ದಶಕದ ಕನಸು ನನಸು - ಬಸವ ನಾಡಿನ ಭಾರತೀಯ ಮೀಸಲು ಪಡೆ ಬಟಾಲಿಯನ್ ಉದ್ಘಾಟಿಸಿದ ಅಮಿತ್ ಶಾ

2010ರಲ್ಲಿ ವಿಜಯಪುರದಲ್ಲಿ ಭಾರತೀಯ ಮೀಸಲು ಪಡೆಯ ಬಟಾಲಿಯನ್ ಆರಂಭವಾಗಿದ್ದರೂ ಆಡಳಿತ ಕಚೇರಿ ಇರಲಿಲ್ಲ. ಈಗ ದಶಕದ ಬಳಿಕ ಆ ಕನಸು ನನಸಾಗಿದ್ದು, ಅಮಿತ್ ಶಾ ಬೆಂಗಳೂರಿನಿಂದಲೇ ವರ್ಚುಯಲ್ ಆಗಿ ಕಚೇರಿ ಉದ್ಘಾಟನೆ ಮಾಡಿದ್ದಾರೆ.

ವಿಜಯಪುರದ ಐಆರ್​ಬಿ ಕಚೇರಿಯನ್ನ ಬೆಂಗಳೂರಿನಿಂದಲೇ ಆನ್​ಲೈನ್​ನಲ್ಲಿ ಉದ್ಘಾಟನೆ ಮಾಡಿದ ಅಮಿತ್ ಶಾ

ವಿಜಯಪುರದ ಐಆರ್​ಬಿ ಕಚೇರಿಯನ್ನ ಬೆಂಗಳೂರಿನಿಂದಲೇ ಆನ್​ಲೈನ್​ನಲ್ಲಿ ಉದ್ಘಾಟನೆ ಮಾಡಿದ ಅಮಿತ್ ಶಾ

  • Share this:
ವಿಜಯಪುರ: ನಿನ್ನೆ ಬಸವ ನಾಡಿನ ದಶಕಗಳ ಕನಸು ನನಸಾದ ದಿನ.  ದೇಶಾದ್ಯಂತ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾದ ದಿನವೇ ವಿಜಯಪುರದಲ್ಲಿರುವ ಭಾರತೀಯ ಮೀಸಲು ಪಡೆ ಬಟಾಲಿಯನ್ (India Reserve Battalion) ಆಡಳಿತ ಕಚೇರಿ ಉದ್ಘಾಟನೆಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಿಂದ ವರ್ಚ್ಯೂವಲ್ ಕಾರ್ಯಕ್ರಮದ ಮೂಲಕ ರೂ. 9.62 ಕೋ. ವೆಚ್ಚದ ಈ ಕಚೇರಿಯನ್ನು ಉದ್ಘಾಟಿಸಿದ್ದಾರೆ. 

2010ರಲ್ಲಿ ಭಾರತೀಯ ಮೀಸಲು ಪಡೆಯ ರಾಜ್ಯದ 2ನೇ ಬಟಾಲಿಯನ್ ವಿಜಯಪುರದಲ್ಲಿ ಆರಂಭವಾಗಿತ್ತು. ವಿಜಯಪುರ ಜಿಲ್ಲಾಧಿಕಾರಿ ಕಚೇರಿಯ ಪಕ್ಕದಲ್ಲಿರುವ ಪ್ರಾಚೀನ ಸ್ಮಾರಕ ಕಟ್ಟಡದಲ್ಲಿ ಐಆರ್​ಬಿ ಆಡಳಿತ ಕಚೇರಿ ಮೊದಲು ಆರಂಭವಾಗಿತ್ತು. ನಂತರ ಅರಕೇರಿ ಬಳಿ 110 ಎಕರೆಯಲ್ಲಿ ಬಟಾಲಿಯನ್ ಶಿಫ್ಟ್ ಆಗಿದ್ದು, ಅಲ್ಲಿ ಈಗಾಗಲೇ ವಸತಿ ಗೃಹಗಳು ನಿರ್ಮಾಣವಾಗಿವೆ. ಆದರೆ, ಈವರೆಗೆ ಆಡಳಿತ ಕಚೇರಿ ಇರಲಿಲ್ಲ.  ಈ ಹಿನ್ನೆಲೆಯಲ್ಲಿ 2017ರಲ್ಲಿ ಐಆರ್​ಬಿ ಬಟಾಲಿಯನ್ ಆಡಳಿತ ಕಚೇರಿ ನಿರ್ಮಾಣ ಕೆಲಸ ಆರಂಭವಾಗಿತ್ತು. ಈಗ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಕಚೇರಿಯನ್ನು ಕೇಂದ್ರ ಗೃಹ ಸಚಿವ ಅಮಿತ ಶಾ ವರ್ಚ್ಯೂವಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದರು.

ಬೆಂಗಳೂರಿನಿಂದಲೇ ಅಮಿತ್ ಶಾ ನಿನ್ನೆ ಆನ್​ಲೈನ್​ನಲ್ಲಿ ಉದ್ಘಾಟಿಸಿದ ಈ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲೆಯ ಅರಕೇರಿ ಬಳಿಯ ಆಡಳಿತ ಕಚೇರಿಯ ಸಭಾಂಗಣದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ, ಬೀಜ ನಿಗಮದ ಅಧ್ಯಕ್ಷ ವಿಜುಗೌಡ ಪಾಟೀಲ, ಜಿ. ಪಂ. ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ, ಎಸ್ಪಿ ಅನುಪಮ ಅಗ್ರವಾಲ, ವಿಜಯಪುರ ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಐದು ನಿಮಿಷದ ಸಿಡಿ ಬಿಡುಗಡೆ ಇರುತ್ತೆ, ‘ಆ ಸಿಡಿ’ ಅಲ್ಲ ಎಂದ ಸಚಿವ ಮುರುಗೇಶ್ ನಿರಾಣಿ

ಅಮಿತ್ ಶಾ ವರ್ಚ್ಯೂವಲ್ ಕಾರ್ಯಕ್ರಮದ ಮೂಲಕ ಆಡಳಿತ ಕಚೇರಿ ಉದ್ಘಾಟಿಸುತ್ತಿದ್ದಂತೆ ಭಾರತೀಯ ಮೀಸಲು ಪಡೆಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಬಳಿಕ ಮಾತನಾಡಿದ ವಿಜಯಪುರ ಐ ಆರ್ ಬಿ ಕಮಾಂಡೆಂಟ್ ಎಸ್. ಡಿ. ಪಾಟೀಲ, ದಶಕಗಳ ಹಿಂದೆ ಆರಂಭವಾದ ಭಾರತೀಯ ಮೀಸಲು ಪಡೆಯ ನೂತನ ಆಡಳಿತ ಕಚೇರಿಯನ್ನು ಕೇಂದ್ರ ಗೃಹ ಸಚಿವರು ಉದ್ಘಾಟಿಸಿರುವುದು ಸಂತಸ ತಂದಿದೆ.  ಇದರಿಂದ ಬಹುದಿನಗಳ ನಂತರ ಕನಸು ನನಸಾದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಆಡಳಿತ ಕಚೇರಿಯಲ್ಲಿ ಕಮಾಂಡೆಂಟ್, 7 ಜನ ಅಸಿಸ್ಟಂಟ್ ಕಮಾಂಡೆಂಟ್, ಇನ್ಸಪೆಕ್ಟರ್ ಗಳಿಗೆ ಪ್ರತ್ಯೇಕ ಕೋಣೆಗಳಿವೆ. ಸ್ಟೋರ್, ಸಭಾಂಗಣ ಇವೆ.  ಸದ್ಯಕ್ಕೆ ಬಟಾಲಿಯನ್​ನಲ್ಲಿ ಒಟ್ಟು 996ರಲ್ಲಿ 743 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.  451 ವಸತಿ ಗೃಹಗಳಿವೆ.  ಇಂದು ನಮಗೆ ಹಾಗೂ ನಮ್ಮೆಲ್ಲ ಸಿಬ್ಬಂದಿಗೆ ಹಬ್ಬದ ವಾತಾವರಣ ಉಂಟಾಗಿತ್ತು.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: