ಬೆಳಗಾವಿ: ಆರನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, 9ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ನಿರತ ನೌಕರರು ಬಿಗಿಪಟ್ಟು ಸಡಿಲಿಸದೆ ಹೋರಾಟ ಮುಂದುವರೆಸಿದ್ದು, ಸರ್ಕಾರ ಕೂಡ ಅಷ್ಟೇ ಬಿಗಿಯಾಗಿ ಆರನೇ ವೇತನ ಆಯೋಗ ಜಾರಿ ಅಸಾಧ್ಯ ಎಂದು ಸ್ಪಷ್ಟವಾಗಿ ಹೇಳಿದೆ. ಏತನ್ಮಧ್ಯೆ, ಕೆಲ ಸಾರಿಗೆ ನೌಕರರು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಮುಷ್ಕರಕ್ಕೆ ಬೆಂಬಲ ನೀಡದೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರಿನಲ್ಲಿ ಬಸ್ಸುಗಳು ಇಂದು ರಸ್ತೆಗೆ ಇಳಿದಿವೆ.
ಸಾರಿಗೆ ನೌಕರರ ಜೊತೆ ಅಥಣಿ ಡಿಪೋದಲ್ಲಿ ಸಚಿವ ಲಕ್ಷ್ಮಣ ಸವದಿ ಅವರ ಮಗ ಚಿದಾನಂದ ಸವದಿ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಚಾಲಕರು ಹಾಗೂ ನಿರ್ವಾಹಕರು ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. 400 ನೌಕರರ ಪೈಕಿ 210 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಚಿದಾನಂದ್ ಸವದಿ ಮನವಿಗೆ ಸ್ಪಂದಿಸಿದ ಸಾರಿಗೆ ನೌಕರರು ಇಂದು ಕರ್ತವ್ಯಕ್ಕೆ ಹಾಜರಾಗಿ, ಬಸ್ ಓಡಿಸಿದರು. ಅಥಣಿ ತಾಲೂಕಿನ ಗ್ರಾಮೀಣ ಸಾರಿಗೆ ಸೇವೆ ಇಂದಿನಿಂದ ಆರಂಭವಾಗಿದೆ. ಜೊತೆಗೆ ಹೊರ ರಾಜ್ಯದ ಸೇವೆಯನ್ನು ನೌಕರರು ಪ್ರಾರಂಭಿಸಿದ್ದಾರೆ. ಅಥನಿಯಿಂದ ಪೂನಾ, ಶ್ರೀಶೈಲಂ, ನಾಂದೇಡ್ಗೆ ಪುನಃ ಸಾರಿಗೆ ಸೇವೆ ಪ್ರಾರಂಭಗೊಂಡಿದೆ.
ಸಾರಿಗೆ ಸಚಿವರ ತವರಿನಲ್ಲಿ ಬಸ್ ಸೇವೆ ಸ್ಥಗಿತಗೊಂಡಿದ್ದು ಸಚಿವರಿಗೆ ವ್ಯಾಪಕ ಮುಜುಗರ ಉಂಟಾಗಿತ್ತು. ಇದೀಗ ಸಚಿವರ ಪುತ್ರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಸದ್ಯ ಅಥಣಿ ಡಿಪೋದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಡಿಪೋದ ಮ್ಯಾನೇಜರ್ ಎನ್ಎನ್ ಕೆರಿ ಮಾಹಿತಿ ನೀಡಿದ್ದಾರೆ. ಈ ಮೂಲಕ ಸಚಿವ ಲಕ್ಷ್ಮಣ ಸವದಿ ನಿಟ್ಟುಸಿರು ಬಿಟ್ಟಿದ್ದಾರೆ.
ವಿಭಿನ್ನ ಪ್ರತಿಭಟನೆ
ಹಲವು ದಿನಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆಗಳ ಮೂಲಕ ಗಮನ ಸೆಳೆದಿರುವ ಸಾರಿಗೆ ನೌಕರರು ಇಂದು ಮೋಂಬತ್ತಿ ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯಾದ್ಯಂತ ಸಂಜೆ 7ಕ್ಕೆ ಮೋಂಬತ್ತಿ ಹಚ್ಚಿ ಕೈಯಲ್ಲಿಡಿದು ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ನಾಳೆ ಶಾಸಕ ಮನೆ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಇದನ್ನು ಓದಿ: Bus Strike - ಸಾರಿಗೆ ನೌಕರರ ಮುಷ್ಕರಕ್ಕೆ ನಟ ಯಶ್ ಬೆಂಬಲ ಕೋರಿದ ಒಕ್ಕೂಟ; ಇಂದು ಮೋಂಬತ್ತಿ ಹಿಡಿದು ಪ್ರತಿಭಟನೆ
ಇದೇ ವೇಳೆ, ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯದ ಸಾರಿಗೆ ನಿಗಮಗಳಿಗೆ ಭಾರೀ ನಷ್ಟವಾಗುತ್ತಿದೆ. ನಾಲ್ಕು ಸಾರಿಗೆ ನಿಗಮಗಳಿಂದ ನಿತ್ಯವೂ 17 ಕೋಟಿ ರೂ ಆದಾಯ ಬರುತ್ತಿತ್ತು. ಯುಗಾದಿ ಹಬ್ಬದ ವೇಳೆ ಆದಾಯ ಇನ್ನೂ ಹೆಚ್ಚಿರುತ್ತಿತ್ತು. ಆದರೆ, ಮುಷ್ಕರದಿಂದ ಅಂದಾಜು 152 ಕೋಟಿ ರೂ ನಷ್ಟವಾಗಿದೆ ಎನ್ನಲಾಗುತ್ತಿದೆ. ಕೆಎಸ್ಆರ್ಟಿಸಿಗೆ 70 ಕೋಟಿ ರೂಪಾಯಿ, ಬಿಎಂಟಿಸಿ 20 ಕೋಟಿ ರೂಪಾಯಿ, ವಾಯವ್ಯ ಸಾರಿಗೆ (NWKRTC) 31 ಕೋಟಿ ರೂಪಾಯಿ ಹಾಗೂ ಈಶಾನ್ಯ ಸಾರಿಗೆ (NEKRTC) 31 ಕೋಟಿ ರೂಪಾಯಿ ನಷ್ಟ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ