ಚನ್ನಪಟ್ಟಣದಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ; ಕಾರ್ಯಕ್ರಮದತ್ತ ಸುಳಿಯದ ಸಿ.ಪಿ. ಯೋಗೇಶ್ವರ್

ಚನ್ನಪಟ್ಟಣದಲ್ಲಿ ಹದಿನಾರು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನ ನಿನ್ನೆ ಉದ್ಘಾಟನೆ ಕಂಡಿದೆ. ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಸಚಿವ ಶ್ರೀರಾಮುಲು ಉದ್ಘಾಟನೆ ಮಾಡಿದರು. ಆದರೆ, ಸಿ.ಪಿ. ಯೋಗೇಶ್ವರ್ ಗೈರಾಗಿದ್ದು ಗಮನ ಸೆಳೆಯಿತು.

ಚನ್ನಪಟ್ಟಣದಲ್ಲಿ ಅಂಬೇಡ್ಕರ್ ಭವನ ಉದ್ಘಾಟಿಸಿದ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿ ಶ್ರೀರಾಮುಲು

ಚನ್ನಪಟ್ಟಣದಲ್ಲಿ ಅಂಬೇಡ್ಕರ್ ಭವನ ಉದ್ಘಾಟಿಸಿದ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿ ಶ್ರೀರಾಮುಲು

  • Share this:
ರಾಮನಗರ: ಅಂತೂ ಇಂತೂ ಯಾವುದೇ ಅಡೆತಡೆ ಇಲ್ಲದೆ ಚನ್ನಪಟ್ಟಣದಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಕಂಡಿದೆ. 16 ವರ್ಷದಿಂದ ಉದ್ಘಾಟನೆಯಾಗದೇ ಇದ್ದ ಭವನ ಇಂದು ಹೆಚ್​ಡಿಕೆ ಶಾಸಕರಾದ ಬಳಿಕ ಉದ್ಘಾಟನೆ ಕಂಡಿದೆ. ಭವನ ಉದ್ಘಾಟನೆ ಮಾಡದಂತೆ ಎಚ್ಚರಿಕೆ ಕೊಟ್ಟಿದ್ದ ಯೋಗೇಶ್ವರ್ ಬೆಂಬಲಿಗರು ಭವನದತ್ತ ಸುಳಿಯದೇ ಇದ್ದದ್ದು ಮತ್ತೊಂದು ವಿಶೇಷವಾಗಿತ್ತು.

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ 6 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಅಂಬೇಡ್ಕರ್ ಭವನವನ್ನ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಉದ್ಘಾಟನೆ ಮಾಡಿದರು. ಮಾಜಿ ಸಿಎಂ ಹಾಗೂ ಶಾಸಕ ಹೆಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಭವನ ಉದ್ಘಾಟನೆ ವಿಚಾರದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಬೆಂಬಲಿಗರು ವಿರೋಧ ವ್ಯಕ್ತಪಡಿಸಿ ಉದ್ಘಾಟನೆಗೆ ಅಡ್ಡಿಪಡಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೆ ಸಚಿವ ಸಿ.ಪಿ.ವೈ ಬೆಂಬಲಿಗರು ಉದ್ಘಾಟನೆ ವೇಳೆ ಯಾವುದೇ ಗಲಾಟೆ ಮಾಡುವುದಿರಲಿ, ಭವನದತ್ತ ಸುಳಿಯಲೇ ಇಲ್ಲ.

ಅಂಬೇಡ್ಕರ್ ಭವನ ಉದ್ಘಾಟನೆ ಸಮಾರಂಭದಲ್ಲಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೂ ವೇದಿಕೆ ನೀಡಲಾಗಿತ್ತು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಘನ ಉಪಸ್ಥಿತಿ ನೀಡಲಾಗಿತ್ತು. ಕಾರ್ಯಕ್ರಮ ಪ್ರಾರಂಭವಾಗಿ ಮುಗಿದರೂ ಸಿಪಿವೈ ಗೈರುಹಾಜರಿ ಎದ್ದು ಕಾಣುತಿತ್ತು. ವೇದಿಕೆಯಲ್ಲಿ ಶ್ರೀರಾಮಲು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನ ಹಾಡಿ‌ ಹೊಗಳಿದರು. ಹೆಚ್.ಡಿ.ಕೆ ಸಿಎಂ ಆಗಿದ್ದ ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಚಿವನಾಗಿ ಕೆಲಸ ಮಾಡಿದ್ದೆ. ಅವರ ಮೇಲೆ ನನಗೆ ವಿಶ್ವಾಸ ಇದೆ. ನಮ್ಮಂಥ ಯುವ ರಾಜಕಾರಣಿಗಳಿಗೆ ಒಂದು ಶಕ್ತಿಯಾಗಿ ಕುಮಾರಸ್ವಾಮಿ ಇದ್ದಾರೆ. ಅವರಿಗೆ ನಾನು‌ ಚಿರ ಋಣಿಯಾಗಿ ಇರುತ್ತೇನೆ ಎಂದು ಶ್ರೀರಾಮುಲು ಹೇಳಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಸತ್ತಿದ್ದಾನೆ ಎಂದುಕೊಂಡಿದ್ದ ಮಗ 10 ವರ್ಷಗಳ ಬಳಿಕ ಮರಳಿ ಬಂದ!

ಅಂದಹಾಗೆ ಮಾಜಿ ಸಿಎಂ ಹೆಚ್.ಡಿ.ಕೆ ವೇದಿಕೆಯಲ್ಲೇ ಸಚಿವ ಸಿ.ಪಿ.ವೈ ವಿರುದ್ಧ ಗುಡುಗಿದ್ರು. ನಾನು ಯಾವ ಕಾಂಟ್ರಾಕ್ಟರ್ ಬಳಿ‌ ಕಮಿಷನ್ ಹಣ ಕೇಳಿಲ್ಲ. ಗುಣಮಟ್ಟದ ಕೆಲಸವಾಗಬೇಕು ಅಷ್ಟೆ ಅಂತಾ ಸ್ಪಷ್ಟನೆ ನೀಡಿದ್ರು. ತಾಲೂಕಿನಲ್ಲಿ ನಡೆದಿರುವ ಏತ ನೀರಾವರಿ ಯೋಜನೆಯಲ್ಲಿ ಹಣ ಗೋಲ್ ಮಾಲ್ ಮಾಡಿದ್ದಾರೆ, ಕಳಪೆ ಪೈಪ್ ಹಾಕಿ ಹಣ ಮಾಡಿ ಇದೀಗ ಅದರ ಹೊಣೆ ನನ್ನ ಮೇಲೆ ಹಾಕಿದ್ದಾರೆ ಅಂತಾ ಗಂಭೀರ ಆರೋಪ ಮಾಡಿದರು. ಸಚಿವರು ರಾಜ್ಯಕ್ಕೆ ಸಚಿವರು. ಅವರು ಚನ್ನಪಟ್ಟಣದ ಒಂದು ಅಂಗ ಅಷ್ಟೇ, ಚನ್ನಪಟ್ಟಣದಲ್ಲಿ ಶಾಸಕನಾಗಿ ಹೆಚ್ಚಿನ ಅಧಿಕಾರ ನನಗಿದೆ. ನನ್ನ ವಿರುದ್ಧ ಲಘುವಾಗಿ ಮಾತನಾಡಿದರೆ ಜನ ಮತ್ತಷ್ಟು ನನ್ನ ಪರವಾಗಿ ಇರ್ತಾರೆಂದು ಎಚ್ಚರಿಕೆ ಕೊಟ್ಟರು.

ಯಶಸ್ವಿಯಾಗಿ ನಡೆದ ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದ ವೇಳೆ, ಕುಮಾರಸ್ವಾಮಿಗೆ ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಅಭಿಮಾನಿಗಳು ತಮ್ಮ ಅಭಿಮಾನ ತೋರಿಸಿದರು.

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: