ಇರಾಕಾ ಮನಿ ಕೊಟ್ಟು ಆಮ್ಯಾಲ್ ಬಂದ್‌ ಓಟ್ ಕೇಳ್ರಿ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮಸ್ಥರು

ಅಸುಂಡಿ ಗ್ರಾಮವು ಕೂಡ ಸರಿಯಾದ ವ್ಯವಸ್ಥೆ ಇಲ್ಲದೆ ಬಿಕೋ ಎನ್ನುತ್ತಿದೆ. ಇಡೀ ಊರಿಗೆ ಊರೇ ಇಕ್ಕಟ್ಟಾಗಿದ್ದು, ಒಬ್ಬರು ಮುಂದೆ ಬಂದರೆ ಸಾಕು ಇನ್ನೊಬ್ಬರಿಗೆ ಹೋಗಲು ಸ್ಥಳವಿರುದಿಲ್ಲ. ಮಳೆ ಬಂದ್ರೆ ಮನೆಯಲ್ಲಿ ನೀರು ತುಂಬುತ್ತದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರು ನಮಗೆ ಸಹಾಯ ಮಾಡಲು ಯಾರು ಬರುತ್ತಿಲ್ಲ ಎಂದು  ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಅಸುಂಡಿ ಗ್ರಾಮದ ಜನರು.

ಅಸುಂಡಿ ಗ್ರಾಮದ ಜನರು.

  • Share this:
ಹಾವೇರಿ; ಆ ಗ್ರಾಮದಲ್ಲಿ ಜನಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸಣ್ಣ ಸಣ್ಣ ಮನೆಯಲ್ಲಿ ಇರಲು ಆಗದೆ ಇಕ್ಕಟ್ಟಿನಲ್ಲಿಯೇ ಆ ಊರಿನ ಜನಗಳಿಗೆ ಜೀವನ ಸಾಗಿಸುವ ಅನಿವಾರ್ಯತೆ ಎದುರಾಗಿದೆ. ಪಾಪ ಒಂದೊಂದು ಮನೆಯಲ್ಲಿ ಹತ್ತರಿಂದ ಹದಿನೈದು ಜನ ವಾಸ ಮಾಡ್ತಾರೆ. ನಮಗೆ ಇರಲಿಕ್ಕೆ ನಿವೇಶನಗಳನ್ನು ಮಾಡಿ ಕೊಡಿ ಎಂದು ಗ್ರಾಮಸ್ಥರು ಕಚೇರಿಯಿಂದ ಕಚೇರಿಗೆ ಅಲೆದು ಕಾಲು ಕಳೆದುಕೊಂಡಿದ್ದಾರೆ. ಈವರೆಗೆ ಗೆಲ್ಲಿಸಿದ ಜನಪ್ರತಿನಿಧಿಗಳು ಸೂರು ಕಲ್ಪಿಸಿಕೊಡದಿದ್ದಕ್ಕೆ ರೊಚ್ಚಿಗೆದ್ದ ಆ ಗ್ರಾಮಸ್ಥರು ಈಗ ಒಂದು ನಿರ್ಧಾರಕ್ಕೆ ಬಂದಿದ್ದಾರೆ.

ಹೌದು, ಇವರೆಲ್ಲ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದ ಜನರು. ಕಳೆದ ಹದಿನೈದು ವರ್ಷಗಳಿಂದ ನಮಗೆ ಮನೆ ಇಲ್ಲ, ಜಾಗವಿಲ್ಲ ಎಂದು ಶಾಸಕರು, ಸಚಿವರು, ಅಧಿಕಾರಿಗಳ ಬಳಿ ಅಲೆದಾಡಿ ಹೈರಾಣಾಗಿದ್ದಾರೆ. ಇಷ್ಟಾದರೂ ಡೋಂಟ್ ಕೇರ್ ಎನ್ನದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಗ್ರಾಂ.ಪಂ. ಚುನಾವಣೆ ಬಹಿಷ್ಕರಿಸಿ ಪಾಠ ಕಲಿಸಲು ಮುಂದಾಗಿದ್ದಾರೆ. ನಮಗೆ ಚುನಾವಣೆ ಬೇಡ್ರೀ. ನಮಗ ಒಂದ್ ಗೇಣು ಜಾಗ ಕೊಡ್ರಿ ಅಂದ್ರ ಯಾರು ತಲೆ ಕೆಡಿಸಿಕೊಳ್ಳವಲ್ರ್, ಏನರ ಆಗ್ಲಿ ಈ ಸಲ ನಾವಂತು ಓಟು ಹಾಕಂಗಿಲ್ಲರಿ ಅಂತಾರೆ ಅಸುಂಡಿ ಗ್ರಾಮದ ಜನರು.

ಇನ್ನೂ ಅಸುಂಡಿ ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕುಟುಂಬಗಳು ಇದ್ದು.ಅಜ್ಜ ಮುತ್ತಜ್ಜರ ಕಾಲದಿಂದಲೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಈ ಗ್ರಾಮದಲ್ಲಿ ದಲಿತ ಕುಟುಂಬಗಳೇ ಹೆಚ್ಚಾಗಿರುವದರಿಂದ ಚುನಾವಣೆ ಬಂತಂದ್ರೆ ಮಾತ್ರ ಆ ಭಾಗದ ಜನರನ್ನು ಸಂಪರ್ಕ ಮಾಡಿ ಚುನಾಯಿತ ಜನಪ್ರತಿನಿಧಿಗಳು ಅವರಿಂದ ಮತ ಪಡೆದು ಮತ್ತೆ ಅವರತ್ತ ತಿರುಗಿಯೂ ನೋಡುವುದಿಲ್ಲ. ಚುನಾವಣೆ ಬಂದ ಸಂದರ್ಭದಲ್ಲಿ ಈ ಮುಗ್ದ ಗ್ರಾಮಸ್ಥರನ್ನು ಯಾಮಾರಿಸಿ ಆಣೆ ಪ್ರಮಾಣ ಮಾಡಿ ಮನೆ ಕೊಡುಸ್ತಿವಿ, ಮಠ ಕಟ್ಟುಸ್ತಿವಿ ಎಂದು ಅವರಿಂದ ಓಟು ಕಿತ್ತುಕೊಂಡು ಹೋಗುತ್ತಾರೆ. ಆದರೆ ಈ ಬಾರಿ ಯಾರೇ ಬಂದ್ರು ಏನೇ ಮಾಡಿದರು ನಾವು ಮತಯಾಚನೆ ಮಾಡುವುದಿಲ್ಲ. ನಮಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿ ನಮ್ಮ ಮತ ಕೇಳಲು ಬನ್ನಿ ಎಂದು ಪಟ್ಟು ಹಿಡಿದ್ದಾರೆ.

ಇದನ್ನು ಓದಿ: ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನವೇ ಅಂದರ್ ಆದ ಕುಣಿಗಲ್ ಗಿರಿ!

ಇನ್ನೂ ಅಸುಂಡಿ ಗ್ರಾಮವು ಕೂಡ ಸರಿಯಾದ ವ್ಯವಸ್ಥೆ ಇಲ್ಲದೆ ಬಿಕೋ ಎನ್ನುತ್ತಿದೆ. ಇಡೀ ಊರಿಗೆ ಊರೇ ಇಕ್ಕಟ್ಟಾಗಿದ್ದು, ಒಬ್ಬರು ಮುಂದೆ ಬಂದರೆ ಸಾಕು ಇನ್ನೊಬ್ಬರಿಗೆ ಹೋಗಲು ಸ್ಥಳವಿರುದಿಲ್ಲ. ಮಳೆ ಬಂದ್ರೆ ಮನೆಯಲ್ಲಿ ನೀರು ತುಂಬುತ್ತದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರು ನಮಗೆ ಸಹಾಯ ಮಾಡಲು ಯಾರು ಬರುತ್ತಿಲ್ಲ ಎಂದು  ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರದ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಚುನಾವಣೆ ಬಂದಾಗ ಮಾತ್ರ ಬಡವರ ಕೈ ಕಾಲು ಹಿಡಿಯುತ್ತಾರೆ. ಅವರಿಂದ ಮತಗಳನ್ನು ಪಡೆದುಕೊಳ್ಳುವುದು ಮಾತ್ರ ಇವರಿಗೆ ಗೊತ್ತು. ನಾವು ಗೆಲ್ಲಿಸಿ ಕಳಿಸಿದ ವ್ಯಕ್ತಿಗಳು ನಮ್ಮ ಕಷ್ಟಕ್ಕೆ ನಿಲ್ಲುತ್ತಾರೆ ಎಂಬ ಮತದಾರರ ಕನಸುಗಳು ನನಸಾಗುವುದಿಲ್ಲ.ಒಟ್ಟಿನಲ್ಲಿ ಇನ್ನಾದರು ಈ ಕ್ಷೇತ್ರಕ್ಕೆ ಸಂಬಂಧಿಸಿದ ಶಾಸಕರು, ಅಧಿಕಾರಿಗಳು ಈ ಗ್ರಾಮಸ್ಥರಿಗೆ ಒಂದು ಸೂರು ಕಲ್ಪಿಸಲು ಮುಂದಾಗ್ತಾರಾ ಕಾದು ನೋಡಬೇಕಿದೆ.
Published by:HR Ramesh
First published: