HOME » NEWS » District » ALMOST TANDAS ARE EMPTY IN BASAVANADU VIJAYAPURA PEOPLE PELLET WITH CHILDREN MVSV HK

ಬಸವನಾಡಿನಲ್ಲಿ ತಾಂಡಾಗಳೆಲ್ಲ ಖಾಲಿ ಖಾಲಿ: ಶಾಲೆ ಬಿಡಿಸಿ ಮಕ್ಕಳೊಂದಿಗೆ ಗುಳೆ ಹೋದ ಜನ ಯಾಕೆ ಗೊತ್ತಾ?

ನ್ಯೂಸ್ 18 ಕನ್ನಡ ತಂಡ ಅಲಿಯಾಬಾದ ಎಲ್. ಟಿ -2 ಕ್ಕೆ ಭೇಟಿ ನೀಡಿದಾಗ ಬಹುತೇಕ ಮನೆಗಳಿಗೆ ಕೀಲಿ ಹಾಕಲಾಗಿತ್ತು.  ಇವರಲ್ಲಿ ಬಹುತೇಕರು ಗುಳೆ ಹೋಗಿದ್ದರೆ, ಮತ್ತೆ ಹಲವರು ಬೆಳ್ಳಂಬೆಳಿಗ್ಗೆ ಕೂಲಿ ಕೆಲಸ ಅರಸಿ ನಗರ ಪ್ರದೇಶಗಳಿಗೆ ತೆರಳಿದ್ದರು

news18-kannada
Updated:November 10, 2020, 8:28 PM IST
ಬಸವನಾಡಿನಲ್ಲಿ ತಾಂಡಾಗಳೆಲ್ಲ ಖಾಲಿ ಖಾಲಿ: ಶಾಲೆ ಬಿಡಿಸಿ ಮಕ್ಕಳೊಂದಿಗೆ ಗುಳೆ ಹೋದ ಜನ ಯಾಕೆ ಗೊತ್ತಾ?
ಮಕ್ಕಳೊಂದಿಗೆ ಗುಳೆ ಹೋಗುತ್ತಿರುವ ಜನರು
  • Share this:
ವಿಜಯಪುರ(ನವೆಂಬರ್​. 10): ಬಸವನಾಡಿನಲ್ಲಿ ಈಗ ತಾಂಡಾಗಳೆಲ್ಲ ಖಾಲಿ ಖಾಲಿಯಾಗಿವೆ. ಶೇ. 80 ರಿಂದ 90 ರಷ್ಟು ಜನ ತಾಂಡಾಗಳನ್ನು ಖಾಲಿ ಮಾಡಿ ಹೋಗಿದ್ದಾರೆ. ಈಗ ಯಾವ ತಾಂಡಕ್ಕೆ ಹೋದರೂ ಬಹುತೇಕ ಸಿಗುವುದು ವೃದ್ಧರು ಮತ್ತು ಮಕ್ಕಳು. ಕೊರೋನಾ ನಾನಾ ಉದ್ಯೋಗಗಳಿಗೆ ಕತ್ತರಿ ಹಾಕಿದ್ದು, ಜನರೂ ಕೂಡ ಕೆಲಸವಿಲ್ಲದೆ ಪರದಾಡುವಂತಾಗಿದೆ. ಇಲ್ಲಿ ಕೂಲಿ ಕೆಲಸ ಸಿಕ್ಕರೂ ಮಾಲಿಕರು ನೀಡುವ ಕೂಲಿ ಹಣ ಇವರಿಗೆ ಸಾಕಾಗುತ್ತಿಲ್ಲ. ಇದು ಇಲ್ಲಿನ ತಾಂಡಾಗಳ ಜನರು ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ. ವಿಜಯಪುರ ಜಿ.ಪಂ.ಮಾಜಿ ಅಧ್ಯಕ್ಷ ಅರ್ಜುನ್ ಹೀರು ರಾಠೋಡ ಹೇಳುವಂತೆ ವಿಜಯಪುರ ಜಿಲ್ಲೆಯಲ್ಲಿ 518 ಜನವಸತಿ, ಸಣ್ಣ ಮತ್ತು ದೊಡ್ಡ ತಾಂಡಾಗಳಿವೆ. ಈ ತಾಂಡಾಗಳಲ್ಲಿ ವಾಸಿಸುವ ಜನರು ಕಡು ಬಡವರು. ಬಹುತೇಕರಿಗೆ ಹೊಲಗಳಿಲ್ಲ. ಉದ್ಯೋಗವೂ ಇಲ್ಲ. ಹೊಟ್ಟೆ ತುಂಬಿಕೊಳ್ಳಲು ನೆರೆಯ ಮಹಾರಾಷ್ಟ್ರಕ್ಕೆ ಇಲ್ಲವೇ ಗೋವಾಕ್ಕೆ ಗುಳೆ ಹೋಗುತ್ತಿದ್ದಾರೆ. ಇವರಿಗೆ ಶಾಶ್ವತ ಉದ್ಯೋಗ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಯಾವ ಸರಕಾರಗಳಿಂದಲೂ ಆಗುತ್ತಿಲ್ಲ ಎಂಬುದು ಅರ್ಜುನ ಹೀರು ರಾಠೋಡ ಅವರ ದೂರಾಗಿದೆ.

ನ್ಯೂಸ್ 18 ಕನ್ನಡ ತಂಡ ಅಲಿಯಾಬಾದ ಎಲ್. ಟಿ-2 ಕ್ಕೆ ಭೇಟಿ ನೀಡಿದಾಗ ಬಹುತೇಕ ಮನೆಗಳಿಗೆ ಕೀಲಿ ಹಾಕಲಾಗಿತ್ತು. ಇವರಲ್ಲಿ ಬಹುತೇಕರು ಗುಳೆ ಹೋಗಿದ್ದರೆ, ಮತ್ತೆ ಹಲವರು ಬೆಳ್ಳಂಬೆಳಿಗ್ಗೆ ಕೂಲಿ ಕೆಲಸ ಅರಸಿ ನಗರ ಪ್ರದೇಶಗಳಿಗೆ ತೆರಳಿದ್ದರು. ಅಲ್ಲಿ ಕಂಡು ಬಂದಿದ್ದು ಅದೇ ಮುಗ್ದ ಮಕ್ಕಳು ಮತ್ತು ಹಿರಿಯ ಜೀವಗಳು.

ಕೊರೋನಾ ಈಗ ಜನರನ್ನು ನಾನಾ ರೀತಿಯಿಂದ ಹೈರಾಣಾಗಿಸಿದೆ. ಅದರಲ್ಲೂ ದಿನಗೂಲಿಗಳ ಕೆಲಸವನ್ನು ಕಿತ್ತುಕೊಂಡಿದೆ. ಆರ್ಥಿಕ ಹಿನ್ನಡೆಗೂ ಕಾರಣವಾಗಿದೆ. ಇದು ನೇರವಾಗಿ ಇಂಥ ತಾಂಡಾಗಳಲ್ಲಿರುವ ಮತ್ತು ದುಡಿದು ತಿನ್ನುವ ಬಡ ಕುಟುಂಬಗಳಿಗೆ ಮರ್ಮಾಘಾತ ನೀಡಿದೆ. ಕೊರೋನಾ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಸರಕಾರಗಳು ಹೇಳುತ್ತಿದ್ದರೂ, ಇವರು ಮನೆ ಬಿಟ್ಟು ಹೊರ ಬಾರದಿದ್ದರೆ ತುತ್ತು ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಇದೆ.

ಈ ತಾಂಡದ 6ನೇ ತರಗತಿ ಬಾಲಕ ಮಂಜುನಾಥ ಹೇಳುವಂತೆ ಅಪ್ಪ ಅಮ್ಮ ಮಹಾರಾಷ್ಟ್ರಕ್ಕೆ ಕಬ್ಬು ಕಡಿಯಲು ಗುಳೆ ಹೋಗಿದ್ದಾರೆ. ಶಾಲೆಗಳೂ ತೆರೆದಿಲ್ಲ. ಬಿಸಿಯೂಟವೂ ಸ್ಥಗಿತಗೊಂಡಿದ್ದರಿಂದ ಮಧ್ಯಾಹ್ನ ನೀರು ಕುಡಿದು ಉಪವಾಸ ಇರಬೇಕಾದ ದುಸ್ಥಿತಿ ಇದೆ. ಯಾವಾಗ ಶಾಲೆ ತೆರೆಯುತ್ತೋ ಗೊತ್ತಿಲ್ಲ. ಇದು ಈ ತಾಂಡಾದ ಮಕ್ಕಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ನೇರವಾಗಿ ಅಕ್ಕಿ ಬೆಳೆ ವಿತರಣೆ: ಜಿ.ಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್

9ನೇ ತರಗತಿ ವಿದ್ಯಾರ್ಥಿನಿ ಪೂಜಾಗೆ 5 ಜನ ತಂಗಿ ಮತ್ತು ತಮ್ಮಂದಿರಿದ್ದಾರೆ. ಹೈಸ್ಕೂಲ್ ಬಂದ್ ಆಗಿದೆ. ತಮ್ಮ ತಂದೆ-ತಾಯಿ ಬಡವರು. ಶಾಲೆ ಕಲಿಯಲು ಆಸಕ್ತಿಯಿದೆ. ಆದರೆ, ಆನ್​​ಲೈನ್ ತರಗತಿಗಳನ್ನು ಕೇಳಲು ಸ್ಮಾರ್ಟ್ ಫೋನ್ ಇಲ್ಲ. ಅಪ್ಪ, ಅಮ್ಮ ದುಡಿಯದೇ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ. ಅವರು ಮಹಾರಾಷ್ಟ್ರಕ್ಕೆ ಹೊರಟಿದ್ದು, ತಾನೂ ಕೂಡ ಶಾಲೆ ಬಿಟ್ಟು ಕಬ್ಬು ಕಡಿಯಲು(ಕಟಾವು) ಮಹಾರಾಷ್ಟ್ರದ ಬಸ್ತಿ ಶಿರೋಳ ಗ್ರಾಮಕ್ಕೆ ತೆರಳುತ್ತಿರುವುದಾಗಿ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾಳೆ. ಇವಳ ಕುಟುಂಬ ಆಗ ತಾನೆ ಬಂದಿದ್ದ ಲಘು ಸರಕು ಸಾಗಣೆ ವಾಹನದಲ್ಲಿ ತಮ್ಮ ಸಾಮಾನು ಸರಂಜಾಮಿನೊಂದಿಗೆ ಮಹಾರಾಷ್ಟ್ರಕ್ಕೆ ತೆರಳಿದ ದೃಷ್ಯ ಎಂಥವರನ್ನೂ ಮರಗುವಂತೆ ಮಾಡಿತ್ತು.
ಪ್ರತಿ ವರ್ಷ ರಾಜ್ಯ ಮತ್ತು ಕೇಂದ್ರ ಸರಕಾರಗಳು ಉದ್ಯೋಗ ಸೃಷ್ಠಿಗೆ ಸಹಸ್ರಾರು ಕೋಟಿ ರೂಪಾಯಿ ಖರ್ಚು ಮಾಡುತ್ತವೆ. ಆದರೆ, ಆ ದುಡ್ಡು ಎಲ್ಲಿಗೆ ಹೋಗುತ್ತೆ ಗೊತ್ತಿಲ್ಲ. ಒಂದು ವೇಳೆ ಆ ಹಣ ಸಮರ್ಪವಕವಾಗಿ ಖರ್ಚಾಗಿದ್ದರೆ, ಇಟ್ಟುಹೊತ್ತಿಗಾಗಲೇ ಇಂತಹ ತಾಂಡಾಗಳ ಜನತೆ ಶಾಶ್ವತ ಉದ್ಯೋಗದಲ್ಲಿರುತ್ತಿದ್ದರು. ಆದರೆ, ಉದ್ಯೋಗ ಸೃಷ್ಠಿ ಯೋಜನೆಗಳು ಶಾಶ್ವತವಾಗಿಲ್ಲ. ಆದರೆ, ಇಂತಹ ತಾಂಡಾಗಳಿಂದ ಜನ ತಮ್ಮ ಮಕ್ಕಳೊಂದಿಗೆ ಗುಳೆ ಹೋಗುವುದು ಮಾತ್ರ ಈವರೆಗೆ ಶಾಶ್ವತವಾಗಿದೆ. ಮುಂದೆಯೂ ಶಾಶ್ವತವಾಗುವ ಆಂತಕವೂ ಎದುರಾಗಿದೆ.
Published by: G Hareeshkumar
First published: November 10, 2020, 8:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories