news18-kannada Updated:January 10, 2021, 4:57 PM IST
ಶಾಸಕ ಬಸನಗೌಡ ಪಾಟೀಲ್ ಯತ್ನಾಳ
ವಿಜಯಪುರ (ಜ. 10); ಸಚಿವ ಸಂಪುಟ ವಿಸ್ತರಣೆಯಾಗುತ್ತೋ? ಪುನಾರಚನೆಯಾಗುತ್ತೋ? ಗೊತ್ತಿಲ್ಲ. ಆದರೆ, ಮಹತ್ವದ ನಿರ್ಣಯ ಕೈಗೊಳ್ಳಲು ಅಮಿತ್ ಶಾ ಸಿಎಂ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಯಿಸಿದ್ದಾರೆ ಅನಿಸುತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸಿಎಂ ದೆಹಲಿಗೆ ತೆರಳಿದ್ದಾರೆ. ಯಾರನ್ನು ಬಿಜೆಪಿ ಪಕ್ಷದ ನಾಯಕರನ್ನಾಗಿ ಮಾಡಬೇಕೆಂದು ಕೇಂದ್ರ ನಾಯಕರಿಗೆ ಗೊತ್ತಿದೆ. ಪ್ರಧಾನಿ, ಗೃಹ ಸಚಿವರಿಗೆ ಅವರದ್ದೆ ಆದಂಥ ದೊಡ್ಡ ಜಾಲವಿದೆ. ದೇಶದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತು. ಯಾವ ಶಾಸಕ, ಸಚಿವ, ಸಿಎಂ ಏನು ಮಾಡುತ್ತಿದ್ದಾರೆ ಎಂಬುದೂ ಪ್ರಧಾನಿ ಅವರಿಗೆ ಗೊತ್ತು. ಅವರು ಸೂಕ್ತ ನಿರ್ಣಯ ತೆಗದುಕೊಳ್ಳುತ್ತಾರೆ ಎಂದು ಯತ್ನಾಳ ಪರೋಕ್ಷವಾಗಿ ಎಲ್ಲರ ಮೇಲೆ ಹೈಕಮಾಂಡ್ ಕಣ್ಣಿಟ್ಟಿದೆ ಎಂದು ತಿಳಿಸಿದರು.
ಶಿಸ್ತು ಕ್ರಮ ವಿಚಾರ
ನನ್ನ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ನಾನೇನು ಮಾಡಿದ್ದೇನೆ? ನನ್ನಿಂದ ಅಶಿಸ್ತೇ ಆಗಿಲ್ಲ. ಇನ್ನು ಶಿಸ್ತು ಕ್ರಮ ಎಲ್ಲಿಂದ? ನಾನೇನು ಪಕ್ಷದ ರಾಷ್ಟ್ರೀಯ ನಾಯಕರ ಬಗ್ಗೆ ಮಾತನಾಡಿದ್ದೇನೇಯೇ? ಸಿಎಂ ಹಾಗೂ ಸಚಿವರುಗಳ ಬಗ್ಗೆ ಮಾತನಾಡಿದ್ದೇನಾ? ನಾನು ಹೇಳಿದ್ದು ಜನಪರ ಕಾರ್ಯಕ್ರಮಗಳ ಬಗ್ಗೆ. ಅಭಿವೃದ್ಧಿಗಾಗಿ ಹೆಚ್ಚು ಹಣ ಕೇಳಿದ್ದೇನೆ. ಕೋವಿಡ್ ವೇಳೆ ಖಾಸಗಿ ಆಸ್ಪತ್ರೆಗಳ ಸುಲಿಗೆ ಬಗ್ಗೆ ಮಾತನಾಡಿದ್ದೇನೆ. ಶುದ್ದ ಕುಡಿಯುವ ನೀರಿನ ಘಟಕಗಳ ಯೋಜನೆಯಲ್ಲಿ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದೇನೆ. ಸಿಎಂ ಅವರ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದೇನಾ? ಕೇಂದ್ರ ನಾಯಕರ ವಿರುದ್ಧ ಮಾತನಾಡಿದ್ದೇನಾ? ನಾನು ಪಕ್ಷದ ಶಿಸ್ತು ಮೀರಿ ನಡೆದಿಲ್ಲ. ನಾನು ಶಿಸ್ತಿನಿಂದ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಶಿಸ್ತು ಕ್ರಮವಿಲ್ಲ ಎಂದು ಯತ್ನಾಳ ಪುನರುಚ್ಚರಿಸಿದರು.
ತಮಗೆ ಶಿಸ್ತು ಕ್ರಮದ ಬಗ್ಗೆ ನೋಟೀಸ್ ಬಂದಿಲ್ಲ. ಆದರೆ, ಶಿಸ್ತು ಕ್ರಮದ ಬಗ್ಗೆ ಮಾಧ್ಯಮದವರಿಗೆ ಹೆಚ್ಚಿನ ಆಸಕ್ತಿ ಇದೆ. ಅದರ ಬದಲು ನ್ಯಾಯಾಲಯ ಭ್ರಷ್ಟಾಚಾರದ ಕುರಿತು ನೀಡಿರುವ ತೀರ್ಪಿನ ಬಗ್ಗೆ ಗಮಹರಿಸಬೇಕು ಎಂದು ಅವರು ತಿಳಿಸಿದರು.
ಸಚಿವನಾಗಬಾರದು ಎಂದು ನಿರ್ಣಯ
ಈ ಮಧ್ಯೆ ಬಿ ಎಸ್ ವೈ ಸಂಪುಟದಲ್ಲಿ ಸಚಿವನಾಗಬಾರದು ಎಂಬುದು ನನ್ನ ನಿರ್ಣಯ. ಬಿಎಸ್ವೈ ಕೂಡ ನನಗೆ ಸಚಿವ ಸ್ಥಾನ ನೀಡುವುದಿಲ್ಲ ಎಂಬುದು ಗೊತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ನಾಯಕರು ಈ ಕುರಿತು ನಿರ್ಧಾರ ತೆಗದುಕೊಳ್ಳಲಿದ್ದಾರೆ. ಪ್ರಧಾನಿ, ಅಮಿತ್ ಶಾ ಅವರು ನಡ್ಡಾ ಅವರು ನಿರ್ಧಾರ ಮಾಡಬಹುದು. ಪ್ರಾದೇಶಿಕವಾರು, ಜಿಲ್ಲಾವಾರು ಜಾತೀವಾರು ಸೇರಿದಂತೆ ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಏನು ಬದಲಾವಣೆ ಮಾಡುತ್ತಾರೋ ಗೊತ್ತಿಲ್ಲ. ನಾನ್ಯಾವತ್ತೂ ಸಿಎಂ ಬದಲಾಗುತ್ತಾರೆ ಎಂದು ಹೇಳಿಲ್ಲ ಎಂದು ಅವರು ತಿಳಿಸಿದರು.
ಇದನ್ನು ಓದಿ: ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಬಿಎಸ್ ಯಡಿಯೂರಪ್ಪ
ಬಜೆಟ್ ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ರೂ. 25000 ಕೋಟಿ ಮೀಸಲಿಡಬೇಕು. ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ನೀಡಬೇಕು. ವಿಜಯಪುರ ನಗರಾಭಿವೃದ್ಧಿಗೆ 150 ಕೋಟಿ ಮೀಸಲಿಡಬೇಕು. ಇವುಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತೇನೆ ಎಂದರು.
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ, ನಿನ್ನೆ ಸಂಕ್ರಮಣದೊಳಗೆ ಸಿಎಂ ಅವರನನ್ನು ಒಪ್ಪಿಸಲು ಪ್ರಯತ್ನ ಮಾಡುವೆ ಎಂದು ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ. ಜ. 14 ರವರೆಗೆ ಏನಾಗುತ್ತದೆ ಎಂದು ಕಾಯ್ದು ನೋಡಬೇಕು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ನಡೆಯಲಿದೆ. ಜ. 14 ರಿಂದ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಯಲಿದೆ. ಈ ನಿಟ್ಟಿನಲ್ಲಿ ನಿನ್ನೆ ಸಚಿವ ಸಿಸಿ ಪಾಟೀಲ ಕೂಡಲ ಸಂಗಮ ಶ್ರೀಗಳ ಹಾಗೂ ಸಮಾಜದ ಮುಖಂಡರ ಜೊತೆಗೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಜ. 14 ರವರೆಗೆ ಕಾಯಬೇಕು ಎಂದು ಯತ್ನಾಳ ತಿಳಿಸಿದರು.
Published by:
HR Ramesh
First published:
January 10, 2021, 4:57 PM IST