• Home
  • »
  • News
  • »
  • district
  • »
  • ಕರಾವಳಿಯಲ್ಲಿ ಆಷಾಢ ಅಮಾವಾಸ್ಯೆ ಆಚರಣೆ ; ಕೊರೋನಾ ನಡುವೆ ಮಹತ್ವ ಪಡೆದ ಆಟಿ ಕಷಾಯ

ಕರಾವಳಿಯಲ್ಲಿ ಆಷಾಢ ಅಮಾವಾಸ್ಯೆ ಆಚರಣೆ ; ಕೊರೋನಾ ನಡುವೆ ಮಹತ್ವ ಪಡೆದ ಆಟಿ ಕಷಾಯ

ಆಟಿ ಕಷಾಯ

ಆಟಿ ಕಷಾಯ

ಆಟಿ ಅಮಾವಾಸ್ಯೆಯಲ್ಲಿ ಕರಾವಳಿಗರು ಕುಡಿಯುವಂತಹ ಕಷಾಯಕ್ಕೆ ಅತ್ಯಂತ ಮಹತ್ವವಿದೆ. ತುಳುವಿನಲ್ಲಿ ಪಾಲೆ ಮರ ಹಾಗೂ ಕನ್ನಡದಲ್ಲಿ ಹಾಳೆ ಮರ ಎಂದು ಕರೆಯುವ ಮರದ ತೊಗಟೆಯಿಂದ ಅಮಾವಾಸ್ಯೆ ದಿನ ಕಷಾಯವನ್ನು ತಯಾರಿಸಿ ಕುಡಿಯುವುದು ಇಲ್ಲಿನ ಪ್ರಮುಖ ಆಚರಣಾ ವಿಧಿಯಾಗಿದೆ

  • Share this:

ಮಂಗಳೂರು(ಜುಲೈ.20): ರಾಜ್ಯದಲ್ಲಿ ಹಲವೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಮಹಾಮಾರಿಯ ನಡುವೆಯೇ ಕರಾವಳಿಯಲ್ಲಿ ಇಂದು ಆಷಾಢ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಕರಾವಳಿಯಾದ್ಯಂತ ಆಟಿ ಅಮಾವಾಸ್ಯೆ ಎಂದು ಕರೆಯಲ್ಪಡುವ ಈ ಆಚರಣೆಯ ಪ್ರಮುಖ ಕೇಂದ್ರಬಿಂದು ಆಟಿ ಕಷಾಯ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆಷಾಢದ ಈ ಕಷಾಯಕ್ಕೂ ಇದೀಗ ಮಹತ್ವ ಬಂದಿದೆ. 


ರಾಜ್ಯದ ಹಲವೆಡೆಗಳಲ್ಲಿ ಕೊರೋನಾ ಮಹಾಮಾರಿ ಕಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೋನಾ ಹಿನ್ನಲೆಯಲ್ಲಿ ಜನರ ಎಲ್ಲಾ ಆಚರಣೆಗಳಿಗೂ ಬಹುತೇಕ ಬ್ರೇಕ್ ಬಿದ್ದಿದೆ. ಕರಾವಳಿ ಭಾಗದ ಜನ ಆಷಾಢ ಅಮಾವಾಸ್ಯೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರಕೃತಿಯ ಆರಾಧನೆಯ ಮೂಲಕವೇ ಧಾರ್ಮಿಕ ನಂಬಿಕೆಗಳನ್ನು ಬೆಳೆಸಿಕೊಂಡು ಬಂದಿರುವ ಕರಾವಳಿಯ ಜನರಿಗೆ ಆಷಾಢ ಮಾಸ ಅತ್ಯಂತ ಕಷ್ಟದಿಂದ ಕೂಡಿದ ಮಾಸ ಎನ್ನುವ ನಂಬಿಕೆಯೂ ಇದೆ. ಈ ಮಾಸದಲ್ಲಿ ಭಾರೀ ಮಳೆ, ಭಾರೀ ಬಿಸಿಲು ಇರುವ ಕಾರಣ ಈ ಮಾಸದಲ್ಲಿ ರೋಗರುಜಿನಗಳು ಹೆಚ್ಚಾಗುತ್ತದೆ ಎನ್ನುವ ನಿರೀಕ್ಷೆಯೂ ಇದೆ. ಇದೇ ಕಾರಣಕ್ಕಾಗಿ ಆಷಾಡ ಮಾಸದ ಆರಂಭದ ದಿನವನ್ನು ಈ ಭಾಗದ ಜನ ಆಟಿ ಅಮಾವಾಸ್ಯೆ ಎನ್ನುವ ಹೆಸರಿನಲ್ಲಿ ಆಚರಿಸುತ್ತಾರೆ.


ಈ ದಿನದಂದು ದಕ್ಷಿಣಕನ್ನಡ ಜಿಲ್ಲೆಯ ಜನ ಶಿವಕ್ಷೇತ್ರವಾದ ಕಾರಿಂಜ ಮತ್ತು ನರಹರಿ ಬೆಟ್ಟದಲ್ಲಿ ತೀರ್ಥಸ್ನಾನವನ್ನು ನೆರವೇರಿಸುವ ಮೂಲಕ ತಮ್ಮ ದಿನಚರಿಯನ್ನು ಆರಂಭಿಸುತ್ತಾರೆ. ಆಟಿ ಅಮಾವಾಸ್ಯೆಯಲ್ಲಿ ಕರಾವಳಿಗರು ಕುಡಿಯುವಂತಹ ಕಷಾಯಕ್ಕೆ ಅತ್ಯಂತ ಮಹತ್ವವಿದೆ. ತುಳುವಿನಲ್ಲಿ ಪಾಲೆ ಮರ ಹಾಗೂ ಕನ್ನಡದಲ್ಲಿ ಹಾಳೆ ಮರ ಎಂದು ಕರೆಯುವ ಮರದ ತೊಗಟೆಯಿಂದ ಅಮಾವಾಸ್ಯೆ ದಿನ ಕಷಾಯವನ್ನು ತಯಾರಿಸಿ ಕುಡಿಯುವುದು ಇಲ್ಲಿನ ಪ್ರಮುಖ ಆಚರಣಾ ವಿಧಿಯಾಗಿದೆ. ಅಮಾವಾಸ್ಯೆಯ ದಿನ ಈ ಮರದ ತೊಗಟೆಯಲ್ಲಿ ಅತ್ಯಂತ ಹೆಚ್ಚಿನ ಔಷಧೀಯ ಗುಣಗಳು ಸೇರಿಕೊಂಡಿರುತ್ತದೆ ಎನ್ನುವುದು ಕರಾವಳಿ ಜನರ ನಂಬಿಕೆ. ಈ ಕಾರಣಕ್ಕಾಗಿ ಕರಾವಳಿಯ ಬಹುತೇಕ ಎಲ್ಲಾ ಮನೆಗಳಲ್ಲಿ ಈ ಕಷಾಯವನ್ನು ತಯಾರಿಸಿ ಹಿರಿಯರಿಂದ ಹಿಡಿದು ಕಿರಿಯರವರೆಗಿನ ಎಲ್ಲಾ ವಯೋಮಾನದವರಿಗೆ ನೀಡಲಾಗುತ್ತದೆ.


ಅಮಾವಾಸ್ಯೆಯಂದು ಕುಡಿಯುವ ಈ ಕಷಾಯದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆಯೂ ಆಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆಯು ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ಆಟಿ ಅಮಾವಾಸ್ಯೆಯ ಈ ಕಷಾಯಕ್ಕೆ ಭಾರೀ ಮಹತ್ವವೂ ಬಂದಿದೆ ಎನ್ನುತ್ತಾರೆ ಮಂಗಳೂರು ನಿವಾಸಿ ಹರ್ಷಿತ್ ಬಳ್ಳಾಲ್.


ಇದನ್ನೂ ಓದಿ : Bheemana Amavasya 2020: ಭೀಮನ ಅಮಾವಾಸ್ಯೆ ಹಿನ್ನೆಲೆ ದೇವಸ್ಥಾನಗಳ ಬಳಿ ಭಕ್ತ ದಂಡು ; ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ


ಆಟಿ ಅಮಾವಾಸ್ಯೆಯಂದು ಪ್ರತಿಯೊಬ್ಬರು ಈ ಕಷಾಯವನ್ನು ಕುಡಿಯಬೇಕು ಎನ್ನುವ ಅಲಿಖಿತ ಶಿಷ್ಟಾಚಾರವಿದೆ. ಆದರೆ ಇದನ್ನು ಕೆಲವು ಮಂದಿ ಪಾಲಿಸದೇ ಇದ್ದವರು ಈ ಬಾರಿ ಮಾತ್ರ ತಪ್ಪದೇ ಕಷಾಯ ಕುಡಿಯಲಾರಂಭಿಸಿದ್ದಾರೆ.ಕೊರೋನಾ ಭಯದ ನಡುವೆ ಆಟಿ ಅಮಾವಾಸ್ಯೆಯ ಹಾಳೆ ಮರದ ಕಷಾಯಕ್ಕೆ ಭಾರೀ ಮಹತ್ವವೂ ಬಂದಿದೆ. ಈ ಕಷಾಯದ ಮೂಲಕವಾದರೂ ಕೊರೋನಾ ನಿಯಂತ್ರಣ ಸಾಧ್ಯವೇ ಎನ್ನುವ ಭರವಸೆಯಲ್ಲೂ ಕರಾವಳಿಯ ಜನರಿದ್ದಾರೆ.

Published by:G Hareeshkumar
First published: