ಧಾರವಾಡ (ಜೂನ್ 27): ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತೀರ್ಮಾನದ ಮೇಲೆಯೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಅಲ್ಲದೇ ನಮ್ಮ ಸರ್ಕಾರಸಲ್ಲಿ ಯಾರು ಸಚಿವರಾಗುತ್ತಾರೆ ಎಂಬುದು ಮೊದಲೇ ಗೊತ್ತಾಗುವುದಿಲ್ಲ. ಸಚಿವರಾದ ಬಳಿಕವೇ ಗೊತ್ತಾಗಲಿದೆ ಎಂದು ಕೇಂದ್ರ ಗಣಿ-ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಿಂದ ಕೆಲವರನ್ನು ಕೈ ಬಿಡುವ ಹಾಗೂ ಹೊಸಬರನ್ನು ಸೇರಿಸಿಕೊಳ್ಳುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಇದು ಮಾಧ್ಯಮಗಳ ಊಹಾಪೋಹ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ತಿಳಿಸಿದರು.
ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುವ ಸಚಿವ ಸಿ.ಪಿ.ಯೋಗೇಶ್ವರ ಹೇಳಿಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಯೋಗೇಶ್ವರ ಯಾವ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಬರೆದಿದ್ದಾರೋ ಆ ವಿವಿಯ ಕುಲಪತಿಗಳಾದ ಅರುಣ್ ಸಿಂಗ್ ಈಗಾಗಲೇ ಫಲಿತಾಂಶ ಪ್ರಕಟಿಸಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಬಿಜೆಪಿ ಆಂತರಿಕ ವಿಚಾರದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ. ಸುತ್ತೂರು ಮಠದ ಶ್ರೀಗಳ ಮಾತೋಶ್ರೀ ನಿಧನದ ಹಿನ್ನಲೆ ರಾಜಕೀಯ ನಾಯಕರು ಶ್ರೀಗಳ ಯೋಗಕ್ಷೇಮ ವಿಚಾರಿಸಲು ಶ್ರೀಮಠಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು. ರಾಜಕಾರಣಿಗಳ ಮಠದ ಭೇಟಿಗೆ ನಾವು ಮಾಡಬೇಕು ಏನು? ಎಲ್ಲವನ್ನೂ ರಾಜಕೀಯ ಎಂದರೆ ಹೇಗೆ? ಸದ್ಯ ಸರ್ಕಾರದ ಶ್ವಾಸಕೋಶ ಸಹಜವಾಗಿದೆ. ಚನ್ನಾಗಿ ಉಸಿರಾಡುವ ಮೂಲಕ ಜನಪರವಾಗಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಪ್ರಧಾನಿಯಿಂದ ದೇಶದಲ್ಲಿ ಹೊಸ ಆಡಳಿತ ಪದ್ಧತಿ ಜಾರಿ: ಜಿ.ಮುರಳೀಧರನ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ದೇಶದಲ್ಲಿ ಹೊಸ ಆಡಳಿತ ಪದ್ಧತಿ ಜಾರಿಗೆ ತಂದಿದ್ದಾರೆ. ಜನರ ಹಾಗೂ ಪ್ರಧಾನಿ ಮಧ್ಯೆ ಸಂವಹನ ಆಡಳಿತ ನಡೆಸಲು ಮನ್ ಕಿ ಬಾತ್ ಉತ್ತಮ ವಿಧಾನ ಎಂದು ಕೇಂದ್ರದ ಸಚಿವ ಜಿ.ಮುರುಳೀಧರನ್ ಹೇಳಿದರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ.ಗುಡಿಸಿ ಅವರ ನಿವಾಸದಲ್ಲಿ ಭಾನುವಾರ ನರೇಂದ್ರ ಮೋದಿ ಮನ್ ಕಿ ಬಾತ್ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲಿ ಬಿಜೆಪಿ ಸರ್ಕಾರ ಹೆಚ್ಚು ಸಾಧನೆ ಮಾಡಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಪ್ರಧಾನಿಗಳ ಬಳಿ ಹೇಳಬಹುದು. ಆ ಸಮಸ್ಯೆಗಳನ್ನು ಅವರು ಗಂಭೀರವಾಗಿ ಪರಿಗಣಿಸಿ, ಪರಿಹಾರ ಒದಗಿಸುತ್ತಾರೆ. ಒಳ್ಳೆಯ ವಿಚಾರಗಳನ್ನು ಪ್ರಶಂಸಿಸುವ ಜತೆಗೆ ವಿಶೇಷ ಎನಿಸಿದರೇ, ಭೇಟಿಯೂ ಆಗುತ್ತಾರೆ ಎಂದು ತಿಳಿಸಿದರು.
ಆಡಳಿತದಲ್ಲಿ ಜನರು ಪಾಲ್ಗೊಳ್ಳುವಿಕೆ ಕೆಲಸ ಸ್ವಾತಂತ್ರ್ಯ ನಂತರ ಇದೀಗ ನಡೆಯುತ್ತಿದೆ. ಮೋದಿ ಅವರು ಸಾಮಾನ್ಯ ನಾಗರಿರಕನ್ನು ಸರ್ಕಾರದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದರು.
ಇದನ್ನು ಓದಿ: ಹದಿನೇಳು ದಿನಗಳ ಅಂತರದಲ್ಲಿ ಮದುವೆಯಾದ ಇಬ್ಬರು ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಸಾವು!
ಯಾವುದೇ ಜಾತಿ, ಧರ್ಮ, ಭಾಷೆ, ಜನಾಂಗ ಹಾಗೂ ಲಿಂಗ-ತಾರತಮ್ಯ ಮಾಡದೇ, ಸರ್ವೇ ಜನಾಃ ಸುಖಿನೋ ಭವಂತು ತತ್ವದಡಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಅವರಿಗೆ ಸಂಪುಟದ ಸಂಪೂರ್ಣ ಬೆಂಬಲವೂ ಇದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ