ಹಾಸನ ; ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನ ಮೀಸಲಾತಿ ವಿಚಾರದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಮತ್ತು ಜೆಡಿಎಸ್ ಶಾಸಕ ಶಿವಲಿಂಗೇಗೌಡ ನಡುವೆ ಭಾರೀ ವಾಕ್ ಸಮರ ನಡೆಯುತ್ತಿದೆ. ಎಸ್ ಟಿ ಜನಾಂಗ ಮೀಸಲಾತಿ ವಿರೋಧಿಸುತ್ತಿರುವ ಶಾಸಕರ ವಿರುದ್ದ ಜನರ ಮನೆಮನೆಗೆ ತೆರಳಿ ಅಭಿಯಾನ ಮಾಡುವುದಾಗಿ ಸಂತೋಷ್ ಹೇಳಿದ್ದಾರೆ. ಮತ್ತೊಂದೆಡೆ ಶಾಸಕ ಶಿವಲಿಂಗೇಗೌಡರು ಕಾನೂನು ಪ್ರಕಾರ ಮೀಸಲಾತಿ ನಿಗದಿಯಾಗಿದೆ ಎಂದು ಜೇನುಕಲ್ ಸಿದ್ದೇಶ್ವರ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲ್ ಹಾಕಿದ್ದು ಇಬ್ಬರ ನಡುವಿನ ಟಾಕ್ ಫೈಟ್ ಎಲ್ಲೆಡೆ ಸದ್ದು ಮಾಡುತ್ತಿದೆ. ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರ ಲಿಂಗಾಯತರ ಮತ ಹೆಚ್ಚಾಗಿದ್ದು, ಲಿಂಗಾಯತರೇ ಪ್ರಾಬಲ್ಯ ಇರುವ ಕ್ಷೇತ್ರವಾಗಿದೆ. ಆದ್ರೆ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ರವರು ಇಡೀ ಕ್ಷೇತ್ರದಲ್ಲಿ ಪಕ್ಷಸಂಘಟನೆ ಮೂಲಕ ಸಂಚಲನ ಉಂಟು ಮಾಡಿದ್ದಾರೆ. ಒಂದು ವೇಳೆ ಪಕ್ಷ ಆದೇಶ ಕೊಟ್ಟರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಸಂತೋಷ್ ಪರೋಕ್ಷವಾಗಿ ಹೇಳಿದ್ದಾರೆ.
ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರವು ಎಸ್ ಟಿ ಜನಾಂಗಕ್ಕೆ ಮೀಸಲಾತಿ ನೀಡಿದೆ. ಆದ್ರೆ ಈ ಮೀಸಲಾತಿ ವಿಚಾರದಲ್ಲಿ ಸಂತೋಷ್ ಮತ್ತು ಶಾಸಕ ಶಿವಲಿಂಗೇಗೌಡ ನಡುವೆ ಟಾಕ್ ಫೈಟ್ ಜೋರಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಹಿಂಗಿತವನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಆಪರೇಷನ್ ಕಮಲದಲ್ಲಿ ಎನ್ಆರ್.ಸಂತೋಷ್ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಬಿಜೆಪಿ ಮೈತ್ರಿ ಸರ್ಕಾರ ಉರುಳಿಸಿ ಅಧಿಕಾರ ಹಿಡಿಯುವಲ್ಲಿ ಸಂತೋಷ್ ಪಾತ್ರ ಪ್ರಮುಖವಾಗಿತ್ತು ಎಂಬ ಚರ್ಚೆ ಈ ಹಿಂದೆ ಭಾರೀ ಸದ್ದು ಮಾಡಿತ್ತು.
ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಹಾಸನದ ಅರಸೀಕೆರೆ ಕ್ಷೇತ್ರದಲ್ಲಿ ಎನ್.ಆರ್.ಸಂತೋಷ್ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದ್ದರು. ಎನ್ಆರ್.ಸಂತೋಷ್ ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಅರಸೀಕೆರೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿದ ಸಂತೋಷ್, "ಪರೋಕ್ಷವಾಗಿ ಸ್ಪರ್ಧೆಯ ಸುಳಿವು ನೀಡಿದ್ದಾರೆ. ನಾನು ಅಖಿಲಭಾರತ್ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತ ಆದಂದಿನಿಂದ ಅರಸೀಕೆರೆಯಲ್ಲಿ ಓಡಾಟ ಮಾಡುತ್ತಿದ್ದೇನೆ. ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದು, ಅರಸೀಕೆರೆ ವಿಧಾನಸಭೆ ಕ್ಷೇತ್ರದ ಡಿಎಂ ಕುರ್ಕೆಯ ಬೂತ್ ನಂ 42 ರಲ್ಲಿ ನನ್ನ ಮತವಿದೆ. ನಾನು ಇದು ನನ್ನ ಊರು ಎಂದು ವಿಶೇಷ ಗಮನ ಕೊಡುತ್ತಿದ್ದೇನೆ ಅಷ್ಟೇ. ಯಾರೂ ಇದನ್ನು ಅಪರಾಧ ಎಂದು ಹೇಳುವಂತಿಲ್ಲ. ನಾನು ಖಂಡಿತ ಎಂಎಲ್ಎ ಚುನಾವಣೆ ಆಕಾಂಕ್ಷಿ ಅಲ್ಲ. ಒಂದು ವೇಳೆ ಪಕ್ಷ ನಾನೇ ಚುನಾವಣೆಗೆ ನಿಲ್ಲಬೇಕು ಎಂದು ಆದೇಶ ಕೊಟ್ಟರೆ ಚುನಾವಣೆಗೆ ನಿಲ್ಲುತ್ತೇನೆ" ಎಂದು ತಿಳಿಸಿದ್ದಾರೆ.
ಶಾಸಕ ಶಿವಲಿಂಗೇಗೌಡ ಮಾತ್ರ ಬಿಜೆಪಿ ವಿರುದ್ದ ಬಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ಪ್ರಕಾರ ಈ ಬಾರಿ ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿಗೆ ಎಸ್ಟಿ ಮೀಸಲಾತಿ ಬಂದಿದೆ ಎಂದು ದೇವರ ಮುಂದೆ ಪ್ರಮಾಣ ಮಾಡಲಿ. ನಾನು ಹೇಳುತ್ತಿರುವುದು ಕಾನೂನಿನಲ್ಲಿ ತಪ್ಪಿದ್ದರೆ ಬೆಳಗ್ಗೆಯೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಬಿಎಸ್ವೈ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ಗೆ ಸವಾಲ್ ಹಾಕಿದ್ದಾರೆ. ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿ ಎಸ್ಟಿಗೆ ಮೀಸಲಾಗಿದೆ. ಇದ್ರಿಂದ ಜೆಡಿಎಸ್ ಬಹುಮತವಿದ್ದರೂ ಅರಸೀಕೆರೆ ನಗರಸಭೆ ಅಧ್ಯಕ್ಷಗಾದಿ ಬಿಜೆಪಿ ಪಾಲಾಗಲಿದೆ.
ಮೀಸಲಾತಿ ದೋಷದಿಂದ ಕೂಡಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಮಾಡುವುದಾಗಿ ಶಿವಲಿಂಗೇಗೌಡ ಹೇಳಿದ್ದಾರೆ. ಮೀಸಲಾತಿಯಲ್ಲಿ ಯಾವುದೇ ತಪ್ಪಾಗಿಲ್ಲ. ಶಾಸಕ ಶಿವಲಿಂಗೇಗೌಡ ಅವರ ಕಾನೂನು ಹೋರಾಟದ ಬಗ್ಗೆ ಅರಸೀಕೆರೆ ಎಸ್ಟಿ ಸಮುದಾಯದ ಜನರಿಗೆ ತಿಳಿಸುತ್ತೇವೆ ಎಂದು ಸಂತೋಷ್ ಹೇಳಿದ್ದರು. ಸಂತೋಷ್ ರ ಈ ಹೇಳಿಕೆಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಶಾಸಕ ಶಿವಲಿಂಗೇಗೌಡ ಇವರು ಮುಖ್ಯಮಂತ್ರಿ ಕಾರ್ಯದರ್ಶಿ ಕರ್ನಾಟಕ ಸರ್ಕಾರ ಕಾನೂನನ್ನ ಮೀರಿ ಅವರಿಗೆ ಬೇಕಾದ ಕಡೆ ಮೀಸಲಾತಿ ಕೊಟ್ಟಿದ್ದಾರೆ.
ಅವನು ಯಾರ್ರೀ ಅರಸೀಕೆರೆ ಜನಕ್ಕೆ ಏನೇನೋ ಸುಳ್ಳು ಹೇಳ್ತಾರೇನ್ರೀ ಎಸ್ಟಿ ಸದಸ್ಯ ಜೆಡಿಎಸ್ನಿಂದ ಗೆದ್ದಿದ್ದರೆ ಮೀಸಲಾತಿ ಮಾಡಿಸುತ್ತಿದ್ದರಾ, ಇವನು ಆತ್ಮಸಾಕ್ಷಿ ಮುಟ್ಟಿಕೊಂಡು ಹೇಳಲಿ, ಎಲ್ಲೆಲ್ಲಿ ಬಿಜೆಪಿಯವರನ್ನು ತಂದು ಕೂರಿಸಬಹುದೋ ಅಲ್ಲೆಲ್ಲ ಮೀಸಲಾತಿ ತಂದಿದ್ದಾರೆ. ಅಸೆಂಬ್ಲಿ ನಡೆಯಬೇಕಿತ್ತು.. ನಾವು ಏನು ಎಂದು ತೋರಿಸುತ್ತಿದ್ದೆವು. ಇವನು ತಲೆಕೆಳಗಾಗಿ ನಿಂತರು ಎಸ್ಟಿ ಜನಾಂಗ ಇವನನ್ನು ನಂಬುತ್ತಾ ಎಂದು ಆಕ್ರೋಶಭರಿತರಾಗಿದ್ದಾರೆ.
ಕಾನೂನು ಪ್ರಕಾರ ಈ ಬಾರಿ ಎಸ್ಟಿ ಮೀಸಲಾತಿ ಬಂದಿದೆ ಎಂದು ದೇವರ ಮುಂದೆ ಪ್ರಮಾಣ ಮಾಡಲಿ. ಜೇನುಕಲ್ಲು ಸಿದ್ದೇಶ್ವರ ಸನ್ನಿಧಿಗೆ ಬಂದು ಪ್ರಮಾಣ ಮಾಡುವಂತೆ ಸಂತೋಷ್ಗೆ ಶಾಸಕ ಶಿವಲಿಂಗೇಗೌಡ ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ : ಶ್ರೀರಾಮುಲು ಗಮನಕ್ಕೆ ತಂದು ಖಾತೆ ಬದಲಾವಣೆ?; ಈ ಪ್ರಶ್ನೆಯನ್ನು ನೀವು ಸಿಎಂಗೆ ಕೇಳಬೇಕು ಎಂದ ಸಚಿವ ಸುಧಾಕರ್!
ಅರಸೀಕೆರೆ ಕ್ಷೇತ್ರದಲ್ಲಿ ಅತೀ ಹೆಚ್ಚು ಲಿಂಗಾಯತ ಮತಗಳಿರುವ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಲಿಂಗಾಯತ ಮತಗಳಿವೆ. ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ 74 ಸಾವಿರ ಮತಗಳು ಬಂದಿದ್ದವು. ಆದ ಕಾರಣ ಈಗಿನಿಂದಲೇ ಎನ್.ಆರ್. ಸಂತೋಷ್ ಸರಿಯಾದ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಿದ್ರೆ ಈ ಕ್ಷೇತ್ರದಲ್ಲಿ ಸುಮಾರು ಕಮಲ ಅರಳುವ ಎಲ್ಲಾ ಸಾಧ್ಯತೆಗಳಿವೆ.
ಆದರೆ, ಈಗ ನಗರಸಭೆ ಮೀಸಲಾತಿ ವಿಚಾರದಲ್ಲಿ ಶಾಸಕ ಶಿವಲಿಂಗೇಗೌಡ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ನಡುವಿನ ಟಾಕ್ ವಾರ್ ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ