ಲಾಕ್​ಡೌನ್ ವೇಳೆ ಜನರಿಗೆ ಆಹಾರ ಕಿಟ್ ಹಂಚಿದ್ದ ವಿಜಯಪುರದ ಶಾಸಕನಿಗೆ ಒಲಿಯಿತು ಆಹಾರ ಮತ್ತು ಸರಬರಾಜು ನಿಗಮ ಸ್ಥಾನ

ನಿಗಮ ಮತ್ತು ಮಂಡಳಿಗೆ ನೇಮಕಾತಿ ಕುರಿತು ಸಿಎಂ ತಮ್ಮ ಜೊತೆ ಚರ್ಚೆ ಕೂಡ ಮಾಡಲಿಲ್ಲ. ತಾನೂ ಕೂಡ ಏನೂ ಕೇಳಿರಲಿಲ್ಲ. ಈ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬಯಸದೇ ಬಂದ ಭಾಗ್ಯ ಎಂದು ಎಎಸ್ ಪಾಟೀಲ ನಡಹಳ್ಳಿ ಹೇಳಿದ್ದಾರೆ.

ಎಎಸ್ ಪಾಟೀಲ ನಡಹಳ್ಳಿ

ಎಎಸ್ ಪಾಟೀಲ ನಡಹಳ್ಳಿ

  • Share this:
ವಿಜಯಪುರ: ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿದೆ. ಇದೇ ಸಂದರ್ಭದಲ್ಲಿ ಸಿಎಂ ತಮ್ಮ ಆಪ್ತ 24 ಜನ ಶಾಸಕರಿಗೆ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿದ್ದಾರೆ.  ಈ ಅಧ್ಯಕ್ಷರ ಪಟ್ಟಿಯಲ್ಲಿ ಬಸವನಾಡು ವಿಜಯಪುರ ಜಿಲ್ಲೆಗೂ ಅವಕಾಶ ಒದಗಿ ಬಂದಿದ್ದು, ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಕೊರೋನಾ ಎಮರ್ಜೆನ್ಸಿ ಮತ್ತು ಲಾಕ್​ಡೌನ್ ಹಿನ್ನೆಲೆಯಲ್ಲಿ ಮುದ್ದೇಬಿಹಾಳದಲ್ಲಿಯೇ ಕುಟುಂಬ ಸಮೇತ ಉಳಿದುಕೊಂಡಿದ್ದ ಎ.ಎಸ್. ಪಾಟೀಲ ನಡಹಳ್ಳಿ ಅವರಿಗೆ ಈ ಬೆಳವಣಿಗೆ ಸಂತಸ ತಂದಿದೆ. ಈ ಕುರಿತು ನ್ಯೂಸ್ 18 ಜೊತೆ ಮಾತನಾಡಿದ ಅವರು, ನಿಗಮ ಮತ್ತು ಮಂಡಳಿಗೆ ನೇಮಕಾತಿ ಕುರಿತು ಸಿಎಂ ತಮ್ಮ ಜೊತೆ ಚರ್ಚೆ ಕೂಡ ಮಾಡಲಿಲ್ಲ. ತಾನೂ ಕೂಡ ಏನೂ ಕೇಳಿರಲಿಲ್ಲ. ಈ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬಯಸದೇ ಬಂದ ಭಾಗ್ಯ ಎಂದು ಹೇಳಿದ್ದಾರೆ.

ರಾಜ್ಯ ಸರಕಾರ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಳೆದ ಒಂದು ವರ್ಷದಿಂದ ಉತ್ತಮವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಜನಸಾಮಾನ್ಯರ ಸರ್ವತೋಮುಖ ಅಭಿವೃದ್ಧಿಗಾಗಿ ಸಿಎಂ ಪಣತೊಟ್ಟಿದ್ದಾರೆ. ಅವರ ಕೈ ಬಲಪಡಿಸುವಲ್ಲಿ ಮತ್ತು ಪಕ್ಷವನ್ನು ಬಲಪಡಿಸುವಲ್ಲಿ ನಾವೆಲ್ಲ ಕೈಜೋಡಿಸಿದ್ದೇವೆ  ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನನಗೆ ನಿಗಮ ಮಂಡಳಿ ಘೋಷಿಸಿ ಅವಮಾನ: ಚಿತ್ರದುರ್ಗದ ಶಾಸಕ ಜಿಹೆಚ್ ತಿಪ್ಪಾರೆಡ್ಡಿ

ಇದೇ ವೇಳೆ ತಮ್ಮನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ನೇಮಕ ಮಾಡಿರುವ ಸಿಎಂಗೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುವೆ. ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿ ರಾಜ್ಯದಲ್ಲಿ ಬಿಜೆಪಿ ಮುಂದಿನ ಬಾರಿ ಮತ್ತೆ ಅಧಿಕಾರಕ್ಕೆ ಬರಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನೂತನ ಅಧ್ಯಕ್ಷ ಮತ್ತು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಪಣ ತೊಟ್ಟಿದ್ದಾರೆ.

AS Patil Nadahalli
ಶ್ರಮಿಕ ಜನರಿಗೆ ಅನ್ನಾಹಾರ ನೀಡುತ್ತಿರುವ ಶಾಸಕ ನಡಹಳ್ಳಿ


ಕೊರೊನಾ ಎಮರ್ಜೆನ್ಸಿ ಸಂದರ್ಭದಲ್ಲಿ ಲಾಕ್​ಡೌನ್ ಘೋಷಣೆಯಾಗಿತ್ತು. ಈ ಸಂದರ್ಭದಲ್ಲಿ ಸಹಸ್ರಾರು ಜನರು ದೇಶದೆಲ್ಲೆಡೆಯಿಂದ, ಅದರಲ್ಲಿಯೂ ಗೋವಾದಿಂದ ಹಾಗೂ ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಡಹಳ್ಳಿ ತಮ್ಮ ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯ ನಾನಾ ಗ್ರಾಮಗಳಿಗೆ ಮರಳಿದ ಮತ್ತು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿದ್ದ ಜನರಿಗೆ ಕೋಟ್ಯಂತರ ರೂ ವೆಚ್ಚ ಮಾಡಿ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದರು.

ಇದನ್ನೂ ಓದಿ: ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನಿರಾಕರಿಸಿದ ತೇರದಾಳ ಶಾಸಕ ಸಿದ್ದು ಸವದಿ

ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯ 25,000 ಜನರಿಗೆ ಕಿಟ್ ವಿತರಿಸಿದ್ದಷ್ಟೇ ಅಲ್ಲ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮುದ್ದೇಬಿಹಾಳ ಮತ್ತು ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಜನರಿಗೆ ಹೋಳಿಗೆ ಮತ್ತು ಶೀಕರ್ಣಿ ಊಟವನ್ನು ಹಾಕಿದ್ದರು. ಪತ್ನಿ ಜೊತೆಗೂಡಿ ಅಂದು ಲಾಕ್​ಡೌನ್ ಸಂದರ್ಭದಲ್ಲಿ ಬಡ ವಲಸಿಗರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಆಹಾರವನ್ನೂ ಹಾಕಿದ್ದ ಶಾಸಕ ನಡಹಳ್ಳಿ ಅವರಿಗೆ ಈಗ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಸ್ಥಾನ ಒಲಿದು ಬಂದಿರುವುದು ಗಮನಾರ್ಹವಾಗಿದೆ.

Muddebihal MLA AS Patil Nadahalli with his wife
ಎ.ಎಸ್. ಪಾಟೀಲ ನಡಹಳ್ಳಿ


ದೇವರ ಹಿಪ್ಪರಗಿ ಮತಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಎ.ಎಸ್. ಪಾಟೀಲ ನಡಹಳ್ಳಿ, ನಂತರ ಜೆಡಿಎಸ್ ಸೇರಿದ್ದರು.  ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ನಡಹಳ್ಳಿ ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ನಡಹಳ್ಳಿ ಅವರಿಗೆ ಸರಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ನಿಗಮ ಮತ್ತು ಮಂಡಳಿಯ ಅಧ್ಯಕ್ಷ ಸ್ಥಾನದ ಗಿಫ್ಟ್ ಸಿಕ್ಕಿದೆ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: