ಕೊಡಗಿನಲ್ಲಿ ಬಾಲಕಿ ಮೇಲೆ ಹೆತ್ತ ತಂದೆಯಿಂದಲೇ ದೌರ್ಜನ್ಯ; ಅಧಿಕಾರಿಗಳಿಂದ ರಕ್ಷಣೆ

ಕೊಡಗಿನ ಶನಿವಾರಸಂತೆಯ ಚಂದ್ರಶೇಖರ್ ಎಂಬಾತ ನಿತ್ಯ ಕುಡಿದು ಬಂದು ತನ್ನ ಎಂಟು ವರ್ಷದ ಮಗಳಿಗೆ ಕಿರುಕುಳ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಈ ಬಾಲಕಿಯನ್ನು ರಕ್ಷಿಸಿದ್ದಾರೆ.

news18-kannada
Updated:September 23, 2020, 2:13 PM IST
ಕೊಡಗಿನಲ್ಲಿ ಬಾಲಕಿ ಮೇಲೆ ಹೆತ್ತ ತಂದೆಯಿಂದಲೇ ದೌರ್ಜನ್ಯ; ಅಧಿಕಾರಿಗಳಿಂದ ರಕ್ಷಣೆ
ಸೋಮವಾರಪೇಟೆಯ ಶನಿವಾರಸಂತೆಯಲ್ಲಿ ತಂದೆಯಿಂದ ದೌರ್ಜನ್ಯಕ್ಕೊಳಗಾದ ಬಾಲಕಿಯ ರಕ್ಷಣೆ
  • Share this:
ಕೊಡಗು: ತಂದೆಯಿಂದಲೇ ಕಿರುಕುಳ ಅನುಭವಿಸುತ್ತಿದ್ದ 8 ವರ್ಷದ ಬಾಲಕಿಯೊಬ್ಬಳನ್ನು ಕೊಡಗು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಲ್ಲಿ ಚಂದ್ರಶೇಖರ್ ಎಂಬಾತ ತನ್ನ ಸ್ವಂತ ಮಗಳ ಮೇಲೆ ಹಲವು ದಿನಗಳಿಂದ ದೈಹಿಕವಾಗಿ ಹಲ್ಲೆ ನಡೆಸಿ ನಿತ್ಯ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಕೆಲ ವರ್ಷಗಳ ಹಿಂದೆ ಇವನ ಕಿರುಕುಳ ತಡೆಯಲಾರದೆ ಪತ್ನಿ ಇವನನ್ನು ಬಿಟ್ಟು ತನ್ನ ಎರಡು ಮಕ್ಕಳೊಂದಿಗೆ ತವರು ಮನೆಗೆ ಹೋಗಿ ಸೇರಿದ್ದಾಳೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಚಂದ್ರಶೇಖರ್, ತಾನೇ ಒಂದು ಹೆಣ್ಣುಮಗುವನ್ನು ಸಾಕುತ್ತೇನೆ ಎಂದು ಹೇಳಿ ಹೆಂಡತಿ ಬಳಿ ಇದ್ದ 8 ವರ್ಷದ ತನ್ನ ಹೆಣ್ಣು ಮಗುವನ್ನು ಮನೆಗೆ ವಾಪಸ್ ಕರೆದುಕೊಂಡು ಬರುತ್ತಾನೆ.

ವಾಪಸ್ ಮಗುವನ್ನು ಕರೆದುಕೊಂಡು ಬಂದವನು ತನ್ನ ಹಳೆಯ ಚಾಳಿ ಮುಂದುವರಿಸುತ್ತಾನೆ. ನಿತ್ಯ ಕುಡಿದು ಬಂದು ಎಂಟು ವರ್ಷದ ಹೆಣ್ಣು ಮಗುವಿಗೆ ಈ ಪಾಪಿ ಅಪ್ಪ ನಿತ್ಯ ಹಲ್ಲೆ ನಡೆಸುತ್ತಿರುತ್ತಾನೆ. ಜೊತೆಗೆ ಊಟವನ್ನು ಹಾಕದೆ, ಮಗುವಿನಿಂದಲೇ ಮನೆಯ ಕೆಲಸವನ್ನೆಲ್ಲಾ ಮಾಡಿಸುತ್ತಿರುತ್ತಾನೆ. ಪಾತ್ರೆ ತೊಳೆಸುವುದು, ಮನೆ ತೊಳೆಸುವುದು ಇತ್ಯಾದಿ ಎಲ್ಲಾ ಕೆಲಸಗಳನ್ನ ಮಾಡುತ್ತಿರುತ್ತಾನೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದ ಕಪಾಲ ಬೆಟ್ಟದಲ್ಲಿ ನಿರ್ಮಿಸಿದ್ದ ಏಸು ಶಿಲುಬೆ ತೆರವು

ಜೊತೆಗೆ ಮಗುವಿಗೆ ಕನಿಷ್ಠ ಒಂದು ಜೊತೆ ಬಟ್ಟೆಯನ್ನೂ ಆತ ಕೊಡಿಸುತ್ತಿರಲಿಲ್ಲ. ಇನ್ನು ಅಕ್ಕ ಪಕ್ಕದ ಮನೆಯವರು ಬಾಲಕಿಯ ಸ್ಥಿತಿ ನೋಡಲಾರದೆ ಬಟ್ಟೆ ಕೊಟ್ಟರೆ ಆ ಬಟ್ಟೆಗಳಿಗೆ ಬೆಂಕಿ ಇಟ್ಟು ಸುಟ್ಟುಹಾಕುತ್ತಿದ್ದನಂತೆ. ಇವನ ಹಲ್ಲೆ, ಕಿರುಕುಳ, ದೌರ್ಜನ್ಯ ತಾಳಲಾರದೆ ಮಗು ಈತನ ಹಿಂಸಾಚಾರದ ವಿಡಿಯೋ ಮಾಡಿದೆ. ನನ್ನನ್ನು ದಯವಿಟ್ಟು ಅನಾಥಾಶ್ರಮಕ್ಕಾದರೂ ಸೇರಿಸಿ, ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡಿದೆ.

ಆದರೆ ಪಾಪಿ ತಂದೆ ಮಾತ್ರ, ನಾನು ಹೊಡೆಯುತ್ತಿರಲಿಲ್ಲ. ಕೇವಲ ಹೆದುರಿಸುತ್ತಿದ್ದೆ ಅಷ್ಟೇ ಎಂದು ತಡವರಿಸಿ ಉತ್ತರಿಸುತ್ತಾ, ಸಬೂಬು ಹೇಳಿದ್ದಾನೆ. ಮಗುವಿನ ತೊಳಲಾಟವನ್ನು ವಿಡಿಯೋದಲ್ಲಿ ನೋಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಕ್ಕಳ ರಕ್ಷಣಾ ಘಟಕದ ಮೂಲಕ ಮಗುವನ್ನು ರಕ್ಷಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ಮಗುವನ್ನು ರಕ್ಷಿಸಿ ಬಳಿಕ ಬಾಲಕಿಯರ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ. ಘಟನೆ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ರವಿ ಎಸ್ ಹಳ್ಳಿ
Published by: Vijayasarthy SN
First published: September 23, 2020, 2:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading