news18-kannada Updated:December 16, 2020, 6:36 AM IST
ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿರುವುದು.
ಕಾರವಾರ; ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಬಿರಂಪಾಲಿಯಲ್ಲಿ ನಿವೃತ್ತ ಸೈನಿಕನ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಲ್ಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಪಕ್ಷಪಾತ ಮಾಡಿದ್ದಾರೆ ಎಂದು ಪೋಲಿಸ್ ಇಲಾಖೆ ವಿರುದ್ದ ರಾಜ್ಯ ಮಾಜಿ ಸೈನಿಕರ ಸಂಘ ಆರೋಪದ ಜತೆ ಅಸಮಾಧಾನ ವ್ಯಕ್ತ ಪಡಿಸಿದೆ.
ಕಳೆದ ನಾಲ್ಕು ದಿನದ ಹಿಂದೆ ಜಿಲ್ಲೆಯ ಜೋಯಿಡಾ ತಾಲೂಕಿನ ಬಿರಂಪಾಲಿಯಲ್ಲಿ ಹತ್ತು ಜನರ ಗುಂಪೊಂದು ಜಮೀನು ದಾರಿಯ ವಿವಾದಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಾಜಿ ಸೈನಿಕ ಶಿವಾಜಿ ಎಂಬುವವರ ಮೇಲೆ ತೀವ್ರವಾಗಿ ಮಾರಣಾಂತಿಕ ಹಲ್ಲೆ ನಡೆಸಿತ್ತು. ದಾರಿಯ ವಿವಾದಕ್ಕೆ ನಡೆದ ಈ ಮಾತಿನ ಚಕಮಕಿ ಹೊಡೆದಾಟದಲ್ಲಿ ಅಂತ್ಯವಾಗಿತ್ತು. ಈ ಘಟನೆಯ ಬಳಿಕ ಹಲ್ಲೆಗೊಳಗಾದ ಮಾಜಿ ಸೈನಿಕನ ಶಿವಾಜಿ ಕುಟುಂಬ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು. ಈ ಸಂದರ್ಭದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ. ಪೊಲೀಸರು ಆರೋಪಿಗಳ ಪರ ನಿಂತಿದ್ದಾರೆ ಎಂದು ಶಿವಾಜಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ನಡೆದ ಎರಡು ದಿನದ ಬಳಿಕ ಪೊಲೀಸರು ಕೆಲ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು ಕೂಡ ಮುಖ್ಯ ಆರೋಪಿಗಳನ್ನು ಕೈ ಬಿಟ್ಟು ಕೆಲವರನ್ನ ಮಾತ್ರ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಗೆ ರಾಜ್ಯ ಮಾಜಿ ಸೈನಿಕರ ಸಂಘಟನೆಯವರು ಈ ಆರೋಪಕ್ಕೆ ಬಲ ನೀಡಿ ಕೂಡಲೇ ಹಲ್ಲೆ ನಡೆಸಿದವರ ವಿರುದ್ದ ಕಠಿಣ ಕ್ರಮ ಆಗಬೇಕೆಂದು ಆಗ್ರಹಿದ್ದಾರೆ. ಈ ಬೆನ್ನಲ್ಲೆ ಹಲ್ಲೆ ನಡೆಸಿದವರ ಪರವಾಗಿ ಇಲ್ಲಿನ ಮುಖಂಡನೋರ್ವ ಬಾಬು ಜೊಸೇಪ್ ಎನ್ನುವವನು ಮಾಜಿ ಸೈನಿಕನ ಕುಟುಂಬಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾನಂತೆ. ಹೀಗೆ ಹತ್ತು ಹಲವು ದಾರಿಯಲ್ಲಿ ಮಾಜಿ ಸೈನಿಕನ ಕುಟುಂಬ ಅನ್ಯಾಯ ಅನುಭವಿಸುತ್ತಿದೆ. ಪೊಲೀಸ್ ಇಲಾಖೆ ನ್ಯಾಯದ ಪರ ನಿಂತು ಹಲ್ಲೆ ನಡೆಸಿದವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿದ್ದಾರೆ.
ಆಗಿದ್ದೇನು? ಏನಿದು ಘಟನೆಯ ವಿವರ
ಜೊಯಿಡಾ ತಾಲ್ಲೂಕಿನ ಬೀರಂಪಾಲಿಯ ನಿವೃತ್ತ ಯೋಧ ಶಿವಾಜಿ ಲಕ್ಷ್ಮಣ ಗೌಡನಕರ್ 18 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿಭಾಯಿಸಿದ್ದರು. ಕಳೆದ ಕೆಲ ವರ್ಷದ ಹಿಂದೆ ನಿವೃತ್ತಿ ಹೊಂದಿದ್ದ ಅವರು ಮುಂದಿನ ಜೀವನಕ್ಕಾಗಿ ಕೂಡಿಟ್ಟ ಹಣದಲ್ಲಿ ಬೀರಂಪಾಲಿಯಲ್ಲಿ ಇದ್ದ ತಮ್ಮ ಜಮೀನಿನಲ್ಲಿ ಸಣ್ಣದೊಂದು ಹೋಂ ಸ್ಟೇ ಆರಂಭಿಸಲು ಮುಂದಾಗಿದ್ದರು. ಆದರೆ ಹೋಂ ಸ್ಟೇಗೆ ದಾರಿ ಮಾಡಿಕೊಳ್ಳಲು ಮುಂದಾದಾಗ ಅಕ್ಕಪಕ್ಕದ ಜಮೀನಿನ ಮಾಲೀಕರ ಗುಂಪೊಂದು ಖ್ಯಾತೆ ತೆಗೆದು ಮಾರಣಾಂತಿಕ ಹಲ್ಲೆ ನಡೆಸಿದ್ದು ಕಳೆದ ಆರು ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಇದನ್ನು ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಾಜಿ ಸಚಿವ ರೋಷನ್ ಬೇಗ್
ಹಲ್ಲೆ ನಡೆಸಿದ ಆರೋಪಿಗಳು ವಾರದಿಂದ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ರಾಜಕೀಯ ಪ್ರಭಾವ ಬಳಸುತ್ತಿರುವ ಕಾರಣ ಪೊಲೀಸರು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನಿವೃತ್ತ ಯೋಧನಿಗೆ ನ್ಯಾಯವೇ ಇಲ್ಲದಂತಾಗಿದೆ. ದೇಶಕ್ಕಾಗಿ ಹಗಲಿರುಳು ಶ್ರಮಿಸಿದ ಯೋಧ ಇದೀಗ ತಾನು ಹಾಗೂ ತನ್ನ ಕುಟುಂಬ ಕಾಪಾಡಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದು, ಪೊಲೀಸರ ಇಬ್ಬಗೆಯ ನೀತಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಖಂಡನೆ ವ್ಯಕ್ತಪಡಿಸಿದೆ.
ಒಟ್ಟಾರೆ ಮಾಜಿ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಇದೀಗ ಅವರ ಕುಟುಂಬಕ್ಕೆ ಜೀವ ಬೇದರಿಕೆ ಒಡ್ಡಿರುವುದು ನಿಜಕ್ಕೂ ಖೇದಕರ. ಕೂಡಲೇ ಹಲ್ಲೆ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚಿ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಮುಂದಾಗಬೇಕಾಗಿದೆ.
Published by:
HR Ramesh
First published:
December 16, 2020, 6:36 AM IST