ಚಿಕ್ಕಮಗಳೂರು(ಸೆ.18): ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಓರ್ವ ವ್ಯಕ್ತಿಯಲ್ಲ ಅವರೊಂದು ಶಕ್ತಿ ಎಂದು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮಠದ ರಂಭಾಪುರಿ ಶ್ರೀ ಪ್ರಸನ್ನ ವೀರಸೋಮೇಶ್ವ ಶಿವಕುಮಾರ ಶಿವಚಾರ್ಯ ಸ್ವಾಮೀಜಿ ಪ್ರಧಾನಿ ನರೇಂದ್ರ ಮೋದಿಯನ್ನ ಹಾಡಿ ಹೊಗಳಿದ್ದಾರೆ.
ಶುಕ್ರವಾರ ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ಮೋದಿಗೆ ಶುಭ ಹಾರೈಸಿದ ಜಗದ್ಗುರುಗಳು, ನರೇಂದ್ರ ಮೋದಿಯವರು ಒಬ್ಬ ವ್ಯಕ್ತಿಯಲ್ಲ. ಒಂದು ಮಹಾನ್ ಶಕ್ತಿ ಎಂದಿದ್ದಾರೆ. ದೇಶವನ್ನು ಸುಭದ್ರವಾಗಿ, ಸಮೃದ್ಧವಾಗಿ ಕಟ್ಟಬೇಕೆಂಬ ಅವರ ಅಭಿಲಾಷೆಯನ್ನ ಮರೆಯುವಂತಿಲ್ಲ. ದೇಶದ ಜನರ ಆರ್ಥಿಕ ಸ್ಥಿತಿಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ಜೊತೆಗೆ ಬಡತನವನ್ನ ಸಂಪೂರ್ಣವಾಗಿ ನಿರ್ನಾಮ ಮಾಡಬೇಕೆಂಬ ಅವರ ಮಹತ್ವಾಕಾಂಕ್ಷೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಯಾರ ಹೊಗಳಿಕೆಗೂ ಹಿಗ್ಗದೆ, ಯಾರ ತೆಗಳಿಕೆಗೂ ಕುಗ್ಗದೆ ಅವರ ದೃಷ್ಟಿಯಲ್ಲಿ ಇರುವಂತಹ ಒಳ್ಳೆಯ ಕೆಲಸ ಕಾರ್ಯಗಳನ್ನ ಅತ್ಯಂತ ಪ್ರಾಮಾಣಿಕವಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ನಾಡಿಗೆ ಅನ್ನವನ್ನ ನೀಡುವಂತಹ ರೈತರ ಬಾಳು ಉಜ್ವಲವಾಗಬೇಕು ಎಂಬಂತಹ ಉದ್ದೇಶದಿಂದ ಕೃಷಿ ಕ್ಷೇತ್ರದಲ್ಲಿ ಹಲವಾರು ಮಹತ್ತರ ಬದಲಾವಣೆಗಳನ್ನು ತರುವಂತಹ ಕೆಲಸ ಮಾಡುತ್ತಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡ ಒಂದು ವಿಶಿಷ್ಟವಾದ ರೀತಿಯಲ್ಲಿ ಭಾರತೀಯ ಸಂಸ್ಕೃತಿ, ಆದರ್ಶಗಳು ಉಳಿದು ಬೆಳೆದು ಬರಲಿಕ್ಕೆ ಅವರು ಕೈಗೊಂಡ ನಿರ್ಣಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಾಡಿನಲ್ಲಿ ಎಲ್ಲ ವರ್ಗದ ಜನರು ಪ್ರೀತಿ-ಪ್ರೇಮ-ವಿಶ್ವಾಸ-ಸಾಮರಸ್ಯದಿಂದ ಬಾಳಿ ಸದೃಢವಾದ ಭಾರತವನ್ನು ಕಟ್ಟುವಂತಹ ಅವರ ಅಭಿಲಾಷೆಗೆ ನಾವೆಲ್ಲರೂ ಬದ್ಧರಾಗಿ ಕೈಜೋಡಿಸಿ ಅವರ ಬಲವನ್ನು ಬೆಳೆಸಬೇಕು ಎಂದು ನಾಡಿಗೆ ಜನರಲ್ಲಿ ಮನವಿ ಮಾಡಿದ್ದಾರೆ. ಮುಂದೊಂದು ದಿನ ಜನ್ಮ ಅಮೃತ ಮಹೋತ್ಸವ ಹಾಗೂ ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಅವರದಾಗಲಿ ಎಂದು ಶುಭ ಹಾರೈಸಿದ್ದಾರೆ.
51 ಅಡಿ ಎತ್ತರ ಜಗದ್ಗುರು ರೇಣುಕಾಚಾರ್ಯರ ಪ್ರತಿಮೆ ನಿರ್ಮಾಣ
100 ಟನ್ ತೂಕವುಳ್ಳ 20 ಅಡಿ ಉದ್ದವಿರೋ ಬೃಹತ್ ಶಿಲೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಮಠದ ಆವರಣ ತಲುಪಿದೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಆಂಧ್ರಪ್ರದೇಶದ ಮಡಕಶಿರಾ ಕಲ್ಲು ಕ್ವಾರಿಯಿಂದ ಈ ಬಹೃತ್ ಶಿಲೆ ಮಠದ ಆವರಣಕ್ಕೆ ಆಗಮಿಸಿದೆ. ಸೆಪ್ಟೆಂಬರ್ 10 ರಂದು ಆಂಧ್ರಪ್ರದೇಶದ ಮಡಕಶಿರಾದಿಂದ 100 ಚಕ್ರದ ಲಾರಿಯಲ್ಲಿ ಹೊರಟ ಈ ಶಿಲೆ 5 ದಿನಗಳ ಬಳಿಕ ಮಠಕ್ಕೆ ಆಗಮಿಸಿದೆ. ಇದರ ತೂಕ ಸುಮಾರು 100 ಟನ್ ಇದ್ದು, 20 ಅಡಿ ಉದ್ದವಿದೆ. ಸಾಗಾಣೆ ಕಾರ್ಯದಲ್ಲಿ 12 ಕಾರ್ಮಿಕರು ತೊಡಗಿದ್ದಾರೆ ಎಂದು ಕಲ್ಲು ಸಾಗಾಟದ ಜಾವಾಬ್ದಾರಿ ಹೊತ್ತಿದ್ದ ಬೆಂಗಳೂರು ಮೂಲದ ಶ್ರೀಧರಬಾಬು ತಿಳಿಸಿದ್ದಾರೆ.
ಆಂಧ್ರದಿಂದ ಪಾವಗಡ, ಮಧುಗಿರಿ, ತುಮಕೂರು, ತಿಪಟೂರು, ಶಿವಮೊಗ್ಗ, ಎನ್.ಆರ್.ಪುರ ಮಾರ್ಗವಾಗಿ ಬಂದು ಬಾಳೆಹೊನ್ನೂರು ತಲುಪಿದೆ. ಶಿಲಾಮೂರ್ತಿ ನಿರ್ಮಾಣಕ್ಕೆ ಬೇಕಾಗಿರುವ ಇನ್ನೂ 2 ಶಿಲೆಗಳು ಶೀಘ್ರವೇ ಮಠಕ್ಕೆ ಬರಲಿವೆ. ಯಂತ್ರಗಳ ಬಳಕೆಯಿಂದ ಕಲ್ಲನ್ನ ಅನ್ ಲೋಡ್ ಮಾಡಲು ಮುಂದಾದರೆ ಕಲ್ಲಿಗೆ ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ, 16 ಕಾರ್ಮಿಕರು ಬಳಸಿ ಲಾರಿಯಿಂದ ಅನ್ ಲೋಡ್ ಮಾಡಲಾಗುವುದು ಎಂದು ಶ್ರೀಧರಬಾಬು ಮಾಹಿತಿ ನೀಡಿದ್ದಾರೆ.
ಈ ಶಿಲೆಯನ್ನ ನೋಡಲು ಸುತ್ತಮುತ್ತಲಿನ ಜನ ಕೂಡ ದೇವಾಲಯದ ಆವರಣದಲ್ಲಿ ಜಮಾಯಿಸಿದರು. ರಂಭಾಪುರಿ ಮಠದ ಆವರಣದಲ್ಲಿ 8 ಕೋಟಿಗೂ ಅಧಿಕ ವೆಚ್ಚದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ನಿರ್ಮಾಣಗೊಳ್ಳಲಿದೆ. ಇನ್ನು ಬೃಹತ್ ಶಿಲೆ ಮಠದ ಆವರಣಕ್ಕೆ ಆಗಮನ ಹಿನ್ನೆಲೆ ರಂಭಾಪುರಿ ಶ್ರೀಗಳು ಶಿಲೆಗೆ ಪೂಜೆ ಸಲ್ಲಿಸಿ ಶಿಲೆಯನ್ನ ಬರಮಾಡಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ