ಚಿಕ್ಕೋಡಿ: ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣ ನಡೆದ ಬೆನ್ನಲ್ಲೇ ರಾಜಕೀಯ ಕೆಸರೆರಚಾಟ ಕೂಡ ನಡೆದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿವೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀ ರಾಮಲು ನೇರವಾಗಿ ಕಾಂಗ್ರೇಸ್ ಮೇಲೆ ವಾಗ್ದಾಳಿ ಮಾಡಿದ್ದು, ಘಟನೆಯಲ್ಲಿ ಕಾಂಗ್ರೆಸ್ನ ಕೆಲವು ನಾಯಕರು ಭಾಗಿಯಾಗಿದ್ದಾರೆ. ಹಿಂಸಾಚಾರ ನಡೆಸಿದವರು ರೈತರಲ್ಲ ಬದಲಿಗೆ ಕಾಂಗ್ರೆಸ್ನವರೇ ಕಾರಣ ಎಂದು ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ 17 ಕೋಟಿ ರೂ ವೆಚ್ಚದಲ್ಲಿ ಶಾಲೆ ನಿರ್ಮಾಣದ ಶಾಲೆ ಉದ್ಘಾಟನೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈತರ ವಿಚಾರದಲ್ಲಿ ನಮಗೆ ಗೌರವ ಇದೆ. ರೈತರು ಯಾರು ಇಂತಹ ಗಲಾಟೆ ಮಾಡಿಲ್ಲ. ಮೊನ್ನೆಯ ಘಟನೆಯಲ್ಲಿ ಕಾಂಗ್ರೆಸ್ನ ಕೆಲ ನಾಯಕರು ರೈತರ ಸೋಗಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಕುಟುಕಿದ್ದಾರೆ.
ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ನವರಿಗೆ ರೈತರ ನೆನಪು ಇರಲಿಲ್ಲ. ಇವರಿಗೆ ಇವತ್ತು ರೈತರು ನೆನಪಾಗುತ್ತಿದ್ದಾರೆ. ರೈತರಿಗೆ ಅನೂಕುಲ ಆಗಲಿ ಎಂದು ಮೋದಿ ಸರ್ಕಾರ ಕಾನೂನು ರಚನೆ ಮಾಡಿದೆ. ಅದರಲ್ಲಿ ಲೋಪಗಳಿದ್ದರೆ ಅದನ್ನ ಕೂತು ಮಾತನಾಡಿಕೊಳ್ಳಬೇಕು. ಆದ್ರೆ ಕಾಂಗ್ರೇಸ್ ಅದನ್ನ ಮಾಡುತ್ತಿಲ್ಲ. ಬದಲಿಗೆ, ಸರಕಾರಕ್ಕೆ ಕೆಟ್ಟು ಹೆಸರು ತರಲು ಕಾಂಗ್ರೆಸ್ ರೈತರನ್ನು ಪ್ರಚೋದಿಸುತ್ತಿದೆ ಎಂದು ಶ್ರೀರಾಮುಲು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: ವಿಧಾನಮಂಡಲ ಅಧಿವೇಶನ ಪ್ರಾರಂಭ; ರಾಜ್ಯಪಾಲರ ಭಾಷಣದ ಹೈಲೈಟ್ಸ್
ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುವ ಹಿನ್ನೆಲೆ ಕಾಂಗ್ರೆಸ್ ಈ ರೀತಿ ರೈತರನ್ನು ಪ್ರಚೋದಿಸುತ್ತಿದೆ. ಚುನಾವಣೆ ಎದುರಿಸಲು ಕಾಂಗ್ರೇಸ್ ಬಳಿ ಮುಖ ಇಲ್ಲ, ವಿಷಯ ಇಲ್ಲ. ಹಾಗಾಗಿ ರೈತರ ಹೆಸರು ಹೇಳಿಕೊಂಡು ಹೋರಾಟದ ಮೂಲಕ ಹೋಗಲು ಷಡ್ಯಂತ್ರ ನಡೆಸುತ್ತಿದೆ ಎಂದಿದ್ದಾರೆ.
ಡಿ ಕೆ ಶಿವಕುಮಾರ್ ಮಾತಿಗೆ ತಿರುಗೇಟು ನೀಡಿರುವ ಶ್ರೀ ರಾಮುಲು, ಡಿ ಕೆ ಶಿವಕುಮಾರ್ ಒಂದು ದಿನವೂ ದೆಹಲಿಗೆ ಹೋಗಿಲ್ಲ. ರೈತರ ಹೋರಾಟ ನೋಡಿಲ್ಲ. ಆದರೂ ಇಂದು ರೈತರ ಪರ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ನವರು ಹತಾಶರಾಗಿ ಈ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ರೈತರ ಜೊತೆ 11 ಸಭೆ ಮಾಡಿದ್ದಾರೆ. ರೈತರು ಸಮಾಧಾನದಿಂದಲೇ ಹೋಗಿದ್ದಾರೆ. ಸದ್ಯ ನಿರುದ್ಯೋಗಿಗಳಾಗಿರುವ ಕಾಂಗ್ರೆಸ್ ನಾಯಕರು ಹತಾಶೆಯಿಂದ ರೈತರಂತೆ ಬಿಂಬಿಸಿಕೊಂಡು ಪ್ರಚೋದನೆ ಮಾಡಿ ಈ ರೀತಿಯ ಗಲಾಟೆಗಳನ್ನ ಮಾಡುತ್ತಿದ್ದಾರೆ. ದೆಹಲಿಯಲ್ಲಿ ರೈತರ ಗಲಾಟೆ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಚ್ಚರಿಸಿದ್ದಾರೆ.
ಇದನ್ನೂ ಓದಿ: MC Managuli Death: ಶಾಸಕ ಎಂ.ಸಿ ಮನಗೂಳಿ ಇನ್ನಿಲ್ಲ; ಗ್ರಾಮ ಸೇವಕರಾಗಿದ್ದ ಮನಗೂಳಿ ಮುತ್ಯಾ ರಾಜಕೀಯ ಜೀವನ ಇಲ್ಲಿದೆ
ಒಟ್ಟಿನಲ್ಲಿ ಗಣರಾಜ್ಯೋತ್ಸವದ ದಿನದಂದೇ ಹಿಂಸಾಚಾರ ನಡೆಸಿ ಕೆಂಪು ಕೋಟೆಯ ಮೇಲೆ ಬೇರೆ ಧ್ವಜವನ್ನು ಹಾರಿಸಿದ್ದು ರೈತರ ಈ ಕ್ರಮ ತೀವ್ರ ಟೀಕೆಗೆ ಗುರಿಯಾಗಿದೆ. ಇನ್ನೊಂದೆಡೆ ರಾಜಕೀಯ ಕೆಸರೆರೆಚಾಟ ಕೂಡ ಆರಂಭಿವಾಗಿದ್ದು ಶ್ರೀ ರಾಮಲು ಆರೋಪಕ್ಕೆ ಕಾಂಗ್ರೇಸ್ ಯಾವ ರೀತಿ ಉತ್ತರ ನೀಡುತ್ತೆ ಕಾದು ನೋಡಬೇಕು.
ವರದಿ: ಲೋಹಿತ್ ಶಿರೋಳ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ