ಬರೆಯಲು ಜಾಗವಿಲ್ಲ ಬೇರೆ ಚೀಟಿ ಬರೆಸಿಕೊಂಡು ಬನ್ನಿ ಎಂದಿದ್ದಕ್ಕೆ ವೈದ್ಯನ ಮೇಲೆ ರೋಗಿಯ ಮಗನಿಂದ ಹಲ್ಲೆ

ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ವೈದ್ಯ ಸಂತೋಷ್ ಮೇಲಾಧಿಕಾರಿಗಳ ಗಮನಕ್ಕೆ ತಂದು ಮೂಡಿಗೆರೆಯಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೂಡಿಗೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕಮಗಳೂರು: ಈ ಚೀಟಿಯಲ್ಲಿ ಬರೆಯಲು ಜಾಗ ಇಲ್ಲ. ಬೇರೆ ಚೀಟಿ ಬರೆಸಿಕೊಂಡು ಬನ್ನಿ ಎಂದಿದ್ದಕ್ಕೆ ರೋಗಿಯ ಜೊತೆ ಬಂದಿದ್ದ ಯುವಕನೊಬ್ಬ ವೈದ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಹಮದ್ ಎಂಬ ಯುವಕ ವಯಸ್ಸಾದ ವೃದ್ಧರನ್ನು ಸಂತೋಷ್ ಎಂಬ ವೈದ್ಯರ ಕೊಠಡಿ ಮುಂಭಾಗ ಕೂರಿಸಿ, ವೈದ್ಯರ ಬಳಿ ಚೀಟಿ ತೆಗೆದುಕೊಂಡು ಹೋಗಿದ್ದಾನೆ. ವೈದ್ಯ ಸಂತೋಷ್ ಈ ಚೀಟಿಯಲ್ಲಿ ಬರೆಯಲು ಜಾಗ ಇಲ್ಲ ಬೇರೆ ಚೀಟಿ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಅಷ್ಟಕ್ಕೆ ಆ ಯುವಕ ನೀನು ನೋಡದಿದ್ದರೆ ಬೇಡ. ಬೇರೆ ಕಡೆ ತೋರಿಸುತ್ತೇನೆ ಎಂದು ಬಾಗಿಲನ್ನು ಜೋರಾಗಿ ಎಳೆದುಕೊಂಡು ಅಲ್ಲಿಂದ ಹೋಗಿದ್ದಾನೆ.

ಈ ಘಟನೆಯಾದ ಸ್ವಲ್ಪ ಸಮಯದ ನಂತರ ಅಹಮದ್ ಎಂಬ ಯುವಕ ನಾಲ್ಕೈದು ಜನರೊಂದಿಗೆ ಆಸ್ಪತ್ರೆಗೆ ಬಂದು ನನ್ನ ತಂದೆಯನ್ನು ಏಕೆ ನೋಡಲಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ವೈದ್ಯ ಸಂತೋಷ್ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವೈದ್ಯರ ಜೊತೆ ಗಲಾಟೆ ಮಾಡಿದ ಯುವಕರು, ನೀನು ಹೊರಗೆ ಬಾ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವೈದ್ಯ ಸಂತೋಷ್ ದೂರಿದ್ದಾರೆ. ಇನ್ನು ಘಟನೆ ನಡೆಯುವ ವೇಳೆ ಸಾರ್ವಜನಿಕರು ಯುವಕನಿಗೆ ಬುದ್ದಿ ಹೇಳಲು ಹೋದರೆ ಅವರಿಗೂ ಕೂಡ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾನೆ ಎನ್ನಲಾಗಿದೆ. ಇನ್ನು ಕೊರೋನಾ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದರು ವೈದ್ಯರು ತಮ್ಮ ಕುಟುಂಬಗಳನ್ನು ಬಿಟ್ಟು ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿರುವುದನ್ನು ಸ್ಥಳೀಯರು ಖಂಡಿಸಿದ್ದಾರೆ.

ಇದನ್ನು ಓದಿ: ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ತೀವ್ರಗೊಂಡ ಮಳೆ; ಕಾವೇರಿ ನದಿ ಪಾತ್ರದ ಜನರಲ್ಲಿ ಹೆಚ್ಚಿದ ಆತಂಕ

ಇನ್ನು ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ವೈದ್ಯ ಸಂತೋಷ್ ಮೇಲಾಧಿಕಾರಿಗಳ ಗಮನಕ್ಕೆ ತಂದು ಮೂಡಿಗೆರೆಯಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೂಡಿಗೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Published by:HR Ramesh
First published: