HOME » NEWS » District » ANXIETY AMONG PEOPLE WITH INCREASING RAINFALL IN KODAGU MAK

ಕೊಡಗಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ; ಜನರಲ್ಲಿ ಮತ್ತೆ ಮನೆಮಾಡಿದ ಆತಂಕ

ಈ ವರ್ಷದ ಪ್ರವಾಹದ ಮಾಹಿತಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿದೆ. ಪ್ರಸ್ತುತ ರಾಜ್ಯದಲ್ಲಿ ಮಳೆ ವಿಪರೀತವಾಗಿದ್ದು, 23 ಜಿಲ್ಲೆಗಳ 130 ತಾಲೂಕುಗಳನ್ನು ರಾಜ್ಯ ಸರ್ಕಾರ ಪ್ರವಾಹ ಪೀಡಿತ ಎಂದು ಗುರುತಿಸಿದೆ. ಕೊಡಗಿನ ಒಂದು ತಾಲೂಕು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ, ಪ್ರವಾಹದಿಂದಾದ ನಷ್ಟವನ್ನು ಸೂಕ್ತ ಪರಿಹಾರದ ಮೂಲಕ ಕೇಂದ್ರ ಸರ್ಕಾರ ತುಂಬಿ ಕೊಡಲಿದೆಯೇ? ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಮನೆ ಮಾಡಿದೆ.

news18-kannada
Updated:September 12, 2020, 7:45 PM IST
ಕೊಡಗಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ; ಜನರಲ್ಲಿ ಮತ್ತೆ ಮನೆಮಾಡಿದ ಆತಂಕ
ಮಳೆ
  • Share this:
ಕೊಡಗು : ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಮತ್ತೆ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ. ಬಾಗಮಂಡಲ ಮತ್ತು ತಲಕಾವೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದರೆ, ಮಡಿಕೇರಿ, ನಾಪೋಕ್ಲು ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗುತ್ತಿದೆ. ಬೆಳಿಗ್ಗೆ ಕೊಂಚ ಬಿಡುವು ನೀಡಿದ್ದ ವರುಣ ಮಧ್ಯಾಹ್ನದ ಬಳಿಕ ಬಿಟ್ಟುಬಿಡದೆ ಎಡಬಿಡದೆ ಜಿಟಿಜಿಟಿ ಅಂತಾ ಸುರಿಯುತ್ತಲೇ ಇದೆ. ಮಳೆ ಜೊತೆಗೆ ಭಾರೀ ಪ್ರಮಾಣದಲ್ಲಿ ಚಳಿಗಾಳಿ ಬೀಸುತ್ತಿದ್ದು ಜನರು ತತ್ತರಿಸಿದ್ದಾರೆ. ತಲಕಾವೇರಿ, ಬಾಗಮಂಡಲ ಸುತ್ತಮುತ್ತಲಿನ ಬೆಟ್ಟ ಪ್ರದೇಶದಲ್ಲೆಲ್ಲಾ ಭಾರೀ ಮಳೆ ಸುರಿಯುತ್ತಿದ್ದು ಕಾವೇರಿ ನದಿಯ ನೀರಿನ ಮಟ್ಟದಲ್ಲಿ ಜಾಸ್ತಿಯಾಗಿದೆ.

ಬಾಗಮಂಡಲ ತ್ರಿವೇಣಿ ಸಂಗ್ರಮದಲ್ಲೂ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ವೇಳೆ ಮಳೆ ತೀವ್ರಗೊಂಡಲ್ಲಿ ಜಿಲ್ಲೆಯಲ್ಲಿ ಮತ್ತೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿಯೇ ಮೂರು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕಾವೇರಿ ನದಿ ಪಾತ್ರದ ಜನರು ಮತ್ತು ಬೆಟ್ಟ ಪ್ರದೇಶದ ಜನರು ಆತಂಕ ಎದುರಿಸುವಂತೆ ಆಗಿದೆ.

ಮಳೆ ತೀವ್ರಗೊಂಡಂತೆ ತಲಕಾವೇರಿ ಬೆಟ್ಟದ ಸಮೀಪದ ಚೇರಂಗಾಲ ಬೆಟ್ಟದಲ್ಲಿ ವ್ಯಕ್ತಿಯೊಬ್ಬರು ರೆಸಾರ್ಟ್ ನಿರ್ಮಾಣಕ್ಕೆ ಬೆಟ್ಟ ಕೊರೆದಿದ್ದರಿಂದ ಆ ಬೆಟ್ಟ ಕುಸಿಯುವ ಆತಂಕ ಎದುರಾಗಿದೆ. ಒಂದು ವೇಳೆ ಬೆಟ್ಟ ಕುಸಿದಲ್ಲಿ ಕೋಳಿಕಾಡು, ಚೇರಂಗಾಲ ಮತ್ತು ಕೋರಂಗಾಲ ಗ್ರಾಮಗಳ ನೂರಾರು ಕುಟುಂಬಗಳ ಮನೆಗಳು ನೆಲಸಮವಾಗಲಿವೆ ಎನ್ನೋದು ಜನರಿಗೆ ಆತಂಕ ಶುರುವಾಗಿದೆ.

ಇದನ್ನೂ ಓದಿ : ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಪೂರ್ಣ ವಿದ್ಯಾರ್ಥಿ ವೇತನ; ನಟ ಸೋನು ಸೂದ್ ಘೋಷಣೆ

ಈಗಾಗಲೇ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಸುರಿದಿರುವ ಭಾರೀ ಮಳೆಗೆ ಇಡೀ ಕೊಡಗು ಜಿಲ್ಲೆ ತತ್ತರಿಸಿ ಹೋಗಿದೆ. ಅಲ್ಲಲ್ಲಿ ಸಂಭವಿಸಿದ ಭೂ ಕುಸಿತಕ್ಕೆ ಹಲವರು ಪ್ರಾಣ ಚೆಲ್ಲಿದ್ದಾರೆ. ಕಳೆದ ವರ್ಷದ ಮಳೆ ಸೃಷ್ಟಿಸಿದ ಆವಾಂತರದಿಂದಲೇ ಈ ಭಾಗದ ಜನ ಇನ್ನೂ ಹೊರಬಂದಿಲ್ಲ. ಮನೆ ಮಠ ಕಳೆದುಕೊಂಡ ಹಲವರು ಈವರೆಗೆ ನೆಲೆ ಕಂಡುಕೊಂಡಿಲ್ಲ. ಈ ನಡುವೆ ಈ ವರ್ಷವು ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರ ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.

ಇನ್ನೂ ಈ ವರ್ಷದ ಪ್ರವಾಹದ ಮಾಹಿತಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿದೆ. ಪ್ರಸ್ತುತ ರಾಜ್ಯದಲ್ಲಿ ಮಳೆ ವಿಪರೀತವಾಗಿದ್ದು, 23 ಜಿಲ್ಲೆಗಳ 130 ತಾಲೂಕುಗಳನ್ನು ರಾಜ್ಯ ಸರ್ಕಾರ ಪ್ರವಾಹ ಪೀಡಿತ ಎಂದು ಗುರುತಿಸಿದೆ. ಕೊಡಗಿನ ಒಂದು ತಾಲೂಕು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ, ಪ್ರವಾಹದಿಂದಾದ ನಷ್ಟವನ್ನು ಸೂಕ್ತ ಪರಿಹಾರದ ಮೂಲಕ ಕೇಂದ್ರ ಸರ್ಕಾರ ತುಂಬಿ ಕೊಡಲಿದೆಯೇ? ಜನರಿಗೂ ಸೂಕ್ತ ಪರಿಹಾರ ದೊರೆಯಲಿದೆಯೇ? ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಮನೆ ಮಾಡಿದೆ.
Published by: MAshok Kumar
First published: September 12, 2020, 7:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories