ಬೆಡ್, ಆಮ್ಲಜನಕ ಕೊರತೆ ಒಂದೆರಡು ದಿನದಲ್ಲಿ ತಹಬದಿಗೆ: ಸಚಿವ ಸುರೇಶ್ ಕುಮಾರ್

ಯಾವುದೇ ಸಾಮಾಜಿಕ ಅಂತರವೂ ಇಲ್ಲದಂತೆ ಜನರನ್ಮು ಗುಂಪುಗುಂಪಾಗಿ ಸೇರಿಸಿಕೊಂಡು ಶಂಕುಸ್ಥಾಪನೆ, ಉದ್ಘಾಟನೆ ನೇರಿವೇರಿಸಿದ ಸಚಿವರು ಹಾಗು ಶಾಸಕರು ಜನಸಾಮಾನ್ಯರಿಗೆ ಮಾತ್ರ ರೂಲ್ಸ್ ಮಾಡಿರೋದು, ನಮಗಲ್ಲ ಎಂಬಂತೆ ನಡೆದುಕೊಂಡಿದ್ದಾರೆ.

ಸಚಿವ ಸುರೇಶ್ ಕುಮಾರ್.

ಸಚಿವ ಸುರೇಶ್ ಕುಮಾರ್.

  • Share this:
ಚಾಮರಾಜನಗರ (23). ರಾಜ್ಯದಲ್ಲಿ ಕೊರೋನಾ ರೋಗಿಗಳಿಗೆ ಹಾಸಿಗೆ ಹಾಗು ಆಮ್ಲಜನಕ ಸಮಸ್ಯೆ ಒಂದೆರಡು ದಿನದಲ್ಲಿ ಸರಿಹೋಗಲಿದೆ ಎಂದು ಪ್ರಾಥಮಿಕ ಹಾಗು ಪ್ರೌಢಶಿಕ್ಷಣ ಶಿಕ್ಷಣ ಸಚಿವ  ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರಿನ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗು ಉದ್ಘಾಟನೆ ನೆರವೇರಿಸ ಬಳಿಕ ಮಾತನಾಡಿದ ಅವರು, ಕೊರೋನಾ ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಅಗತ್ಯ ಇದೆ. ಜೊತೆಗೆ  ಆಮ್ಲಜನಕ ಸಮಸ್ಯೆ ಇದ್ದು ಈ ನಿಟ್ಟಿನಲ್ಲಿ ಕೈಗಾರಿಕೆಗೆ ಹೋಗುತ್ತಿದ್ದ ಹೆಚ್ಚಿನ ಪ್ರಮಾಣದ ಆಮ್ಲಜನಕ ತಡೆದು ಕೋವಿಡ್ ನಿಯಂತ್ರಣಕ್ಕೆ ನೀಡಲು ಕೈಗಾರಿಕಾ ಸಚಿವ ಜಗದೀಶ್ ಶೆಟರ್ ಕ್ರಮ ವಹಿಸಿದ್ದಾರೆ ಎಂದು ತಿಳಿಸಿದರು.

ವಿಶೇಷವಾಗಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.  ಬಿಬಿಎಂಪಿ ವತಿಯಿಂದ  ಬೆಂಗಳೂರಿನಲ್ಲಿ ಕೋವಿಡ್ ರೋಗಿಗಳಿಗಾಗಿಯೇ 1000 ಐಸಿಯು ಬೆಡ್ ಗಳ ಆಸ್ಪತ್ರೆ  ನಿರ್ಮಾಣವಾಗುತ್ತಿದ್ದು ಶೀಘ್ರದಲ್ಲೇ ಲೋಕಾರ್ಪಣೆ ಆಗಲಿದೆ ಎಂದ ಅವರು ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಸಹ  ವಿಶ್ರಾಂತಿ ಪಡೆಯದೆ ನೇರವಾಗಿ ಕೋವಿಡ್ ನಿಯಂತ್ರಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಎಲ್ಲಾ ಸಚಿವರು ಹಾಗು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡಿ ಸಮರ್ಪಕವಾಗಿ ಆಮ್ಲಜನಕ‌ ಪೂರೈಸಲು ಅಧಿಕಾರಿಗಳಿಗೆ  ಸೂಚನೆ ನೀಡಿದ್ದಾರೆ. ಒಂದೆರಡು ದಿನದಲ್ಲಿ ಬೆಡ್ ಹಾಗು ಆಮ್ಲಜನಕ ಸಮಸ್ಯೆ ತಹಬದಿಗೆ ಬರಲಿದೆ ಎಂದು ತಿಳಿಸಿದರು.

ಪಿಯು ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿಗಳ ಒತ್ತಾಯ

ಕ್ಲಾಸ್ ನಡೆಯುತ್ತಿಲ್ಲ, ಟ್ಯೂಷನ್ ಬಂದ್ ಆಗಿವೆ. ಪಾಠ ಪ್ರವಚನಗಳು ಪೂರ್ಣವಾಗಿಲ್ಲ ಪರೀಕ್ಷೆ ಮುಂದೂಡಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನುದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಒತ್ತಾಯಿಸಿದ ಘಟನೆ ಕೊಳ್ಳೇಗಾಲದಲ್ಲಿ ನಡೆಯಿತು. ಇಲ್ಲಿನ ಪ್ರವಾಸಿ ಮಂದಿರಕ್ಕೆ ಬಂದ ಸಚಿವರನ್ನು 20ಕ್ಕೂ ಹೆಚ್ಚು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭೇಟಿ ಮಾಡಿ ಪಾಠ ಪ್ರವಚನಗಳೇ ಪೂರ್ಣಗೊಂಡಿಲ್ಲ. ಹೀಗಿರುವಾಗ ಪರೀಕ್ಷೆ  ಬರೆಯೋದಾದರು ಹೇಗೆ ಎಂದು ತಮ್ಮ ಅಳಲು ತೋಡಿಕೊಂಡರು. ಕೊರೋನಾ ಸಂದಿಗ್ಧತೆಯಲ್ಲಿ ಕ್ಲಾಸ್ ನಡೆಸುವುದಕ್ಕೆ ಅವಕಾಶ ಇಲ್ಲ ಎಂದಷ್ಟೇ ಹೇಳಿದ ಸಚಿವರು  ಅಲ್ಲಿಂದ ಹೊರಟರು. ತಮ್ಮ ಆಗ್ರಹಕ್ಕೆ ಸಮರ್ಪಕ ಉತ್ತರ ಸಿಗದ ಕಾರಣ ಪ್ರಶ್ನೆ ಕೇಳುತ್ತಲೆ ವಿದ್ಯಾರ್ಥಿಗಳು ಸಚಿವರ ಹಿಂದೆ ಹೋದರು ಸಹ ಯಾವುದೇ ಪ್ರಯೋಜನವಾಗದೆ ವಿದ್ಯಾರ್ಥಿಗಳು ನಿರಾಶರಾದರು.

ಇದನ್ನು ಓದಿ: ಮೃತದೇಹಗಳನ್ನು ಕೂಡಲೇ ಸಂಬಂಧಿಕರಿಗೆ ಹಸ್ತಾಂತರಿಸಬೇಕು, ವಿಳಂಬ ಮಾಡಿದರೆ ಆಸ್ಪತ್ರೆಗಳ ಮೇಲೆ ಕ್ರಮ: ಡಿಸಿಎಂ ಅಶ್ವಥ್ ನಾರಾಯಣ ಎಚ್ಚರಿಕೆ

ಕೋವಿಡ್-19 ನಿಯಮ ಗಾಳಿಗೆ ತೂರಿದ ಜನಪ್ರತಿನಿಧಿಗಳು

ಹನೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ  ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳೇ ಕೊರೋನಾ ಮುಂಜಾಗ್ರತಾ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂತು. ಮದುವೆಗೆ 50 ಜನರ ಮಿತಿ ಹೇರಲಾಗಿದೆ. ಆದರೆ ಇವರ ಕಾರ್ಯಕ್ರಮದಲ್ಲಿ ಯಾವುದೇ ಮಿತಿಯೇ ಇರಲಿಲ್ಲ. ಸರ್ಕಾರದ ಮಾರ್ಗಸೂಚಿ ಅನ್ವಯ ಈಗ ರಾಜ್ಯದ  ಎಲ್ಲಾ ಕಡೆ ನಿಷೇಧಾಜ್ಞೆ ಜಾರಿಯಲ್ಲಿದೆ. 144 ನೇ ಸೆಕ್ಷನ್ ಅನ್ವಯ ಜನರು ಗುಂಪುಗೂಡುವಂತಿಲ್ಲ. ಆದರೆ ಇಲ್ಲಿ ನಡೆದಿರುವ ಕಾರ್ಯಕ್ರಮಗಳಲ್ಲಿ ಇದ್ಯಾವುದು ಪಾಲನೆ ಆಗಲೇ ಇಲ್ಲ.

ಯಾವುದೇ ಸಾಮಾಜಿಕ ಅಂತರವೂ ಇಲ್ಲದಂತೆ ಜನರನ್ಮು ಗುಂಪುಗುಂಪಾಗಿ ಸೇರಿಸಿಕೊಂಡು ಶಂಕುಸ್ಥಾಪನೆ, ಉದ್ಘಾಟನೆ ನೇರಿವೇರಿಸಿದ ಸಚಿವರು ಹಾಗು ಶಾಸಕರು ಜನಸಾಮಾನ್ಯರಿಗೆ ಮಾತ್ರ ರೂಲ್ಸ್ ಮಾಡಿರೋದು, ನಮಗಲ್ಲ ಎಂಬಂತೆ ನಡೆದುಕೊಂಡಿದ್ದಾರೆ.

ವರದಿ: ಎಸ್.ಎಂ.ನಂದೀಶ್
Published by:HR Ramesh
First published: