ಶಿವಮೊಗ್ಗ(ಆಗಸ್ಟ್ .02): ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಮತ್ತೇ ಸಂಕಷ್ಟ ಎದುರಾಗಿದೆ. ಒಂದು ಕಡೆ ಅಡಿಕೆಗೆ ಸೂಕ್ತ ಬೆಲೆ ಇಲ್ಲದೇ ರೈತರು ಕಷ್ಟ ಅನುಭವಿಸುತ್ತಿದ್ದರೆ, ಮತ್ತೊಂದು ಕಡೆ ಮಳೆಗಾಲದ ಸಮಯದಲ್ಲಿ ಅಡಿಕೆ ಬೆಳೆಗೆ ರೋಗಗಳು ಬಾಧಿಸುತ್ತಿರುವುದು ನುಂಗಲಾರದ ತುತ್ತಾಗಿದೆ. ಅಡಿಕೆಯನ್ನೇ ನಂಬಿ ಕೃಷಿ ಮಾಡುತ್ತಿರುವ ರೈತರು ಅಡಿಕೆ ಬೆಳೆಗೆ ತಿಲಾಂಜಲಿ ಹಿಡುವಂತ ಪರಿಸ್ಥಿತಿ ಮಲೆನಾಡಿನಲ್ಲಿ ನಿರ್ಮಾಣವಾಗುತ್ತಿದೆ. ಬೆಂಬಲ ಬೆಲೆ ಜೊತೆಗೆ ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರೈತರು ಆಗ್ರಹವಾಗಿದೆ.
ಮಲೆನಾಡಿನ ಸಾಂಪ್ರದಾಯಕ ಬೆಳೆ ಅಡಿಕೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರೈತರು ಅಡಿಕೆ ವಾಣಿಜ್ಯ ಬೆಳೆಗೆ ಮಾರು ಹೋಗಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 11 ಜಿಲ್ಲೆಗಳಲ್ಲಿ ಅಡಿಕೆ ಬೆಳೆ ರೈತರ ಅವಿಭಾಜ್ಯ ಅಂಗವಾಗಿದೆ. ಆದರೆ ಮಾರುಕಟ್ಟೆಯ ದರದಲ್ಲಿನ ಕಣ್ಣಾ ಮುಚ್ಚಾಲೆ ಆಟ, ಅಡಿಕೆಗೆ ಇತ್ತೀಚಿನ ವರ್ಷಗಳಲ್ಲಿ ಬಾಧಿಸುತ್ತಿರುವ ರೋಗಗಳಿಂದ ಅಡಿಕೆ ಬೆಳೆಗಾರರ ನೆಮ್ಮದಿ ಹಾಳಾಗಿರುವುದಂತೂ ಸತ್ಯ. ಕೇಂದ್ರ ಸರ್ಕಾರದ ಗುಟ್ಕಾ ನಿಷೇದ ಗುಮ್ಮದೊಂದಿಗೆ ಅಡಿಕೆಗೆ ಕಾಡುವ ರೋಗಗಳೂ ಕೂಡ ರೈತರನ್ನು ಕಂಗಾಲಾಗಿಸುತ್ತಿವೆ.
ಇಂತಹ ಅನಿಶ್ವಿತತೆಗಳ ನಡುವೆಯೇ ಧಿರ್ಘಾವಧಿಯ ಬೆಳೆಯಾದ ಅಡಿಕೆಯನ್ನೇ ಅನಿವಾರ್ಯವಾಗಿ ನೆಚ್ಚಿಕೊಳ್ಳಲೇ ಬೇಕಾದ ಪರಿಸ್ಥಿತಿ ಈ ಭಾಗದಲ್ಲಿದೆ. ಮಲೆನಾಡಿನ ರೈತರು ಎಂದರೆ ಶ್ರೀಮಂತರು. ಆರ್ಥಿಕವಾಗಿ ಸ್ವಲ್ಪ ಉತ್ತಮವಾಗಿರುವವರು ಎಂಬ ಮಾತು ಈ ಹಿಂದೆ ಇತ್ತು. ಅದರಲ್ಲೂ ಅಡಿಕೆ ಬೆಳೆಗಾರರಿಗೆ ಯಾವುದೇ ರೀತಿಯ ಸಂಕಷ್ಟಗಳು ಇಲ್ಲ ಎಂಬ ಕಾಲವಿತ್ತು. ಅದರೆ ಈಗ ಕಾಲ ಬದಲಾಗಿದೆ. ಅಡಿಕೆ ಬೆಳೆಗಾರರು ಬೀಗಿದೆ ಬೀಳುವಂತ ಸ್ಥಿತಿಗೆ ಬಂದು ತಲುಪಿದ್ದಾರೆ. ಇದಕ್ಕೆಲ್ಲ, ಪ್ರಮುಖ ಕಾರಣ ಅಡಿಕೆ ಬೆಳೆಗೆ ಬರುತ್ತಿರುವ ರೋಗಗಳು. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಜೋರಾಗಿ ಮಳೆ ಬಾರದಿದ್ದರೂ, ಜಿಟಿ ಜಿಟಿ ಮಳೆ ಆಗುತ್ತಲೇ ಇದೆ. ಇದರಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಅಡಿಕೆ ಬೆಳೆಗೆ ರೋಗಗಳು ಬಾಧಿಸುತ್ತಿದೆ. ಕೊಳೆ ರೋಗ, ಹಳದಿ ಎಲೆ ರೋಗ, ಕಾಂಡಕೊರಕ, ಬೂದಿ ರೋಗಗಳ ಕಾಟ ಹೆಚ್ಚಾಗಿದೆ.
![]()
ಹಿಂಗಾರು ಒಣಗಿರುವುದು
ತೀರ್ಥಹಳ್ಳಿ, ಸಾಗರ, ಹೊಸನಗರ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಕೊಳೆರೋಗ ಈ ಬಾರಿ ಜಿಲ್ಲೆಯ ತುಂಬಾ ವ್ಯಾಪಿಸಿದೆ. ಕೊಳೆ ರೋಗಕ್ಕೆ ತುತ್ತಾದ ಅಡಿಕೆ ಮರಗಳಿಂದ ಅಡಿಕೆ ಫಸಲಿನ ಹಿಂಗಾರಗಳು ಉದುರುತ್ತಿವೆ. ಇದರಿಂದ ಈ ಬಾರಿ ಅಡಿಕೆ ಇಳುವರಿ ಸಂಪೂರ್ಣ ಕಡಿಮೆಯಾಗುವುದರಲ್ಲಿ ಎರಡು ಮಾತಿಲ್ಲ. ತೋಟದಲ್ಲಿರುವ ಮರಗಳ ಸುಳಿಗಳು ಕೊಳೆತು ಹೋಗಿ ಮರಗಳು ಒಣಗಿ ಹೋಗುತ್ತಿವೆ. ಅನೇಕ ರೋಗಗಳ ಭಾದೆಯಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿ ಇದ್ದು, ರೋಗಗಳ ನಿಯಂತ್ರಿಸಲು ಮತ್ತು ತಡೆಗಟ್ಟಲು ಸರ್ಕಾರಗಳು, ಇಲಾಖೆಗಳು ರೈತರಿಗೆ ಸೂಕ್ತ ಮಾರ್ಗದರ್ಶನ ವಿಫಲವಾಗಿದೆ ಎಂದು ರೈತ ಸಮುದಾಯದಿಂದ ಬೇಸರ ವ್ಯಕ್ತವಾಗುತ್ತಿದೆ.
ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದೆ ಬರಬೇಕಾಗಿದೆ. ಆಗುಂಬೆ ಭಾಗದಲ್ಲಿ ಒಂದು ಎಕರೆ ಪ್ರದೇಶಕ್ಕೆ 6 ರಿಂದ 7 ಕ್ವಿಂಟಾಲ್ ಅಡಿಕೆ ಬಂದರೆ ಸಾಕು ಎಂದು ರೈತರು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ :
ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿರಾಸಕ್ತಿ - ಕೊರೋನಾ ನೆಪದಲ್ಲಿ ಲೂಟಿಯಲ್ಲಿ ಆಸಕ್ತಿ ; ಪ್ರಿಯಾಂಕ್ ಖರ್ಗೆ ಕಿಡಿ
ರೈತರು ಅಡಿಕೆ ಬೆಳೆ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದರೂ, ಕೊಳೆರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಮೇಲು ತುತ್ತು, ಸುಣ್ಣ ಸಿಂಪಡಣೆ ಮಾಡಿದರೂ, ಪ್ರಯೋಜನಕ್ಕೆ ಬರುತ್ತಿಲ್ಲ. ಅಡಿಕೆ ತೋಟಗಳ ನಿರ್ವಹಣೆ ವೆಚ್ಚ ಇದರಿಂದಾಗಿ ಹೆಚ್ಚಾಗಿದೆ. ಇಷ್ಟೇಲ್ಲ ಕಷ್ಟಗಳ ನಡುವೆ ಅಡಿಕೆಗೆ ಬೆಲೆ ಏರಿಕೆ ಕಾಣದಿರುವುದು ರೈತರನ್ನು ಮತ್ತೋಷ್ಟು ಕಂಗಾಲು ಆಗುವಂತೆ ಮಾಡಿದೆ. ಅಡಿಕೆ ಬೆಳೆಯುವುದಕ್ಕಿಂತ ಬೇರೆ ಕೆಲಸ ಮಾಡುವುದೇ ಲೇಸು ಎನ್ನುತ್ತಿದ್ದಾರೆ ರೈತರು.
ಅಡಿಕೆಗೆ ಸೂಕ್ತ ಬೆಂಬಲ ಬೆಲ ನೀಡಬೇಕು. ಅಡಿಕೆ ರೋಗಕ್ಕೆ ಕಾರಣ ಏನು ಪತ್ತೆಗೆ ಆತ್ಯಾಧುನಿಕ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ರೈತರು ಒತ್ತಾಯವಾಗಿದೆ. ಅಡಿಕೆಯನ್ನು ನಂಬಿಯೇ ಮಲೆನಾಡಿನ ಜನತೆ ಜೀವನ ಸಾಗಿಸುತ್ತಿದ್ದು, ಸರ್ಕಾರ ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾಗಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ