ಈ ATM ನಲ್ಲಿ ದುಡ್ಡು ಹಾಕಿದ್ರೆ ಮಾಸ್ಕ್ ಬರುತ್ತೆ.. ಒಂದಕ್ಕೆ ಎರಡೇ ರೂಪಾಯಿ.. ಹೊಸಾ ಎಟಿಎಂ ನೋಡಿ ಹುಬ್ಬಳ್ಳಿ ಜನ ಫುಲ್ ಖುಷ್ !

ಮೆಡಿಕಲ್ ಶಾಪ್ ಗಳಲ್ಲಿ ಮಾಸ್ಕ್ ಗೆ ಕನಿಷ್ಟ 10 ರಿಂದ 25 ರೂಪಾಯಿವರೆಗೂ ತೆರಬೇಕಾದ ಸ್ಥಿತಿಯಿದೆ. ಹಾಗೆಂದು ಮಾಸ್ಕ್ ಹಾಕಿಕೊಳ್ಳದೇ ಅಡ್ಡಾಡೋದು ದುಸ್ಥರವಾಗಿದೆ. ಮಾಸ್ಕ್ ಹಾಕಿಕೊಳ್ಳದಿದ್ದರೆ ಕಾನೂನಿನ ಪ್ರಕಾರ ದಂಡ ತೆರಬೇಕಾದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ನೆರವಾಗಲೆಂದು ಮಾಸ್ಕ್ ಯಂತ್ರ ಅಳವಡಿಕೆ ಮಾಡಲಾಗಿದೆ.

ಹೊಸಾ ATM

ಹೊಸಾ ATM

  • Share this:
ಹುಬ್ಬಳ್ಳಿ: ನೀವು ನಂಬಿದ್ರೆ ನಂಬಿ... ಬಿಟ್ರೆ ಬಿಡೀ... ಕೊರೋನಾದಿಂದ ಸುರಕ್ಷಿತವಾಗಿ ಉಳಿಯಲು ಅವಶ್ಯವಿರೋ ಮಾಸ್ಕ್ ಕೇವಲ ಎರಡು ರೂಪಾಯಿಗೆ ಸಿಗುತ್ತೆ. ಅದೂ ಸಹ ದಿನದ 24 ತಾಸುಗಳ ಕಾಲ. ಎಟಿಎಂ (ATM) ಯಂತ್ರದಲ್ಲಿ ಹಣ ಸಿಕ್ರೆ, ಈ ಯಂತ್ರದಲ್ಲಿ ಮಾಸ್ಕ್ ಸಿಗುತ್ತೆ. ಹೌದು... ಇದು ಅಚ್ಚರಿಯಾದ್ರೂ ಸತ್ಯ…. ಎರಡು ರೂಪಾಯಿ ನಾಣ್ಯ ಹಾಕಿ, ಮಾಸ್ಕ್ ಹಾಕ್ಕೊಳ್ಳಿ, ಸುರಕ್ಷಿತವಾಗಿರಿ, ಇದು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಹೊಸ ಸ್ಲೋಗನ್. ಕೊರೋನಾ ವ್ಯಾಪಕಗೊಂಡಿರೋ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲರಿಗೂ ಮಾಸ್ಕ್ ಕಡ್ಡಾಯಗೊಳಿಸಿದೆ. ಕೊರೋನಾ ದಿಂದ ದೂರ ಉಳಿಯೋಕೆ ಜನರಿಗೆ ಮಾಸ್ಕ್ ಹಾಕೋದು ಅನಿವಾರ್ಯವಾಗಿದೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿರೋದ್ರಿಂದ ಜನ ಅನಿವಾರ್ಯವಾಗಿ ಮಾಸ್ಕ್ ಹಾಕುತ್ತಿದ್ದಾರೆ. ಸರ್ಜಿಕಲ್ ಇತ್ಯಾದಿ ಮಾಸ್ಕ್ ಗಳು ಯೂಸ್ ಅಂಡ್ ಥ್ರೋ ಆಗಿರೋದ್ರಿಂದ, ದಿನಕ್ಕೆ ಒಂದು ಮಾಸ್ಕ್ ಹಾಕಿಕೊಳ್ಳೋದು ಅನಿವಾರ್ಯವಾಗಿದೆ.

ಕಡುಬಡವರಿಗೆ ನಿತ್ಯ ಮಾಸ್ಕ್ ಖರೀದಿಸೋದು ದೊಡ್ಡ ಕಷ್ಟದ ಕೆಲಸ. ಹಾಗೆಂದು ಹಾಕಿದ ಮಾಸ್ಕ್ ನ್ನೇ ಹಾಕಿದರೆ ರೋಗ ಖಚಿತ. ಆದರೆ ಮೆಡಿಕಲ್ ಶಾಪ್ ಗಳಲ್ಲಿ ಮಾಸ್ಕ್ ಗೆ ಕನಿಷ್ಟ 10 ರಿಂದ 25 ರೂಪಾಯಿವರೆಗೂ ತೆರಬೇಕಾದ ಸ್ಥಿತಿಯಿದೆ. ಹಾಗೆಂದು ಮಾಸ್ಕ್ ಹಾಕಿಕೊಳ್ಳದೇ ಅಡ್ಡಾಡೋದು ದುಸ್ಥರವಾಗಿದೆ. ಮಾಸ್ಕ್ ಹಾಕಿಕೊಳ್ಳದಿದ್ದರೆ ಕಾನೂನಿನ ಪ್ರಕಾರ ದಂಡ ತೆರಬೇಕಾದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ನೆರವಾಗಲೆಂದು ಮಾಸ್ಕ್ ಯಂತ್ರ ಅಳವಡಿಕೆ ಮಾಡಲಾಗಿದೆ. ಖಾಸಗಿ ಸಹಭಾಗಿತ್ವದೊಂದಿಗೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಪರಿಕಲ್ಪನೆ ಜಾರಿಗೊಳಿಸಲಾಗಿದೆ. ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳಲ್ಲಿ ಎಟಿಎಂ ಯಂತ್ರ(ಎನಿ ಟೈಮ್ ಮಾಸ್ಕ್) ಅಳವಡಿಸಲಾಗಿದೆ. ಪ್ರಾಯೋಗಿಕವಾಗಿ ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಧಾರವಾಡಗಳಲ್ಲಿ ಜಾರಿ ಮಾಡಲಾಗುತ್ತಿದೆ. ಹುಬ್ಬಳ್ಳಿಯ 09 ಕಡೆ ಹಾಗೂ ಧಾರವಾಡದ ಮೂರು ಕಡೆ ಮಾಸ್ಕ್ ಯಂತ್ರ ಅಳವಡಿಕೆ ಮಾಡಲಾಗಿದೆ.

ಇದನ್ನೂ ಓದಿ: Mango: ಒಂದೇ ಮರದಲ್ಲಿ 121 ವೆರೈಟಿ ಮಾವಿನ ಹಣ್ಣು, ನಿಮ್ಮ ತೋಟದಲ್ಲೂ ಇದು ಸಾಧ್ಯ: ತೋಟಗಾರಿಕಾ ತಜ್ಞರು !

ಎಟಿಎಂ ಮಾದರಿಯಲ್ಲಿ ದಿನದ 24 ತಾಸು ಮಾಸ್ಕ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೇವಲ ಎರಡು ರೂಪಾಯಿ ಕಾಯಿನ್ ಹಾಕಿದರೆ ಸಾಕು ನಿಮ್ಮ ಕೈ ಸೇರುತ್ತೆ ಮಾಸ್ಕ್. ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ವೈಂಡಿಂಗ್ ಯಂತ್ರಗಳ ಅಳವಡಿಕೆ ಮಾಡಲಾಗಿದೆ. ಹುಬ್ಬಳ್ಳಿಯ ಮಹಾನಗರ ಪಾಲಿಕೆ, ಕಿಮ್ಸ್, ಮಿನಿ ವಿಧಾನಸೌಧ, ರೈಲ್ವೆ ನಿಲ್ದಾಣ, ಚಿಟಗುಪ್ಪಿ ಆಸ್ಪತ್ರೆ, ಎಂ.ಜಿ. ರೋಡ್, ದುರ್ಗದ ಬೈಲು, ಸಿಟಿ ಬಸ್ ನಿಲ್ದಾಣ, ಎಪಿಎಂಸಿ ಇತ್ಯಾದಿಗಳ ಕಡೆ ಅಳವಡಿಕೆ ಮಾಡಲಾಗಿದೆ. ಧಾರವಾಡದಲ್ಲಿ ಡಿಸಿ ಕಛೇರಿ, ಜಿಲ್ಲಾ ಆಸ್ಪತ್ರೆ ಮತ್ತಿತರ ಕಡೆ ಅಳವಡಿಕೆ ಮಾಡಲಾಗಿದೆ.

ಪ್ರತಿ ಬಾರಿ ಯಂತ್ರಕ್ಕೆ ನೂರು ಮಾಸ್ಕ್ ಅಳವಡಿಸಲು ವ್ಯವಸ್ಥೆಯಿದ್ದು, ಯಂತ್ರದಲ್ಲಿ ಮಾಸ್ಕ್ ಖಾಲಿಯಾಗುತ್ತಿದ್ದಂತೆಯೇ ಸಿಬ್ಬಂದಿ ಹೊಸ ಮಾಸ್ಕ್ ತಂದು ಹಾಕುತ್ತಾರೆ. ಹುಬ್ಬಳ್ಳಿಯ ಯಂಗ್ ಇಂಡಿಯಾ ಸಂಸ್ಥೆಯಿಂದ ಯಂತ್ರಗಳ ಅಳವಡಿಕೆಯಾಗಿದೆ. ಈ ರೀತಿಯ ಯಂತ್ರಗಳ ಅಳವಡಿಕೆಯಿಂದ ಎಲ್ಲರಿಗೂ ಸುಲಭವಾಗಿ ಮಾಸ್ಕ್ ಲಭ್ಯವಾಗುತ್ತೆ. ಇವುಗಳನ್ನು ಮತ್ತಷ್ಟು ಕಡೆ ಅಳವಡಿಸಿದಲ್ಲಿ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಮಾಸ್ಕ್ ಯಂತ್ರಗಳ ಬಗ್ಗೆ ಹುಬ್ಬಳ್ಳಿ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ಹುಬ್ಬಳ್ಳಿಯಲ್ಲಿ 9, ಧಾರವಾಡದಲ್ಲಿ 3 ಯಂತ್ರಗಳ ಅಳವಡಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಮಾಸ್ಕ್ ಜೊತೆಗೆ ಸ್ಯಾನಿಟೈಜರ್ ಶ್ಯಾಶೆ ಕೊಡಲೂ ಚಿಂತನೆ ನಡೆಸಲಾಗಿದೆ. ಅತ್ಯಂತ ಕಡಿಮೆ ದರದಲ್ಲಿ ಜನತೆಗೆ ಮಾಸ್ಕ್ ಮುಟ್ಟಿಸೋ ಕಾರ್ಯ ಮಾಡಲಾಗುತ್ತಿದೆ. ಆರು ತಿಂಗಳ ಕಾಲ ಯಂಗ್ ಇಂಡಿಯಾಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ.

ಪ್ರಾಯೋಗಿಕವಾಗಿ ಮಾಸ್ಕ್ ಯಂತ್ರಗಳ ಅಳವಡಿಕೆ ಮಾಡಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಇದನ್ನು ಮತ್ತಷ್ಟು ಕಡೆ ವಿಸ್ತರಿಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ ಎಂದು ಹುಬ್ಬಳ್ಳಿ – ಧಾರವಾಡ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ. ಕೊರೋನಾ ಎರಡೆಯ ಅಲೆ ಕಡಿಮೆಯಾಗಿ ಮೂರನೇ ಅಲೆ ಬರೋ ಮುನ್ಸೂಚನೆ ಬರ್ತಿರೋ ಈ ಸಂದರ್ಭದಲ್ಲಿ ಜನರಿಗೆ ಅತ್ಯಗತ್ಯವಾಗಿರೋ ಮಾಸ್ಕ್ ಸುಲಭವಾಗಿ, ಕಡಿಮೆ ದರದಲ್ಲಿ ಕೈಗೆಟುಕುವಂತೆ ಮಾಡಲಾಗಿದೆ. ಕೊರೋನಾ ಸಂಕಷ್ಟದಲ್ಲಿ ಮಾಸ್ಕ್ ಕೈಗೆಟುಕುವಂತೆ ಮಾಡಿದ್ದಕ್ಕೆ ಜನತೆ ಧನ್ಯವಾದ ತಿಳಿಸುತ್ತಿದೆ. ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ, ಯಂಗ್ ಇಂಡಿಯಾ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ. ಈ ಎಟಿಎಂ ಯಂತ್ರಗಳು ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧೆಡೆಗಳಲ್ಲಿಯೂ ಅಳವಡಿಕೆ ಮಾಡುವ ಚಿಂತನೆಯೂ ನಡೀತಿದೆ.
Published by:Soumya KN
First published: