ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗಗಳ ಮೀಸಲಾತಿ ನೀಡಲು ಸಂಘಟನೆ ವಿರೋಧ

ಹಿಂದುಳಿದ ವರ್ಗಕ್ಕೆ ನೀಡಲಾಗುವ ಮೀಸಲಾತಿಯನ್ನ ಪಂಚಮಸಾಲಿ ಸಮುದಾಯಕ್ಕೆ ನೀಡಬಾರದು ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಗೌರವಾಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಒತ್ತಾಯಿಸಿದ್ದಾರೆ.

ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯಿಂದ ಸುದ್ದಿಗೋಷ್ಠಿ

ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯಿಂದ ಸುದ್ದಿಗೋಷ್ಠಿ

  • Share this:
ಕೋಲಾರ: ಸಮುದಾಯಗಳ ಮೀಸಲಾತಿ ನಿಗದಿ ಮಾಡುವ ನೀಡುವ ಜವಾಬ್ದಾರಿಯನ್ನ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ನೀಡಲು ಮುಂದಾಗಿದ್ದು, ಇದನ್ನ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಂಘಟನೆ ಸ್ವಾಗತಿಸಿದೆ. ಕೋಲಾರ ಪತ್ರಕರ್ತರ ಭವನದಲ್ಲಿ ರಾಜ್ಯದ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಅಧ್ಯಕ್ಷ ಮಾಜಿ ಎಮ್‍ಎಲ್‍ಸಿ ವೇಣುಗೋಪಾಲ್, ಎಮ್‍ಎಲ್‍ಸಿ ರಮೇಶ್, ‘ಮುಖ್ಯಮಂತ್ರಿ’ ಚಂದ್ರು, ಹಾಗು ದ್ವಾರಕಾನಾಥ್, ಎಲ್. ಎ. ಮಂಜುನಾಥ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಮೊದಲು ಮಾತನಾಡಿದ ಅಧ್ಯಕ್ಷ ವೇಣುಗೋಪಾಲ್, ರಾಜ್ಯದಲ್ಲಿ ಮೀಸಲಾತಿಯನ್ನೇ ಕಾಣದ ಜಾತಿಗಳು ನೂರಾರು ಇದ್ದು, ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಕಾಂತರಾಜು ಆಯೋಗ ನೀಡಿರುವ ಸಾಮಾಜಿಕ ಶೈಕ್ಷಣಿಕ ಜಾತಿ ಗಣತಿ ವರದಿ ಜಾರಿಗೆ ಒತ್ತಾಯಿಸಿದರು. ಇನ್ನು ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗದ ಮೀಸಲಾತಿ ನೀಡಬಾರದು ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವಾಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕರು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು, ವರದಿಯನ್ನ ಇನ್ನೂ ಸರ್ಕಾರ ಜಾರಿಗೊಳಿಸಿಲ್ಲ. ಹೀಗಾಗಿ ಕಾಂತರಾಜು ಆಯೋಗದ ಸಾಮಾಜಿಕ ಶೈಕ್ಷಣಿಕ ಜಾತಿ ಗಣತಿಯ ವರದಿಯನ್ನ ಸರ್ಕಾರ ಜಾರಿ ಮಾಡುವಂತೆ ಅಧ್ಯಕ್ಷ ವೇಣುಗೋಪಾಲ್ ಆಗ್ರಹಿಸಿದರು. ಈಗಿನ ರಾಜ್ಯ ಸರ್ಕಾರ ಸಮೀಕ್ಷಾ ವರದಿಯನ್ನ ಜಾರಿ ಮಾಡದೆ ಮೀನಾಮೇಷ ಎಣಿಸುತ್ತಿದ್ದು, ಸರ್ಕಾರ ನ್ಯಾಯಾಲಯದಲ್ಲೂ ವರದಿ ಜಾರಿ ಮಾಡುವ ಅಗತ್ಯವಿಲ್ಲ ಎನ್ನುವ ಅಪಿಡವಿಟ್ ಸಲ್ಲಿಸಿದೆ ಎಂದು ಎಮ್‍ಎಲ್‍ಸಿ ರಮೇಶ್ ಆರೋಪಿಸಿದರು.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ರಾಜ್ಯದಲ್ಲಿ ಪ್ರಬಲ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿರುವ ಅಧಿಕಾರಿ ದುರುಪಯೋಗ ಮಾಡಿಕೊಂಡು ಹಿಂದುಳಿದ ಮಾರ್ಗಗಳನ್ನ ತುಳಿಯುವ ಕೆಲಸ ಆಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅತಿ ಹಿಂದುಳಿದ ಜಾತಿಗಳು ತುಳಿತಕ್ಕೆ ಒಳಗಾಗುವ ದಿನಗಳು ಮುಂದುವರೆದಿದೆ. ಇನ್ನಾದರೂ ಅಗತ್ಯವಿರುವ ಜಾರಿಗಳಿಗಷ್ಟೇ ಪ್ರಾಮುಖ್ಯತೆ ಸಿಗಲಿ. ಹಾಗಾಗಿ ಮೊದಲು ಜಾತಿಗಣತಿ ವರದಿ ಜಾರಿಯಾಗಲಿ ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಇದನ್ನೂ ಓದಿ: Blast- ಬೆಂಗಳೂರಿನಲ್ಲಿ ನಿಗೂಢ ಸ್ಫೋಟ; ಮನೆಗೆ ತಂದಿದ್ದ ಹೊಸ ಫ್ರಿಜ್ ಬ್ಲಾಸ್ಟ್ ಆಯಿತೇ?

ಇನ್ನು ಜಾಗೃತ ವೇದಿಕೆಯಲ್ಲಿ ಎಲ್ಲಾ ಮುಖಂಡರು ತಮ್ಮದು ಪಕ್ಷಾತೀತ ಹೋರಾಟ ಎಂದು ಹೇಳಿದರಾದರೂ ಎಲ್ಲರೂ ಕೂಡ ಕಾಂಗ್ರೆಸ್ ಪಕ್ಷದೊಂದಿಗೆ ಜೋಡಿಸಿಕೊಂಡವರೇ ಆಗಿದ್ದಾರೆ. ಸಂಘಟನೆಯ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರೇ ಹೆಚ್ಚಿದ್ದು, ಹಿಂದಿನ ಸಮ್ಮಿಶ್ರ ಸರ್ಕಾರದಲ್ಲೂ ವರದಿ ಜಾರಿಗೆ ಎರಡು ಪಕ್ಷಗಳು ಕ್ರಮ ಕೈಗೊಂಡಿಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಸಮ್ಮಿಶ್ರ ಸರ್ಕಾರದಲ್ಲಿ ಏನೂ ಕೆಲಸ ನಡೆಯುವ ಪರಿಸ್ಥಿತಿ ಇರಲಿಲ್ಲ ಎಂದು ‘ಮುಖ್ಯಮಂತ್ರಿ’ ಚಂದ್ರು ಪ್ರತಿಕ್ರಿಯೆ ನೀಡಿದರು. ಮುಂದಿನ ದಿನದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ವರದಿ  ಜಾತಿಮಾಡುವಂತೆ ಜನರ ಗಮನ ಸೆಳೆದು ಹೋರಾಟ ನಡೆಸುವುದಾಗಿ ಈ ಮುಖಂಡರು ತಿಳಿಸಿದರು.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರದಲ್ಲಿ ಹೊಲಸು ಪದಗಳ ಬಳಕೆ ಬೇಡ:

ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ, ಬಿಜೆಪಿ ನಾಯಕರು ಮಾತನಾಡುವಾಗ, ಮಾತಿನ ಮೇಲೆ ಹಿಡಿತ ಇರಬೇಕೆಂದು ಕೋಲಾರದಲ್ಲಿ ಕಾಂಗ್ರೆಸ್ ಮುಖಂಡ ಮುಖ್ಯಮಂತ್ರಿ ಚಂದ್ರು ಹೇಳಿಕೆ ನೀಡಿದ್ದಾರೆ. ಕೋಲಾರದಲ್ಲಿ ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ನಾಯಕರ ಹೆಸರು ಇಡುವಾಗ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಬಿಜೆಪಿ ಸರ್ಕಾರ ಹಿಂದೆ ಇದ್ದಾಗಲೂ ಈ ಬಗ್ಗೆ ಮಾತನಾಡಿಲ್ಲ. ಈ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಮುಜುಗರ ಆಗುವಂತೆ ಬಿಜೆಪಿ ನಾಯಕರು ಮಾತನಾಡಬಾರದು. ಹೆಸರು ತೆಗೆದುಹಾಕೋದಾದರೆ ಎಲ್ಲ ನಾಯಕರ ಹೆಸರನ್ನು ತೆಗೆದುಹಾಕಲಿ. ಇಲ್ಲದಿದ್ರೆ ಅದರ ಪಾಡಿಗೆ ಇರಲಿ ಎಂದು ಬಿಜೆಪಿ ನಾಯಕರ ವಿರುದ್ದ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.
Published by:Vijayasarthy SN
First published: