ಕೊರೋನಾ ನಿಯಂತ್ರಿಸುವಲ್ಲಿ ಆಯುರ್ವೇದ ವೈದ್ಯರು ಮುಂಚೂಣಿ ; ಸೇವಾ ಭದ್ರತೆ ಇಲ್ಲದಿರುವುದಕ್ಕೆ ಸಾಮೂಹಿಕ ರಾಜೀನಾಮೆಗೆ ಸಿದ್ಧತೆ

ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಆಯುರ್ವೇದ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಪರಿಣಾಮ ಜಿಲ್ಲೆಯಲ್ಲಿ ಇಬ್ಬರು ಆಯುರ್ವೇದ ವೈದ್ಯರಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಆಯುರ್ವೇದಿಕ್ ವೈದ್ಯರು

ಆಯುರ್ವೇದಿಕ್ ವೈದ್ಯರು

  • Share this:
ಕಲಬುರ್ಗಿ(ಜುಲೈ. 14): ಕೊರೋನಾದಿಂದಾಗಿ ಎಲ್ಲರ ಬದುಕು ತತ್ತರಿಸಿದೆ. ಅದರಲ್ಲಿಯೂ ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರ ಪರಿಸ್ಥಿತಿ ಹೇಳತೀರದು. ಹೀಗಿರಬೇಕಾದರೆ ರಾಜ್ಯ ಸರ್ಕಾರ ವೈದ್ಯರಲ್ಲಿಯೇ ತಾರತಮ್ಯ ನೀತಿ ಅನುಸರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಎಂಬಿಬಿಎಸ್ ವೈದ್ಯರು ಹಾಗೂ ಆಯುರ್ವೇದ ವೈದ್ಯರ ನಡುವೆ ತಾರತಮ್ಯ ಧೋರಣೆ ಅನುಸರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಎಂಬಿಬಿಎಸ್ ವೈದ್ಯರ ಸೇವೆ ಖಾಯಂಗೊಳಿಸಲು ಮುಂದಾಗಿರುವ ಸರ್ಕಾರ ತಮ್ಮ ಸೇವೆ ಏಕೆ ಖಾಯಂಗೊಳಿಸಲ್ಲ ಎಂದು ಆಯುರ್ವೇದ ವೈದ್ಯರು ಪ್ರಶ್ನಿಸಿದ್ದಾರೆ. ಸರ್ಕಾರದ ಧೋರಣೆ ಖಂಡಿಸಿ ಜುಲೈ 15 ರಂದು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ್ದಾರೆ.

ಕೊರೋನಾ ಎಲ್ಲರ ಬದುಕನ್ನು ಕಿತ್ತುಕೊಳ್ಳುವತ್ತ ಸಾಗಿದೆ. ಇಂತಹ ಕೊರೋನಾದ ನಿಯಂತ್ರಣಕ್ಕೆ ಕೊರೋನಾ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಕೊರೋನಾ ವಾರಿಯರ್ಸ್ ನಲ್ಲಿ ಆಯುರ್ವೇದ ವೈದ್ಯ ಸಮುದಾಯವೂ ಒಂದು. ಕೊರೋನಾ ಕಟ್ಟಿ ಹಾಕಲು ಮುಂಚೂಣಿಯಲ್ಲಿ ನಿಂತವರು ವೈದ್ಯರು. ಆದರೆ ಬಹುತೇಕ ಕಡೆ ಎಂಬಿಬಿಎಸ್ ವೈದ್ಯರ ಕೊರತೆ ಇರುವುದರಿಂದಾಗಿ ಆಯುರ್ವೇದ ವೈದ್ಯರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ.

ಫಿವರ್ ಕ್ಲಿನಿಕ್ ಗಳಲ್ಲಿ, ಕ್ವಾರಂಟೈನ್ ಕೇಂದ್ರಗಳಲ್ಲಿ, ಎಸ್.ಐ.ಸಿ. ಕೇಂದ್ರಗಳಲ್ಲಿ, ರೋಗಿಗಳ, ಸೋಂಕಿತರ ಸರ್ವೆ ಕಾರ್ಯಕ್ಕೆ, ರೈಲ್ವೆ, ಬಸ್, ವಿಮಾನ ನಿಲ್ದಾಣಗಳಲ್ಲಿ, ಕಂಟೈನ್ ಮೆಂಟ್ ಗಳಲ್ಲಿ ಸೂಪರ್ವಿಜನ್ ಗಾಗಿ ಆಯುರ್ವೇದ ವೈದ್ಯರನ್ನು ಬಳಸಿಕೊಳ್ಳಲಾಗುತ್ತಿದೆ. ಎಂಬಿಬಿಎಸ್ ವೈದ್ಯರಿದ್ದರೂ ಬಹುತೇಕ ಕಡೆ ಆಯುರ್ವೇದ ವೈದ್ಯರನ್ನೇ ಮುಂಚೂಣಿಯಲ್ಲಿ ಬಿಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ರಾಜ್ಯಾದ್ಯಂತ ಸದ್ಯ ಸುಮಾರು 2000 ಆಯುರ್ವೇದ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂಬಿಬಿಎಸ್ ವೈದ್ಯರಿಲ್ಲದ ಕಡೆ ತತ್ಸಮಾನ ಹುದ್ದೆಯ ರೂಪದಲ್ಲಿ ಇವರ ಸೇವೆಯನ್ನು ಪಡೆಯಲಾಗುತ್ತಿದೆ. ಆದರೆ ಇವರಿಗೆ ಕೊಡುತ್ತಿರುವ ವೇತನ ಮಾತ್ರ ಅತ್ಯಲ್ಪ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವವರಿಗೆ 20 ಸಾವಿರ, ಆರ್.ಬಿ.ಎಸ್.ಕೆ. ಅಡಿ ಕೆಲಸ ಮಾಡುವವರಿಗೆ 31 ಸಾವಿರ ಹಾಗೂ ಎಂ.ಬಿ.ಬಿ.ಎಸ್. ವೈದ್ಯರ ಹುದ್ದೆಯಲ್ಲಿ ತತ್ಸಮಾನವಾಗಿ ಕಾರ್ಯನಿರ್ವಹಿಸೋ ವೈದ್ಯರಿಗೆ 26 ಸಾವಿರ ರೂಪಾಯಿ ವೇತನ ನೀಡಲಾಗುತ್ತಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಆಯುರ್ವೇದ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಪರಿಣಾಮ ಜಿಲ್ಲೆಯಲ್ಲಿ ಇಬ್ಬರು ಆಯುರ್ವೇದಿಕ್ ವೈದ್ಯರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆದರೆ, ಎಂಬಿಬಿಎಸ್ ವೈದ್ಯರಿಗೆ ಇರುವಂತೆ ಯಾವುದೇ ಇನ್ಸೂರೆನ್ಸ್ ಇಲ್ಲದಿರುವುದು ಆತಂಕ ಸೃಷ್ಟಿಸಿದೆ.

ಇನ್ನು ಎಂಬಿಬಿಎಸ್ ವೈದ್ಯರ ಸೇವೆ ಖಾಯಂ ಮಾಡಿಕೊಳ್ಳುವುದಾಗಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಕಳೆದ 15 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ನಮಗೆ ಸೇವಾ ಖಾಯಮಾತಿ ಇರಲಿ, ವೇತನ ಹೆಚ್ಚಳವನ್ನೂ ಮಾಡದೆ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಯುರ್ವೇದ ವೈದ್ಯರ ಸಂಘದ ಮುಖಂಡ ಡಾ.ಪ್ರಮೋದ್ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಧಾರವಾಡ ಜಿಲ್ಲೆಯಲ್ಲಿ ನಾಳೆಯಿಂದ ಸಂಪೂರ್ಣ ಲಾಕ್‌ಡೌನ್ ; ಹುಬ್ಬಳ್ಳಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು

ಸರ್ಕಾರದ ಧೋರಣೆಯಿಂದ ಬೇಸತ್ತು ಜುಲೈ 15 ರಂದು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಆಯುರ್ವೇದ ವೈದ್ಯರ ಸಂಘ ಎಚ್ಚರಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಆಯುರ್ವೇದ ವೈದ್ಯರನ್ನು ಬೆಂಬಲಿಸಿ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ 27 ಸಾವಿರ ಖಾಸಗಿ ಆಯುರ್ವೇದ ವೈದ್ಯರೂ ಕೆಲಸ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ ಎಂದು ಆಯುರ್ವೇದ ವೈದ್ಯೆ ಸೌಮ್ಯಶ್ರೀ ತಿಳಿಸಿದ್ದಾರೆ.

ಹೀಗಾಗಿ ಕೊರೋನಾ ಸಂಕಷ್ಟದಲ್ಲಿ ಆಯುರ್ವೇದ ವೈದ್ಯರ ಸೇವೆ ಮುಂದುವರಿಕೆ ಸರ್ಕಾರದ ನಿರ್ಧಾರವನ್ನು ಅವಲಂಬಿಸಿದೆ. ತಮ್ಮ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರೂ ಈಗಾಗಲೇ ಕೆಲಸ ಸ್ಥಗಿತಗೊಳಿಸಿದ ಹೋರಾಟಕ್ಕಿಳಿಸಿದ್ದಾರೆ. ಇದೀಗ ಆಯುರ್ವೇದ ವೈದ್ಯರೂ ಅವರ ಹಾದಿ ತುಳಿದಿದ್ದು, ಸರ್ಕಾರ ಅಡ್ಡಕತ್ತರಿಯಲ್ಲಿ ಸಿಲುಕಿಕೊಂಡಿದೆ.
Published by:G Hareeshkumar
First published: