B Sriramulu- ನೆಹರೂ, ವಾಜಪೇಯಿ ಅವರನ್ನ ಟೀಕಿಸುವುದು ಸರಿಯಲ್ಲ: ಬಿ ಶ್ರೀರಾಮುಲು

ಈಗಿನ ರಾಜಕೀಯ ಕೆಸರೆರಚಾಟದಲ್ಲಿ ಜವಾಹರಲಾಲ್ ನೆಹರೂ, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ನಾಯಕರ ಹೆಸರುಗಳನ್ನ ಕೆದಕಿ ಟೀಕಿಸಲಾಗುತ್ತಿದೆ. ಈ ಬೆಳವಣಿಗೆ ಬಗ್ಗೆ ಸಾರಿಗೆ ಸಚಿವ ಬಿ ಶ್ರೀರಾಮುಲು ಬೇಸರ ವ್ಯಕ್ತಪಡಿಸಿದ್ದಾರೆ.

ಬಿ ಶ್ರೀರಾಮುಲು

ಬಿ ಶ್ರೀರಾಮುಲು

  • Share this:
ಚಿತ್ರದುರ್ಗ: ನನಗೆ ಸಚಿವ ಸಂಪುಟದಲ್ಲಿ ನೀಡಿರುವ ಖಾತೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಸರ್ಕಾರ ಕೊಟ್ಟ ಯಾವುದೇ ಜವಾಬ್ದಾರಿ, ಜನಸೇವೆ ಮುಖ್ಯ. ಜನಸೇವೆ ಬಿಟ್ಟು ಬೇರೆ ಯಾವುದೇ ವಿಚಾರವಿಲ್ಲ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ. ರಾಮುಲುಗೆ ಯಾವುದೇ ಸಣ್ಣ ಇಲಾಖೆ ಕೊಡಲಿ ಕಾಯಾ ವಾಚ ಮನಸ ಕೆಲಸ ಮಾಡುತ್ತೇನೆ. ನನಗೆ ಈ ಇಲಾಖೆ, ಆ ಇಲಾಖೆ ಕೊಡಿ ಎಂದು ಅಪ್ಲಿಕೇಷನ್ ಹಾಕಿಕೊಂಡು ಕೇಳುವ ಮನುಷ್ಯ ನಾನಲ್ಲ. ಚುನಾವಣೆಯಲ್ಲಿ ಕಷ್ಟಪಡುವುದು, ಶ್ರಮಪಟ್ಟು ಗೆಲ್ಲಿಸೋದು, ಸರ್ಕಾರ ಬರೋಕೆ ಪ್ರಯತ್ನದ ಕಲಸ ಮಾಡುತ್ತೇನೆ. ಸರ್ಕಾರ ಬಂದಮೇಲೆ ಬೇರೆ ಬೇರೆಯವರ ಜೊತೆ ಸೇರಿ ಯಾರ ಹಿಂದೆಯೂ ಹೋಗೊ ಮನುಷ್ಯ ನಾನಲ್ಲ ಎಂದು ಅವರು ತಿಳಿಸಿದ್ದಾರೆ.

ಇಲ್ಲಿ ನಿನ್ನೆ ಧ್ವಜಾರೋಹಣ ನಡೆಸಿದ ಬಳಿಕ ಮಾತನಾಡಿದ ಅವರು, ಮೇರು ನಾಯಕರಾದ ನೆಹರು, ವಾಜಪೇಯಿ ಅವರಂಥವರ ಹೆಸರಲ್ಲಿ ಟೀಕೆ‌ ಮಾಡುವುದನ್ನು ನಿಲ್ಲಿಸಬೇಕು ಎಂದು ಕರೆ ನೀಡಿದರು. ಇತ್ತೀಚೆಗೆ ನೆಹರು, ವಾಜಪೇಯಿ ಅವರ ಬಗ್ಗೆ ಮಾತಿನ ಘರ್ಷಣೆಗಳು ನಡೆಯುತ್ತಿವೆ. ಇದಕ್ಕೆ ಒಂದು ವಿಚಾರ ಹೇಳಿ ಅಂತ್ಯ ಹಾಡಬೇಕಿದೆ. ಯಾಕಂದ್ರೆ ನೆಹರು, ವಾಜಪೇಯಿ ಈ ದೇಶದ ಹಿರಿಮೆಯ ನಾಯಕರು. ಇಬ್ಬರೂ ಪ್ರಧಾನ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಮುರಾರ್ಜಿ ದೇಸಾಯಿಯವರ ಸಚಿವ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿಯವರು, ನೆಹರು ಪುತ್ಥಳಿಯನ್ನ ದಿನ ನಿತ್ಯ ನೋಡುತ್ತಿದ್ದರು. ಒಂದು ದಿನ ನೆಹರು ಅವರ ಪುತ್ಥಳಿ ಕಣ್ಮರೆಯಾಗುತ್ತದೆ. ಆಗ ಅಧಿಕಾರಿಗಳನ್ನ ಕರೆಸಿ ಕೇಳಿದಾಗ ಸ್ಥಳ ಬದಲಾವಣೆ ಮಾಡಿರೋದಾಗಿ ಹೇಳಿದ್ದರು. ಆಗ ಹಠದಿಂದ ಆ ಪುತ್ಥಳಿಯನ್ನ ಮತ್ತೆ ಅದೇ ಸ್ಥಳದಲ್ಲಿ ಸ್ಥಾಪಿಸಿದ್ದರು. ಈಗ ಇಲ್ಲಿ ಹೇಳಿಕೆಗಳನ್ನ ನೋಡುತ್ತಿದ್ದರೆ, ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಭಾವಿಸಬೇಕಾಗುತ್ತದೆ. ಒಂದು ಕಡೆ ನೆಹರು ಬಗ್ಗೆ, ಮತ್ತೊಂದು ಕಡೆ ವಾಜಪೇಯಿ ಬಗ್ಗೆ ಹೀನವಾಗಿ ಮಾತನಾಡುತ್ತಿದ್ದಾರೆ ಎಂದು ಬಿ ಶ್ರೀರಾಮುಲು ಬೇಸರ ವ್ಯಕ್ತಪಡಿಸಿದರು.

ಭಾರತದಲ್ಲಿ ಜವಾಹರ ಲಾಲ್ ನೆಹರೂ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಟಾಲೆಸ್ಟ್ ಲೀಡರ್​ಗಳು. ಅಂಥವರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಮುಂದಿನ ಪೀಳಿಗೆಗೆ, ರಾಜಕಾರಣದಲ್ಲಿ ಬರೋ ವ್ಯಕ್ತಿಗಳಿಗೆ, ನಾವು ಒಂದು ಶಕ್ತಿ, ಮಾರ್ಗದರ್ಶನ ಮಾಡಬೇಕಾಗುತ್ತದೆ. ನಾವು ಯಾರನ್ನ ಬೇಕಾದರೂ ಟೀಕೆ ಮಾಡಬಹುದು ಅನ್ನೋ ಸಂಪ್ರದಾಯ ರೀತಿಯಲ್ಲಿ ನೀವೇ ಇನ್ನೊಬ್ಬರನ್ನ ಟೀಕೇ ಮಾಡೋದ್ರಿಂದ ರಾಜಕಾರಣದಲ್ಲಿ ಯಾವುದರ ಮೌಲ್ಯಗಳು ಉಳಿಯಲ್ಲ. ಹಾಗಾಗಿ ಆ ವಿಷಯವನ್ನ ಅವರು ಇವರು ಇಬ್ಬರೂ ಮಾತನಾಡೋದನ್ನ ನಿಲ್ಲಿಸಬೇಕು. ನೆಹರು, ವಾಜಪೇಯಿ ಇಬ್ಬರೂ ಈಗ ಇಲ್ಲ, ಹೀಗಿರುವಾಗ ಅವರಿಬ್ಬರನ್ನ ರಾಜಕಾರಣಕ್ಕಾಗಿ ಎಳೆದು ತರುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಬಿ ಶ್ರೀರಾಮುಲು ಹೇಳಿದರು. ಈ ಮೂಲಕ ಅವರು ಬಿಜೆಪಿ ಕಾಂಗ್ರೆಸ್ ನಾಯಕರ ಪರಸ್ಪರ ಟೀಕೆಗಳಿಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಲ್ಲದೇ ವಾಜಪೇಯಿ, ನೆಹರು ಬಗೆಗಿನ ಚರ್ಚೆಯನ್ನ ಎರಡೂ ಕಡೆಯವರು ನಿಲ್ಲಿಸಬೇಕು ಎಂದು ಕೇಳಿಕೊಂಡರು.

ಇದನ್ನೂ ಓದಿ: ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ, ಏನು ಹೇಳ್ತಾರೋ ಅದು ಉಲ್ಟಾ ಆಗುತ್ತೆ - ಸಿ.ಟಿ. ರವಿ

ಇನ್ನು, ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳನ್ನ ಕಂಡು ಅಧಿಕಾರ ಕಳೆದುಕೊಂಡ ಜನರು ಸರ್ಕಾರ ಪತನ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಅವರು ಸರ್ಕಾರ ಹೋಗುತ್ತದೆ, ನಾವು ಅಧಿಕಾರಕ್ಕೆ ಬರ್ತೆವೆ, ಮುಖ್ಯಮಂತ್ರಿ ಆಗ್ತೆವೆ ಎಂಬ ಹಗಲು ಕನಸು ಕಾಣುತ್ತಿದ್ದಾರೆ. ಆದರೆ ಎಂಥದ್ದೇ ಪರಿಸ್ಥಿತಿ ಇದ್ದರೂ 2023 ರ ಚುನಾವಣೆ ಬಳಿಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಇವತ್ತು ನಮ್ಮದೇ, ನಾಳೆಯೂ ನಮ್ಮದೇ ಸರ್ಕಾರ ಇರುತ್ತದೆ. ಈಗ ಹಗಲುಗನಸು ಕಾಣುತ್ತಿರುವ ಬಹಳಷ್ಟು ಮಂದಿ ಕಾಂಗ್ರೇಸ್ ನಾಯಕರು ಅದನ್ನ ನಿಲ್ಲಿಸಬೇಕು ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ವ್ಯಂಗ್ಯ ಮಾಡಿದರು.

ತಮ್ಮ ಪಕ್ಷದ ಕೆಲವರು ಸಚಿವ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನಗೊಂಡ ಬಗ್ಗೆ ಮಾತನಾಡಿದ ಶ್ರೀರಾಮುಲು, ಕೆಲವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಅವರಿಗೂ ಬೇರೆ ಬೇರೆ ಸಮಯದಲ್ಲಿ ಬಿಜೆಪಿ ಅವಕಾಶ ಮಾಡಿಕೊಡುತ್ತದೆ. ಅದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ ಎಂದರು. ಇನ್ನು, ಚಿತ್ರದುರ್ಗದ ಕೆಲ ಬಿಜೆಪಿ ಶಾಸಕರು ತಾನು ಕರೆದ ಸಭೆಗೆ ಗೈರಾಗಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಆ ಶಾಸಕರು ಎಲ್ಲಿ ಹೋಗಿದ್ದಾರೆ ಎಂದು ಅವರನ್ನೇ ಕೇಳಿ ಎಂದು ನಕ್ಕು ವ್ಯಂಗ್ಯ ಮಾಡಿದರು.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: