• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕಲಾವಿದನ ಕುಂಚ ವೈಭವಕ್ಕೆ ಸಾಕ್ಷಿಯಾದ ಡೈಮಂಡ್ ಸ್ಟ್ರೋಕ್ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ!

ಕಲಾವಿದನ ಕುಂಚ ವೈಭವಕ್ಕೆ ಸಾಕ್ಷಿಯಾದ ಡೈಮಂಡ್ ಸ್ಟ್ರೋಕ್ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ!

ಕಲಾವಿದ ಶಿವಹಾದಿಮನಿ ಕುಂಚದಲ್ಲಿ ಅರಳಿರುವ ಚಿತ್ರ.

ಕಲಾವಿದ ಶಿವಹಾದಿಮನಿ ಕುಂಚದಲ್ಲಿ ಅರಳಿರುವ ಚಿತ್ರ.

ಆರ್ಟ್ ಮಾಸ್ಟರ್ ಡಿಪ್ಲೋಮಾ ವ್ಯಾಸಂಗ ಮಾಡಿರುವ ಶಿವಹಾದಿಮನಿ, ಚಿತ್ರ ಕಲೆಯ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವುದು ತಮ್ಮ ಚಿತ್ರ ಕಲಾ ಪ್ರದರ್ಶನದ ಉದ್ದೇಶವಾಗಿದೆಯೇ ಹೊರತು ಮಾರಾಟದ ಉದ್ದೇಶವಲ್ಲ, ಆದರೂ ನನ್ನ ಚಿತ್ರಕಲೆಯಿಂದ ಆಕರ್ಷಿತರಾಗಿ ಜನರೇ ಖರೀದಿಸುತ್ತಾರೆ ಎನ್ನುತ್ತಾರೆ.

  • Share this:

ಚಾಮರಾಜನಗರ (ಏ.07) ಮೈಸೂರು ಶೈಲಿ, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಹೀಗೆ ಹಲವು ರೀತಿಯ ಚಿತ್ರಕಲೆಗಳು  ಕಲಾವಿದರ ಕುಂಚದಲ್ಲಿ ಅರಳುವುದು ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲೆಯಲ್ಲೊಬ್ಬ ಕಲಾವಿದ ತಮ್ಮದೇ ಆದ ಕುಂಚ ವೈಭವ ರೂಢಿಸಿಕೊಂಡಿದ್ದಾರೆ. ಇವರ ವಿಶಿಷ್ಟ ರೀತಿಯ ಚಿತ್ರಕಲೆಗಳು ಜನಮನ ಅಕರ್ಷಿಸುತ್ತಿವೆ. ಇವರ ಪ್ರತಿಯೊಂದು ಚಿತ್ರಕಲೆಯಲ್ಲು ವಜ್ರಗಳ ಪ್ರತಿರೂಪ ಅನಾವರಣಗೊಂಡಿದೆ. ಹಾಗಾಗಿಯೇ ಇವರ ಚಿತ್ರಕಲೆಗೆ ಡೈಮಂಡ್ ಸ್ಟ್ರೋಕ್ ಪೇಯಿಂಟಿಂಗ್ ಎಂಬ ಹೆಸರು ಬಂದಿದೆ.


ಹೌದು, ಮೂಲತಃ ಹಾವೇರಿ ಜಿಲ್ಲೆಯ ಶಿವಹಾದಿಮನಿ ಎಂಬ ಕಲಾವಿದ ಪ್ರಸ್ತುತ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ  ನಿವಾಸಿಯಾಗಿದ್ದಾರೆ. 2011 ರಿಂದ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿರುವ ಶಿವಹಾದಿಮನಿ ಅವರ ಡೈಮಂಡ್ ಸ್ಟ್ರೋಕ್ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜನೆಗೊಂಡಿದ್ದು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಶಿವಹಾದಿಮನಿ ಅವರು ಬಹಳಷ್ಟು ಪರಿಶ್ರಮದಿಂದ ರಚಿಸಿರುವ 30ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ವಿಶಿಷ್ಟ ಬಗೆಯ ಕಲಾಪ್ರಕಾರ ಅನಾವರಣಗೊಂಡಿದೆ.


ರಾಧಾಕೃಷ್ಣ, ಶಿವಪಾರ್ವತಿ, ರಾಮಾಯಣ, ಮಹಾಭಾರತ, ಯಕ್ಷಗಾನ, ಕಂಬಳ, ಹೀಗೆ ಹತ್ತು ಹಲವು ರೀತಿಯ ಚಿತ್ರಗಳು ಆಕರ್ಷಕವಾಗಿದ್ದು ನೋಡುಗರಲ್ಲಿ ಬೆರಗು ಮೂಡಿಸುತ್ತಿವೆ. ವಿವಿಧ ರೀತಿಯಲ್ಲಿ ಕುಸುರಿ ಮಾಡಿದ ವಜ್ರಗಳನ್ನು ಚಿತ್ರಗಳಲ್ಲಿ ಅರಳಿಸಿದಂತೆ ಕಾಣುವ ಇವರ ಚಿತ್ರಕಲೆ ಡೈಮಂಡ್ ಸ್ಟ್ರೋಕ್ ಎಂಬುದಕ್ಕೆ ಅನ್ವರ್ಥವಾಗಿ ಮೂಡಿಬಂದಿದೆ. ಕಲಾವಿದನ ಸೃಜನಶೀಲ ಸಾಮರ್ಥ್ಯವನ್ನು ಅನಾವರಣಗೊಳಿಸಿದೆ. ಇದೊಂದು ಹೊಸ ಕಲಾಪ್ರಕಾರವಾಗಿದ್ದು ಹೆಚ್ಚಾಗಿ ಭಾರತೀಯ ಪರಂಪರೆಯನ್ನು ಬಿಂಬಿಸುತ್ತಿದೆ.


ಕಲಾವಿದ ಯಾವತ್ತೂ ನಿಂತ ನೀರಾಗಬಾರದು, ಹರಿಯುವ ನೀರಾಗಬೇಕು. ಹೊಸ ಹೊಸ ಪ್ರಯತ್ನ ಮಾಡುತ್ತಿರಬೇಕು ಎಂಬ ಮಾತಿಗೆ ತಕ್ಕಂತೆ ಶಿವಹಾದಿಮನಿ ಹೊಸ ಪ್ರಯತ್ನಕ್ಕೆ ಕೈ ಹಾಕುವ ಮೂಲಕ ಯಶಸ್ಸು ಕಂಡಿದ್ದಾರೆ. ಬೆಂಗಳೂರಿನಲ್ಲಿ ನಾಲ್ಕು, ಮಂಗಳೂರಿನಲ್ಲಿ ನಾಲ್ಕು, ಉಡುಪಿಯಲ್ಲಿ ಮೂರು, ಕೊಯಮತ್ತೂರಿನಲ್ಲಿ ನಾಲ್ಕು, ದೆಹಲಿಯಲ್ಲಿ ನಾಲ್ಕು, ಮುಂಬೈನಲ್ಲಿ ಒಂದು ಹೀಗೆ ದೇಶದ ವಿವಿಧೆಡೆ  20 ಕಡೆ ಇವರ ಡೈಮಂಡ್ ಸ್ಟ್ರೋಕ್ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜನೆಗೊಂಡು ಜನಮನ್ನಣೆ ಗಳಿಸಿದೆ. ಇವರ ಕುಂಚದಲ್ಲಿ ಅರಳಿದ ಚಿತ್ರಗಳಿಗೆ ದೇಶ- ವಿದೇಶಗಳಲ್ಲಿ ಬೇಡಿಕೆ ಬರತೊಡಗಿದೆ.


ಚಿತ್ರ ಕಲಾವಿದ ಶಿವಹಾದಿಮನಿ


ಕಲಾವಿದ ಶಿವಹಾದಿಮನಿ ಕುಂಚದಲ್ಲಿ ಅರಳಿರುವ ಚಿತ್ರ.


ಇದನ್ನು ಓದಿ: ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ಈಡೇರಿಸಿದರೆ ಮಾತ್ರ ಸಾರಿಗೆ ಸತ್ಯಾಗ್ರಹ ನಿಲ್ಲಿಸುತ್ತೇವೆ; ಕೋಡಿಹಳ್ಳಿ ಚಂದ್ರಶೇಖರ್!


ಆರ್ಟ್ ಮಾಸ್ಟರ್ ಡಿಪ್ಲೋಮಾ ವ್ಯಾಸಂಗ ಮಾಡಿರುವ ಶಿವಹಾದಿಮನಿ, ಚಿತ್ರ ಕಲೆಯ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವುದು ತಮ್ಮ ಚಿತ್ರ ಕಲಾ ಪ್ರದರ್ಶನದ ಉದ್ದೇಶವಾಗಿದೆಯೇ ಹೊರತು ಮಾರಾಟದ ಉದ್ದೇಶವಲ್ಲ, ಆದರೂ ನನ್ನ ಚಿತ್ರಕಲೆಯಿಂದ ಆಕರ್ಷಿತರಾಗಿ ಜನರೇ ಖರೀದಿಸುತ್ತಾರೆ ಎನ್ನುತ್ತಾರೆ.


ಚಾಮರಾಜನಗರ ಜಿಲ್ಲೆಯಲ್ಲೇ ವಾಸವಾಗಿದ್ದರೂ ಚಾಮರಾಜನಗರದಲ್ಲಿ ಚಿತ್ರಕಲಾ ಗ್ಯಾಲರಿ ಸಮಸ್ಯೆಯಿಂದ ಇಲ್ಲಿಯ ತನಕ ಚಿತ್ರಕಲಾ ಪ್ರದರ್ಶನ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಪ್ರತಿದಿನ ನೂರಾರು ಮಂದಿ ಭೇಟಿ ನೀಡುವ ಜಿಲ್ಲಾಡಳಿತ ಭವನದ ಪ್ರವೇಶಾಂಗಣದಲ್ಲೇ  ಚಿತ್ರಕಲಾ ಪ್ರದರ್ಶನಕ್ಕೆ ಅವಕಾಶ ದೊರಕಿರುವುದು ಡೈಮಂಡ್ ಸ್ಟ್ರೋಕ್ ಎಂಬ ನನ್ನ  ಹೊಸ ಕಲಾ ಪ್ರಕಾರಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗಿದೆ ಎಂದು ಚಿತ್ರಕಲಾವಿದ ಶಿವಹಾದಿಮನಿ ಸಂತಸ ವ್ಯಕ್ತಪಡಿಸಿದ್ದಾರೆ


ವರದಿ: ಎಸ್.ಎಂ.ನಂದೀಶ್

Published by:HR Ramesh
First published: