• Home
  • »
  • News
  • »
  • district
  • »
  • ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಶಶಿಭೂಷಣ್ ಹೆಗಡೆ, ಪ್ರದೀಪ್ ನಾಯಕ ಕಾಂಗ್ರೆಸ್ ಸೇರ್ಪಡೆ?

ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಶಶಿಭೂಷಣ್ ಹೆಗಡೆ, ಪ್ರದೀಪ್ ನಾಯಕ ಕಾಂಗ್ರೆಸ್ ಸೇರ್ಪಡೆ?

ಆನಂದ್ ಅಸ್ನೋಟಿಕರ್

ಆನಂದ್ ಅಸ್ನೋಟಿಕರ್

ಮಧು ಬಂಗಾರಪ್ಪ ಅವರು ತಮ್ಮ ಜೊತೆ ಉತ್ತರಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡರಾದ ಆನಂದ್ ಅಸ್ನೋಟಿಕರ್, ಶಶಿಭೂಷಣ್ ಹೆಗಡೆ ಮತ್ತು ಪ್ರದೀಪ ನಾಯಕ ಅವರನ್ನೂ ಕಾಂಗ್ರೆಸ್​ಗೆ ಕರೆದೊಯ್ಯುತ್ತಿದ್ದಾರೆಂಬ ಸುದ್ದಿ ಇದೆ. ಡಿಕೆಶಿ ಮಗಳ ಮದುವೆ ಬಳಿಕ ಅವರೆಲ್ಲರೂ ಕೈ ಪಾಳಯ ಸೇರಲಿದ್ದಾರೆನ್ನಲಾಗುತ್ತಿದೆ.

ಮುಂದೆ ಓದಿ ...
  • Share this:

ಕಾರವಾರ: ಜಾತ್ಯತೀತ ಜನತಾದಳದ ರಾಜ್ಯ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಶೀಘ್ರದಲ್ಲೇ ಕಾಂಗ್ರೆಸ್ ಮನೆ ಸೇರಿಕೊಳ್ಳಲಿದ್ದಾರೆ ಎಂಬ ವದಂತಿ ಹಬ್ಬಿರುವ ಜೊತೆಯ್ಲೇ ಉತ್ತರ ಕನ್ನಡ  ಜಿಲ್ಲೆಯಿಂದ  ಕಾರವಾರ ಮಾಜಿ ಸಚಿವ ಆನಂದ ಅಸ್ನೋಟಿಕರ್, ರಾಮಕೃಷ್ಣ ಹೆಗಡೆ ಕುಟುಂಬ ಕುಡಿ ಜೆಡಿಎಸ್ ಧುರೀಣ ಡಾ. ಶಶಿಭೂಷಣ ಹೆಗಡೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಪ್ರದೀಪ ನಾಯಕ ಅವರೂ ಕಾಂಗ್ರೆಸ್ ಸೇರುವುದು ಅಂತಿಮವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಈ ವಿಚಾರವನ್ನ ಜಿಲ್ಲಾ ಕಾಂಗ್ರೆಸ್ ಪ್ರಮುಖ ನಾಯಕರೋರ್ವರು ಖಾತ್ರಿ ಪಡಿಸಿದ್ದು, ಎಲ್ಲವೂ ದೆಹಲಿಯಲ್ಲೇ ಮಾತುಕತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.


ಕಳೆದ ಲೋಕಸಭಾ ಚುನಾವಣೆ ನಂತರ ಅಸಮಾಧಾನಗೊಂಡು ಜೆಡಿಎಸ್ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದ ಮಧು ಬಂಗಾರಪ್ಪ, ಕಾಂಗ್ರೆಸ್ ಸೇರುತ್ತಾರೆನ್ನುವ ಸುದ್ದಿ ಕಳೆದ ಕೆಲ ತಿಂಗಳಿಂದ ಹರಿದಾಡಿತ್ತು. ಆದರೆ ಈ ಬಗ್ಗೆ ಖಾತ್ರಿಯಾಗಿರಲಿಲ್ಲ. ಅಲ್ಲದೇ ಜೆಡಿಎಸ್ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದ ಮಧು ಬಂಗಾರಪ್ಪ ತಾವು ಕಾಂಗ್ರೆಸ್ ಸೇರುತ್ತೇನೆನ್ನುವ ಸುದ್ದಿಯನ್ನ ನಿರಾಕರಣೆ ಮಾಡಿದ್ದಾಗಲೀ ಅಥವಾ ಯಾವುದೇ ಸ್ಪಷ್ಟನೆ ನೀಡಿದ್ದಾಗಲೀ ಮಾಡಿರಲಿಲ್ಲ. ಅಲ್ಲದೇ ಜೆಡಿಎಸ್ ನಾಯಕರೂ ಸಹ ಮಧು ಬಂಗಾರಪ್ಪ ಜೆಡಿಎಸ್‌ನಲ್ಲೇ ಮುಂದುವರೆಯುವ ಬಗ್ಗೆ ಅವರ ಮನವೊಲಿಸಲಾಗುವುದು ಎಂದು ಹೇಳಿ ಸುಮ್ಮನಾಗಿದ್ದರು. ಇದೀಗ ಹೊಸ ಬೆಳವಣಿಗೆಯೆನ್ನುವಂತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆಗೆ ಮಧು ಬಂಗಾರಪ್ಪ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ತದ ನಂತರ ಮಾತನಾಡಿರುವ ಡಿಕೆ ಶಿವಕುಮಾರ್ ಮುಂದಿನ ವಾರವೇ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.


ಇದನ್ನೂ ಓದಿ: Earthquake - ತಜಿಕಿಸ್ತಾನ್​ನಲ್ಲಿ ಭಾರೀ ಭೂಕಂಪ; ದೆಹಲಿ ಮತ್ತಿತರರೆಡೆಯೂ ಕಂಪಿಸಿದ ಭೂಮಿ


ಡಿಕೆ ಶಿವಕುಮಾರ್ ಭೇಟಿಗೆ ಮುನ್ನವೇ ಮಧು ಬಂಗಾರಪ್ಪ ಕಾಂಗ್ರೆಸ್ ವರಿಷ್ಠರನ್ನ ಭೇಟಿಯಾಗಿ ಮಾತನಾಡಿ ಎಲ್ಲವನ್ನೂ ಖಚಿತಪಡಿಸಿಕೊಂಡಿದ್ದರೆನ್ನಲಾಗಿದೆ. ತಾನು ಕಾಂಗ್ರೆಸ್ ಸೇರುವುದರ ಜೊತೆಗೆ ಉತ್ತರಕನ್ನಡ ಜಿಲ್ಲೆಯ ಜೆಡಿಎಸ್ ನಾಯಕರಾಗಿರುವ ಮಾಜಿ ಸಚಿವ ಆನಂದ ಅಸ್ನೋಟಿಕರ್, ಡಾ. ಶಶಿಭೂಷಣ ಹೆಗಡೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಪ್ರದೀಪ ನಾಯಕ ಅವರನ್ನು ಸಹ ಕಾಂಗ್ರೆಸ್ ಸೇರ್ಪಡೆಗೊಳಿಸುವ ಬಗ್ಗೆ ಮಧು ಬಂಗಾರಪ್ಪ ದೆಹಲಿ ಮಟ್ಟದಲ್ಲಿಯೇ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಮಧು ಬಂಗಾರಪ್ಪ ಮತ್ತು ಆನಂದ್ ಅಸ್ನೋಟಿಕರ್ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ. ಈ ವೇಳೆ ಪಕ್ಷ ಸೇರ್ಪಡೆ ಜೊತೆ ಕಾಂಗ್ರೆಸ್‌ನಲ್ಲಿ ಈ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಬೇಕೆನ್ನುವ ಮಾತುಕತೆ ಸಹ ನಡೆದಿದೆ ಎಂದು ತಿಳಿದು ಬಂದಿದ್ದು, ಇದಕ್ಕೆ ರಾಹುಲ್ ಗಾಂಧಿ  ಮೌಖಿಕವಾಗಿ ಒಪ್ಪಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರಿಗೆ ಈ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆದರೆ, ತಮ್ಮ ಪುತ್ರಿಯ ವಿವಾಹದ ನಂತರ ಸೇರ್ಪಡೆ ಕಾರ್ಯಕ್ರಮ ಮಾಡಿಕೊಳ್ಳೋಣ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿಕಳುಹಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.


ಇದನ್ನೂ ಓದಿ: ಗ್ರಾಮ ಪಂಚಾಯತ್​ ಚುನಾವಣೆ: ಸಿಪಿ ಯೋಗೇಶ್ವರ್​ ಹುಟ್ಟೂರಿನಲ್ಲಿ ಜಯಭೇರಿ ಬಾರಿಸಿದ ಜೆಡಿಎಸ್​


ಕಾರವಾರದಲ್ಲಿ ಟಿಕೇಟ್ ಆಕಾಂಕ್ಷಿಯಾಗಿರುವ ಅಸ್ನೋಟಿಕರ್:


ಜೆಡಿಎಸ್​ನಿಂದ ಕಾಂಗ್ರೆಸ್ ಕಡೆ ವಾಲುತ್ತಿರುವ ಆನಂದ ಅಸ್ನೋಟಿಕರ್ ಅವರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಟಿಕೆಟ್ ಆಕಾಂಕ್ಷೆ ಇಟ್ಟುಕೊಂಡಿದ್ದಾರೆ. ಅಸ್ನೋಟಿಕರ್ ಅಭಿಮಾನಿ ಸಂಘದ ಮೂಲಕ ರಾಜಕೀಯ ಪ್ರವೇಶ ಮಾಡಿ, ತದನಂತರ ಕಾಂಗ್ರೆಸ್ ಸೇರಿದ್ದ ಆನಂದ್ ಅಸ್ನೋಟಿಕರ್ ಮಂತ್ರಿಯಾಗುವ ಹಂಬಲದಲ್ಲಿ ಬಿಜೆಪಿ ಸೇರಿದ್ದರು. ಚುನಾವಣೆಯಲ್ಲಿ ಅದೇ ಪಕ್ಷದ ಅಭ್ಯರ್ಥಿಯಾಗಿ ಸೋತ ಮೇಲೆ ಜೆಡಿಎಸ್ ಮನೆ ಸೇರಿಕೊಂಡಿದ್ದರು. ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲೂ ಕಣಕ್ಕಿಳಿದು ಸೋತ ನಂತರ ತೆರೆಮರೆಗೆ ಸರಿಯುವ ಹಂತಕ್ಕೆ ಅವರು ಬಂದಿದ್ದರು. ಆದರೆ ಬಿಜೆಪಿ ಸೇರಲು ನಿರಂತರ ಪ್ರಯತ್ನ ಮಾಡಿದ್ದರೂ ಅದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಸೇರ್ಪಡೆಗೂ ಪ್ರಯತ್ನ ಸಾಗಿತ್ತು. ಅಂತು ಕೊನೆಗೂ ಬಿಟ್ಟ ಮನೆಗೆ ಆನಂದ ಅಸ್ನೋಟಿಕರ್ ಮತ್ತೆ ಪ್ರವೇಶ ಮಾಡುತ್ತಿದ್ದಾರೆಂದು ಹೇಳಲಾಗಿದೆ.


ಇದನ್ನೂ ಓದಿ: ಯಾವುದಕ್ಕೂ ಅಂಜುವವನಲ್ಲ, ಸತ್ಯದ ಪರ ಮಾತನಾಡುತ್ತೇನೆ; ಬಸನಗೌಡ ಪಾಟೀಲ ಯತ್ನಾಳ್​


ಸಿದ್ದಾಪುರದ ಡಾ. ಶಶಿಭೂಷಣ ಬಿಜೆಪಿ ಸೇರಿ ತದ ನಂತರ ಜೆಡಿಎಸ್‌ನಲ್ಲಿದ್ದವರು. ಅವರು ಸಹ ಆ ಪಕ್ಷ ತೊರೆಯುವ ಮನಸ್ಸು ಮಾಡಿ ಇದೀಗ ಮಧು ಬಂಗಾರಪ್ಪ ಜೊತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂದು ಹೇಳಲಾಗುತ್ತಿದೆ. ಗೋಕರ್ಣದ ಪ್ರದೀಪ ನಾಯಕ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು, ಕುಮಟಾ ಕ್ಷೇತ್ರದಲ್ಲಿ ಪ್ರಭಾವ ಹೊಂದಿದ್ದಾರೆ. ಜೆಡಿಎಸ್ ತೊರೆದ ದಿನಕರ ಶೆಟ್ಟರು ಬಿಜೆಪಿಯಿಂದ ಶಾಸಕರಾದ ಮೇಲೆ ಅವರಿಗೆ ರಾಜಕೀಯವಾಗಿ ಎದುರಾಳಿಯಾಗಿದ್ದವರು. ಇದೀಗ ಪ್ರದೀಪ್ ನಾಯಕ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ರಂಗು ಬದಲಾಗುತ್ತಿರುವುದು ಸ್ಪಷ್ಟವಾಗಿದೆ.


ವರದಿ: ದರ್ಶನ್ ನಾಯ್ಕ್

Published by:Vijayasarthy SN
First published: