಕವೇ ದರ್ಶನ ಮಾಡಬಹುದು. ಕೊರೋನಾ ಹಿನ್ನೆಲೆ ಜಿಲ್ಲಾಡಳಿತ ಜಾತ್ರೆ ರದ್ದು ಮಾಡಿದೆ, ಭಕ್ತರು ಸಹಕರಿಸಬೇಕು, ಫೆಬ್ರವರಿ 2ರಿಂದ ಎಂದಿನಂತೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅರ್ಚಕ ಮಹೇಶ್ ಪೂಜಾರಿ ತಿಳಿಸಿದ್ದಾರೆ.

ಬಾದಾಮಿ ಬನಶಂಕರಿ ದೇವಾಲಯ.

ಬಾದಾಮಿ ಬನಶಂಕರಿ ದೇವಾಲಯ.

  • Share this:
ಬಾಗಲಕೋಟೆ (ಜನವರಿ 21): ಐತಿಹಾಸಿಕ ಬಾದಾಮಿ ಬನಶಂಕರಿ ದೇವಿ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಕೊರೋನಾ ವಕ್ರದೃಷ್ಟಿ ಬಿದ್ದ ಹಿನ್ನೆಲೆಯಲ್ಲಿ ದೇವಿಗೆ ದಿಗ್ಬಂಧನ ಹಾಕಲಾಗಿದೆ. ಕೊರೋನಾ ಹಿನ್ನಲೆಯಲ್ಲಿ ಪ್ರತಿ ವರ್ಷ ಬನದ ಹುಣ್ಣಿಮೆಯಂದು ನಾಲ್ಕೈದು ಲಕ್ಷಕ್ಕೂ ಹೆಚ್ಚು ಜನ ಸೇರುತ್ತಿದ್ದ ಬಾದಾಮಿ ಬನಶಂಕರಿ ದೇವಿ ಜಾತ್ರೆಯನ್ನು ಜಿಲ್ಲಾಡಳಿತ  ರದ್ದುಗೊಳಿಸಿದೆ. ಜನವರಿ 15ರಿಂದ 28ವರೆಗೆ ಬಾದಾಮಿ ಬನಶಂಕರಿ ದೇವಿ ದೇಗುಲದ ಬಾಗಿಲು ಹಾಕಿ ದಿಗ್ಬಂಧನಗೊಳಿಸಲಾಗಿದೆ. ಇನ್ನು ಭಕ್ತರು ಬರುವುದನ್ನು ನಿರ್ಬಂಧಿಸಲು ರಸ್ತೆಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.

ರಾಜಕೀಯ ಜಾತ್ರೆ, ಪಾದಯಾತ್ರೆಗಿಲ್ಲದ ಕಟ್ಟುನಿಟ್ಟು ದೇವಿ ಜಾತ್ರೆಗೇಕೆ?

ಬಾಗಲಕೋಟೆ ಜಿಲ್ಲೆಯಲ್ಲೇ ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲೊಂದಾಗಿದೆ ಶಕ್ತಿ ದೇವತೆ ಬಾದಾಮಿ ಬನಶಂಕರಿ ದೇವಿ ಜಾತ್ರೆ. ತಿಂಗಳ ಪರ್ಯಂತ ಹಗಲು ರಾತ್ರಿ ನಡೆಯುತ್ತಿದ್ದ ಜಾತ್ರೆಯಲ್ಲಿ ತಂದೆ ತಾಯಿ ಬಿಟ್ಟು ಎಲ್ಲವೂ ಜಾತ್ರೆಯಲ್ಲಿ ಸಿಗುತ್ತಿತ್ತು ಎನ್ನುವ ಮಾತಿದೆ. ಜಿಲ್ಲೆಯಲ್ಲಿ ಕೊರೊನಾ ನೆಪದಲ್ಲಿ ಬಾದಾಮಿ ಬನಶಂಕರಿ ದೇವಿ ಜಾತ್ರೆ ನಿಷೇಧಕ್ಕೆ ಭಕ್ತರಿಗೆ ನೋವು ತಂದಿದೆ. ಜಿಲ್ಲೆಯಲ್ಲಿ ರಾಜಕೀಯ ಜಾ ತ್ರೆಯಲ್ಲಿ ಲಕ್ಷಾಂತರ ಮಂದಿ ಸೇರಿದ್ದಾರೆ. ಅಲ್ಲಿ ಕೊರೋನಾ ಇರದು ಜಾತ್ರೆಗೇಕೆ? ಎನ್ನುವುದು ಭಕ್ತರ ಪ್ರಶ್ನೆ.

ಈಚೆಗೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಬಳಿಯ ಸಚಿವ ಮುರುಗೇಶ್ ನಿರಾಣಿ ಒಡೆತನದ ಕೇದಾರನಾಥ್ ಸಕ್ಕರೆ ಕಾರ್ಖಾನೆ ಉದ್ಘಾಟನೆ, ಎಥೆನಾಲ್ ಉತ್ಪಾದನೆ ಹೆಚ್ಚಿಸುವ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಬಂದಿದ್ದರು‌. ಆಗ 40ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಇನ್ನು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಆಗ್ರಹಿಸಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ವೇಳೆ ಸಾವಿರಾರು ಜನ ಸೇರಿದ್ದರು.

ಇಂತಹ ರಾಜಕೀಯ, ಪಾದಯಾತ್ರೆ ಹೋರಾಟದಂತಹ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಿದರೆ ಕೊರೊನಾ ನಿಯಮ ಇಲ್ಲ.ಆದರೆ ಜಾತ್ರೆಗಳಿಗೆ ಮಾತ್ರ ಕೊರೊನಾ ನಿಯಮವಾ ಎಂದು ಭಕ್ತರು ಸರ್ಕಾರದ ಜಿಲ್ಲಾಡಳಿತದ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ನೀತಿಯನ್ನು ಖಂಡಿಸುತ್ತಿದ್ದಾರೆ.

ಜಾತ್ರಾ ನಿಷೇಧ 5ಕೋಟಿ ನಷ್ಟ:

ಬಾದಾಮಿ ಬನಶಂಕರಿ ದೇವಿ ಜಾತ್ರೆ ಕಲಾವಿದರ ಪಾಲಿಗೆ ಅಕ್ಷಯ ಪಾತ್ರೆ. ವರ್ಷವೀಡಿ ದುಡಿದು ಕೈಸೇರುವ ಹಣಕ್ಕಿಂತ ತಿಂಗಳಲ್ಲೇ ದುಡಿದು ಕಲಾವಿದರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಬಾದಾಮಿ ಬನಶಂಕರಿ ದೇವಿ ಜಾತ್ರೆಯಲ್ಲಿ ಪ್ರತಿ  12ಕ್ಕೂ ಹೆಚ್ಚು ನಾಟಕ ಕಂಪನಿ,ಟೂರಿಂಗ್ ಟಾಕೀಸ್ ಹಾಕಲಾಗುತ್ತಿತ್ತು. ನೂರಾರು ಕಲಾವಿದರು, ಕಾರ್ಮಿಕರು ಹಗಲಿರುಳು ದುಡಿದು ಕೈತುಂಬಾ ಹಣ ಗಳಿಸುತ್ತಿದ್ದರು. ಇನ್ನು ಜಾತ್ರೆಯಲ್ಲಿ ಮಿಠಾಯಿ, ಕಾಯಿ, ಹಣ್ಣು, ಬಟ್ಟೆ, ಮನೆ ಸಾಮಾಗ್ರಿ, ಕಟ್ಟಿಗೆ ಮನೆ ಬಾಗಿಲು ಮಾರಾಟ ಸೇರಿದಂತೆ ಎಲ್ಲ ಬಗೆಯ ವಸ್ತುಗಳ ಮಾರಾಟಕ್ಕೆ ಉತ್ತರ ಕರ್ನಾಟಕ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವ್ಯಾಪಾರಸ್ಥರು ಜಾತ್ರೆಗೆ ಬರುತ್ತಿದ್ದರು.

ಜಾತ್ರೆಗೆ ನೆರೆಯ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಬರುತ್ತಿದ್ದರು. ಈ ಬಾರಿ ಜಾತ್ರೆ ನಿಷೇಧದಿಂದ ಬರೋಬ್ಬರಿ 5ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ.ಇನ್ನು ಹದಿನೈದು ದಿನ ಮುಂಚಿತವಾಗಿ ದೇವಿ ದೇವಸ್ಥಾನ ಬಂದ್ ಮಾಡಿದ್ದು, ದೇಗುಲ ಸುತ್ತಲೂ ಇರುವ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಇದ್ರಿಂದ ನಿತ್ಯ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವ್ಯಾಪಾರಸ್ಥರ ಹೊಟ್ಟೆ ಬರೆ ಬಿದ್ದಂತಾಗಿದೆ. ವ್ಯಾಪಾರ ಮೇಲೆ ಅವಲಂಬಿತವಾಗಿದ್ದ ಕುಟುಂಬಸ್ಥರು ಸಾಲಮಾಡಿ ಜೀವನ ನಡೆಸುತ್ತಿದ್ದಾರೆ.

ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ತಾಲೂಕಾಡಳಿತಕ್ಕೆ ಮನವಿ ಮಾಡಿದ್ರೂ ಸ್ಪಂದಿಸಿಲ್ಲ.ನಮ್ ಜೀವನ ಹೆಂಗ್ ನಡೆಬೇಕ್ರಿ,ನಮಗ್ ವ್ಯಾಪಾರ ಮಾಡಾಕ್ ಅವಕಾಶ ಕೊಡ್ರಿ,ದೇವಿಯೇ ನಮ್ ಜೀವಕ್ಕೆ ಆಧಾರ ದೇವಿ ಜಾತ್ರಿ ಬಂದ್ ಮಾಡಿ, ವ್ಯಾಪಾರಸ್ಥರ ಹೊಟ್ಟೆಗೆ ಮ್ಯಾಲೆ ಹೊಡದಾರೀ,ದೊಡ್ಡ ದೊಡ್ಡ ರಾಜಕೀಯ ಕಾರ್ಯಕ್ರಮ ಮಾಡ್ತಾರೀ, ಜಾತ್ರಿಗೆ ಅಷ್ಟ್ ಕೊರೊನಾ ಐತಿಯೇನ್ರೀ, ದೇವಿ ಕೃಪೆಯಿಂದ ನಮ್ಮ ಸುತ್ತಲಿನ ಹಳ್ಳಿಯಲ್ಲೂ ಕೊರೊನಾ ಬಂದಿಲ್ರೀ,ಈಗ ಜಾತ್ರಿ ಬಂದ್ ಮಾಡ್ಯಾರಾ ನಮ್  ಕಷ್ಟ ಕೇಳೋರ್ಯಾರೀ ವ್ಯಾಪಾರ ಮಾಡಾಕ ಅವಕಾಶ ಕೊಡ್ರೀ ಅಂತ ಕಣ್ಣೀರು ಹಾಕ್ತಾರೆ ತೆಂಗಿನ ಕಾಯಿ ವ್ಯಾಪಾರಸ್ಥೆ ಕಲಾವತಿ ಗಣಾಚಾರಿ.

ಇದನ್ನೂ ಓದಿ: ಬೆಳಗಾವಿಗೆ ಲಗ್ಗೆ ಹಾಕಲು ಶಿವಸೈನಿಕರ ಪ್ರಯತ್ನ; ಶಿನ್ನೊಳ್ಳಿ ಗಡಿಭಾಗದಲ್ಲಿ ಪೊಲೀಸರೊಂದಿಗೆ ತಿಕ್ಕಾಟ

ಜನವರಿ 28ಕ್ಕೆ ಆನ್​ಲೈನ್ ಮೂಲಕ ದೇವಿ ದರ್ಶನಕ್ಕೆ ಅವಕಾಶ!

ಬಾದಾಮಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಜನೇವರಿ 20ರಿಂದ ಘಟ ಸ್ಥಾಪನೆಯಿಂದ ಆರಂಭವಾಗಿ ಜನೇವರಿ 28ರಂದು ಮಹಾರಥೋತ್ಸವ ನಡೆಯುವ ಮೂಲಕ ಸಮಾಪ್ತಿ ಆಗುತ್ತಿತ್ತು.ಆದರೆ ಜಾತ್ರೆ ನಿಷೇಧ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಪೂಜೆ, ಆಚರಣೆಗೆ ಯಾವುದೇ ನಿರ್ಬಂಧ ಜಿಲ್ಲಾಡಳಿತ ಹೇರಿಲ್ಲ. ಜ,28ರಂದು ಮಹಾರಥೋತ್ಸವದಂದು ದೇವಿ ದರ್ಶನಕ್ಕೆ ಆನ್ಲೈನ್ ಮೂಲಕ ವ್ಯವಸ್ಥೆ ಮಾಡಲಾಗುವುದು.

ಭಕ್ತರು ಆನ್ಲೈನ್ ಮೂಲಕವೇ ದರ್ಶನ ಮಾಡಬಹುದು. ಕೊರೋನಾ ಹಿನ್ನೆಲೆ ಜಿಲ್ಲಾಡಳಿತ ಜಾತ್ರೆ ರದ್ದು ಮಾಡಿದೆ, ಭಕ್ತರು ಸಹಕರಿಸಬೇಕು, ಫೆಬ್ರವರಿ 2ರಿಂದ ಎಂದಿನಂತೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅರ್ಚಕ ಮಹೇಶ್ ಪೂಜಾರಿ ತಿಳಿಸಿದ್ದಾರೆ.
Published by:MAshok Kumar
First published: