HOME » NEWS » District » ANDOLA SRI CONTROVERSIAL STATEMENT ON DC AND CEO WHO DID NOT TAKE ACTION ON RAMESH SANGA SAKLB HK

ರಮೇಶ್ ಸಂಗಾ ವಿರುದ್ಧ ಕ್ರಮ ಕೈಗೊಳ್ಳದ ಡಿಸಿ, ಸಿಇಒ ಬಳೆ ತೊಟ್ಟುಕೊಳ್ಳಲಿ: ಆಂದೋಲಶ್ರೀ ವಿವಾದಾತ್ಮಕ ಹೇಳಿಕೆ

ಅನುದಾನ ಬಿಡುಗಡೆ ಮಾಡಿದ ಬಿಸಿಎಂ ಜಿಲ್ಲಾಧಿಕಾರಿ ರಮೇಶ್ ಸಂಗಾರನ್ನು ಅಮಾನತುಗೊಳಿಸಬೇಕು. ಸಂಗಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ದುರ್ಬಳಕೆಯಾದ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕಿದೆ.

news18-kannada
Updated:November 5, 2020, 6:32 PM IST
ರಮೇಶ್ ಸಂಗಾ ವಿರುದ್ಧ ಕ್ರಮ ಕೈಗೊಳ್ಳದ ಡಿಸಿ, ಸಿಇಒ ಬಳೆ ತೊಟ್ಟುಕೊಳ್ಳಲಿ: ಆಂದೋಲಶ್ರೀ ವಿವಾದಾತ್ಮಕ ಹೇಳಿಕೆ
ಆಂದೋಲಶ್ರೀ
  • Share this:
ಕಲಬುರ್ಗಿ(ನವೆಂಬರ್​. 05): ಕಲಬುರ್ಗಿ ಜಿಲ್ಲೆ ಆಳಂದ ಪಟ್ಟಣದಲ್ಲಿ ಲಿಂಗಾಯತ ಭವನ ನಿರ್ಮಾಣದಲ್ಲಿ ಅಕ್ರಮವಾಗಿದೆ ಎಂದು ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳದ ಡಿಸಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಬಳೆ ತೊಟ್ಟುಕೊಳ್ಳಬೇಕೆಂದು ಆಂದೋಲ ಶ್ರೀ ಹಾಗೂ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಭವನ ನಿರ್ಮಾಣದಲ್ಲಿ 75 ಲಕ್ಷ ರೂಪಾಯಿ ಅನುದಾನ ದುರ್ಬಳಕೆಯಾಗಿದೆ. ಈ ಕುರಿತು ಸಾಕಷ್ಟು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಲಬುರ್ಗಿ ಡಿಸಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒ ಬಳೆ ತೊಟ್ಟುಕೊಳ್ಳಲಿ ಎಂದಿದ್ದಾರೆ. ಅಖಿಲ ಭಾರತ ವೀರಶೈವ ಮಹಾ ಸಭಾ ಟ್ರಸ್ಟ್ ನಿಂದ ಲಿಂಗಾಯತ ಭವನ ನಿರ್ಮಾಣ ಮಾಡಲಾಗುತ್ತಿದೆ. ಮಾಜಿ ಶಾಸಕ ಬಿ.ಆರ್.ಪಾಟೀಲ ಇದರ ಅಧ್ಯಕ್ಷರಾಗಿದ್ದಾರೆ. ಕಟ್ಟಡದ ನಿರ್ಮಾಣದಲ್ಲಿ ಮಾರ್ಗಸೂಚಿ ಮತ್ತು ಷರತ್ತುಗಳ ಉಲ್ಲಂಘನೆ ಮಾಡಲಾಗಿದೆ.

ಮೊದಲ ಕಂತಿನಲ್ಲಿ 25 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಲಿಂಗಾಯತ ಭವನ ನಿರ್ಮಿಸದೇ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲಾಗಿದೆ. ಮಾರ್ಗಸೂಚಿ ಪಾಲನೆ ಮಾಡಲಾಗಿಲ್ಲ ಎಂದು ನೋಟೀಸ್ ನೀಡಿದ್ದ ಬಿಸಿಎಂ ಜಿಲ್ಲಾಧಿಕಾರಿ ರಮೇಶ್ ಸಂಗಾ, ನಂತರದಲ್ಲಿ 2ನೇ ಕಂತಾಗಿ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರ ಒಳ ಮರ್ಮ ಏನೆಂದು ಗೊತ್ತಾಗುತ್ತಿಲ್ಲ ಎಂದರು.

ಅನುದಾನ ಬಿಡುಗಡೆ ಮಾಡಿದ ಬಿಸಿಎಂ ಜಿಲ್ಲಾಧಿಕಾರಿ ರಮೇಶ್ ಸಂಗಾರನ್ನು ಅಮಾನತುಗೊಳಿಸಬೇಕು. ಸಂಗಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ದುರ್ಬಳಕೆಯಾದ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕಿದೆ. ಆದರೆ, ಈ ಬಗ್ಗೆ ಸಾಕಷ್ಟು ದೂರು ಕೊಟ್ಟರೂ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದ್ರೆ ಅನುಮಾನ ಬರುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ : ಮಾಜಿ ಸಚಿವ ವಿನಯ್‌ ಕುಲಕರ್ಣಿ ಬಂಧನಕ್ಕೆ ರಾಜಕೀಯ ಬಣ್ಣ ಸರಿಯಲ್ಲ: ಡಿಸಿಎಂ ಅಶ್ವತ್ಥನಾರಾಯಣ

ಹಿರಿಯ ಅಧಿಕಾರಿಗಳು ಬಿಸಿಎಂ ಜಿಲ್ಲಾಧಿಕಾರಿ ರಮೇಶ್ ಸಂಗಾಗೆ ಹೆದರಿ ಕೂತಿದಾರೆ ಎಂದೆನಿಸುತ್ತದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಬಳೆ ತೊಟ್ಟು ಕೂಡಬೇಕು. ಈ ವಿಚಾರವಾಗಿ ಜಿಲ್ಲೆಯ ಶಾಸಕರು, ಸಂಸದರೂ ಚಕಾರ ಎತ್ತದಿರುವುದು ಅಚ್ಚರಿಗೆ ಕಾರಣವಾಗಿದೆ.

ಟ್ರಸ್ಟ್ ಅಧ್ಯಕ್ಷರಾಗಿರುವ ಬಿ.ಆರ್.ಪಾಟೀಲ ತಮ್ಮ ಪ್ರಭಾವ ಬಳಸಿ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಬೆಂಬಲ ನೀಡುತ್ತಿರುವ ಬಿಸಿಎಂ ಜಿಲ್ಲಾಧಿಕಾರಿ ರಮೇಶ್ ಸಂಗಾ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಉಪವಾಸ ಸತ್ಯಾಗ್ರಹ ಸೇರಿ ಉಗ್ರ ಹೋರಾಟ ಮಾಡುವುದಾಗಿ ಆಂದೋಲಶ್ರೀ ಎಚ್ಚರಿಕೆ ನೀಡಿದ್ದಾರೆ.
Published by: G Hareeshkumar
First published: November 5, 2020, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading