ಮಲೆನಾಡಿನ ದೀಪಾವಳಿ ವಿಶೇಷ ಅಂಟಿಗೆ ಪಿಂಟಿಗೆ; ಅಳಿವಿನಂಚಲಿ ಜಾನಪದ ಕಲೆ

ಮಲೆನಾಡು ಭಾಗದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಅನೇಕ ರೀತಿಯ ಜನಪದ ಕಲೆಗಳು ಆನಾವರಣಗೊಳ್ಳುತ್ತವೆ. ಪ್ರತಿಯೊಂದು ಆಚರಣೆಯು ತನ್ನದೇ ಆದಾ ವಿಶೇಷತೆಗಳನ್ನು ಒಳಗೊಂಡಿರುತ್ತದೆ. ಅಂಟಿಗೆ ಪಿಂಟಿಗೆ ಮಲೆನಾಡು ಭಾಗದ ಪ್ರಮುಖ ಜನಪದ ಕಲೆಯಾಗಿದೆ.

ಮಲೆನಾಡಿನಲ್ಲಿ ಅಂಟಿಗೆ ಪಿಂಟಿಗೆ ಸಂಪ್ರದಾಯ

ಮಲೆನಾಡಿನಲ್ಲಿ ಅಂಟಿಗೆ ಪಿಂಟಿಗೆ ಸಂಪ್ರದಾಯ

  • Share this:
ಶಿವಮೊಗ್ಗ: ಮಲೆನಾಡಿನಲ್ಲಿ ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬದಲ್ಲಿ ಜನಪದ ಕಲೆಗಳು ಆನಾವರಣಗೊಳ್ಳುತ್ತವೆ. 15 ದಿನಗಳಿಗೂ ಹೆಚ್ಚು ಕಾಲ ಆಚರಿಸುವ ದೀಪಾವಳಿ ಹಬ್ಬದಲ್ಲಿ ನಾನಾ ಬಗೆಯ ಆಚರಣೆಗಳನ್ನು ಜರುಗುತ್ತವೆ. ಪುರಾತನ ಕಾಲದಿಂದಲೂ ಬಂದಿರುವ ಆಚರಣೆಗಳನ್ನು ಮಾಡುವ ಮೂಲಕ ಹಬ್ಬಕ್ಕೆ ಇಲ್ಲಿನ ಜನರು ಮೆರಗು ತರುತ್ತಾರೆ. ವಿಪುಲ ಸಾಹಿತ್ಯ ಭಂಡಾರವಿರುವ ಅಂಟಿಗೆ ಪಿಂಟಿಗೆ ಜನಪದ ಕಲೆ ಮಲೆನಾಡು ಭಾಗದ ದೀಪಾವಳಿ ಹಬ್ಬದ ವಿಶೇಷತೆಗಳಲ್ಲಿ ಪ್ರಮುಖ್ಯತೆಯನ್ನು ಪಡೆದುಕೊಂಡಿದೆ. ಹಳ್ಳಿಯ ಜನರು ತಮ್ಮದೇ ಜನಪದ ಭಾಷೆಯಲ್ಲಿ ಹಾಡುಗಳನ್ನು ಕಟ್ಟಿ ಹಾಡುವ ಮೂಲಕ ಮನೆ ಮನೆ ತೆರಳಿ ಶುಭ ಕೋರುತ್ತಾರೆ.

ದೀಪಾವಳಿ ಹಬ್ಬದಲ್ಲಿ ಇದನ್ನು ರೈತಾಪಿ ವರ್ಗದ ಯುವಕರು ಆಚರಿಸುತ್ತಾರೆ. ಹಬ್ಬದ 9 ದಿನಗಳ ಕಾಲ ಸಂಜೆ ಸಮಯದಲ್ಲಿ ದೇವಸ್ಥಾನದಲ್ಲಿ ಅಂಟಿಗೆ ಪಿಂಟಿಗೆ ಪದ ಹೇಳುವ ತಂಡದವರು ಊರ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.  ನಂತರ ತಾವು ತಂದಿದ್ದ ದೀಪಗಳಿಗೆ ಜ್ಯೋತಿ ಹಚ್ಚಿಕೊಂಡು ಹಾಡು ಹೇಳುತ್ತಾ ಮನೆ ಮನೆಗೆ ತೆರಳುತ್ತಾರೆ. ಅಂಟಿಕೆ ಪಿಂಟಿಗೆ ತಂಡ ಹಳ್ಳಿಯ ಮನೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಮನೆಯಲ್ಲಿ ಸ್ತ್ರೀಯರ ತಂಡ ತಂದಿದ್ದ ದೀಪದಿಂದ ಮನೆಯ ದೀಪವನ್ನು ಹಚ್ಚಿಸಿಕೊಂಡು ದೇವರ ಕೋಣೆಯಲ್ಲಿ ಇಡುತ್ತಾರೆ. ಆ ಜ್ಯೋತಿ ಮರುದಿನ ಬೆಳಗಿನವರೆಗೂ ನಂದಬಾರದು ಎಂಬ ಜನಪದ ನಂಬಿಕೆ ನಿಯಮ ಈ ಭಾಗದಲ್ಲಿದೆ. ಜ್ಯೋತಿ ನಂದಿದಲ್ಲಿ ಆ ಮನೆಗೆ ಕೆಡುಕು ಉಂಟಾಗುತ್ತದೆ ಎಂಬ ನಂಬಿಕೆ ಮಲೆನಾಡು ಭಾಗದ ಜನರಲ್ಲಿದೆ.

ಇದನ್ನೂ ಓದಿ: ಬೀದರ್​ನಲ್ಲಿ ಬಡವರಿಗೆ ಸೂರು; ಉಳ್ಳವರಿಂದ ಅತಿಕ್ರಮಣ; ನಿವೇಶನಕ್ಕಾಗಿ ಬಡ ಫಲಾನುಭವಿಗಳಿಂದ ಹೋರಾಟ

ಅಂಟಿಕೆ ಪಿಂಟಿಗೆ ತಂಡ ತರುವ ಜ್ಯೋತಿ ಮನೆ ಪ್ರವೇಶಿಸಿದಾಗ ಮನೆಯವರು ದೀಪಕ್ಕೆ ಎಣ್ಣೆ ಎರೆದು ಪೂಜೆ ಸಲ್ಲಿಸುತ್ತಾರೆ. ಪದ ಹೇಳುವ ತಂಡಕ್ಕೆ ಹಣ, ದವಸ ಧಾನ್ಯ ನೀಡುತ್ತಾರೆ. ಹಣ, ಆಹಾರ ಧಾನ್ಯಗಳನ್ನು ನೀಡುವುದರಿಂದ ಮನೆಗೆ ಮುಂದಿನ ವರ್ಷದವರೆಗೆ ಯಾವುದೇ ಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆ ಈ ಜನರಲ್ಲಿ ಮನೆ ಮಾಡಿದೆ. ಮನೆಗಳಿಂದ ಸಂಗ್ರಹವಾದ ಹಣವನ್ನು ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ, ಊರಿನ ಸಂಘ ಸಂಸ್ಥೆಗಳ ಬೆಳವಣಿಗೆಗೆ ಬಳಸಿಕೊಳ್ಳಲಾಗುತ್ತದೆ. ಶಾಲೆಗಳ ಅಭಿವೃದ್ಧಿಗೆ, ಗ್ರಾಮದಲ್ಲಿ ಯಾರಿಗಾದರೂ ತೊಂದರೆ ಇದ್ದರೆ, ಅವರ ಸಹಾಯಕ್ಕೆ ಸಂಗ್ರಹವಾದ ಹಣವನ್ನು ನೀಡಲಾಗುತ್ತದೆ. ಇಂತಹ  ಸಾಮಾಜಿಕ ಕಾರ್ಯಗಳ ಮೂಲಕ ಅಂಟಿಗೆ ಪಿಂಟಿಗೆ  ಮಲೆನಾಡು ಭಾಗದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಮನೆಗಳಿಗೆ ತೆರಳಿದ ಸಮಯದಲ್ಲಿ ಆ ಮನೆಯ ಹಿರಿಮೆಯನ್ನು ಹಾಡಿ ಹೊಗಳಲಾಗುತ್ತದೆ. ದೀಪಾವಳಿ ಹಬ್ಬ ಬಂದರೆ ಸಾಕು ಅಂಟಿಕೆ ಪಿಂಟಿಗೆ ತಂಡದ ಯುವಕರಿಗೆ ಎಲ್ಲಿಲ್ಲದ ಸಂತೋಷ. ರಾತ್ರಿ ಆಗುತ್ತಿದ್ದ ಆಗೆ ಯುವಕರೆಲ್ಲರೂ ಗ್ರಾಮದ ದೇವಸ್ಥಾದಿಂದ ಹಾಡು ಹೇಳಿಕೊಂಡು ಹೊರಡುತ್ತಾರೆ. ಗ್ರಾಮದ ಪ್ರತಿಯೊಂದು ಮನೆಗೂ ಹೋಗುತ್ತಾರೆ. ಇದರಿಂದ ಗ್ರಾಮಸ್ಥರಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿಸುತ್ತದೆ. ಈ ಜನಪದ ಕಲೆ ಗ್ರಾಮದಲ್ಲಿ ನಾವೆಲ್ಲರೂ ಒಂದು, ಜಾತಿ, ಮತ, ಶ್ರೀಮಂತ, ಬಡವ ಎಂಬ ಭೇದವಿಲ್ಲದೇ, ನಾವೆಲ್ಲರೂ ಒಂದೇ ಈ ಗ್ರಾಮದರು ಎಂಬ ಭಾವನೆಯನ್ನು ಮೂಡಿಸುತ್ತದೆ.

ಇದನ್ನೂ ಓದಿ: ಕಿರ್ಲೋಸ್ಕರ್ ಟೊಯೋಟಾ ಹಾಗೂ ನೌಕರರ ನಡುವಿನ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದೇನೆ: ಸಿಎಂ ಬಿಎಸ್​ಯಡಿಯೂರಪ್ಪ

ಇಂತಹ ಒಂದು ಅಪರೂಪದ ಕಲೆ ಇಂದು ಅಳಿವಿನಂಚಿಗೆ ಬಂದಿದೆ. ಅಂಟಿಕೆ ಪಿಂಟಿಗೆ ತಂಡಗಳು ಮಲೆನಾಡಿನ ಭಾಗದಲ್ಲಿ ವರ್ಷದಿಂದ ವರ್ಷ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಇಂದಿನ ಯುವಕ, ಯುವತಿಯರು ಈ ಕಲೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಈ ರೀತಿ ವಿಶಿಷ್ಟ ಆಚರಣೆಗಳ ಮೂಲಕ ಗ್ರಾಮದಲ್ಲಿ ಸುಖ ಶಾಂತಿ ನೆಮ್ಮದಿಗಾಗಿ ಪ್ರಾರ್ಥನೆ ಮಾಡುತ್ತಾರೆ. ಇಂತಹ ಆಚರಣೆಗಳು, ಜನಪದ ಕಲೆಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಕೆಲಸ ಸಹ ಆಗಬೇಕಿದೆ.

ವರದಿ: ಹೆಚ್ ಆರ್ ನಾಗರಾಜ
Published by:Vijayasarthy SN
First published: