ಹಾಸನದಲ್ಲಿ ನಯಾ ಲಾಕ್​ಡೌನ್; ಸ್ವಯಂಪ್ರೇರಿತವಾಗಿ ದಿಗ್ಬಂಧನ ಹಾಕಿಕೊಂಡ ಜನರು

ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ, ಅರಸೀಕೆರೆ ತಾಲೂಕುಗಳಲ್ಲಿ ಹೊಸ ಲಾಕ್ಡೌನ್ಗೆ ಸ್ವಯಂ ಪ್ರೇರಿತವಾಗಿ ಜನರು ನಿರ್ಧರಿಸಿದ್ದಾರೆ. ಅತಿಹೆಚ್ಚು ಪ್ರಕರಣ ಇರುವ ಚನ್ನರಾಯಪಟ್ಟಣದಲ್ಲಿ ವಾರದಲ್ಲಿ 3 ದಿನ ಮಾತ್ರ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ.

ಹಾಸನದಲ್ಲಿ ಲಾಕ್​ಡೌನ್ ದೃಶ್ಯ

ಹಾಸನದಲ್ಲಿ ಲಾಕ್​ಡೌನ್ ದೃಶ್ಯ

  • Share this:
ಹಾಸನ(ಜುಲೈ 07): ಹಾಸನ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಅಬ್ಬರ ಹೆಚ್ಚಾಗುತ್ತಿದ್ದು ಭೀತಿ ಮೂಡಿಸುತ್ತಿದೆ. ಕೊರೋನಾವನ್ನು ತಡೆಯಲು ಸಂಕಲ್ಪ ತೊಟ್ಟಿರುವ ಹಾಸನ ಜನರು ಸ್ವಯಂ ಪ್ರೇರಿತವಾಗಿ ಹೋರಾಟಕ್ಕೆ ಇಳಿದಿದ್ದಾರೆ. ಸರ್ಕಾರದ ಆದೇಶ ಇಲ್ಲದಿದ್ದರೂ ಹಾಸನ ಜಿಲ್ಲೆ ಭಾಗಶಃ ಲಾಕ್‌ಡೌನ್ ಆಗುತ್ತಿದೆ.

ಹಾಸನ ಜಿಲ್ಲೆಯಲ್ಲಿ ಇದುವರೆಗೂ 568 ಕೊರೋನಾ ಕೇಸ್ ದಾಖಲಾಗಿದ್ದು ಅದರಲ್ಲಿ 276 ಜನ ಗುಣಮುಖರಾಗಿದ್ರೆ 281 ಕೇಸ್‌ಗಳು ಆಕ್ಟೀವ್ ಇವೆ. 11 ಜನ ಮೃತಪಟ್ಟಿದ್ದಾರೆ. ಹೀಗಾಗಿ ಹಾಸನ ಜಿಲ್ಲೆಯ ಜನರು ಸರ್ಕಾರದ ಆದೇಶ ಇಲ್ಲದಿದ್ರು ಸ್ವಯಂ ಪ್ರೇರಿತವಾಗಿ ನಯಾ ಲಾಕ್‌ಡೌನ್ ಮಾಡಲು ಮುಂದಾಗಿದ್ದಾರೆ. ಹಾಸನ ಜಿಲ್ಲೆಯಲ್ಲೇ ಚನ್ನರಾಯಪಟ್ಟಣದಲ್ಲಿ ಅತೀ ಹೆಚ್ಚು ಅಂದರೆ 227 ಕೇಸ್ ದಾಖಲಾಗಿದ್ದು ಸಮುದಾಯಕ್ಕೆ ಹರಡುವ ಭೀತಿ ಶುರುವಾಗಿದೆ. ಹೀಗಾಗಿ ಚನ್ನರಾಯಪಟ್ಟಣ ತಾಲ್ಲೂಕನ್ನು ಇಂದಿನಿಂದ 14 ದಿನ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಅಗತ್ಯ ವಸ್ತುಕೊಳ್ಳಲು 12 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: M Vasudeva Maiya Suicide: ತನಿಖೆಯ ನಂತರ ವಾಸುದೇವ ಮಯ್ಯ ಆತ್ಮಹತ್ಯೆಯ ಸತ್ಯಾಂಶ ಹೊರಬರಲಿದೆ; ಬಸವರಾಜ ಬೊಮ್ಮಾಯಿ

ಚನ್ನರಾಯಪಟ್ಟಣ ಅಷ್ಟೇ ಅಲ್ಲದೆ ಹಾಸನ, ಹೊಳೆನರಸೀಪುರ, ಅರಸೀಕೆರೆಯಲ್ಲಿ ಕೂಡ ನಯಾ ಲಾಕ್‌ಡೌನ್‌ಗೆ ಸ್ವಯಂ ಪ್ರೇರಿತವಾಗಿ ನಿರ್ಧರಿಸಿದ್ದಾರೆ. ಅರಸೀಕೆರೆಯಲ್ಲಿ ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆವರೆಗೆ ಮಾತ್ರ ಪ್ರತಿ ದಿನ ಅಂಗಡಿ ತೆರೆಯಲು ಅವಕಾಶ ನಿರ್ಧರಿಸಿದ್ದಾರೆ. ಹೊಳೆನರಸೀಪುರದಲ್ಲಿ ಬೆಳಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆವರೆಗೆ ಮಾತ್ರ ಅಂಗಡಿ ತೆರೆಯಲು ನಿರ್ಧಾರ ಮಾಡಿದ್ರೆ, ಹಾಸನದಲ್ಲಿ ಬೆಳಗ್ಗೆ ಆರರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಂಗಡಿ ತೆರೆಯಲು ನಿರ್ಧರಿಸಿದ್ದು ಶನಿವಾರ, ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುತ್ತಿದೆ.ಒಟ್ಟಾರೆ ಕೊರೋನ ವಿರುದ್ಧ  ಹೋರಾಟದಲ್ಲಿ ಕೇವಲ ಸರ್ಕಾರ ಅಷ್ಟೇ ಎಲ್ಲಾ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ನಾವು ಕೂಡ ಕೊರೋನ ತಡೆಯುವ ನಿಟ್ಟಿನಲ್ಲಿ ನಿರ್ಧಾರ ಮಾಡಬೇಕಿದೆ ಎಂದು ಹಾಸನ ಜನ ಹೊಸ ಲಾಕ್‌ಡೌನ್‌ಗೆ ಮುಂದಾಗುವುದರ ಜೊತೆಗೆ ಕೊರೋನ ವಿರುದ್ಧ ಹೋರಾಟಕ್ಕೆ ಸ್ವಯಂ ಪ್ರೇರಿತವಾಗಿ ಮುಂದಾಗಿದ್ದಾರೆ.

ವರದಿ: ಡಿಎಂಜಿ ಹಳ್ಳಿ ಅಶೋಕ್
Published by:Vijayasarthy SN
First published: