ಬಾಗಲಕೋಟೆ (ಜನವರಿ26): ಹೋರಾಟದಲ್ಲಿ ಕೂರಿಗೆ ಹಿಡಿದು ಬಿತ್ತುವಂತಹ ರೈತರು ಎಷ್ಟು ಜನ ಇದ್ದಾರೆ? ಎಂದು ಪ್ರಶ್ನಿಸುವ ಮೂಲಕ ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಪರೋಕ್ಷವಾಗಿ ಹೋರಾಟದಲ್ಲಿ ಭಾಗಿಯಾದವರು ರೈತರಲ್ಲವೆಂದಿದ್ದಾರೆ. 72ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಧ್ವಜಾರೋಹಣ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿದರು. "ಕೂರಿಗೆ ಹಿಡಿದು ಬಿತ್ತುವಂತಹ ರೈತರು ಹೊರಗೆ ಬಂದು ಎಷ್ಟು ಜನ ಹೋರಾಟ ಮಾಡ್ತಿದ್ದಾರೆ ತೋರಿಸಿ ನೋಡೋಣ" ಎಂದು ಕಿಡಿಕಾರಿದ್ದಾರೆ. ಅಲ್ಲದೆ, "ತಿದ್ದುಪಡಿ ಕೃಷಿ ಕಾಯ್ದೆ ಅನುಷ್ಠಾನದಲ್ಲಿ ಏನಾದರೂ ವ್ಯತ್ಯಾಸವಾದರೆ. ರೈತರ ಹಿತ ಕಾಪಾಡಲು ತೊಂದರೆಯಾದರೆ ಖಂಡಿತ ಕಾಯ್ದೆ ಮತ್ತೆ ಬದಲಾವಣೆ ಮಾಡಬಹುದು. ಅನುಷ್ಠಾನಕ್ಕೆ ಅವಕಾಶ ಮಾಡಿ ಕೊಡಿ, ಸರ್ಕಾರವನ್ನು ಬೆಂಬಲಿಸಿ. ಹೋರಾಟ ನಿಲ್ಲಿಸಿ" ಎಂದು ಕಾರಜೋಳ ಕೈಮುಗಿದು ಹೋರಾಟನಿರತರಿಗೆ ಮನವಿ ಮಾಡಿದ್ದಾರೆ.
"ಇದು ರಾಜಕೀಯ ಪ್ರೇರಿತ ಹೋರಾಟ. ರೈತ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾಡುವಂತಹ ಹೋರಾಟವಲ್ಲ. ಕಾಂಗ್ರೆಸ್ ನವರು ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ನಾವು ಅಧಿಕಾರಕ್ಕೆ ಬಂದ್ರೆ ಕಾನೂನು ಅನುಷ್ಠಾನ ಮಾಡುತ್ತೇವೆ ಎಂದಿದ್ದರು. ಈಗ ವಿರೋಧ ಮಾಡ್ತಿರೋದು ಎಷ್ಟರಮಟ್ಟಿಗೆ ಸರಿ. ದೇಶದಲ್ಲಿ ಶೇ.95ರಷ್ಟು ರೈತರು ಈ ಕಾನೂನನ್ನು ಸ್ವಾಗತಿಸಿದ್ದಾರೆ. ನಾನು ಕೇಳ್ತಿನಿ ನಮ್ಮ ಜಿಲ್ಲೆಯಲ್ಲಿ ಯಾರಾದ್ರೂ ವಿರೋಧ ಮಾಡಿದ್ದಾರಾ? ಬೆರಳೆಣಿಕೆಯಷ್ಟು ರೈತರು ವಿರೋಧ ಮಾಡ್ತಿದ್ದಾರೆ. ಅದು ಸತ್ಯಕ್ಕೆ ದೂರವಾದ ಹೋರಾಟ.
ನಾವು ರೈತರಿಗೆ ಸಂಸತ್, ವಿಧಾನಸಭೆ ಅಧಿವೇಶನದ ಒಳಗೂ ಹೊರಗೂ ಹೇಳಿದ್ದೀವಿ. ರೈತನಿಗೆ ಮಾರುಕಟ್ಟೆ ವಿಚಾರದಲ್ಲಿ ಮುಕ್ತ ಅವಕಾಶವಿದೆ. ಎಪಿಎಂಸಿ ಒಳಗೂ ಹೊರಗೂ ರೈತ ಹೊಲದಲ್ಲಿ ಮಾರಾಟ ಮಾಡುವುದಕ್ಕೆ ಅವಕಾಶವಿದೆ. ವಿರೋಧ ಮಾಡೋದಕ್ಕೆ ಕಾರಣವೇ ಇಲ್ಲ. ಒಂದೋ,ಎರಡು ವರ್ಷವೋ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಿ. ಸರಿ ಹೋಗದೇ ಇದ್ದರೆ, ಈ ದೇಶದ ಸಂವಿಧಾನವನ್ನೇ ತಿದ್ದುಪಡಿ ಮಾಡ್ತೀವಿ. ಕಾನೂನು ತಿದ್ದುಪಡಿ ಮಾಡೋದಕ್ಕೆ ಆಗೋಲ್ವಾ?. ಅನೇಕ ಕಾನೂನುಗಳನ್ನು ತಂದಿದ್ದೀವಿ, ಅನೇಕ ಬಾರಿ ತಿದ್ದುಪಡಿ ಮಾರ್ಪಾಡು ಮಾಡಿದ್ದೇವೆ. ಸ್ವಾತಂತ್ರ್ಯ ಬಂದು 70ವರ್ಷದಲ್ಲಿ ಅನೇಕ ಬಾರಿ ಕಾನೂನು ತಿದ್ದುಪಡಿಯಾಗಿದೆ. ಈ ಭೂಮಿ ಮೇಲೆ ಜನ ಎಲ್ಲಿವರೆಗೂ ಇರ್ತಾರೆ ಅಲ್ಲಿವರೆಗೂ ಸಂವಿಧಾನ ಇರುತ್ತದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Republic Day: ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆ ವಿಶ್ವಾಸವಿಟ್ಟ ದೇಶ ಭಾರತ: ಸಚಿವ ಸಿ.ಸಿ. ಪಾಟೀಲ್
ಬಾಗಲಕೋಟೆ ಜಿಲ್ಲೆಯಾದ್ಯಂತ ರೈತರ ಪ್ರತಿಭಟನೆ!
ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ರೈತರು ಟ್ರ್ಯಾಕ್ಟರ್ ರ್ಯಾಲಿ ಬೆಂಬಲಿಸಿ ಬಾಗಲಕೋಟೆ ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ,ಕೆರೂರು ಪಟ್ಟಣದಲ್ಲಿ ರೈತರು ಟ್ರ್ಯಾಕ್ಟರ್, ಬೈಕ್ ನೊಂದಿಗೆ ಮೆರವಣಿಗೆ ಮಾಡಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ